ಕುಂಬ್ರ ವರ್ತಕರ ಸಂಘದಿಂದ ಒಳಮೊಗ್ರು ಗ್ರಾಪಂಗೆ ಮನವಿ
ಪುತ್ತೂರು: ಕುಂಬ್ರ ಪೇಟೆಯಲ್ಲಿ ನಿರಂತರವಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು ಇದರಿಂದ ಪರವಾನಗೆ ಪಡೆದು ಅಂಗಡಿ ಇಟ್ಟು ವ್ಯಾಪಾರ ಮಾಡುವ ವರ್ತಕರಿಗೆ ತೊಂದರೆಯಾಗುತ್ತಿದೆ. ಕುಂಬ್ರ ಕಟ್ಟೆಯ ಬಳಿ ವಾಹನಗಳಲ್ಲಿ ಬಂದು ದಿನಸಿ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದಾರೆ ಇದಲ್ಲದೆ ಕಟ್ಟೆಯ ಬಳಿ ರಾಶಿ ಹಾಕಿ ಮೆಣಸು, ಈರುಳ್ಳಿ ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ ಇದರಿಂದ ಅಂಗಡಿ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.
ಈ ರೀತಿಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಹಾಗೂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಪ್ರತಿಕ್ರಿಯೆ ನೀಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಇದಲ್ಲದೆ ಪರವಾನಗೆ ನವೀಕರಣ ಮಾಡಲು ಬಾಕಿ ಇರುವ ವರ್ತಕರು ಕೂಡಲೇ ತಮ್ಮ ವ್ಯಾಪಾರ ಪರವಾನಗೆ ನವೀಕರಣ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ, ಕಾರ್ಯದರ್ಶಿ ಭವ್ಯ ರೈ, ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ್ ರೈ ಕೊಪ್ಪಳ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಮೇಶ್ ಆಳ್ವ ಕಲ್ಲಡ್ಕ, ಹನೀಫ್ ಭಾರತ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.