Saturday, February 4, 2023
Homeಚಿತ್ರ ವರದಿಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.25-26 ಪ್ರಥಮ ಜಾತ್ರೋತ್ಸವದ ಸಂಭ್ರಮ

ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.25-26 ಪ್ರಥಮ ಜಾತ್ರೋತ್ಸವದ ಸಂಭ್ರಮ

ಪುತ್ತೂರು:ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಈ ವರ್ಷದಿಂದ ಜಾತ್ರೋತ್ಸವವು ನಡೆಯಲಿದ್ದು ಪ್ರಥಮ ಜಾತ್ರೋತ್ಸವಕ್ಕೆ ದೇವಸ್ಥಾನವು ಅಣಿಯಾಗಿ ನಿಂತಿದೆ. ಪ್ರಥಮ ಜಾತ್ರೋತ್ಸವಕ್ಕೆ ದೇವಸ್ಥಾನ, ಸಂಪ್ಯ ಪೇಟೆ ಶೃಂಗಾರಗೊಂಡು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.


2020ರಲ್ಲಿ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವಗಳು ನಡೆದು ಇಷ್ಟು ವರ್ಷಗಳ ತನಕ ಪ್ರತಿ ವರ್ಷ ಪ್ರತಿಷ್ಠಾದಿ ಹಾಗೂ ದೈವಗಳ ನೇಮೋತ್ಸವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಸಬೇಕು ಎಂಬ ಭಕ್ತಾದಿಗಳ ಬೇಡಿಕೆಯಂತೆ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿತ್ತು. ತೀರ್ಥ ಮಂಟಪವಿರುವ ದೇವರ ಸಾನಿಧ್ಯವಿರುವಲ್ಲಿ ಜಾತ್ರೆ ನಡೆಯಬೇಕು ಎಂಬ ನಿಯಮವಿದೆ. ಹೀಗಾಗಿ ಕ್ಷೇತ್ರದಲ್ಲಿ ಜಾತ್ರೋತ್ಸವ ನಡೆಸುವಂತೆ ದೈವಜ್ಞರ ಸೂಚನೆ ನೀಡಿದ್ದು ಈ ವರ್ಷದಿಂದ ಜಾತ್ರೋತ್ಸವವು ನೆರವೆರುತ್ತಿದೆ.

ವೇ.ಮೂ ಸುರೇಶ ನಕ್ಷತ್ರಿತ್ತಾಯರವರ ಉಪಸ್ಥಿತಿಯಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಜ.26ರಂದು ವಿವಿಧ ವೈದಿಕ ಹಾಗೂ ತಾಂತ್ರಿಕ ವಿಧಾನಗಳೊಂದಿಗೆ ಪ್ರಥಮ ವರ್ಷದ ಜಾತ್ರೋತ್ಸವ ಹಾಗೂ ಕ್ಷೇತ್ರದ ದೈವಗಳ ನೇಮೋತ್ಸವವು ನಡೆಯಲಿದೆ. ಜಾತ್ರೋತ್ಸವದಲ್ಲಿ ಜ.25ರಂದು ಸಂಜೆ ಹಸಿರು ಹೊರೆಕಾಣಿಕೆ, ಉಗ್ರಾಣ ಪೂಜೆ, ದುರ್ಗಾಪೂಜೆ, ಶ್ರೀದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಜ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿಹೋಮ, ಶ್ರೀದೇವರಿಗೆ ಕಲಶ ಪೂಜೆ, ಕಲಶಾಭಿಷೇಕ, ನಾಗತಂಬಿಲ, ಶ್ರೀಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕ್ಷೇತ್ರದ ದೈವಗಳಾದ ಧೂಮಾವತಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆದ ಬಳಿಕ ಶ್ರೀದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

ಜ.25ರಂದು ಹೊರೆಕಾಣಿಕೆ ಮೆರವಣಿಗೆ: ಕ್ಷೇತ್ರದ ಪ್ರಥಮ ಜಾತ್ರೋತ್ಸವದ ಅಂಗವಾಗಿ ಜ.25ರಂದು ಸಂಜೆ 4 ಗಂಟೆಗೆ ಭಕ್ತಾದಿಗಳಿಂದ ಹೊರಕಾಣಿಕೆ ಸಮರ್ಪಣೆಯ ಮೆರವಣಿಗೆ ನಡೆಯಲಿದೆ. ಹೊರೆಕಾಣಿಕೆ ಮೆರವಣಿಗೆಯು ದರ್ಬೆ ವೃತ್ತದ ಬಳಿಯಿಂದ ಮುಖ್ಯ ರಸ್ತೆಯ ಮೂಲಕ ಮುಕ್ರಂಪಾಡಿ, ಸಂಪ್ಯ ಮೂಲಕ ಸಾಗಿ ದೇವಸ್ಥಾನಕ್ಕೆ ಆಗಮಿಸಲಿದೆ. ರಾತ್ರಿ ದುರ್ಗಾಪೂಜೆ ನಡೆಯಲಿದೆ ಎಂದು ಕ್ಷೇತ್ರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

Must Read

spot_img
error: Content is protected !!