ರಾಷ್ಟ್ರಮಟ್ಟದ ಮಾಜಿ ವೈಟ್‌ಲಿಪ್ಟಿಂಗ್ ಆಟಗಾರ ರಾಜೇಂದ್ರ ಪ್ರಸಾದ್‌ರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಮೂಲತಃ ಸುಳ್ಯಪದವು ನಿವಾಸಿಯಾಗಿದ್ದು, ಪಡೀಲಿನಲ್ಲಿ ವಾಸ್ತವ್ಯ ಹೊಂದಿರುವ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವೈಟ್‌ಲಿಪ್ಟಿಂಗ್ ತರಬೇತುದಾರ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ, ಇತೀಚೆಗೆ ಹೃದಯಾಘಾತದಿಂದ ಅಗಲಿದ ಮಾಜಿ ರಾಷ್ಟ್ರೀಯ ವೈಟ್‌ಲಿಪ್ಟಿಂಗ್ ಆಟಗಾರರಾದ ರಾಜೇಂದ್ರ ಪ್ರಸಾದ್‌ರವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಕಲ್ಲಾರೆ ಶ್ರೀಗುರು ರಾಘವೇಂದ್ರ ಸಭಾಂಗಣದಲ್ಲಿ ನಡೆಯಿತು.


ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿರುವ ಕಿಶೋರ್ ಕುಮಾರ್ ಸಿ.ಕೆರವರು ಮಾತನಾಡಿ, ಮಂಗಳೂರು ವಿವಿಯ ಪ್ರಮುಖ ವೈಟ್‌ಲಿಪ್ಟಿಂಗ್ ಕ್ರೀಡಾಪಟುವಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದು ಮಂಗಳೂರು ವಿ.ವಿಗೆ ಗೌರವ ಹಾಗೂ ಘನತೆ ಹೆಚ್ಚಿಸಿಕೊಟ್ಟಿರುವ ವ್ಯಕ್ತಿಯಾಗಿ ರಾಜೇಂದ್ರ ಪ್ರಸಾದ್‌ರವರು ಗುರುತಿಸಿಕೊಂಡಿದ್ದಾರೆ. ರಾಜೇಂದ್ರ ಪ್ರಸಾದ್‌ರವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದ ಸಾಧನೆ, ಅವರ ವ್ಯಕ್ತಿತ್ವ ಸದಾ ನಮ್ಮೊಂದಿಗೆ ಅಜರಾಮರವಾಗಿ ಉಳಿಯುತ್ತದೆ. ಕ್ರೀಡಾಪಟುಗಳನ್ನು ಪ್ರಜ್ವಲಿಸುವಂತೆ ಮಾಡಿದ ಹಾಗೂ ಕ್ರೀಡಾಪಟುಗಳಿಗೆ ಜೀವನ ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟ ರಾಜೇಂದ್ರ ಪ್ರಸಾದ್‌ರವರದ್ದು ಶ್ರೇಷ್ಟತೆ ಮತ್ತು ಪುಣ್ಯದ ಕೆಲಸ ಎಂದು ಹೇಳಿ ನುಡಿನಮನ ಅರ್ಪಿಸಿದರು.


ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಬಾಲು ಭಾಸ್ಕರ್ ಮಾತನಾಡಿ, ರಾಜೇಂದ್ರ ಪ್ರಸಾದ್‌ರವರು ಅಪಾರ ದೇವಭಕ್ತ ಹಾಗೂ ದೈವಭಕ್ತ. ಪ್ರತಿ ಸೋಮವಾರ ದಿನದಂದು ಅವರು ದೇವರಿಗೆ ಪೂಜೆ ಮಾಡಿಸುತ್ತಿದ್ದರು, ಕಾಕತಾಳೀಯ ಎಂದರೆ ಸೋಮವಾರದಂದೇ ಅವರು ಅಸುನೀಗಿರುವುದು. ರಾಜೇಂದ್ರ ಪ್ರಸಾದ್‌ರವರ ಜೀವನ ಸಾಧನೆ ಅಮೋಘ, ಕಾಮನ್‌ವೆಲ್ತ್ ಆಟಗಾರ ಗುರುರಾಜ್ ಪೂಜಾರಿರವರಲ್ಲದೆ ಅನೇಕ ಕ್ರೀಡಾಪಟುಗಳನ್ನು ಜೀವನದ ಉತ್ತುಂಗಕ್ಕೆ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರೊಡ್ರಿಗಸ್ ಮಾತನಾಡಿ, ನಾವೆಲ್ಲಾ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿದ್ದಂತೆ. ರಾಜೇಂದ್ರರವರು ತಮ್ಮ ನಿಲ್ದಾಣದಲ್ಲಿ ಇಳಿದು ಹೋಗಿದ್ದಾರೆ. ನಮ್ಮ ನಿಲ್ದಾಣ ಬರಬೇಕಷ್ಟೇ. ನಾವು ಯಾವ ಸಂದರ್ಭದಲ್ಲಿ ಇಳಿಯುತ್ತೇವೆಯೋ ಅದು ದೇವರೇ ಬಲ್ಲ. ರಾಜೇಂದ್ರ ಪ್ರಸಾದರವರದ್ದು ನಿಯತ್ತಿನ ವ್ಯಕ್ತಿತ್ವ. ಅವರಾಯಿತು ಅವರ ಕೆಲಸವಾಯಿತು. ತಾನು ಫಿಲೋಮಿನಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್‌ರವರಿಗೆ ವೈಟ್‌ಲಿಪ್ಟಿಂಗ್‌ನ್ನು ಕಲಿಸಿದ್ದೇ ನಾನು ಎಂದು ಅವರು ಸದಾ ಹೇಳಿಕೊಳ್ಳುತ್ತಿದ್ದರು. ಅಂತಹ ಮಹಾನ್ ಚೇತನ ನಮ್ಮಿಂದ ಇಂದು ಕಣ್ಮರೆಯಾಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ.

ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಮಾತನಾಡಿ, ರಾಜೇಂದ್ರ ಪ್ರಸಾದ್‌ರವರ ಅಗಲಿಕೆ ಅಚಾನಕ್ ಆಗಿ ನಡೆದುಹೋಗಿದೆ. ನಮ್ಮಿಂದ ಊಹಿಸಿಕೊಳ್ಳಲು ಸಾದ್ಯವಾಗ್ತಿಲ್ಲ. ವೈಟ್‌ಲಿಪ್ಟಿಂಗ್‌ನಲ್ಲಿ ಉತ್ತಮ ಕೋಚ್ ಎಂದು ಕರೆಯಿಸಿಕೊಂಡಿರುವ ರಾಜೇಂದ್ರರವರು ತಮ್ಮ ಸ್ವಂತಕ್ಕೆ ಯಾವುದೇ ಉದ್ಯೋಗ ಮಾಡಿಕೊಳ್ಳದೆ ಕೇವಲ ಅವರು ತನ್ನ ಕ್ರೀಡಾಪಟು ವಿದ್ಯಾರ್ಥಿಗಳ ಜೀವನದ ಬಗ್ಗೆನೇ ಹೆಚ್ಚು ಚಿಂತೆಯನ್ನು ಮಾಡುತ್ತಿದ್ದರು. ಓರ್ವ ಅತ್ತ್ಯುತ್ತಮ ಕೋಚ್ ಅನ್ನು ನಾವು ಕಳೆದುಕೊಂಡಿದ್ದೇವೆ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶಕ್ಕೆ ಹತ್ತಾರು ಪದಕಗಳು ಖಂಡಿತಾ ಸಿಗುತ್ತಿತ್ತು ಎಂಬ ಭರವಸೆ ನಮ್ಮದಾಗಿತ್ತು ಎಂದು ಹೇಳಿ ರಾಜೇಂದ್ರ ಪ್ರಸಾದ್‌ರವರ ಆತ್ಮಕ್ಕೆ ನುಡಿನಮನ ಸಲ್ಲಿಸಿದರು.


ಫಿಲೋಮಿನಾ ಕಾಲೇಜು ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ, ರಾಜೇಂದ್ರ ಪ್ರಸಾದ್‌ರವರ ಶಿಷ್ಯ, ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಮಾಜಿ ವೈಟ್‌ಲಿಪ್ಟಿಂಗ್ ಆಟಗಾರ ಸಂತೋಷ್‌ರವರು ಮಾತನಾಡಿ, ತಾನು ಫಿಲೋಮಿನಾದಲ್ಲಿ ಆಭ್ಯಸಿಸುತ್ತಿದ್ದ ಸಂದರ್ಭದಲ್ಲಿ ತನಗೆ ವೈಟ್‌ಲಿಪ್ಟಿಂಗ್ ಕೋಚಿಂಗ್ ವಿಷಯದಲ್ಲಿ ಅವರು ಬಹಳ ಶಿಸ್ತಿನ ಸಿಪಾಯಿಯಾಗಿದ್ದರು. ಉಳಿದ ಸಮಯದಲ್ಲಿ ಅವರು ನಮ್ಮೊಂದಿಗೆ ಸ್ನೇಹಿತನಾಗಿ ನಡೆದುಕೊಳ್ಳುತ್ತಿದ್ದರು. ದೀಪಾವಳಿ ಹಬ್ಬಕ್ಕೆ ಹೋಗಿ ಬರುತ್ತೇನೆ ಎಂದಾಗ ಅವರು ಮೊದಲು ಮೆಡಲ್ ತಗೊಂಡು ಬಾ, ಮತ್ತೆ ನಿರಂತರ ದೀಪಾವಳಿ ಆಚರಿಸುವಿಯಂತೆ ಎಂದು ಅವರು ನನಗೆ ಹೇಳುತ್ತಿದ್ದರು ಅಲ್ಲದೆ ದೇವಸ್ಥಾನದಲ್ಲಿ ಹೇಗೆ ಪ್ರದಕ್ಷಿಣೆ ಹಾಕೋದು ಎಂಬುದು ಕೂಡ ಅವರು ನನಗೆ ಹೇಳಿಕೊಟ್ಟಿದ್ದರು. ಅವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ನಿವೃತ್ತ ಸೈನಿಕ ಹಾಗೂ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ವಿಶ್ವನಾಥ್ ಗೌಡ, ವೇಣುಗೋಪಾಲ್ ನೋಂಡಾ ಉಪ್ಪಿನಂಗಡಿ, ಆಳ್ವಾಸ್ ಮೂಡಬಿದ್ರೆಯ ತರಬೇತುದಾರ ಪ್ರಮೋದ್, ಜಿಮ್ ತರಬೇತುದಾರ ನವೀನ್ ಕುಲಾಲ್‌ರವರು ಮಾತನಾಡಿ ನುಡಿನಮನ ಸಲ್ಲಿಸಿದರು. ಅಗಲಿದ ರಾಜೇಂದ್ರ ಪ್ರಸಾದ್‌ರವರ ಮಾವ ಭಾಸ್ಕರ ಅಡ್ಯಳರವರು ಚರಣಗೀತೆ ಹೇಳಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವೈಟ್‌ಲಿಪ್ಟಿಂಗ್ ತರಬೇತುದಾರರು, ದೈಹಿಕ ಶಿಕ್ಷಣ ನಿರ್ದೇಶಕರು, ರಾಜೇಂದ್ರ ಪ್ರಸಾದ್‌ರವರ ಕ್ರೀಡಾಪಟು ವಿದ್ಯಾರ್ಥಿಗಳು, ಹಿತೈಷಿಗಳು, ಬಂಧುಮಿತ್ರರು ಉಪಸ್ಥಿತರಿದ್ದು ರಾಜೇಂದ್ರ ಪ್ರಸಾದ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಅಗಲಿದ ರಾಜೇಂದ್ರ ಪ್ರಸಾದ್‌ರವರ ತಂದೆ ರಾಮಕೃಷ್ಣ, ತಾಯಿ ಇಂದಿರಾವತಿ, ಪತ್ನಿ ಬಂಟ್ವಾಳ ಬಿಇಒ ಕಛೇರಿಯಲ್ಲಿ ಕ್ಲರ್ಕ್ ಆಗಿರುವ ಪ್ರತಿಮಾ, ಪುತ್ರಿಯರಾದ ಸುದಾನ ಶಾಲೆಯಲ್ಲಿ ಕಾರ್ಯಕ್ರಮದ ಮೊದಲಿಗೆ ಅಗಲಿದ ರಾಜೇಂದ್ರ ಪ್ರಸಾದ್‌ರವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಐದನೇ ತರಗತಿಯ ಸಮನ್ವಿ, ಎಲ್.ಕೆ.ಜಿಯ ಮಾನ್ವಿ, ಸಹೋದರಿ ಐಶ್ವರ್ಯ, ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ರಾಜೇಂದ್ರ ಸರ್ ನನ್ನ ದೇವರು..
2010 ರಲ್ಲಿ ಉಜಿರೆ ಎಸ್‌ಡಿಎಂಗೆ ಬಂದಾಗ ನಾನು ಝೀರೋ ಆಗಿದ್ದೆ. ಆದರೆ ಝೀರೋ ಆಗಿದ್ದ ನನ್ನನ್ನು ಹೀರೋ ಮಾಡಿದ್ದು ರಾಜೇಂದ್ರ ಸರ್‌ರವರು. ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾನು ಪ್ರಥಮ ಬಾರಿಗೆ ಪದಕ ಪಡೆದಾಗ ರಾಜೇಂದ್ರ ಸರ್‌ರವರು ಖಂಡಿತಾ ನೀನು ಮತ್ತೊಮ್ಮೆ ಪದಕ ಪಡೆಯುತ್ತೀಯಾ ಎಂದು ನನ್ನಲ್ಲಿ ಶಕ್ತಿಯನ್ನು ತುಂಬಿದರು ಮಾತ್ರವಲ್ಲ ದ್ವಿತೀಯ ಬಾರಿಗೆ ನಾನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತನಾದೆ. ನಾನು ಒಲಿಂಪಿಕ್‌ನಲ್ಲಿ ಭಾಗವಹಿಸಿ ಪದಕ ಪಡೆಯಬೇಕೆನ್ನುವ ಕನಸು ರಾಜೇಂದ್ರ ಸರ್‌ರವರಲ್ಲಿತ್ತು. ಕಾಮನ್‌ವೆಲ್ತ್‌ನಲ್ಲಿನ ಎರಡು ಪದಕ ಸೇರಿ ಅಂತರ್ರಾಷ್ಟ್ರೀಯ ಗೇಮ್ಸ್‌ನಲ್ಲಿ ಒಟ್ಟು ಏಳು ಪದಕ ಗಳಿಸಿರುವುದಕ್ಕೆ ಕಾರಣ ರಾಜೇಂದ್ರ ಸರ್‌ರವರು. ಅವರ ಗುರಿ ಒಂದು ವಿದ್ಯಾರ್ಥಿ ಕ್ರೀಡಾಪಟುಗಳು ಪದಕ ಗೆಲ್ಲಬೇಕು, ಮತ್ತೊಂದು ಸಮಾಜದಲ್ಲಿ ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕು ಎನ್ನುವುದು. ನಿಜವಾಗಿಯೂ ರಾಜೇಂದ್ರ ಸರ್‌ರವರು ನನ್ನ ಪಾಲಿಗೆ ದೇವರಾಗಿದ್ದಾರೆ.
-ಗುರುರಾಜ್ ಪೂಜಾರಿ, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಕ್ರೀಡಾಪಟು

LEAVE A REPLY

Please enter your comment!
Please enter your name here