ಭಕ್ತರಲ್ಲಿ ಸಂಭ್ರಮ ಮನೆ ಮಾಡಿದ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರಥಮ ಜಾತ್ರೋತ್ಸವ

0

ಪುತ್ತೂರು: ಆರ್ಯಾಪು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ.26ರಂದು ನಡೆದ ಪ್ರಥಮ ಜಾತ್ರೋತ್ಸವವು ಭಕ್ತರಲ್ಲಿ ಬಹಳಷ್ಟು ಸಡಗರ ಸಂಭ್ರಮ ಮನೆ ಮಾಡಿತು.


ಮಠ ಸಂಪ್ರದಾಯಕ್ಕೊಳಪಟ್ಟ ಶ್ರೀ ವ್ಯವಸ್ಥಾಪನಾ ಮಹಾವಿಷ್ಣುಮೂರ್ತಿ ದೇವಸ್ಥಾನವಾಗಿತ್ತು. 2020 ರಲ್ಲಿ ಪುನಃ ಪ್ರತಿಷ್ಠೆ, ಬ್ರಹ್ಮಲಕಶೋತ್ಸವಗಳು ನಡೆದ ಬಳಿಕ ಇಲ್ಲಿ ಇಷ್ಟು ವರ್ಷಗಳ ತನಕ ಪ್ರತಿ ವರ್ಷ ಪ್ರತಿಷ್ಠಾ ದಿನವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಸಬೇಕು ಎಂಬ ಭಕ್ತಾದಿಗಳ ಆಶಯದಂತೆ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿತ್ತು. ದೈವಜ್ಞರ ಸಲಹೆ, ಸೂಚನೆಯಂತೆ ಈ ವರ್ಷದಿಂದ ಜಾತ್ರೋತ್ಸವವನ್ನು ಪ್ರಾರಂಭಿಸಲಾಗಿದೆ. ಪ್ರಥಮ ಜಾತ್ರೋತ್ಸವವನ್ನು ಅದ್ದೂರಿಯಾಗಿ ನಡೆಸುವ ನಿಟ್ಟಿನಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಜೊತೆಗೆ ಭಕ್ತಾದಿಗಳು ಕೈ ಜೋಡಿಸಿದ್ದಾರೆ. ಸಂಪ್ಯ ಹೆದ್ದಾರಿಯಲ್ಲಿ ಆಕರ್ಷಕ ಪ್ರವೇಶ ದ್ವಾರ ನಿರ್ಮಿಸಲಾಗಿತ್ತು. ಸಂಪ್ಯ ಪೇಟೆ, ರಸ್ತೆ, ದೇವಸ್ಥಾನದ ಪರಿಸರದಲ್ಲಿ ಬ್ಯಾನರ್, ಬಂಟಿಂಗ್ಸ್, ತಳಿರು ತೋರಣ ಹಾಗೂ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದ್ದು ಭಕ್ತರನ್ನು ಕೈಬೀಸಿ ಕರೆಯುವಂತಿತ್ತು.


ಜಾತ್ರೋತ್ಸವವು ಜ.25 ರಂದು ಸಂಜೆ ಹೊರೆ ಕಾಣಿಕೆ ಸಮರ್ಪಣೆಯೊಂದಿಗೆ ಅದ್ಧೂರಿ ಚಾಲನೆ ದೊರೆತು, ಹೊರೆಕಾಣಿಕೆಯ ಭವ್ಯ ಮೆರವಣಿಗೆಯು ದರ್ಬೆ ವೃತ್ತದ ಬಳಿಯಿಂದ ಹೊರಟು, ಮುಕ್ರಂಪಾಡಿ, ಸಂಪ್ಯ ಮುಖ್ಯ ರಸ್ತೆಯ ಮೂಲಕ ಸಾಗಿ ದೇವಸ್ಥಾನದ ಬಳಿಯಲ್ಲಿ ಸಮಾಪನಗೊಂಡಿತು. ಅಂಧ ಕಲಾವಿದರಿಂದ ಚಲಿಸುವ ರಸಮಂಜರಿಯು ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಹಸಿರು ಹೊರೆಕಾಣಿಕೆ ಹೊತ್ತ ನೂರಾರು ವಾಹನಗಳ ಸಾಲು ಸಾಲು ವಾಹನಗಳ ಮೆರವಣಿಗೆಯಲ್ಲಿ ಹೊರೆಕಾಣಿಕೆಯು ದೇವಸ್ಥಾನಕ್ಕೆ ಸಾಗಿ ಬಂದಿದೆ. ಹೊರೆಕಾಣಿಕೆ ಸಮರ್ಪಣೆಯ ಬಳಿಕ ರಾತ್ರಿ ದೇವಸ್ಥಾನದಲ್ಲಿ ಉಗ್ರಾಣ ಪೂಜೆ, ದುರ್ಗಾಪೂಜೆ, ಶ್ರೀದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.


ಜಾತ್ರೋತ್ಸವದಲ್ಲಿ ಜ.26 ರಂದು ಬೆಳಿಗ್ಗೆ ಕ್ಷೇತ್ರದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಉತ್ಸವಮೂರ್ತಿ ಬಿಂಬ ಪೂಜೆ, ಕಲಶ ಪೂಜೆ, ಶ್ರೀದೇವರಿಗೆ ಕಲಶಾಭಿಷೇಕ, ನಾಗ ಸನ್ನಿಧಿಯಲ್ಲಿ ನಾಗತಂಬಿಲ,ಆಶ್ಲೇಷ ಬಲಿಪೂಜೆ, ದೈವಗಳಿಗೆ ತಂಬಿಲ ಸೇವೆ,  ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಕ್ಷೇತ್ರದ ದೈವಗಳಾದ ಧೂಮಾವತಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆದ ಬಳಿಕ ಶ್ರೀದೇವರ ಉತ್ಸವ ಬಲಿ, ಪಲ್ಲಕಿ ಉತ್ಸವ, ದರ್ಶನ ಬಲಿ, ರಾಜಾಂಗಣದಲ್ಲಿ  ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.  

ಆಕರ್ಷಕ ಹೂವಿನ ಅಲಂಕಾರ:
ದೇವರ ಜಾತ್ರೋತ್ಸವಕ್ಕೆ ದೇವಸ್ಥಾನದ ಮುಂಬಾಗ, ನಮಸ್ಕಾರ ಮಂಟಪ ಹಾಗೂ ಗರ್ಭಗುಡಿಗಳು ಆಕರ್ಷಕ ಹೂವಿನ ಅಲಂಕಾರದಿಂದ ಕಂಗೊಳಿಸುತಿತ್ತು. ಉದ್ಯಮಿ, ಎಸ್‌ಎಲ್‌ವಿ ಬುಕ್ಸ್ ಇಂಡಿಯಾದ ಮ್ಹಾಲಕ ದಿವಾಕರ ದಾಸ್ ನೇರ್ಲಾಜೆಯವರು ವಿಶೇಷ ಹೂವಿನ ಅಲಂಕಾರದ ಪ್ರಾಯೋಜಕರಾಗಿದ್ದರು.


ಶಿಸ್ತು ಬದ್ದವಾದ ವ್ಯವಸ್ಥೆಗಳು:
ಜಾತ್ರೋತ್ಸವದಲ್ಲಿ ವಿವಿಧ ಉಪ ಸಮಿತಿಗಳ ಮೂಲಕ ಜಾತ್ರೋತ್ಸವವನ್ನು ಬಹಳಷ್ಟು ಅಚ್ಚುಕಟ್ಟಾಗಿ , ಶಿಸ್ತು ಬದ್ದವಾಗಿ ನೆರವೇರಿಸಲಾಗಿತ್ತು. ಬೆಳಿಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಗಳು, ವಾಹನ ನಿಲುಗಡೆ, ಪ್ರಸಾದ ವಿತರಣೆ, ಅತಿಥಿಗಳಿಗೆ ಆತಿಥ್ಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಅಚ್ಚು ಕಟ್ಟಾಗಿ ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ‌ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕತ್ತಾರ್ ಉದ್ಯಮಿ ಮೂಡಂಬೈಲು ಡಾ.ರವಿ ಶೆಟ್ಟಿ ನೇಸರ ಕಂಪ, ಮುಂಡೂರು ಅಜಲಾಡಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಅಂಬಿಕಾ‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಅಕ್ಷಯ ಕಾಲೇಜಿನ ಚೆಯರ್ ಮೆನ್ ಜಯಂತ ನಡುಬೈಲು, ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ‌ ವೆಂಕಟ್ರಮಣ ಭಟ್, ರಬ್ಬರ್ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಉದ್ಯಮಿ ಉಮೇಶ್ ನಾಡಾಜೆ, ಶಿವರಾಮ ಆಳ್ವ ಬಳ್ಳಮಜಲು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯ ರವೀಂದ್ರನಾಥ ರೈ,‌ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಮಧು ನರಿಯೂರು, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿಯ ಅಧ್ಯಕ್ಷಹರೀಶ್ ಪುತ್ತೂರಾಯ, ಮೈತ್ರಿ ಇಲೆಕ್ಟ್ರಿಕಲ್ ಮ್ಹಾಲಕ‌ ರವಿನಾರಾಯಣ, ಕೊಕ್ಕೊ ಗುರುನ ಸಂತೋಷ್ ಬೋನಂತಾಯ, ಶಿವಕುಮಾರ್ ಕಲ್ಲಿಮಾರ್, ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ನ್ಯಾಯವಾದಿ ಮಹೇಶ್ ಕಜೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಧ್ಯಕ್ಷರು, ಸದಸ್ಯರು, ಉತ್ಸವ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ದೇವಸ್ಥಾನದ ಪ್ರಥಮ ಜಾತ್ರೋತ್ಸವದ ವೈಭವವನ್ನು ಕಂಡು ಕಣ್ತುಂಬಿಕೊಂಡು ಪುಣೀತರಾದರು.

LEAVE A REPLY

Please enter your comment!
Please enter your name here