ಪುತ್ತೂರು: ಗೋವುಗಳನ್ನು ಆರಾಧನೆ ಮಾಡುವ ನಮ್ಮ ನೆಲದಲ್ಲಿರುವ ಗೋಶಾಲೆಗಳು ಮುಚ್ಚಿ ಹೋಗುವಂತಹ ಪರಿಸ್ಥಿತಿ ಬಂದಿದೆ. ಕಡಬ ತಾಲೂಕಿನ ಕೊಯಿಲದಲ್ಲಿರುವ ಗೋಶಾಲೆಯಲ್ಲಿ 6 ಹಸುಗಳು ಮಾರಣಹೋಮಕ್ಕೀಡಾಗಿದೆ. ಇಂತಹ ಘಟನೆಗಳ ಬಗ್ಗೆ ಸರಕಾರ, ಪ್ರಮುಖರು ಗಮನ ಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ಉದ್ಯಮಿ ಅಶೋಕ್ ಕುಮಾರ್ ರೈ ಹೇಳಿದರು.
ಮಾಣಿ ಪೆರಾಜೆಯ ಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ತೀರ್ಥ ಮಹಾಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಸಪರಿವಾರ ಶ್ರೀ ರಾಮದೇವರ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಂದರ್ಭ ನಡೆದ ಧರ್ಮಸಭೆಯಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.
ಸಮಾಜದಲ್ಲಿ, ಮನೆ – ಮನೆಗಳಲ್ಲಿ ಇಂದು ಗೋವಿಗೆ ಪ್ರಾಮುಖ್ಯತೆ ಬರುವಂತೆ ಮಾಡಿದವರು ಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು. ಗೋವಿನ ಸಂರಕ್ಷಣೆ, ಪೂಜನೀಯ ದೃಷ್ಟಿಕೋನದ ಬಗ್ಗೆ ಗುರುಗಳು ಮಾರ್ಗದರ್ಶನ ನೀಡಬಹುದು. ಆದರೆ ಕೈಹಿಡಿದು ಕೆಲಸ ಮಾಡಿಸಲು ಸಾಧ್ಯವಿಲ್ಲ. ಗುರುಗಳು ನೀಡಿದ ಮಾರ್ಗದರ್ಶನವನ್ನು ಜಾರಿ ಮಾಡುವ ಜವಾಬ್ದಾರಿ ಸರಕಾರಕ್ಕಿದೆ. ಸರಕಾರ ಈ ಕೆಲಸವನ್ನು ಮಾಡುವ ಅಗತ್ಯವಿದೆ ಎಂದು ಅಶೋಕ್ ರೈ ಹೇಳಿದರು.
ಲಂಡನ್‌ನಂತಹ ದೇಶಗಳಲ್ಲಿ 25-30 ಎಕರೆ ಜಾಗವನ್ನು ಗೋವುಗಳಿಗೆಂದೇ ಮೀಸಲಿಟ್ಟು, ಬೇರೆ ಬೇರೆ ಹಂತವಾಗಿ ವರ್ಗೀಕರಣ ಮಾಡುತ್ತಾರೆ. ಒಂದು ಕಡೆ ಗೋವುಗಳನ್ನು ಮೇಯಲು ಬಿಟ್ಟು, ಅಲ್ಲಿ ಬರಿದಾದ ನಂತರ ಇನ್ನೊಂದೆಡೆ ಮೇಯಲು ಬಿಡುತ್ತಾರೆ. ಇಂತಹ ವ್ಯವಸ್ಥೆ ವಿದೇಶಗಳಲ್ಲಿವೆ. ಆದರೆ ಗೋವುಗಳನ್ನು ಪೂಜನೀಯ ದೃಷ್ಟಿಯಲ್ಲಿ ನೋಡುವ ನಮ್ಮ ನೆಲದಲ್ಲಿ ಗೋವುಗಳು ಸಾಯುತ್ತಿದ್ದು, ಗೋಶಾಲೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿವೆ. ಕೊಯಿಲದಲ್ಲಿರುವ ಗೋಶಾಲೆಯಲ್ಲಿ 700ರಷ್ಟು ಹಸುಗಳಿವೆ. ಇದರಲ್ಲಿ 6ಹಸುಗಳು ತಿನ್ನಲು ಮೇವು ಇಲ್ಲದೇ ಸಾವನ್ನಪ್ಪಿದೆ. ನಾವು ಆರಾಧನೆ ಮಾಡುವ ಗೋವುಗಳು ಹಸಿವಿನಿಂದ ಸಾಯುತ್ತಿವೆ ಎಂದರೆ, ಪ್ರಮುಖರು, ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಶೋಕ್ ರೈ ಹೇಳಿದರು.