ಉಪ್ಪಿನಂಗಡಿ: ಬ್ಯಾನರ್ ತೆರವು ವಿಚಾರ – ಪಿಡಿಒ ದೂರು: ಗ್ರಾ.ಪಂ. ಸದಸ್ಯನ ಸಹಿತ ಮೂವರ ವಿರುದ್ಧ ಕೇಸು

0

ಉಪ್ಪಿನಂಗಡಿ: ಆಡಳಿತಗಾರರ ಮತ್ತು ಅಧಿಕಾರಿ ವರ್ಗದ ನಡುವಿನ ವಿಲಕ್ಷಣ ಸಂಘರ್ಷಕ್ಕೆ ತುತ್ತಾದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಆಡಳಿತದಲ್ಲಿ ಮತ್ತೊಂದು ಮಜಲಿನ ಸಂಘರ್ಷ ಉಂಟಾಗಿದ್ದು, ಪಂಚಾಯತ್ ಪಿಡಿಒರವರ ಕರ್ತವ್ಯ ನಿರ್ವಹಣೆಗೆ ಪಂಚಾಯತ್ ಸದಸ್ಯರೋರ್ವರು ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದ ಬಗ್ಗೆ ಪಿಡಿಒ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನೆಡ್ಚಿಲ್ ಎಂಬಲ್ಲಿ ಪಂದ್ಯಾಟವೊಂದಕ್ಕೆ ಸಂಬಂಧಿಸಿ ಹಾಕಲಾಗಿದ್ದ ಬ್ಯಾನರನ್ನು ಅನುಮತಿ ಪಡೆಯದೆ ಹಾಕಲಾಗಿದೆ ಎಂಬ ಕಾರಣಕ್ಕೆ ಪಿಡಿಒ ಸೂಚನೆಯಂತೆ ಸಿಬ್ಬಂದಿಗಳು ತೆರವು ಮಾಡಲು ಮುಂದಾದಾಗ ಸ್ಥಳೀಯರು ತಡೆಯೊಡ್ಡಿ ತಾವು ಪಂಚಾಯತ್ ಅಧ್ಯಕ್ಷರ ಒಪ್ಪಿಗೆ ಪಡೆದೇ ಬ್ಯಾನರ್ ಹಾಕಿದ್ದು, ತೆಗೆಯಲು ಬಿಡುವುದಿಲ್ಲ ಎಂದು ತಾಕೀತು ಮಾಡಿದರು. ಈ ವೇಳೆ ಪಂಚಾಯತ್ ಸಿಬ್ಬಂದಿಗಳು ನೀಡಿದ ಮಾಹಿತಿಯಾಧಾರದಲ್ಲಿ ಸ್ಥಳಕ್ಕೆ ಆಗಮಿಸಿದ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್‌ರವರೇ ಬ್ಯಾನರನ್ನು ತೆರವುಗೊಳಿಸಲು ಮುಂದಾದಾಗ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು, ಮಾಜಿ ಸದಸ್ಯ ರಮೇಶ್ ಭಂಡಾರಿ ಹಾಗೂ ರೋಹಿತ್ ಮತ್ತಿತರರು ಬ್ಯಾನರ್ ತೆಗೆಯದಂತೆ ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದರೆಂದೂ ಮಾತ್ರವಲ್ಲದೆ ಗ್ರಾಮ ಪಂಚಾಯತ್ ವಾಹನದ ಕೀಯನ್ನು ತೆಗೆದಿಟ್ಟು ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದರೆಂದು ಆಪಾದಿಸಿ ದೂರು ಸಲ್ಲಿಸಿದ್ದಾರೆ. ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ.

ಗ್ರಾ.ಪಂ. ಸದಸ್ಯನಿಂದ ಪ್ರತಿ ದೂರು: ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲುರವರು ಪೊಲೀಸರಿಗೆ ದೂರು ನೀಡಿ, ಜನಪ್ರತಿನಿಧಿಯಾಗಿರುವ ತನ್ನ ಮೇಲೆ ಪಂಚಾಯತ್ ಅಧ್ಯಕ್ಷರ ಒಪ್ಪಿಗೆ ಪಡೆದು ಅನಾರೋಗ್ಯಕ್ಕೀಡಾದ ಮಗುವಿನ ಸಹಾಯಾರ್ಥವಾಗಿ ನಡೆಸುವ ಕಾರ್ಯಕ್ರಮದ ಬಗ್ಗೆ ಹಾಕಲಾದ ಬ್ಯಾನರನ್ನು ಬಲವಂತವಾಗಿ ತೆಗೆಯಲು ಮುಂದಾದ ಗ್ರಾಮ ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ರವರು ಸಾರ್ವಜನಿಕವಾಗಿ ತನ್ನ ಮೈ ಮೇಲೆ ಕೈ ಮಾಡಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿರುವ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದ್ದಾರೆ.

ಅನಾರೋಗ್ಯಕ್ಕೀಡಾದ ಬಡ ಮಗುವಿನ ಸಹಾಯಾರ್ಥವಾಗಿ ನಡೆಯುವ ಕಾರ್ಯಕ್ರಮದ ಬ್ಯಾನರ್ ಗೆ ಶುಲ್ಕ ರಹಿತ ಒಪ್ಪಿಗೆ ನೀಡಿದ್ದೆ- ಗ್ರಾ.ಪಂ ಅಧ್ಯಕ್ಷೆ

ಪ್ರಕರಣದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯರವರು ಅನಾರೋಗ್ಯಕ್ಕೀಡಾದ ಬಡ ಮಗುವಿಗೆ ಧನ ಸಹಾಯ ಸಂಗ್ರಹಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಕ್ರೀಡಾ ಕಾರ್ಯಕ್ರಮಕ್ಕೆ ಮಾನವೀಯ ನೆಲೆಯಲ್ಲಿ ಶುಲ್ಕ ವಿಧಿಸದೆ ಬ್ಯಾನರ್ ಅಳವಡಿಸಲು ಒಪ್ಪಿಗೆ ಸೂಚಿಸಿದ್ದೆ. ಬ್ಯಾನರ್ ತೆರವುಗೊಳಿಸುವ ಕಾರ್ಯಾಚರಣೆಯ ಬಗ್ಗೆ ಪಂಚಾಯತ್ ಅಧಿಕಾರಿಗಳಾಗಲಿ , ಸಿಬ್ಬಂದಿಗಳಾಗಲಿ ನನ್ನ ಗಮನಕ್ಕೆ ತಂದಿರಲಿಲ್ಲ. ನನ್ನ ಗಮನಕ್ಕೆ ತಂದಿರುತ್ತಿದ್ದರೆ ನಾನು ಒಪ್ಪಿಗೆ ನೀಡಿರುವ ವಿಚಾರವನ್ನು ತಿಳಿಸುತ್ತಿದ್ದೆ. ಉಪ್ಪಿನಂಗಡಿಯ ಕಂಬ ಕಂಬಗಳಲ್ಲಿ ಅನಧಿಕೃತವಾಗಿ ಬ್ಯಾನರ್ ಗಳು ರಾರಾಜಿಸುತ್ತಿರುವಾಗ ಓರ್ವ ಬಡ ರೋಗಿಗೆ ಧನ ಸಹಾಯ ಸಂಗ್ರಹಿಸಲು ಆಯೋಜಿಸಿದ ಕಾರ್ಯಕ್ರಮದ ಬ್ಯಾನರ್ ತೆರವುಗೊಳಿಸಲು ಮುಂದಾದ ಕೃತ್ಯ ಸರಿಯಲ್ಲ . ಶುಲ್ಕವನ್ನು ಪಾವತಿಸಲೇ ಬೇಕೆನ್ನುವುದಾಗಿದ್ದಲ್ಲಿ ನಾನೇ ಅದರ ಶುಲ್ಕವನ್ನು ಪಾವತಿಸುತ್ತಿದ್ದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here