ಪುತ್ತೂರು: ಆಲ್ ಕಾರ್ಗೋ ಲಾಜಿಸ್ಟಿಕ್ ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಮಂಗಳೂರು, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಗ್ರಾಮ ಪಂಚಾಯತ್ ಬೆಳಂದೂರು, ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಕಾಯಿಮಣ ಒಕ್ಕೂಟ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು, ಎ.ಜೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಕುಂಟಿಕಾನ, ಮಂಗಳೂರು ಇವುಗಳ ಆಶ್ರಯದಲ್ಲಿ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರವು ಇತ್ತೀಚೆಗೆ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.
ಹಿರಿಯರಾದ ಕಳುವಾಜೆ ಚೆನ್ನಪ್ಪ ಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯ ಜನಪರ ಸೇವೆಯ ಬಗ್ಗೆ ವಿವರಿಸಿ ಆರೋಗ್ಯ ತಪಾಸಣೆಯ ಮಹತ್ವದ ಬಗ್ಗೆ ತಿಳಿಸಿದರು
ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|ಶಂಕರ್ ಭಟ್ ಮಾತನಾಡಿ, ಸಾರ್ವಜನಿಕರು ವರ್ಷಕ್ಕೊಮ್ಮೆ ವೈದ್ಯಕೀಯ ತಪಾಸಣೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು. ಮಂಗಳೂರು ಕಂಕನಾಡಿ ಪ್ರಜ್ಞಾ ಸಲಹಾ ಕೇಂದ್ರದ ಸಂಚಾಲಕ ಶರತ್ ಕುಮಾರ್ ಎನ್.ಕೆ.ರವರು ಪ್ರಾಸ್ತಾವಿಕವಾಗಿ ಮಾತನಾಡಿ ಒಟ್ಟು ಶಿಬಿರದ ಮಹತ್ವವನ್ನು ತಿಳಿಸಿದರು. ಬೆಳಂದೂರು ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿ ಸಂದರ್ಭೋಚಿತವಾಗಿ ಮಾತನಾಡಿದರು. ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ನ ಯಶವಂತ ಕಳುವಾಜೆ, ಒಕ್ಕೂಟದ ಅಧ್ಯಕ್ಷ ಉದಯ ಅಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಒಕ್ಕಲಿಗ ಸ್ವ-ಸಹಾಯ ಸಂಘದ ಮೇಲ್ವಿಚಾರಕರಾದ ವಿಜಯ ಸ್ವಾಗತಿಸಿ, ವಂದಿಸಿದರು.
150ಕ್ಕಿಂತ ಹೆಚ್ಚು ಫಲಾನುಭವಿಗಳು..
ಮಂಗಳೂರು-ಕುಂಟಿಕಾನ ಎ.ಜೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ 50 ಮಂದಿ ನುರಿತ ವೈದ್ಯರುಗಳು ಹಾಗೂ ಸಹಾಯಕರು ಆರೋಗ್ಯ ತಪಾಸಣೆಯನ್ನು ನಡೆಸಿದರು. ಸುಮಾರು 150ಕ್ಕಿಂತ ಮಿಕ್ಕಿ ಫಲಾನುಭವಿಗಳು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು.