ಡಿ.29: ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲಾ ವಾರ್ಷಿಕೋತ್ಸವ ‘ಮಕ್ಕಳ ಹಬ್ಬ’

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಂಗಸಂಸ್ಥೆಯಾಗಿರುವ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆ ಮತ್ತು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಠಾಣೆಯ 2022-23ನೇ ಸಾಲಿನ ವಾರ್ಷಿಕೋತ್ಸವ ‘ಮಕ್ಕಳ ಹಬ್ಬ’ ಡಿ.29ರಂದು ಶಾಲೆಯ ವಿಶ್ವೇಶತೀರ್ಥ ಸಭಾಭವನದ ವೇದಿಕೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 10ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಶೈಕ್ಷಣಿಕ ಸಂದೇಶ ನೀಡಲಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀನಿವಾಸ ದೇಶಪಾಂಡೆ, ಮಂಗಳೂರಿನ ಸಿಎ ಗಣೇಶ್ ಕೆ.ರಾವ್, ಆಪ್ತ ಮಾರ್ಗದರ್ಶನಕರಾದ ಎ.ಮಾಧವ ಆಚಾರ್ಯ ಇಜ್ಜಾವು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 9ರಿಂದ 10 ಹಾಗೂ 11.30ರಿಂದ ಸಂಜೆ 4 ಗಂಟೆ ತನಕ ಶಾಲಾ ಮಕ್ಕಳಿಂದ ನೃತ್ಯ, ನಾಟಕಗಳು ನಡೆಯಲಿವೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಸ್ಮರಣೆ:
ವೃಂದಾವನಸ್ಥ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಸ್ಮರಣೆಯೂ ಈ ಸಂದರ್ಭದಲ್ಲಿ ನಡೆಯಲಿದೆ. ಡಿ.29 ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಪರಂದಾಮ ಹೊಂದಿದ ದಿನ. ಕಾಕಾತಾಲಿಯವೋ ಎಂಬಂತೆ ಅವರು ಪ್ರಾರಂಭಿಕ ವಿದ್ಯಾಭ್ಯಾಸಗೈದ ಶ್ರೀ ರಾಮ ಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ. ವಿದ್ಯಾರ್ಥಿಗಳು, ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಒಂದಾಗಿ ಪುಣ್ಯ ಸ್ಮರಣೆ ಮಾಡುವ ದಿನ. ಶೀಗಳ ನೇತೃತ್ವದಲ್ಲಿ ಶ್ರೀರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು ಅತ್ಯುನ್ನತ ಮಟ್ಟಕೇರಿವೆ. ಇಲ್ಲಿ ಸುಮಾರು ಎರಡೂವರೇ ಸಾವಿರ ವಿದ್ಯಾರ್ಥಿಗಳು, 200ಕ್ಕೂ ಹೆಚ್ಚು ಶಿಕ್ಷಕರು ಇದ್ದಾರೆ.

ರಾಮಕುಂಜ ಶ್ರೀಗಳ ಹುಟ್ಟೂರೆಂಬ ಖ್ಯಾತಿ, ಅಭಿಮಾನ, ವಿಶ್ವದೆಲ್ಲೆಡೆ ಹಬ್ಬಿದೆ. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ದ.3, 1938ರಂದು ರಾಮಕುಂಜ ಸಂಸ್ಕೃತ ಶಾಲೆಯಿಂದ ಗುರುಗಳಿಗೆ ಹಾಗೂ ಶ್ರೀ ರಾಮಕಂಜೇಶ್ವರ ಸ್ವಾಮಿಗೆ ನಮಿಸಿ, ಹಿರಿಯರು ಕೈ ಹಿಡಿದು ಉಡುಪಿಗೆ ಕಡೆ ಕರೆದುಕೊಂಡು ಹೋದ ದಿನ. 2019ರ ದಶಂಬರ್ 19 ರಂದು ಅವರು ಕಲಿತ ಶಾಲೆಗೆ ಬಂದು ಕೊನೆಯದಾಗಿ ಆಶೀರ್ವದಿಸಿದ ದಿನ. ಮಾರನೇ ದಿನವೇ ಆಸ್ಪತ್ರೆ ಸೇರಿದವರು ಮತ್ತೆ ಮಾತನಾಡಲಿಲ್ಲ. ರಾಮಕುಂಜಕ್ಕೆ ಅದೇ ಅವರ ಕೊನೆಯ ಭೇಟಿ. ಅಂದು ರಾಮಕುಂಜದಿಂದ ತೆರಳುವಾಗಲೂ, ಅನಾರೋಗ್ಯದ ಕಾರಣದಿಂದಾಗಿ, ಶಿಷ್ಯರ ಕೈ ಹಿಡಿದೆ ನಡೆಯಬೇಕಾಯಿತು. ಭೇಟಿಯಾಗಿ ಹೋಗಲೇಬೇಕೆಂದು ಬಂದಿದ್ದೇನೆ ಎಂದು ಹೇಳಿ ತೆರಳಿದರು ಎಂದು ಶ್ರೀಗಳ ಕುರಿತು ಆರೇಳು ಕೃತಿಗಳನ್ನ ರಚಿಸಿರುವ ಟಿ ನಾರಾಯಣ ಭಟ್ ರಾಮಕುಂಜರವರು ನೆನಪಿಸಿಕೊಂಡಿದ್ದಾರೆ.

2019 ದಶಂಬರ್ 19 ರಂದು ನಡೆದ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲಾ ವಾರ್ಷಿಕೋತ್ಸವದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಿರುವುದು.

LEAVE A REPLY

Please enter your comment!
Please enter your name here