ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸುವರ್ಣ ಸಂಭ್ರಮ; ‘ಕ್ಷೀರವಾರಿಧಿ’ಯ ಪ್ರವೇಶೋತ್ಸವ, ಸಾಂದ್ರಶೀತಲೀಕರಣ ಘಟಕ ಉದ್ಘಾಟನೆ

0

  • ಕೃಷಿಯ ಜತೆಗೆ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಳ್ಳಬೇಕು-ಕೆ.ಪಿ. ಸುಚರಿತ ಶೆಟ್ಟಿ
  • ಕೃಷಿ, ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳು: ಎಸ್.ಬಿ. ಜಯರಾಮ ರೈ
  • ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆ-ಪದ್ಮನಾಭ ಶೆಟ್ಟಿ ಅರ್ಕಜೆ
  • ಒಕ್ಕೂಟದ ವಿರುದ್ಧ ಆರೋಪ ಮಾಡಿದ್ದಾರೆ-ನಾರಾಯಣ ಪ್ರಕಾಶ್
  • ಸ್ವಂತವಾಗಿ ದುಡಿದಾಗ ಹೆಚ್ಚು ಲಾಭ-ಸವಿತಾ ಎನ್. ಶೆಟ್ಟಿ
  • ಸಾಂದ್ರಶೀತಲೀಕರಣದ ಯುಗ ಆರಂಭ-ಅಶೋಕ್
  • ಮನಶಾಂತಿ ದೊರೆಯಲಿದೆ-ಅಶೋಕ್ ಆರಿಗ
  • ಗ್ರಾಮಸ್ಥರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ-ರಾಮಚಂದ್ರ ಪೂಜಾರಿ
  • ಸಂಘವು ಪೂರಕವಾಗಿದೆ-ತ್ರಿವೇಣಿ ರಾವ್
  • ಪ್ರತಿಯೊಬ್ಬರೂ ಸಹಕರಿಸಬೇಕು-ರೇವತಿ ವಿ. ಪೂಜಾರಿ
  • ಸಮಸ್ಯೆ ಪರಿಹರಿಸುವ ಕಾರ್ಯ ಸರಕಾರದಿಂದ ಆಗಬೇಕು-ಬಾಲಕೃಷ್ಣ ಬೋರ್ಕರ್

ಪುತ್ತೂರು: 50 ಸಂವತ್ಸರಗಳನ್ನು ಪೂರೈಸಿರುವ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ‘ಸುವರ್ಣ ಸಂಭ್ರಮ’, ‘ಕ್ಷೀರವಾರಿಧಿ’ ವಿಸ್ತೃತ ಕಟ್ಟಡದ ಪ್ರವೇಶೋತ್ಸವ ಹಾಗೂ ಸಂಘದಲ್ಲಿ ನೂತನವಾಗಿ ಅಳವಡಿಸಲಾಗಿರುವ ಸಾಂದ್ರಶೀತಲೀಕರಣ ಘಟಕದ ಉದ್ಘಾಟನೆ ಜ.24ರಂದು ನಡೆಯಿತು.

ಸಾಂದ್ರಶೀತಲೀಕರಣ ಘಟಕ ಹಾಗೂ ‘ಚತುರ್ಥಿ ರಂಗಮಂದಿರ’ದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಮಿನಿ ಡೈರಿಗೆ ರೂ 10 ಸಾವಿರ ನೀಡುವುದಾಗಿ ಇಲ್ಲಿ ಉಲ್ಲೇಖವಿದೆ. ಇಂತಹ ಯೋಜನೆಯು ಕೋಡಿಂಬಾಡಿಯಿಂದಲೇ ಪ್ರಾರಂಭವಾಗಲಿ. ಕೋಡಿಂಬಾಡಿಯ ಯುವ ರೈತರು ಹೊಸ ಮಿನಿ ಡೈರಿ ಮಾಡುವುದಿದ್ದರೆ ರೂ 10 ಸಾವಿರ ಮಾತ್ರವಲ್ಲ ಉತ್ತಮ ವ್ಯವಸ್ಥೆ ಕಲ್ಪಿಸುವ ಪ್ರಯತ್ನವನ್ನೂ ಮಾಡಲಾಗುವುದು ಎಂದರು. ಯುವ ಜನತೆ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿಯೂ ಬದುಕು ಕಟ್ಟಿಕೊಳ್ಳುವುದರಲ್ಲಿ ತೊಡಗಿಸಿಕೊಳ್ಳಬೇಕು. ಯುವ ಮನಸ್ಸುಗಳು ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಜೀವನ ಎಲ್ಲಾ ಆಯಾಮಗಳಲ್ಲಿಯೂ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡಿದೆ. ಸಹಕಾರಿಯ ಮೂಲಕ ಸ್ವಾವಲಂಬನೆಯ ಬದುಕು ಸಾಧಿಸುವ ಕೆಲಸವಾಗಬೇಕು ಎಂದರು. ನಮಗೆ ಭದ್ರತೆಯಿಲ್ಲ ಎಂಬ ಕೂಗು ನೌಕರರಲ್ಲಿದೆ. ಒಕ್ಕೂಟ ರೈತರ ಹಾಲನ್ನು ಸಂಗ್ರಹಿಸಿ ಅದರ ಹಣವನ್ನು ವರ್ಗಾಯಿಸುವ ಕೆಲಸ ಮಾತ್ರ ಮಾಡುತ್ತಿದೆ. ಕೆಲವು ಸಂಘಗಳು ಉತ್ತಮ ಲಾಭದಲ್ಲಿದ್ದು ಭದ್ರತೆ ನೀಡುವ ಕೆಲಸವಾಗಬೇಕು. ಹಾಲಿನ ಗುಣಮಟ್ಟ, ಪಾರದರ್ಶಕ ಆಡಳಿತದಲ್ಲಿ ದ.ಕ ಹಾಲು ಒಕ್ಕೂಟ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದರಲ್ಲಿ ಕೋಡಿಂಬಾಡಿ ಸಂಘದ ಪಾತ್ರವೂ ಇದೆ ಎಂದ ಅವರು ಹಿರಿಯರು ಬಹಳಷ್ಟು ದೂರದೃಷ್ಟಿಯಿಂದ ಸಂಘ ಸ್ಥಾಪಿಸಿದ್ದಾರೆ. ಇದನ್ನು ಉಳಿಸಿ ಬೆಳೆಸಬೇಕು. ಕೃಷಿ, ಹೈನುಗಾರಿಕೆ ಉಳಿಯಬೇಕಾದರೆ ಹಳ್ಳಿಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಸದೃಢ, ಸಶಕ್ತ ಭಾರತ ನಿರ್ಮಿಸಲು ಸಾಧ್ಯ ಎಂದರು. ಆಡಳಿತ ವ್ಯವಸ್ಥೆಗಳು ಸಹಕಾರಿ ತತ್ವದಲ್ಲಿ ಪಾರದರ್ಶಕವಾಗಿ ನಡೆದಾಗ ಸಂಸ್ಥೆಗಳು ಉಳಿಯುತ್ತದೆ ಎಂದು ಸುಚರಿತ ಶೆಟ್ಟಿ ಹೇಳಿದರು.

ಕೃಷಿ, ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳು: ಎಸ್.ಬಿ. ಜಯರಾಮ ರೈ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳೆಜ್ಜ ಮಾತನಾಡಿ, ಕೃಷಿ ಹಾಗೂ ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೃಷಿಗೆ ಹೈನುಗಾರಿಕೆಯು ಬಹು ಅವಶ್ಯಕ. ದ.ಕ ಹಾಲು ಒಕ್ಕೂಟ ನಾಲ್ಕೂವರೆ ಸಾವಿರ ಲೀಟರ್ ಹಾಲಿನಿಂದ ವ್ಯವಹಾರ ಪ್ರಾರಂಭಿಸಿ ಇಂದು ಐದು ಲಕ್ಷ ಲೀಟರ್‌ಗೆ ಏರಿಕೆ ಆಗಿದೆ. ಈಗ ಮತ್ತೆ ಹಾಲಿನ ಅಭಾವ ಇದೆ. ರಾಜ್ಯದಲ್ಲಿ ಹದಿನಾರು ಲಕ್ಷ ಲೀಟರ್ ಹಾಲಿನ ಕೊರತೆಯಿದೆ. ಹಾಲಿಗೆ ದೊರೆಯುವ ಈಗಿನ ದರದಲ್ಲಿ ಮುಂದುವರಿಸಲು ಅಸಾಧ್ಯ. ಒಕ್ಕೂಟದ ಇತಿಮಿತಿಯಲ್ಲಿ ಪ್ರೋತ್ಸಾಹ ಧನ ನೀಡುವ ಪ್ರಯತ್ನ ಮಾಡಲಾಗಿದೆ. ಈಗ ಒಕ್ಕೂಟಕ್ಕೆ ರೂ 3 ಕೋಟಿ ಹೆಚ್ಚುವರಿ ಹೊರೆಯಾಗಿದ್ದು ನಿರ್ವಹಣೆಯ ದೃಷ್ಟಿಯಿಂದ ಒಂದು ರೂಪಾಯಿ ಕಡಿಮೆ ಮಾಡಲಾಗಿದೆ ಎಂದರು. ಹಾಲಿಗೆ ದರ ಏರಿಕೆ ಮಾಡುವುದು, ಪ್ರೋತ್ಸಾಹ ಧನ ಹೆಚ್ಚಿಸಲು ಒಕ್ಕೂಟದ ನಿಯೋಗದ ಮೂಲಕ ಸರಕಾರಕ್ಕೆ ಒತ್ತಡ ಹಾಕಲಾಗುವುದು. ಒಕ್ಕೂಟದ ಅಧೀನದಲ್ಲಿ 735 ಸಂಘಗಳಿವೆ. ಪುತ್ತೂರಿನಲ್ಲಿ 91 ಸಂಘಗಳಿದ್ದು 19 ಸಂಘಗಳಲ್ಲಿ ಸಾಂದ್ರಶೀತಲೀಕರಣ ಘಟಕ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನಲ್ಲಿ ಇನ್ನೂ ಐದು ಸಂಘಗಳಲ್ಲಿ ಸಾಂದ್ರಶೀತಲೀಕರಣ ಘಟಕ ಪ್ರಾರಂಭವಾಗಲಿದೆ. ಇದಲ್ಲದೆ ಇನ್ನಷ್ಟು ಕಡೆಗಳಲ್ಲಿ ಘಟಕ ಪ್ರಾರಂಭವಾದರೆ ಕ್ಯಾನ್‌ಲೆಸ್ ಒಕ್ಕೂಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಎಸ್.ಬಿ. ಜಯರಾಮ ರೈ ಅವರು, ಒಕ್ಕೂಟ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆ-ಪದ್ಮನಾಭ ಶೆಟ್ಟಿ ಅರ್ಕಜೆ; ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಮಾತನಾಡಿ, ಕಾಲ ಬದಲಾದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಗಳಾಗುತ್ತಿದೆ. ಇದರ ಜೊತೆಗೆ ನಮ್ಮ ಹೊಂದಾಣಿಕೆ ಮುಖ್ಯ. ಸಹಕಾರಿ ಕ್ಷೇತ್ರದಲ್ಲಿ ಅಂದಿಗೂ ಇಂದಿಗೂ ವ್ಯತ್ಯಾಸ ಇದೆ. ಹೈನುಗಾರಿಕೆಯಿಂದ ಲಾಭ, ನಷ್ಟಗಳ ಬಗ್ಗೆ ಅಧ್ಯಯನ ಮಾಡಿ ವ್ಯವಹರಿಸಿದರೆ ಲಾಭದಾಯಕ. ಜನರು ದಿನಕ್ಕೆ ಎರಡು ಬಾರಿ ಭೇಟಿ ನೀಡುವುದಿದ್ದರೆ ಅದು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಎಂದರು. ಶೇ. 70ರಷ್ಟು ಸಂಘಗಳು ಸ್ವಂತ ಕಟ್ಟಡದಲ್ಲಿ ವ್ಯವಹರಿಸುತ್ತಿದೆ. ಇದಕ್ಕೆ ಆರ್ಥಿಕ ನೆರವು ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವೆ ಅಭಿನಂದನೀಯ. ಹೈನುಗಾರಿಕಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.

ಒಕ್ಕೂಟದ ವಿರುದ್ಧ ಆರೋಪ ಮಾಡಿದ್ದಾರೆ-ನಾರಾಯಣ ಪ್ರಕಾಶ್: ಒಕ್ಕೂಟದ ಇನ್ನೋರ್ವ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ, ದ.ಕ ಹಾಲು ಒಕ್ಕೂಟದಿಂದ ಯಾವುದೇ ದುಂದು ವೆಚ್ಚವಾಗಿಲ್ಲ. ಹಾಗಿದ್ದರೂ ಉಡುಪಿಯಲ್ಲಿ ಒಕ್ಕೂಟದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಒಕ್ಕೂಟದ ಜೊತೆ ಇದ್ದುಕೊಂಡೇ ಒಕ್ಕೂಟದ ವಿರುದ್ಧ ಆರೋಪ ಮಾಡಿದ್ದಾರೆ. ಅವರು ಮಾಡುವ ಆರೋಪಗಳಿಗೆ ದಾಖಲೆ ನೀಡಿದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಾಗುವುದು. ಎಲ್ಲಾ ನಿರ್ದೇಶಕರುಗೊಂದಿಗೆ ಚರ್ಚಿಸಿಯೇ ಕೆಲವೊಂದು ಬದಲಾವಣೆ ಮಾಡಲಾಗಿದೆ. ಹಾಗಿದ್ದರೂ ವ್ಯವಸ್ಥೆಯ ವಿರುದ್ಧ ಮಾತನಾಡುವುದು ಶ್ರೇಯಸ್ಸು ಅಲ್ಲ. ದ.ಕ ಜಿಲ್ಲೆಯವರು ಒಕ್ಕೂಟವನ್ನು ತಾಯಿಯಂತೆ ಗೌರವಿಸಿದ್ದಾರೆ. ಆದರೆ ದ.ಕ ಜಿಲ್ಲೆಯವರಿಗೆ ಅಧ್ಯಕ್ಷ ಹುದ್ದೆ ದೊರೆತಿರುವುದಕ್ಕೆ ಈ ರೀತಿಯ ಆರೋಪ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದ.ಕ ಜಿಲ್ಲೆಯವರೇ ಒಕ್ಕೂಟದ ಅಧ್ಯಕ್ಷರಾಗಬೇಕು ಎಂಬ ಹಕ್ಕೊತ್ತಾಯ ಜಿಲ್ಲೆಯ ರೈತರು ಮಾಡಬೇಕು. ಅವರು ಮಾಡುವ ಆರೋಪಗಳಿಗೆ ದಾಖಲೆ ನೀಡಿದರೆ ಅದಕ್ಕೆ ಶ್ವೇತಪತ್ರ ಹೊರಡಿಸಲಾಗುವುದು. ಕೆಲವು ಸಂಘಗಳ ಕಾರ್ಯದರ್ಶಿಯವರೂ ಒಕ್ಕೂಟದ ವಿರುದ್ಧ ಆರೋಪ ಮಾಡಿದ್ದು ಅವರಿಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಷ್ಟದಲ್ಲಿ ಒಕ್ಕೂಟವನ್ನು ಮುನ್ನಡೆಸುವ ಪ್ರಯತ್ನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಅಧಿಕಾರದ ದಾಹ ನಮಗಿಲ್ಲ. ಹಾಲಿನ ಉತ್ಪನ್ನಗಳಿಂದ ಒಕ್ಕೂಟಕ್ಕೆ ಲಾಭ ಬರುತ್ತಿದೆ. ಹಾಲಿಗೆ ದರ ಏರಿಸುವ ಅಧಿಕಾರ ಒಕ್ಕೂಟದಲ್ಲಿಲ್ಲ. ದರ ಏರಿಕೆಗೆ ಸರಕಾರ ಅನುಮತಿ ನೀಡುತ್ತಿಲ್ಲ. ದರ ಏರಿಕೆ ಮಾಡುವಂತೆ ಹಕ್ಕೊತ್ತಾಯ ಮಾಡಬೇಕು ಎಂದು ಹೇಳಿದರು.

ಸ್ವಂತವಾಗಿ ದುಡಿದಾಗ ಹೆಚ್ಚು ಲಾಭ-ಸವಿತಾ ಎನ್. ಶೆಟ್ಟಿ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸವಿತಾ ಎನ್. ಶೆಟ್ಟಿ ಮಾತನಾಡಿ, ರೈತರು ಯಾವತ್ತೂ ಲಾಭಕ್ಕಾಗಿ ಬದುಕಿಲ್ಲ. ಸ್ವಂತವಾಗಿ ದುಡಿದಾಗ ಹೆಚ್ಚು ಲಾಭ. ಸಹಕಾರ ಮನೋಭಾವ ನಮ್ಮ ದೇಹದಲ್ಲಿ ಹುಟ್ಟಿದೆ ಸಮಾಜಕ್ಕೆ ಉತ್ತಮ ವಾತಾವರಣವನ್ನು ಸಹಕಾರ ಕ್ಷೇತ್ರ ನೀಡಿದೆ. ಕೊರೋನಾ ಸಂದರ್ಭದಲ್ಲಿ ಬಹಳಷ್ಟು ಮಂದಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ ಎಂದರು.

ಸಾಂದ್ರಶೀತಲೀಕರಣ ಯುಗ ಆರಂಭ-ಅಶೋಕ್: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಡಿ.ಅಶೋಕ ಮಾತನಾಡಿ, ಐವತ್ತು ವರ್ಷ, ನೂರು ವರ್ಷ ಬೆಳೆಯುವ ಸಂಘಗಳು ಬೆರಳೆಣಿಕೆಯಲ್ಲಿರುತ್ತದೆ. ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘವು ಸುದೀರ್ಘವಾಗಿ ಬೆಳೆದು ನಿಂತಿದೆ ಎಂದರು. ಕೋಡಿಂಬಾಡಿಯ ಸಂಘವು ಮಾದರಿ ಸಂಘವಾಗಿ ಬೆಳೆದಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಪುತ್ತೂರು ತಾಲೂಕಿನಲ್ಲಿ ಇನ್ನು 4 ಸಾಂದ್ರಶೀತಲಿಕರಣ ಘಟಕಗಳು ಪ್ರಾರಂಭವಾಗಲಿದ್ದು ಸಾಂದ್ರಶೀತಲೀಕರಣ ಯುಗ ಪ್ರಾರಂಭವಾಗಿದೆ ಎಂದರಲ್ಲದೆ ಹಾಲು ಒಕ್ಕೂಟದ ಬಗ್ಗೆ ಆರೋಪ ಮಾಡುವವರಿಗೆ ಸೂಕ್ತ ಲೆಕ್ಕಪತ್ರ ನೀಡಲು ಒಕ್ಕೂಟ ಬದ್ಧವಾಗಿದೆ ಎಂದರು.

ಮನಶಾಂತಿ ದೊರೆಯಲಿದೆ-ಅಶೋಕ್ ಆರಿಗ: ವಿಶೇಷ ಆಹ್ವಾನಿತರಾಗಿದ್ದ ಖ್ಯಾತ ನ್ಯಾಯವಾದಿ ಅಶೋಕ ಆರಿಗ ಬಾರಿಕೆ ಮಾತನಾಡಿ, ಹೈನುಗಾರಿಕೆಯಿಂದ ಮನೆಗೆ ಶುದ್ಧ ಹಾಲು, ಕೃಷಿಗೆ ಉತ್ತಮ ಗೊಬ್ಬರದ ಜೊತೆಗೆ ಮನಶಾಂತಿ ದೊರೆಯಲಿದೆ. ಈಗ ದನ ಸಾಕುವವರ ಸಂಖ್ಯೆ ಕಡಿಮೆಯಾಗಿದ್ದು ಕಷ್ಟವಾದರೂ ಹೈನುಗಾರಿಕೆ ಉತ್ತಮ ಎಂದರು.

ಗ್ರಾಮಸ್ಥರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ-ರಾಮಚಂದ್ರ ಪೂಜಾರಿ: ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ ಮಾತನಾಡಿ, ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘವು ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಸಹಕಾರಿ ಸಂಘವು ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿದೆ ಎನ್ನುವುದೇ ಹೆಮ್ಮೆಯಾಗಿದೆ. ಈ ಸಂಘವು ಶತಮಾನೋತ್ಸವವನ್ನು ಕಾಣುವಂತಾಗಲಿ ಎಂದು ಹಾರೈಸಿದರು.

ಸಂಘವು ಪೂರಕವಾಗಿದೆ-ತ್ರಿವೇಣಿ ರಾವ್: ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಆರ್. ರಾವ್ ಮಾತನಾಡಿ, ಕೋಡಿಂಬಾಡಿಯ ಹೈನುಗಾರರ ಬೆಳವಣಿಗೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ಪ್ರೋತ್ಸಾಹ, ಸಹಕಾರ ನೀಡಿದೆ. ಹೈನುಗಾರರ ಸ್ವಾವಲಂಬನೆಯ ಬದುಕಿಗೆ ಸಂಘವು ಪೂರಕವಾಗಿವೆ. ರೈತರಿಗೆ ಯಶಸ್ವಿನಿ ಯೋಜನೆಯನ್ನು ಸರಕಾರ ಮರು ಜಾರಿಗೊಳಿಸಿದ್ದು ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪ್ರತಿಯೊಬ್ಬರೂ ಸಹಕರಿಸಬೇಕು-ರೇವತಿ ವಿ. ಪೂಜಾರಿ; ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ರೇವತಿ ವಿ. ಪೂಜಾರಿ ಮಾತನಾಡಿ, ಆಡಳಿತ ಮಂಡಳಿಯ ತೀರ್ಮಾನದಂತೆ ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘದ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಕಟ್ಟಡ ವಿಸ್ತರಣೆಯ ಸಂದರ್ಭದಲ್ಲಿ ಸಾಂದ್ರಶೀತಲೀಕರಣ ಘಟಕವನ್ನು ಪ್ರಾರಂಭಿಸುವಂತೆ ಒಕ್ಕೂಟದಿಂದ ಆದೇಶ ಬಂದಿದ್ದು ಅದನ್ನು ನಿರ್ವಹಿಸಲಾಗಿದೆ. ಆಡಳಿತ ಮಂಡಳಿಯವರು ಇಲ್ಲಿ ಶಾಶ್ವತವಲ್ಲ. ಸಂಘ ಶಾಶ್ವತವಾಗಿ ಬೆಳೆಯಬೇಕಾಗಿದ್ದು ಸಂಘವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಸಮಸ್ಯೆ ಪರಿಹರಿಸುವ ಕಾರ್ಯ ಸರಕಾರದಿಂದ ಆಗಬೇಕು-ಬಾಲಕೃಷ್ಣ ಬೋರ್ಕರ್: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಸುವರ್ಣ ಮಹೋತ್ಸವದ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಬಾಲಕೃಷ್ಣ ಬೋರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಡಿಂಬಾಡಿಯ ರೈತರ ಒಗ್ಗಟ್ಟಿನ ಪ್ರತಿಫಲವಾಗಿ 1972ರಲ್ಲಿ ಸಂಘ ಸ್ಥಾಪನೆಗೊಂಡಿದೆ. ಅವಿಭಜಿತ ಜಿಲ್ಲೆಯಲ್ಲಿ ಒಕ್ಕೂಟ ಪ್ರಾರಂಭದ ಬಳಿಕ ಉತ್ತಮ ದರ ಇದ್ದರೂ ಈಗಿನ ದರದಲ್ಲಿ ಹೈನುಗಾರಿಕೆ ಅಸಾಧ್ಯ. ಆದರೂ ಹೈನುಗಾರಿಕೆಯು ಕೃಷಿಗೆ ಅವಶ್ಯಕ. ಉಳಿದ ಜಿಲ್ಲೆಗೆ ಹೋಲಿಕೆ ಮಾಡಿದರೆ ಹೈನುಗಾರಿಕೆಯನ್ನು ಲಾಭದಾಯಕವಾಗಿ ನಡೆಸುವುದು ಅಸಾಧ್ಯ. ಕೆಎಂಎಫ್ ದರ ಏರಿಸುವ ಪ್ರಯತ್ನ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಸರಕಾರದಿಂದ ಆಗಬೇಕಿದೆ ಎಂದರು. ಸಂಘದ ಸುವರ್ಣ ಸಂಭ್ರಮದಲ್ಲಿ ಸಾಂದ್ರಶೀತಲೀಕರಣ ಘಟಕ ಪ್ರಾರಂಭಿಸಲಾಗಿದೆ. ಮುಂದೆ ಹೈನುಗಾರರ ಅನುಕೂಲತೆಗಳಿಗೆ ಸ್ಪಂದಿಸುವ ಕೆಲಸ ಸಂಘದ ಮೂಲಕ ನಡೆಸಲಾಗುವುದು ಎಂದು ಅವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಪುಷ್ಪಲತಾ, ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮತ್ತು ಬಿಎಂಸಿ ಉಪ ವ್ಯವಸ್ಥಾಪಕ ಡಾ.ಕೇಶವ ಸುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.‌

ಲೀಲಾವತಿ ಆರ್. ಭಂಡಾರಿ ಪ್ರಾರ್ಥಿಸಿದರು. ಸಂಘದ ನಿರ್ದೇಶಕಿ ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ರಾಜಪಲ್ಕೆ ವರದಿ ವಾಚಿಸಿದರು. ನಿರ್ದೇಶಕ ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಒಕ್ಕೂಟದ ನಿರ್ದೇಶಕಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಗೌಡ ಬದಿನಾರು, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಶೇಖರ ಪೂಜಾರಿ ಡೆಕ್ಕಾಜೆ, ಚೆನ್ನಪ್ಪ ಗೌಡ ನಿಡ್ಯ, ಕೇಶವ ಗೌಡ ಬರೆಮೇಲು, ಲೀಲಾವತಿ ಪರಬಪಾಲು, ದೇವದಾಸ ಗೌಡ ಉಳಿತ್ತಡ್ಕ, ರತ್ನವರ್ಮ ಆಳ್ವ ಮಿತ್ತಳಿಕೆ, ಸಲಹಾ ಸಮಿತಿ ಸದಸ್ಯರಾದ ವಾರಿಸೇನ ಜೈನ್ ಕೋಡಿಯಾಡಿ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ವಸಂತ ನಾಯಕ್ ಕೋಡಿ ಮೋನಡ್ಕ, ಮಾಜಿ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಪನಿಪಾಲು, ಲೀಲಾಧರ ಗೌಡ ಉಳಿತ್ತಡ್ಕ, ಸುಬ್ರಹ್ಮಣ್ಯ ಗೌಡ ಬಾರ್ತಿಕುಮೇರು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಹಾಲು ಪರೀಕ್ಷಕ ನಾರಾಯಣ ಪೂಜಾರಿ ಮತ್ತು ಸಹಾಯಕಿ ಕವಿತಾ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಹಾಗೂ ಶ್ರೀ ಶಾರದಾ ಕಲಾ ಕೇಂದ್ರ ಪುತ್ತೂರು ಇವರಿಂದ ಭರತನಾಟ್ಯ ಹಾಗೂ ನೃತ್ಯ ರೂಪಕ ‘ಶ್ರೀನಿವಾಸ ಕಲ್ಯಾಣ’ ನೆರವೇರಿತು.

ಚೆಕ್ ಹಸ್ತಾಂತರ
ಸಾಂದ್ರಶೀತಲೀಕರಣ ಘಟಕ ನಿರ್ಮಾಣ ಹಾಗೂ ಕಟ್ಟಡದ ವಿಸ್ತರಣೆಗೆ ಒಕ್ಕೂಟದಿಂದ ನೀಡುವ ಅನುದಾನದ ಚೆಕ್‌ನ್ನು ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಸಂಘದ ಅಧ್ಯಕ್ಷೆ ರೇವತಿ ವಿ. ಪೂಜಾರಿಯವರಿಗೆ ಸಭಾ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.

ಸುದ್ದಿಯಲ್ಲಿ ನೇರ ಪ್ರಸಾರ

ಸಂಘದ ಸುವರ್ಣ ಸಂಭ್ರಮ, ಕ್ಷೀರವಾರಿಧಿ ವಿಸ್ತೃತ ಕಟ್ಟಡದ ಪ್ರವೇಶೋತ್ಸವ ಹಾಗೂ ಸಾಂದ್ರಶೀತಲೀಕರಣ ಘಟಕದ ಉದ್ಘಾಟನೆ ಕಾರ್ಯಕ್ರಮಗಳು ಸುದ್ದಿ ಯೂ ಟ್ಯೂಬ್ ಚಾನೆಲ್ ಹಾಗೂ ಫೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಂಡಿತ್ತು.

ಸುದ್ದಿಯಿಂದ ಅದ್ಧೂರಿ ಪ್ರಚಾರ-ರೇವತಿ
ನಮ್ಮ ಸಂಘದ ಸಾಧನೆ ಹಾಗೂ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ಚಾನೆಲ್‌ನಲ್ಲಿ ಅದ್ಧೂರಿಯಾಗಿ ಪ್ರಚಾರ ನೀಡಿ ನಮಗೆ ಸಹಕರಿಸಿದ್ದಾರೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಗ್ರಾ.ಪಂ ಮಾಜಿ ಅಧ್ಯಕ್ಷರಾಗಿರುವ ರೇವತಿ ವಿ.ಪೂಜಾರಿ ತಿಳಿಸಿದರು.

ಸನ್ಮಾನ

ಸಂಘದ ಸ್ಥಾಪನೆಗೆ ಕಾರಣಕರ್ತರಾದ ದಿ. ರವಿರಾಜ ಆರಿಗ ಬಾರಿಕೆರವರ ಪುತ್ರ, ಖ್ಯಾತ ನ್ಯಾಯವಾದಿ ಅಶೋಕ ಆರಿಗ ಬಾರಿಕೆ, ದಿ. ಪದ್ಮಪ್ಪ ಪೂಜಾರಿ ಕೋಡಿರವರ ಪುತ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ, ತಾ.ಪಂ. ಮಾಜಿ ಅಧ್ಯಕ್ಷರೂ ಆಗಿರುವ ಕೆ. ಜಯಾನಂದ ಕೋಡಿಂಬಾಡಿ, ಲಕ್ಷ್ಮೀನಾರಾಯಣ ನಾಯಕ್ ಕೋಡಿ ಮೋನಡ್ಕರವರ ಪುತ್ರ, ಗ್ರಾ.ಪಂ. ಮಾಜಿ ಸದಸ್ಯ ವಸಂತ ನಾಯಕ್, ಗಣಪತಿ ನಾಯಕ್ ನೆಕ್ಕರಾಜೆರವರ ಪುತ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಸುಭಾಸ್ ನಾಯಕ್ ನೆಕ್ಕರಾಜೆ, ಧರ್ನಪ್ಪ ಸೇಮಿತರವರ ಪುತ್ರ ವಾರಿಸೇನ್ ಜೈನ್ ಕೋಡಿಯಾಡಿ, ಎನ್.ಡಿ. ಸಾಮಂತ್ ನೆಕ್ಕರಾಜೆರವರ ಪುತ್ರ ರಮೇಶ್ ಸಾಮಂತ್ ನೆಕ್ಕರಾಜೆ, ರುಕ್ಮ ಗೌಡರ ಪುತ್ರ ದೀಕ್ಷಿತ್, ಸಂಘದ ಮಾಜಿ ಅಧ್ಯಕ್ಷರುಗಳಾದ ಜಿ.ಪಂ. ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣ ಬೋರ್ಕರ್, ತಾ.ಪಂ. ಮಾಜಿ ಅಧ್ಯಕ್ಷ ಕೆ. ಜಯಾನಂದ ಕೋಡಿಂಬಾಡಿ, ತಾ.ಪಂ. ಮಾಜಿ ಸದಸ್ಯೆ ಲೀಲಾವತಿ ಲಕ್ಷ್ಮಣ ಗೌಡ, ಚೆನ್ನಪ್ಪ ಗೌಡ ನಿಡ್ಯ ಮತ್ತು ಗುತ್ತಿಗೆದಾರ ಸತೀಶ್ ಮೂಲ್ಯ ಸೇಡಿಯಾಪುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ರೇವತಿ ವಿ. ಪೂಜಾರಿಯವರನ್ನು ದ.ಕ ಹಾಲು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಮಾಜಿ ನಿರ್ದೇಶಕರು ಹಾಗೂ ಹಾಲಿ ನಿದೇಶಕರು ಹಾಗೂ ಸಿಬ್ಬಂದಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here