ಡೊನ್ ಬೊಸ್ಕೊ ಕ್ಲಬ್‌ನಿಂದ ಪುತ್ತೂರು, ಮರೀಲ್, ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಕೆಟ್ ಆಟಗಾರರ `ಸಿಪಿಎಲ್ ಸೀಸನ್-2′ ಸಂಭ್ರಮದ ತೆರೆ

0

ಲೂವಿಸ್ ಕ್ರಿಕೆಟರ್‍ಸ್ ಸೀಸನ್ 2 ಚಾಂಪಿಯನ್, ಸಿಝ್ಲರ್ ಸ್ಟ್ರೈಕರ್‍ಸ್ ರನ್ನರ್‍ಸ್

ಚಿತ್ರ: ಕ್ಲಾಸಿಕ್ಲಿಕ್ಸ್ ಪುತ್ತೂರು

ಪುತ್ತೂರು: ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2023-ಸೀಸನ್ 2 ‘ ಜ.8  ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಿದ್ದು, ಕ್ರಿಕೆಟ್ ಪಂದ್ಯಾಟವು ಇದೀಗ ಸಂಭ್ರಮದ ತೆರೆ ಕಂಡಿದೆ.


ಸಂಜೆ ಜರಗಿದ ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ್‍ಸ್ ತಂಡವು ಸಿಪಿಎಲ್ 2023, ಸೀಸನ್ 2 ಚಾಂಪಿಯನ್ ಆಗಿ ಮೂಡಿ ಬಂದಿದ್ದು ಚೊಚ್ಚಲ ಟ್ರೋಫಿ(ರೂ.23,333/-)ಯನ್ನು ಮುಡಿಗೇರಿಸಿಕೊಂಡಿದೆ. ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ರನ್ನರ್ಸ್ ಪ್ರಶಸ್ತಿ(ರೂ.18,888/-)ಯನ್ನು ಪಡೆದುಕೊಂಡಿತು.

ಸಿಪಿಎಲ್ ಸೀಸನ್-1 ರಲ್ಲಿ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ಚಾಂಪಿಯನ್ ಆಗಿತ್ತು ಮತ್ತು ಪ್ರಸ್ತುತ ವರ್ಷ ಚಾಂಪಿಯನ್ ಆಗಿರುವ ಲೂವಿಸ್ ಕ್ರಿಕೆಟರ್‍ಸ್ ತಂಡವು ಲೀಗ್ ಹಂತದಲ್ಲಿಯೇ ಹೊರ ಬಿದ್ದಿತ್ತು. ಪಂದ್ಯದ ಪಂದ್ಯಶ್ರೇಷ್ಟರಾಗಿ ಲೂವಿಸ್ ಕ್ರಿಕೆಟರ್‍ಸ್ ತಂಡದ ಐವನ್ ಡಿ’ಸಿಲ್ವ, ಪಂದ್ಯ ಪುರುಷೋತ್ತಮರಾಗಿ ಸಿಝ್ಲರ್ ಸ್ಟ್ರೈಕರ್‍ಸ್ ತಂಡದ ಪ್ರೀತಂ ಮಸ್ಕರೇನ್ಹಸ್‌ರವರು ಹೊರ ಹೊಮ್ಮಿದ್ದಾರೆ.

ಲೂವಿಸ್ ಕ್ರಿಕೆಟರ್‍ಸ್ ಹಾಗೂ ಸಿಝ್ಲರ್ ಸ್ಟ್ರೈಕರ್‍ಸ್ ನಡುವಣ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ನಿಗದಿತ ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಕೇವಲ 29 ರನ್‌ಗಳನ್ನು ಪೇರಿಸಲು ಶಕ್ತವಾಗಿತ್ತು. ವಿಜಯಿಯಾಗಲು ಓವರಿಗೆ ಆರು ರನ್‌ಗಳ ಸರಾಸರಿ ಹೊಂದಿದ ಲೂವಿಸ್ ಕ್ರಿಕೆಟರ್‍ಸ್ ತಂಡವು ಕೇವಲ 3.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 31 ರನ್‌ಗಳನ್ನು ಬಾರಿಸಿ ಗೆಲುವಿನ ಕೇಕೆ ಹಾರಿಸಿ ಸಿಪಿಎಲ್ ಸೀಸನ್-2ರ ಚಾಂಪಿಯನ್ ಆಗಿ ಹೊರ ಹೊಮ್ಮಿತು.


ಫ್ಲೇಆಫ್ ಪಂದ್ಯ:
ಸಿಪಿಎಲ್ ಕಾದಾಟದಲ್ಲಿ ಆರು ತಂಡಗಳು ಲೀಗ್ ಮಾದರಿಯಲ್ಲಿ ಕಣಕ್ಕಿಳಿದಿದ್ದು, ಇದರಲ್ಲಿ ಮೊದಲನೇ ತಂಡವಾಗಿ ಲೂವಿಸ್ ಕ್ರಿಕೆಟರ್‍ಸ್, ಎರಡನೇ ತಂಡವಾಗಿ ಸಿಝ್ಲರ್ ಸ್ಟ್ರೈಕರ್‍ಸ್, ಮೂರನೇ ತಂಡವಾಗಿ ಸೋಜಾ ಸೂಪರ್ ಕಿಂಗ್ಸ್, ನಾಲ್ಕನೇ ತಂಡವಾಗಿ ಕ್ರಿಶಲ್ ವಾರಿಯರ್‍ಸ್ ತಂಡಗಳು ಫ್ಲೇಆಫ್ ಹಂತಕ್ಕೆ ನೆಗೆದಿದ್ದವು. ಇದರಲ್ಲಿ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ಇನ್ನೇನು ಕೂಟದಿಂದಲೇ ಹೊರ ಬಿದ್ದಿತು ಅನ್ನುವಾಗಲೇ ಅದು ಲೀಗ್‌ನ ಕೊನೆಯ ಪಂದ್ಯವೆನಿಸಿದ ಕ್ರಿಶಲ್ ವಾರಿಯರ್‍ಸ್ ಎದುರಿನ ಕಾಳಗದಲ್ಲಿ ಫೀನಿಕ್ಸ್‌ನಂತೆ ಗೆದ್ದು ನೇರವಾಗಿ ಎರಡನೇ ತಂಡವಾಗಿ ಕ್ವಾಲಿಫೈಯರ್ ಹಂತಕ್ಕೆ ಪ್ರವೇಶ ಪಡೆಯಿತು. ಫ್ಲೇ ಆಫ್ ಪಂದ್ಯಕ್ಕೆ ಅರ್ಹತೆ ಪಡೆದ ಎಲ್ಲಾ ನಾಲ್ಕು ತಂಡಗಳು ಲೀಗ್‌ನಲ್ಲಿ ತಲಾ ಮೂರು ಪಂದ್ಯಗಳನ್ನು ಗೆದ್ದಿದ್ದವು. ಲೀಗ್‌ನಲ್ಲಿ ಎರಡು ಪಂದ್ಯಗಳನ್ನು ಗೆದ್ದಂತಹ ಎಸ್.ಎಲ್ ಗ್ಲ್ಯಾಡಿಯೇಟರ್‍ಸ್ ಹಾಗೂ ಒಂದು ಪಂದ್ಯ ಗೆದ್ದಂತಹ ಫ್ಲೈ ಝೋನ್ ಅಟ್ಯಾಕರ್‍ಸ್ ತಂಡವು ಲೀಗ್ ಹಂತದಲ್ಲಿಯೇ ಕೂಟದಿಂದ ನಿರ್ಗಮಿಸಿತು.

ಕ್ವಾಲಿಫ್ಯೆಯರ್, ಎಲಿಮಿನೇಟರ್:
ಮೊದಲನೇ ತಂಡವಾಗಿ ಫ್ಲೇ ಆಫ್‌ನ ಕ್ವಾಲಿಫೈಯರ್ ಕಾಳಗದಲ್ಲಿ ಲೂವಿಸ್ ಕ್ರಿಕೆಟರ್‍ಸ್ ತಂಡವು ಎರಡನೇ ಸ್ಥಾನಿ ಸಿಝ್ಲರ್ ಸ್ಟ್ರೈಕರ್‍ಸ್ ತಂಡವನ್ನು ಅಧಿಕಾರಯುತವಾಗಿ ಸೋಲಿಸಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಿತು. ಎಲಿಮಿನೇಟರ್ ಪಂದ್ಯಾಟದಲ್ಲಿ ಮೂರನೇ ಸ್ಥಾನಿಯಾಗಿರುವ ಸೋಜಾ ಸೂಪರ್ ಕಿಂಗ್ಸ್ ಹಾಗೂ ನಾಲ್ಕನೇ ಸ್ಥಾನಿಯಾಗಿರುವ ಕ್ರಿಶಲ್ ವಾರಿಯರ್‍ಸ್ ನಡುವಣ ಪಂದ್ಯದಲ್ಲಿ ಸೋಜಾ ಸೂಪರ್ ಕಿಂಗ್ಸ್ ವಿಜಯಿಯಾಗಿತ್ತು ಮತ್ತು ಕ್ರಿಶಲ್ ವಾರಿಯರ್‍ಸ್ ತಂಡವು ಫ್ಲೇ ಆಫ್‌ನಿಂದ ಹೊರ ಬಿತ್ತು. ಪ್ರಥಮ ಕ್ವಾಲಿಫೈಯರ್‌ನಲ್ಲಿ ಸೋತ ಸಿಝ್ಲರ್ ಸ್ಟ್ರೈಕರ್‍ಸ್ ತಂಡ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಂತಹ ಸೋಜಾ ಸೂಪರ್ ಕಿಂಗ್ಸ್ ನಡುವಣ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ವಿಜಯದುಂಧುಬಿಯನ್ನು ಹರಿಸಿ ಎರಡನೇ ತಂಡವಾಗಿ ಫೈನಲಿಗೆ ನೆಗೆಯಿತು.


ಸನ್ಮಾನ/ಅಭಿನಂದನೆ:
ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಬೊಳುವಾರು ಮೆಗಾ ಗ್ಲಾಸ್ ಆಂಡ್ ಪ್ರಿಂಟಿಂಗ್‌ನ ಆಸ್ಕರ್ ಆನಂದ್, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲ್ಲಿಮಾರ್ ನಿವಾಸಿ ಪ್ರಸ್ತುತ ಮಂಗಳೂರಿನ ಫಾ.ಮುಲ್ಲರ್‍ಸ್ ಆಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಡೋನ್ ಗ್ರೆಗೋರಿ ಮಸ್ಕರೇನ್ಹಸ್‌ರವರನ್ನು ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೆ ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಸಹಕಾರವಿತ್ತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಹಾಗೂ ಸಿಪಿಎಲ್ ಸೀಸನ್ 2 ಕ್ರೀಡಾಕೂಟದ ಬಗ್ಗೆ ಆರಂಭದಿಂದ ಕೊನೆಯ ಹಂತದವರೆಗೆ ಕ್ಲಪ್ತ ಸಮಯದಲ್ಲಿ ವರದಿಗಳನ್ನು `ಸುದ್ದಿ’ ಪತ್ರಿಕೆಯಲ್ಲಿ ಭಿತ್ತರಿಸುವುದರ ಜೊತೆಗೆ ಪಂದ್ಯಾಟವನ್ನು ಸುದ್ದಿ ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರಕ್ಕೆ ಸಹಕರಿಸಿದ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಗಣ್ಯರ ಮಾತುಗಳು:
ಮುಖ್ಯ ಅತಿಥಿಗಳಾಗಿದ್ದ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಡೊನ್ ಬೊಸ್ಕೊ ಕ್ಲಬ್ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಸಮತೋಲನದ ಸೇವೆ ನೀಡುತ್ತಿರುವುದು ಶ್ಲಾಘನೀಯ. ಯುವ ಸಮುದಾಯವು ತಮ್ಮಲ್ಲಿನ ಪ್ರತಿಭೆ ತೋರ್ಪಡಿಸಿದಾಗ ಸರ್ವತೋಮುಖ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದರು.

ಮಂಗಳೂರಿನ ಚಾರ್ಟರ್ಡ್ ಎಕೌಂಟೆಂಟ್ ಆಲ್ವಿನ್ ರೊಡ್ರಿಗಸ್ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ನೂರಾರು ಶಿಕ್ಷಕರಿದ್ದರೂ ದೈಹಿಕ ಶಿಕ್ಷಣ ನಿರ್ದೇಶಕನಿರುವುದು ಮಾತ್ರ ಓರ್ವನೇ ಓರ್ವ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಜೊತೆಗೆ ಕ್ರೀಡೆಯಲ್ಲೂ ಮುಂದೆ ಬಂದಾಗ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದರು.

ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ಮಾತನಾಡಿ, ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುಂದಡಿಯಿಡಬೇಕು. ಸೋತವರು ಕುಗ್ಗದೆ ಯಾವುದರಲ್ಲಿ ಎಡವಿದ್ದೇನೆ ಎಂದರಿತು ಮುನ್ನೆಡೆದಾಗ ಯಶಸ್ವಿಯಾಗಬಲ್ಲನು ಎಂದರು.

ಉದ್ಯಮಿ ಆಸ್ಕರ್ ಆನಂದ್ ಮಾತನಾಡಿ, ರೋಟರಿ ಕ್ಲಬ್‌ಗಳ ವತಿಯಿಂದ ಡಯಾಲಿಸಿಸ್ ರೋಗಿಗಳಿಗೆ ರೂ.52  ಲಕ್ಷ ಪ್ರಾಜೆಕ್ಟ್‌ನಲ್ಲಿ ಡಯಾಲಿಸಿಸ್ ಕೇಂದ್ರದ ಸ್ಥಾಪಿಸುವ ಗುರಿ ಇದೆ. ಡೊನ್ ಬೊಸ್ಕೊ ಕ್ಲಬ್‌ರವರು ಇಂದಿಲ್ಲಿ ನನ್ನನ್ನು ಸನ್ಮಾನಿಸಿ ನನ್ನಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುವಂತೆ ಮಾಡಿದ್ದಾರೆ ಎಂದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಪುತ್ತೂರು ಮಾಯಿದೆ ದೇವುಸ್ ಚರ್ಚ್ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ನಗರಸಭೆ ಸದಸ್ಯ ರಾಬಿನ್ ಸಾಲ್ಮರ, ಡೊನ್ ಬೊಸ್ಕೊ ಕ್ಲಬ್ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸಿಲ್ವೆಸ್ಟರ್ ಗೊನ್ಸಾಲ್ವಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್ ಸ್ವಾಗತಿಸಿದರು. ಸಂಯೋಜಕ ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಅಂಪೈರುಗಳಾಗಿ ದೀಕ್ಷಿತ್, ಪುನೀತ್, ರಕ್ಷಿತ್, ಭುವನ್, ಸ್ಕೋರರ್‌ಗಳಾಗಿ ಅರ್ಫಾನ್, ವೀಕ್ಷಕ ವಿವರಣೆಗಾರರಾಗಿ ರಝಾಕ್ ಪಿ.ಎಚ್, ವಿಲಿಯಂ ನೆಲ್ಲಿಕಟ್ಟೆ, ಅವಿಲ್ ಮಸ್ಕರೇನ್ಹಸ್, ವಿಜಯ್ ಡಿ’ಸೋಜ ಸಹಕರಿಸಿದರು. ಸಂಯೋಜಕರಾದ ಆಲನ್ ಮಿನೇಜಸ್, ರೋಹನ್ ಡಾಯಸ್, ರಾಕೇಶ್ ಮಸ್ಕರೇನ್ಹಸ್ ಸಹಿತ ಕ್ಲಬ್ ಸದಸ್ಯರು ವಿವಿಧ ಸ್ತರಗಳಲ್ಲಿ ಸಹಕರಿಸಿದರು.


ಪ್ರಶಸ್ತಿ ಪುರಸ್ಕಾರಗಳು..
ಈ ಕ್ರೀಡಾಕೂಟದಲ್ಲಿ ಆಟಗಾರರಿಗೆ ಪಂದ್ಯಶ್ರೇಷ್ಟ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಅಲ್ಲದೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಉತ್ತಮ ಬ್ಯಾಟರ್ ಆಗಿ ಲೂವಿಸ್ ಕ್ರಿಕೆಟರ್‍ಸ್ ತಂಡದ ಐವನ್ ಡಿ’ಸಿಲ್ವ, ಉತ್ತಮ ಬೌಲರ್ ಆಗಿ ಕ್ರಿಶಲ್ ವಾರಿಯರ್‍ಸ್ ತಂಡದ ಗ್ಲ್ಯಾನಿ, ಉತ್ತಮ ಗೇಮ್ ಚೇಂಜರ್ ಆಗಿ ಸಿಝ್ಲರ್ ಸ್ಟ್ರೈಕರ್‍ಸ್‌ನ ಕಿರಣ್, ಉತ್ತಮ ವಿಕೆಟ್ ಕೀಪರ್ ಆಗಿ ಸೋಜಾ ಸೂಪರ್ ಕಿಂಗ್ಸ್‌ನ ಜೋಯೆಲ್ ರೊಡ್ರಿಗಸ್, ಉತ್ತಮ ಕ್ಷೇತ್ರರಕ್ಷಕರಾಗಿ ಸಿಝ್ಲರ್ ಸ್ಟ್ರೈಕರ್‍ಸ್‌ನ ಅರುಣ್ ಪಾಯಿಸ್, ಸ್ಟ್ಯಾಂಡಿಂಗ್ ಪ್ಲೇಯರ್ ಆಗಿ ಸಿಝ್ಲಲ್ ಸ್ಟ್ರೈಕರ್‍ಸ್‌ನ ಡೋಯಲ್ ಡಿ’ಸೋಜ, ಪಿಂಚ್ ಹಿಟ್ಟರ್ ಆಗಿ ಲೂವಿಸ್ ಕ್ರಿಕೆಟರ್‍ಸ್‌ನ ಜೋಯ್ಸನ್ ಗಲ್ಬಾವೋ, ವ್ಯಾಲ್ಯೂಯೇಬಲ್ ಫ್ಲೇಯರ್ ಆಗಿ ಕ್ರಿಶಲ್ ವಾರಿಯರ್‍ಸ್‌ನ ನವೀನ್ ಪಸನ್ನ, ಎಮರ್ಜಿಂಗ್ ಫ್ಲೇಯರ್ ಆಗಿ ಕ್ರಿಶಲ್ ವಾರಿಯರ್‍ಸ್‌ನ ಶರೊನ್ ಡಿ’ಸಿಲ್ವರವರು ಪುರಸ್ಕಾರವನ್ನು ಪಡೆದಿರುತ್ತಾರೆ.

`ಸುದ್ದಿ’ ನೇರಪ್ರಸಾರ..
ಸಿಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯನ್ನು `ಸುದ್ದಿ’ ಯೂಟ್ಯೂಬ್ ಚಾನೆಲ್ ನೇರಪ್ರಸಾರ ಮಾಡಿತ್ತು. ಸಾವಿರಾರು ವೀಕ್ಷಕರು ನೇರಪ್ರಸಾರವನ್ನು ವೀಕ್ಷಣೆ ಮಾಡಿದ್ದರು. ಸಿಪಿಎಲ್ ಸೀಸನ್-1 ಪಂದ್ಯಾವಳಿಯನ್ನು ಕೂಡ ಸುದ್ದಿ ನೇರ ಪ್ರಸಾರ ಮಾಡಿತ್ತು.

…ಹೈಲೈಟ್ಸ್…
-ಪಂದ್ಯದಲ್ಲಿ ಯಾರಾದರೂ ಗಾಯಾಳುವಾದರೆ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೆರವಿಗೆ ಅನುವು ಮಾಡಿಕೊಡಲಾಗಿತ್ತು.
-ಎಲ್ಲೆಡೆ ಕಸ, ನೀರಿನ ಬಾಟ್ಲಿ ಹಾಗೂ ಇನ್ನಿತರ ವಸ್ತುಗಳನ್ನು ಎಲ್ಲೆಡೆ ಎಸೆಯದಂತೆ ಕ್ರೀಡಾಂಗಣದ ಸುತ್ತಲೂ
ಪ್ಲಾಸ್ಟಿಕ್ ಕಸದ ತೊಟ್ಟಿಗಳನ್ನು ಇಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು.
-ಎರಡೂ ಗ್ರೌಂಡ್‌ಗಳಲ್ಲಿ ಎರಡೂ ತಂಡದ ಆಟಗಾರರಿಗೆ ಡಗೌಟ್ ವ್ಯವಸ್ಥೆಯನ್ನು ಮಾಡಲಾಗಿತ್ತು.
-ಪ್ರತಿ ತಂಡದ ಆಟಗಾರರಿಗೆ ಹಾಗೂ ಕ್ರಿಕೆಟ್ ಪ್ರಿಯರಿಗೆ ಮಧ್ಯಾಹ್ನದ ಭೋಜನ ಹಾಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
-ಪಂದ್ಯಗಳು ಬೆಳಿಗ್ಗೆ 8 .೦೦ಕ್ಕೆ ಆರಂಭವಾಗಿ ಸಂಜೆ 6 ಗಂಟೆಗೆ ವ್ಯವಸ್ಥಿತವಾಗಿ ಮುಕ್ತಾಯ ಕಂಡಿತ್ತು.
-ಪಂದ್ಯಾಕೂಟದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಪುತ್ತೂರು, ಮರೀಲು, ಬನ್ನೂರು ಚರ್ಚ್‌ನ
ಆಟಗಾರರ `ಬಾಂಧವ್ಯ’ ಹಾಗೂ `ಒಗ್ಗಟ್ಟು’ ಎದ್ದು ಕಾಣಿಸುತ್ತಿತ್ತು.
-ಎಲ್ಲಾ ಆರು ತಂಡಗಳು ಆಕರ್ಷಕ ಜೆರ್ಸಿಯೊಂದಿಗೆ ಕಣಕ್ಕಿಳಿದಿದ್ದವು.
-ಫೈನಲ್ ಪಂದ್ಯದಲ್ಲಿ ಒಂದು ಓವರ್ ಪವರ್ ಫ್ಲೇ ಅಳವಡಿಸಲಾಗಿತ್ತು.

LEAVE A REPLY

Please enter your comment!
Please enter your name here