ರೋಟರಿ ಈಸ್ಟ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ವಿವಿಧತೆಯಲ್ಲಿ ಏಕತೆ, ವೈವಿಧ್ಯತೆಗೆ ರೋಟರಿ ಸಾಕ್ಷಿಯಾಗಿದೆ-ಪ್ರಕಾಶ್ ಕಾರಂತ್

ಪುತ್ತೂರು: ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆಯೆನಿಸಿರುವ ರೋಟರಿಯಲ್ಲಿ ವಿವಿಧ ಧರ್ಮದವರಿದ್ದಾರೆ. ವಿವಿಧ ಹುದ್ದೆಯನ್ನು ಅಲಂಕರಿಸಿದವರಿದ್ದಾರೆ. ಮಹಿಳಾಮಣಿಗಳಿದ್ದಾರೆ. ಸಮಾಜದ ಶ್ರೇಯೋಭಿವೃದ್ಧಿಗೆ ಇವರುಗಳೆಲ್ಲಾ ರೋಟರಿ ಮುಖಾಂತರ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯ ಮುಖಾಂತರ ಅತ್ಯುನ್ನತ ಸೇವೆಯನ್ನು ನೀಡುತ್ತಿದ್ದು ಒಂದರ್ಥದಲ್ಲಿ ರೋಟರಿ ಸಂಸ್ಥೆಯು ವಿವಿಧತೆಯಲ್ಲಿ ಏಕತೆ, ವೈವಿಧ್ಯತೆಗೆ ಸಾಕ್ಷಿಯಾಗಿದೆ ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3180, ವಲಯ ಐದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.

ಸೈನಿಕ್ ಭವನ್ ರಸ್ತೆಯ ರೋಟರಿ ಮನೀಷಾ ಸಭಾಂಗಣದಲ್ಲಿ ದ.24 ರಂದು ಸಂಜೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಕ್ಲಬ್‌ನ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿದರು. ರೋಟರಿ ದತ್ತಿನಿಧಿಗೆ ರೊಟೇರಿಯನ್ಸ್‌ಗಳು ನೀಡುವ ದೇಣಿಗೆಯು ಸಮಾಜದ ಏಳಿಗೆಗೆ ಅದು ತಲುಪುವಂತೆ ಮಾಡುತ್ತದೆ. ವಿಶ್ವದಲ್ಲಿ ರೋಟರಿ ಸದಸ್ಯರು ರೋಟರಿ ಧತ್ತಿನಿಧಿಗೆ ಸಮರ್ಪಿಸುವ ದೇಣಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಉತ್ತುಂಗಕ್ಕೆ ಕಾರಣವಾಗಬಲ್ಲುದು ಮಾತ್ರವಲ್ಲದೆ ದೇಶ ಅಭಿವೃದ್ಧಿಯ ನಿಟ್ಟಿನಲ್ಲಿ ಬಹಳ ಸಹಕಾರಿಯಾಗುತ್ತದೆ. ಜಿಲ್ಲಾ ಯೋಜನೆಗಳಾದ ವನ ಸಿರಿ, ಜಲ ಸಿರಿ, ಆರೋಗ್ಯ ಸಿರಿ, ವಿದ್ಯಾಸಿರಿ ಯೋಜನೆಗಳು ರೋಟರಿ ಈಸ್ಟ್ ಕ್ಲಬ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ನಿರಂತರ ಮುಂದುವರೆಯಲಿ ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್‌ದಾಸ್ ರೈಯವರು ಸದಸ್ಯ ಡಾ.ಶ್ಯಾಮ್‌ಪ್ರಸಾದ್ ಸಂಪಾದಕತ್ವದ ಕ್ಲಬ್ ಬುಲೆಟಿನ್ `ರೋಟ ವಾಹಿನಿ’ ಅನಾವರಣಗೊಳಿಸಿ ಮಾತನಾಡಿ, ರೊಟೇರಿಯನ್ಸ್‌ಗಳ ಸೇವಾ ಗುಣ, ಜೀವನ ಮೌಲ್ಯಗಳು, ಧನಾತ್ಮಕತೆಯ ಸ್ವೀಕರಿಸುವ ಗುಣದಿಂದಾಗಿ ರೋಟರಿ ಎಂಬ ಸೇವಾ ಸಂಸ್ಥೆಯು ಉತ್ತುಂಗಕ್ಕೆ ತಲುಪಿದೆ. ರೋಟರಿ ಈಸ್ಟ್‌ನಲ್ಲಿ ಸದಸ್ಯತನ ಹೆಚ್ಚಳ, ಸಮಾಜಮುಖಿ ಪ್ರಾಜೆಕ್ಟ್ ಗಳು ಮುಂತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಸದಾ ಹಸನ್ಮುಖಿ ಭಾವನೆಯಿಂದ ಎಲ್ಲರನ್ನೂ ಒಗ್ಗೂಡಿಸುವ ಚಾಕಚಾಕ್ಯತೆಯಿರುವ ಕ್ಲಬ್ ಅಧ್ಯಕ್ಷ ಶರತ್ ಕುಮಾರ್‌ರವರು ತಮ್ಮ ಪತ್ನಿಯನ್ನು ರೋಟರಿ ಸಂಸ್ಥೆಗೆ ಸೇರಿಸಿದ್ದು ನಿಜಕ್ಕೂ ಅವರಲ್ಲಿ ನಾಯಕತ್ವದ ಗುಣವಿದೆ ಎಂದರು.

ರೋಟರಿ ವಲಯ ಸೇನಾನಿ ಪುರಂದರ ರೈ ಮಾತನಾಡಿ, ರೋಟರಿ ಸಂಸ್ಥೆಯು ಹಿಂದಿನಿಂದಲೂ ಯಾವ ರೀತಿ ಬೆಳೆದು ಬಂದಿದೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ಅಂಶ. ಜೊತೆಗೆ ಸಮಾಜದ ಏಳಿಗೆಗೆ ಯಾವ ರೀತಿ ದುಡಿಯುತ್ತಾ ಬಂದಿದೆ ಎಂಬುದು ಕೂಡ ಗಮನಿಸತಕ್ಕ ಅಂಶವಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ರೋಟರಿ ಸಂಸ್ಥೆಯು ಸಮಾಜಕ್ಕೆ ಅತ್ಯುನ್ನತವಾದ ಕಾರ್ಯಗಳನ್ನು ಹಮ್ಮಿಕೊಂಡು ಎಲ್ಲರಿಗೂ ಮಾದರಿಯಾಗಲಿ ಅಲ್ಲದೆ ಜನವರಿ ತಿಂಗಳಿನಲ್ಲಿ ನಡೆಯುವ ಜಿಲ್ಲಾ ಕಾನ್ಫರೆನ್ಸ್‌ಗೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ನೂತನ ಸದಸ್ಯರ ಸೇರ್ಪಡೆ: ಕ್ಲಬ್ ಸರ್ವಿಸ್‌ನಡಿಯಲ್ಲಿ ಶ್ರೀದುರ್ಗಾ ಸ್ಟ್ರಕ್ಚರಲ್ ಕನ್ಸಲ್ಟೆನ್ಸಿಯ ಸ್ಟ್ರಕ್ಚರಲ್ ಇಂಜಿನಿಯರ್ ಆಕರ್ಷ್ ಬಿ.ಎಸ್ ಹಾಗೂ ಕ್ಲಬ್ ಅಧ್ಯಕ್ಷ ಶರತ್ ಕುಮಾರ್ ರೈಯವರ ಪತ್ನಿ ವಂದನಾ ಶರತ್ ಕುಮಾರ್ ರೈಯವರನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.

ಸನ್ಮಾನ: ವೊಕೇಶನಲ್ ಸರ್ವಿಸ್ ವತಿಯಿಂದ ತಮಿಳುನಾಡಿನ ಪುದುಕೋಟಿಯ ನಾಟಿ ವೈದ್ಯ ಕುಟುಂಬದ ಸಿಂಗು ಹಾಗೂ ಶ್ರೀಮತಿ ಭಾಗ್ಯ ದಂಪತಿಯ ಪುತ್ರನಾಗಿದ್ದು, 1980ರಲ್ಲಿ ಪುತ್ತೂರಿಗೆ ಆಗಮಿಸಿ ಪರ್ಲಡ್ಕದಲ್ಲಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿದ್ದರು. ಇದೀಗ ದರ್ಬೆಯಲ್ಲಿ 1990 ರಲ್ಲಿ ರಾಜ್ ಮೆನ್ಸ್ ಬ್ಯೂಟಿ ಪಾರ್ಲರ್ ಎಂಬ ಕ್ಷೌರಿಕ ಅಂಗಡಿಯನ್ನು ಸ್ಥಾಪಿಸಿರುವ ಸಾಮೆತ್ತಡ್ಕ ನಿವಾಸಿ ಎಸ್.ರಾಜೇಂದ್ರನ್‌ರವರನ್ನು ಸನ್ಮಾನಿಸಲಾಯಿತು. ರೋಟರಿಯಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ ರೋಟರಿ ಸದಸ್ಯರೊಂದಿಗೆ ಉತ್ತಮ ಒಡನಾಟದಿಂದ ಓರ್ವ ಸಮರ್ಥ ನಾಯಕನಾಗಿ ಹೆಸರು ಗಳಿಸಿರುವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ವೊಕೇಶನಲ್ ಸರ್ವಿಸ್ ನಿರ್ದೇಶಕ ಸನ್ಮಾನಿತ ಎಸ್.ರಾಜೇಂದ್ರನ್‌ರವರ ಪರಿಚಯ ಮಾಡಿದರು.

ಟಿಆರ್‌ಎಫ್ ದೇಣಿಗೆ:
ಇಂಟರ್‌ನ್ಯಾಷನಲ್ ಸರ್ವಿಸ್ ವತಿಯಿಂದ ರೋಟರಿ ದತ್ತಿನಿಧಿಗೆ ಟಿಆರ್‌ಎಫ್ ದೇಣಿಗೆ ನೀಡಿರುವ ಸದಸ್ಯರಾದ ಕೃಷ್ಣನಾರಾಯಣ ಮುಳಿಯ, ರೋಟರಿ ಭೀಷ್ಮ ಕೆ.ಆರ್ ಶೆಣೈರವರನ್ನು ಗೌರವಿಸಲಾಯಿತು ಅಲ್ಲದೆ ಕ್ಲಬ್‌ನ 90 ಸದಸ್ಯರೂ ಕೂಡ ಟಿಆರ್‌ಎಫ್‌ಗೆ ಶೇ.ನೂರು ಪ್ರತಿಶತ ದೇಣಿಗೆ ನೀಡಿರುವರು ಎಂದು ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಮುರಳಿ ಶ್ಯಾಂರವರು ಹೇಳಿದರು.

ಕ್ಲಬ್ ಅಧ್ಯಕ್ಷ ಶರತ್ ಕುಮಾರ್ ರೈಯವರ ಪತ್ನಿ ವಂದನಾ ಶರತ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಉಪಾಧ್ಯಕ್ಷ ರಾ.ರವಿಪ್ರಕಾಶ್ ಪ್ರಾರ್ಥಿಸಿದರು. ಅಧ್ಯಕ್ಷ ಶರತ್ ಕುಮಾರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಶಶಿಕಿರಣ್ ರೈ ನೂಜಿ ವರದಿ ಮಂಡಿಸಿ ವಂದಿಸಿದರು. ಜೊತೆ ಕಾರ್ಯದರ್ಶಿ ರವಿಕುಮಾರ್ ರೈ, ಸಾರ್ಜಂಟ್ ಎಟ್ ಆರ್ಮ್ಸ್ ಜಯಂತ್ ಬಾಯಾರು, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸೂರ್‍ಯನಾಥ ಆಳ್ವ, ಕೋಶಾಧಿಕಾರಿ ವಸಂತ ಜಾಲಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಯೂತ್ ಸರ್ವಿಸ್ ನಿರ್ದೇಶಕ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.

ಸದಸ್ಯರ ಸಹಕಾರಕ್ಕೆ ಚಿರಋಣಿ..
ರೋಟರಿ ಈಸ್ಟ್‌ನ 35 ನೇ ವರ್ಷದ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿರುತ್ತೇನೆ. ಕಳೆದ 35 ವರ್ಷಗಳಲ್ಲಿ ಪೂರ್ವಾಧ್ಯಕ್ಷರುಗಳು ಸದಸ್ಯರ ಪ್ರೋತ್ಸಾಹದಿಂದ ಕ್ಲಬ್ ಅನ್ನು ಸಮರ್ಥವಾಗಿ ಬೆಳೆಸಿಕೊಂಡು ಬಂದಿದ್ದಾರೆ. ರೋಟರಿ ಸಂಸ್ಥೆಯಲ್ಲಿ ಕೆಲಸ ಮಾಡುವುದು ಎಂಬುದು ಸಂತೋಷದ ವಿಚಾರ. ರೋಟರಿ ಮುಖೇನ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಮತ್ತೂ ಖುಶಿಯ ವಿಚಾರವಾಗಿದೆ. ಕ್ಲಬ್‌ನಲ್ಲಿನ ಎಲ್ಲ ಸದಸ್ಯರೂ ನನಗೆ ತುಂಬಾ ಸಹಕಾರ ನೀಡಿರುವುದರಿಂದ ತನ್ನ ಅಧ್ಯಕ್ಷಾವಧಿಯ ಅರ್ಧ ದಾರಿಯನ್ನು ಕ್ರಮಿಸಿರುತ್ತೇನೆ. ಸದಸ್ಯರ ಸಹಕಾರಕ್ಕೆ ಸದಾ ಚಿರಋಣಿ ಎಂದು ಹೇಳುತ್ತಾ ಮುಂದೆಯೂ ಸದಸ್ಯರ ಸಂಪೂರ್ಣ ಸಹಕಾರವನ್ನು ಆಶಿಸುತ್ತೇನೆ.
-ಶರತ್ ಕುಮಾರ್ ರೈ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಈಸ್ಟ್

ಸೇವಾ ಕೊಡುಗೆಗಳು..

ಮರೀಲು ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ ನೀಡಲಾಯಿತು.

ಸವಣೂರಿನ ಪುಣ್ಚಪ್ಪಾಡಿ ಗ್ರಾಮದ ಓರ್ವ ಬಡ ಮಹಿಳೆಯ ಗೃಹ ನಿರ್ಮಾಣಕ್ಕೆ ರೂ.1 ಲಕ್ಷ ಕೊಡುಗೆ. ಈ ಪ್ರಯುಕ್ತ ಡಿಜಿ ಪ್ರಕಾಶ್ ಕಾರಂತ್‌ರವರಿಂದ ಶಿಲಾನ್ಯಾಸ.

ಪಟ್ಟೆ ಪ್ರತಿಭಾ ಪ್ರೌಢಶಾಲೆಗೆ ರೂ.25 ಸಾವಿರ ವಿದ್ಯಾರ್ಥಿ ವೇತನದ ಕೊಡುಗೆ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಮಹಿಳೆಯರ ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್ ಮೆಶಿನ್ ಕೊಡುಗೆ.

ಪ್ರಜ್ಞಾ ಆಶ್ರಮದ ಓರ್ವ ವಿಕಲಚೇತನ ವ್ಯಕ್ತಿಯ ಒಂದು ವರ್ಷದ ವಾರ್ಷಿಕ ಖರ್ಚಿಗೆ ರೂ.25  ಸಾವಿರ ಕೊಡುಗೆ
ಆರ್ಥಿಕವಾಗಿ ಹಿಂದುಳಿದ ವಿವೇಕಾನಂದ ಕಾಲೇಜಿನ ಎಂಕಾಂ ವಿಭಾಗದ ವಿದ್ಯಾರ್ಥಿನಿ ಕು|ತೃಷಾರವರ ವಿದ್ಯಾರ್ಜನೆಗೆ ಕ್ಲಬ್ ವತಿಯಿಂದ
ರೂ.10ಸಾವಿರ ಧನ ಸಹಾಯ

LEAVE A REPLY

Please enter your comment!
Please enter your name here