ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅಕ್ಷಯ ವೇದಿಕೆಯಾಗಿದೆ-ಜಯಣ್ಣ ಸಿ.ಡಿ
ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ವೃತ್ತಿಪರ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಮಂಗಳೂರಿಗೆ ಹೋಗಬೇಕೆನ್ನುವ ಕಾಲಕ್ಕೆ ಚುಕ್ಕಿ ಬಿದ್ದಿದೆ. ಯಾಕೆಂದರೆ ಅಂತಹ ವೃತ್ತಿಪರ ಕೋರ್ಸ್ಗಳನ್ನು ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಮುಂದಿನ ಸುಂದರ ಭವಿಷ್ಯ ರೂಪಿಸುವಿಕೆಗೆ ಅಕ್ಷಯ ಕಾಲೇಜು ವೇದಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಡಿಡಿಪಿಐ ಜಯನ್ನ ಸಿ.ಡಿರವರು ಹೇಳಿದರು.
ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್ನಡಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ.23 ರಂದು ನಡೆದ ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಪದವಿ ಪೂರ್ವ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಅಂತರ್-ಕಾಲೇಜು ಫೆಸ್ಟ್ ‘ಅಟೆರ್ನಸ್’ ಸಮಾರಂಭದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅಕ್ಷಯ ಕಾಲೇಜಿನ ಪ್ರಥಮ ಬ್ಯಾಚಿನ 36 ವಿದ್ಯಾರ್ಥಿಗಳು ಇಂದು ಉದ್ಯೋಗದಲ್ಲಿದ್ದಾರೆ ಎಂದು ಕೇಳಲ್ಪಟ್ಟೆ. ವಿದ್ಯಾರ್ಥಿಗಳಿಗೆ ಪಿಯುಸಿ ವಿದ್ಯಾಭ್ಯಾಸ ಜೀವನದ ಟರ್ನಿಂಗ್ ಪಾಯಿಂಟ್. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕಲಿಕೆಯ ಜೊತೆಗೆ ಉದ್ಯೋಗ ಸಿಗುವಂತಹ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡರೆ ಉತ್ತಮ. ಪಿಯುಸಿ ಹಂತದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಒಂದೊಳ್ಳೆಯ ಅವಕಾಶವನ್ನು ಈ ಕಾಲೇಜು ಕಲ್ಪಿಸಿದೆ. ಸೋಲು-ಗೆಲುವು ಮುಖ್ಯವಾಗದೆ ಭಾಗವಹಿಸುವಿಕೆ ಹೆಮ್ಮೆಯ ವಿಚಾರವಾಗಿದ್ದು, ಸೋಲೇ ಗೆಲುವಿನ ಸೋಪಾನವೆಂಬಂತೆ ಮುಂದಿನ ಹೆಜ್ಜೆಯಿಟ್ಟಾಗ ಯಶಸ್ಸು ಖಂಡಿತಾ ಎಂದರು.
ಪ್ರತಿಭೆಗೆ ತಕ್ಕಂತೆ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ-ಎಚ್.ಮಹಮದ್ ಆಲಿ:
ಮುಖ್ಯ ಅತಿಥಿ ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಮಹಮದ್ ಆಲಿರವರು ಮಾತನಾಡಿ, ವಿದ್ಯಾಸಂಸ್ಥೆಯನ್ನು ಕಟ್ಟಿಸಿ ಬೆಳೆಸುವುದು ಇಂದಿನ ದಿನಗಳಲ್ಲಿ ಬಹಳ ಕಷ್ಟಸಾಧ್ಯ. ಸಣ್ಣ ಮಟ್ಟಿನ ಕೋಳಿ ಸಾಕಾಣಿಕೆ ಉದ್ಯಮವನ್ನು ಸ್ಥಾಪಿಸಿ ಅದರಲ್ಲಿ ಯಶ ಕಾಣುತ್ತಾ ಇದೀಗ ಶಿಕ್ಷಣ ಸಂಸ್ಥೆಯನ್ನು ಮುನ್ನೆಡೆಸುವ ಮೂಲಕ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲುರವರು ಸಮಾಜದಲ್ಲಿ ಗುರುತಿಸುವ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತೆ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ. ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಎಸ್ಸಿ ಮುಂತಾದ ಕೋರ್ಸ್ಗಳನ್ನ ಕಲಿಯುವ ಮೈಂಡ್ಸೆಟ್ ಸಂಕುಚಿತ ಮನೋಭಾವದಿಂದ ಹೊರಬಂದು ತಮಗೆ ಆಸಕ್ತಿಯಿರುವ ಕೋರ್ಸ್ಗಳನ್ನು ಆಭ್ಯಸಿಸಿ ಉತ್ತಮ ಉದ್ಯೋಗವನ್ನು ಹೊಂದುವವರಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯ ವಿಷಯಗಳಿವೆ ಅವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳಿಗೆ ಕೈಗೆಟಕುವ ಶಿಕ್ಷಣದೊಂದಿಗೆ ಶೇ.ನೂರು ಉದ್ಯೋಗ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಪಿಯುಸಿ ಹಂತದ ವಿದ್ಯಾರ್ಥಿಗಳ ಪ್ರತಿಭೆಗೆ ಸರಿ ಹೊಂದುವಂತಹ ಸ್ಪರ್ಧೆಗಳನ್ನು ಸಂಸ್ಥೆಯು ಆಯೋಜಿಸಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕವನ್ನು ಮಾತ್ರ ಓದುವುದಲ್ಲ, ಪಠ್ಯಪುಸ್ತಕದಿಂದ ಹೊರ ಬಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳುವುದು ಮುಖ್ಯವಾಗಿದೆ. ಕಾಲೇಜು ಆರಂಭಿಸಿರುವುದು ವ್ಯವಹಾರದ ಉದ್ಧೇಶದಿಂದಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೈಗೆಟಕುವ ಶಿಕ್ಷಣದೊಂದಿಗೆ ಶೇ.ನೂರು ಪ್ರತಿಶತ ಉದ್ಯೋಗ ದೊರಕಿಸಿಕೊಡುವುದಾಗಿದೆ ಎಂದರು.
ಅಕ್ಷಯ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಕಾರ್ಯಕ್ರಮದ ಕನ್ವೀನರ್ ಸತೀಶ್ ನಾಯ್ಕ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ಉಪನ್ಯಾಸಕರಾದ ಭವ್ಯಶ್ರೀ, ಕಿಶೋರ್ಕುಮಾರ್ ರೈ, ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲುರವರ ಪುತ್ರ ಅಕ್ಷಯ್ ನಡುಬೈಲುರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಆಡಳಿತ ಸಮಿತಿಯ ನಿರ್ದೇಶಕರಾದ ಪ್ರೊ|ಝೇವಿಯರ್ ಡಿ’ಸೋಜ, ಸುನಿಲ್ ಕುಮಾರ್ ಶೆಟ್ಟಿ, ನಾರಾಯಣ ಪಿ.ವಿ, ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವೃಂದ ಉಪಸ್ಥಿತರಿದ್ದರು.
14 ಕಾಲೇಜು | 200ಕ್ಕೂ ಮಿಕ್ಕಿ ಸ್ಪರ್ಧಿಗಳು..
ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಪದವಿ ಪೂರ್ವ ಕಾಲೇಜುಗಳಾದ ಸಿದ್ಧಕಟ್ಟೆ ಗುಣಶ್ರೀ ಕಾಲೇಜು, ಬೆಳ್ತಂಗಡಿಯ ಸೈಂಟ್ ತೆರೆಸಾ ಕಾಲೇಜು, ಸವಣೂರು ಸರಕಾರಿ ಕಾಲೇಜು, ರಾಮಕುಂಜ ಆತೂರು ಆಯಿಷ ಕಾಲೇಜು, ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು, ಈಶ್ವರಮಂಗಲ ಪಂಚಲಿಂಗೇಶ್ವರ ಕಾಲೇಜು, ಸುಬ್ರಹ್ಮಣ್ಯ ಎಸ್.ಎಸ್ ಕಾಲೇಜು, ಕಾಂಞಗಾಡ್ ದುರ್ಗಾ ಎಚ್.ಎಸ್.ಎಸ್ ಕಾಲೇಜು, ಪುತ್ತೂರು ಅಂಬಿಕಾ ಕಾಲೇಜು, ಕುಂಬ್ರ ಕಾಲೇಜು, ಗಜಾನನ ಸಂಯೋಜಿತ ಕಾಲೇಜು, ಗುರುವಾಯನಕೆರೆ ಎಕ್ಸೆಲ್ ಕಾಲೇಜು, ಬೆಟ್ಟಂಪಾಡಿ ಸರಕಾರಿ ಕಾಲೇಜು ಹೆಸರನ್ನು ನೋಂದಾಯಿಸಿದ್ದು, ಸುಮಾರು 200ಕ್ಕೂ ಮಿಕ್ಕಿ ಸ್ಪರ್ಧಿಗಳು ಸ್ಪರ್ಧಾಕೂಟದಲ್ಲಿ ಭಾಗವಹಿಸಿದ್ದರು.
10 ಸ್ಪರ್ಧೆಗಳು..
*ಪೈಂಟಿಂಗ್ *ಪೇಪರ್ ಔಟ್ಫಿಟ್
*ಏಕವ್ಯಕ್ತಿ ಗಾಯನ *ಸ್ಟ್ಯಾಂಡ್ಅಪ್ ಕಾಮಿಡಿ
*ಮಾತುಗಾರಿಕೆ *ಉತ್ಪನ್ನ ಬಿಡುಗಡೆ
*ಸಮೂಹ ಗಾಯನ *ಕಸದಿಂದ ರಸ
*ಅಣಕು ಪ್ರದರ್ಶನ *ಕ್ವಿಜ್
ಶೀಘ್ರದಲ್ಲಿಯೇ ಬಿಸಿಎ, ಬಿಬಿಎಂ, ಬಿಎಚ್ಎಸ್ ಕೋರ್ಸ್..
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಟಾಪರ್ಸ್ ಹಂತದಲ್ಲಿದ್ದಾರೆ ಜೊತೆಗೆ ಕ್ರೀಡೆಯಲ್ಲೂ ಅಂತರ್ರಾಷ್ಟ್ರೀಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿದ್ದಾರೆ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಉದ್ಯೋಗ ಸಿಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ. ವೃತ್ತಿಪರ ಕೋರ್ಸ್ಗಳಿಗೆ ಮಂಗಳೂರಿನಲ್ಲಿರುವ ಶುಲ್ಕದ ಅರ್ಧದಷ್ಟು ಶುಲ್ಕವನ್ನು ಅಕ್ಷಯ ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ. ಸಂಸ್ಥೆಯಲ್ಲಿ ಏವಿಯೇಶನ್ ಹಾಗೂ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸ್ಗಳಲ್ಲದೆ ಮುಂದಿನ ಶೈಕ್ಷಣಿಕ ಹಂತದಲ್ಲಿ ಬಿಬಿಎ, ಬಿಬಿಎಂ, ಬಿಎಚ್ಎಸ್(ಬ್ಯಾಚಲರ್ ಆಫ್ ಹಾಸ್ಪಿಟಾಲಿಟಿ ಸೈನ್ಸ್) ಸಂಸ್ಥೆಯು ಪರಿಚಯಿಸಲಿದೆ.
-ಸಂಪತ್ ಪಕ್ಕಳ, ಪ್ರಾಂಶುಪಾಲರು, ಅಕ್ಷಯ ಕಾಲೇಜು