ಯಕ್ಷಗಾನ ಜನಾಕರ್ಷಣೆಯ ಕಲೆ: ಕನ್ಯಾನ ಸದಾಶಿವ ಶೆಟ್ಟಿ
ಮಂಗಳೂರು: ‘ಅದ್ಭುತವಾದ ವೇಷ-ಭೂಷಣ, ಮನಮೋಹಕ ಗಾನ, ವೈವಿಧ್ಯಮಯ ಕುಣಿತ ಮತ್ತು ವಿದ್ವತ್ಪೂರ್ಣವಾದ ಅರ್ಥಗಾರಿಕೆಯಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುವ ಯಕ್ಷಗಾನ ಅಪಾರ ಸಂಖ್ಯೆಯಲ್ಲಿ ಜನಾಕರ್ಷಣೆ ಪಡೆದಿರುವ ಕಲೆ. ಇದಕ್ಕಾಗಿ ದುಡಿಯುವ ಎಲ್ಲರೂ ಅಭಿನಂದನೆಗೆ ಪಾತ್ರರು’ ಎಂದು ಮುಂಬೈ ಹೇರಂಬ ಕೆಮಿಕಲ್ಸ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಕೂಳೂರು ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯಿಂದ ಹಿರಿಯ ಯಕ್ಷಗಾನ ಕಲಾವಿದ ಪಟ್ಲ ಮಹಾಬಲ ಶೆಟ್ಟಿ ಅವರಿಗೆ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ನಗರದ ಬಲ್ಲಾಳ್ ಬಾಗ್ ಹೋಟೆಲ್ ಜನತಾ ಡಿಲಕ್ಸ್ ನಲ್ಲಿ ಜರಗಿದ ‘ಪಟ್ಲ ಸಂಭ್ರಮ-2023’ ಪೂರ್ವ ಸಿದ್ಧತಾ ಸಭೆಯಲ್ಲಿ ಯಕ್ಷಾಂಗಣ ವತಿಯಿಂದ ಸನ್ಮಾನ ಕಾರ್ಯಕ್ರಮ ಜರಗಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನಾ ಭಾಷಣ ಮಾಡಿ ಮಾತನಾಡಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ‘ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾದ ಪಟ್ಲಗುತ್ತು ಮಹಾಬಲ ಶೆಟ್ಟರು ಭಾಗವತಿಕೆ ಮತ್ತು ಚೆಂಡೆ ಮದ್ದಳೆ ವಾದನಗಳಲ್ಲಿ ಪರಿಣತರಾಗಿ ಕುಂಡಾವು, ಸುಂಕದಕಟ್ಟೆ ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ್ದಲ್ಲದೆ ಮಲ್ಲ ಮೇಳವನ್ನು ನಾಲ್ಕು ವರ್ಷ ನಡೆಸಿ ಖ್ಯಾತರಾದವರು. ಕುಂಡಾವು ಮೇಳದಲ್ಲಿ ಹಾಸ್ಯಪಟು ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಅವರ ಸಹ ಕಲಾವಿದರಾಗಿದ್ದರು’ ಎಂದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಟ್ರಸ್ಟಿಗಳಾದ ಸವಣೂರು ಸೀತಾರಾಮ ರೈ, ಎ.ಕೆ.ಜಯರಾಮ ಶೇಖ, ಕರುಣಾಕರ ರೈ ಪುತ್ತೂರು ದಾಮೋದರ ರೈ, ಎನ್. ಸಂತೋಷ್ ಕುಮಾರ್ ಶೆಟ್ಟಿ, ಗಿರೀಶ್ ಎಂ.ಶೆಟ್ಟಿ, ಸುಧಾಕರ ಪೂಂಜ, ವಿಜಯ ಶೆಟ್ಟಿ; ಮಂಗಳೂರು ಘಟಕದ ಅಧ್ಯಕ್ಷ ತಾರನಾಥ ಶೆಟ್ಟಿ ಬೋಳಾರ, ಕೇಂದ್ರ ಸಮಿತಿಯ ಸಿಎ ಸುದೇಶ್ ಕುಮಾರ್ ರೈ, ಬಾಳ ಜಗನ್ನಾಥ ಶೆಟ್ಟಿ, ರವಿ ಶೆಟ್ಟಿ ಅಶೋಕನಗರ, ಪ್ರದೀಪ್ ಆಳ್ವ, ಪೂರ್ಣಿಮಾ ಯತೀಶ್ ರೈ, ಆರತಿ ಆಳ್ವ ವೇದಿಕೆಯಲ್ಲಿದ್ದರು.
ಯಕ್ಷಾಂಗಣದ ಉಪಾಧ್ಯಕ್ಷ ಮತ್ತು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿ ನಿವೇದಿತ ಎನ್. ಶೆಟ್ಟಿ ವಂದಿಸಿದರು. ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.