ಸಾನಿಧ್ಯ ವೃದ್ಧಿಯೊಂದಿಗೆ ಮನಸ್ಸುಗಳ ಶುದ್ಧಿಯಾಗಲಿ: ಅಶೋಕ್ ರೈ ಕೋಡಿಂಬಾಡಿ
ಉಪ್ಪಿನಂಗಡಿ: ದೇವಾಲಯಗಳಲ್ಲಿ ಬ್ರಹ್ಮಕಲಶವಾಗಿ ಸಾನಿಧ್ಯ ವೃದ್ಧಿಯಾಗುವುದರೊಂದಿಗೆ ನಮ್ಮ ಮನಸ್ಸುಗಳು ವೃದ್ಧಿ, ಶುದ್ಧಿಯಾಗಬೇಕು. ಪರಸ್ಪರ ಪ್ರೀತಿಯ ಜೀವನ ನಮ್ಮದಾಗಬೇಕು ಎಂದು ರೈ ಎಸ್ಟೇಟ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನ ಮುಖ್ಯ ಪ್ರವರ್ತಕರಾದ ಅಶೋಕ್ ಕುಮಾರ್ ರೈ ತಿಳಿಸಿದರು.
34 ನೆಕ್ಕಿಲಾಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಮೂರನೇ ದಿನವಾದ ಡಿ.22 ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಪರಸ್ಪರ ರಾಗ-ದ್ವೇಷಗಳಿಲ್ಲದೆ ದೇವರು ನೀಡಿರುವ ಮನುಷ್ಯ ಜನ್ಮವನ್ನು ನಾವು ಆನಂದದಿಂದ ಅನುಭವಿಸಬೇಕು. ನಮ್ಮ ಮಕ್ಕಳಿಗೆ ಉತ್ತಮ ಆಚಾರ- ವಿಚಾರವನ್ನು ಕೊಡುವ ಕೆಲಸ ನಮ್ಮದಾಗಬೇಕು. ತಂದೆ- ತಾಯಿಯನ್ನು ಪ್ರೀತಿಯಿಂದ ಕಂಡು, ಅವರ ಆಶೀರ್ವಾದವಿದ್ದಾಗ ಮಾತ್ರ ಗರ್ಭಗುಡಿಯಲ್ಲಿರುವ ದೇವರ ಅನುಗ್ರಹ ನಮ್ಮದಾಗಲು ಸಾಧ್ಯ. ಆದ್ದರಿಂದ ಪರಸ್ಪರ ಪ್ರೀತಿಸುವ ಬದುಕು ನಮ್ಮದಾಗಲಿ ಎಂದರು.
ಶಿಕ್ಷಕಿ ಪುಷ್ಪಾ ತಿಲಕ್ ಧಾರ್ಮಿಕ ಭಾಷಣ ಮಾಡಿದರು. ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಣ್ಯರಾದ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ, ಕುಂಬಳೆ ಶ್ರೀಧರ ರಾವ್, ಪದ್ಮನಾಭ ಆಳ್ವ, ಸತೀಶ್ ಎ.ಎಸ್., ಗಂಗಯ್ಯ ಗೌಡ, ಸುಧೀರ್ ಟಿ.ಎಸ್. ಉಪಸ್ಥಿತರಿದ್ದರು.
ಭರತ್ ಕುಮಾರ್ ಶಾಂತಿನಗರ ಸ್ವಾಗತಿಸಿದರು. ತೇಜಸ್ವಿನಿ ಕುಕ್ಕಿಲ ಪ್ರಾರ್ಥಿಸಿದರು. ಸಂದೀಪ್ ಪೂಜಾರಿ ಶಾಂತಿನಗರ ವಂದಿಸಿದರು. ಸ್ವಪ್ನ ಜೀವನ್ ಅತಿಥಿಗಳನ್ನು ಗೌರವಿಸಿದರು. ಜಗನ್ನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ ಶ್ರೀಮತಿ ಶಾಂತಾ ಕುಂಟಿನಿ ಸಾರಥ್ಯದ ಸತ್ಯಶಾಂತಾ ಪ್ರತಿಷ್ಠಾನದ ವತಿಯಿಂದ ದ.ಕ. ಜಿಲ್ಲೆಯ ಹೆಸರಾಂತ ಕಲಾವಿದರಿಂದ `ಗಾನ- ನೃತ್ಯ- ವೈಭವ’ ಕಾರ್ಯಕ್ರಮ ನಡೆಯಿತು. ರಾತ್ರಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ `ಗೀತ- ಸಾಹಿತ್ಯ- ಸಂಭ್ರಮ’ ನಡೆಯಿತು.
ದೇವಾಲಯದಲ್ಲಿ ಇಂದು
ಶ್ರೀ ದೇವಾಲಯದಲ್ಲಿ ಡಿ.23 ರಂದು ಬೆಳಗ್ಗೆ ೫ರಿಂದ ಉಷಃ ಪೂಜೆ, ಅಂಕುರಪೂಜೆ, ಮಹಾಗಣಪತಿ ಹವನ, ತ್ರಿಕಾಲ ಪೂಜೆ, ಸೃಷ್ಠಿತತ್ತ್ವ ಹೋಮ, ತತ್ತ್ವಕಲಶಪೂಜೆ, ತತ್ತ್ವಕಲಶಾಭಿಷೇಕ, ಚಂಡಿಕಾಹೋಮ, ಅನುಜ್ಞಾ ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12 ರಿಂದ ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೫ರಿಂದ ದೀಪಾರಾಧನೆ, ತ್ರಿಕಾಲಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ. ದಿನವಿಡೀ ಭಜನಾ ಸೇವೆಗಳು ನಡೆಯಲಿವೆ.
ಸಂಜೆ 5:30ರಿಂದ ಶಾಂತಿನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ `ಸಾಂಸ್ಕೃತಿಕ ಸೌರಭ’ ನಡೆಯಲಿದ್ದು, ರಾತ್ರಿ 7:30ರಿಂದ 9 ರವರೆಗೆ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 9ರಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ `ಹರಿ ಕುಣಿದಾ… ನಮ್ಮ ಹರಿ ಕುಣಿದಾ…’ ಭಕ್ತಿಗಾನ ನಿನಾದ ನಡೆಯಲಿದೆ.