ಪುತ್ತೂರು: ವೀರಮಂಗಲದ ಆನಾಜೆ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದಿಂದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಪೂಜೆ ಸಮಿತಿ ಆನಾಜೆ ಇದರ ಸಹಕಾರದೊಂದಿಗೆ ಪ್ರತಿಷ್ಠಾನದ ರಜತ ಸಂಭ್ರಮದ ಅಂಗವಾಗಿ ಧನ್ವಂತರಿ ಯಾಗ ಹಾಗೂ ಧಾರ್ಮಿಕ ಸಭೆಯು ಡಿ.13ರಂದು ಆನಾಜೆ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಆವರಣದಲ್ಲಿ ನಡೆಯಿತು.
ಧರ್ಮದ ಚೌಕಟ್ಟಿನಲ್ಲಿ ಮುನ್ನಡೆದಾಗ ಜೀವನ ಸಾರ್ಥಕ-ಒಡಿಯೂರು ಶ್ರೀ ಮಾತಾನಂದಮಯಿ
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀಮಾತಾನಂದಮಯಿ ಮಾತನಾಡಿ, ಧನ್ವಂತರಿ ಯಾಗವು ಅಪರೂಪವಾಗಿ ನಡೆಯುತ್ತದೆ. ಆರೋಗ್ಯ ಪೂರ್ಣ ಬದುಕಿಗೆ ಧನ್ವಂತರಿಯ ಉಪಾಸನೆ ಅಗತ್ಯ. ನಾವು ಸೇವಿಸುವ ಆಹಾರ ಮನಸ್ಸಿಗೂ ಪರಿಣಾಮ ಬೀರುತ್ತಿದೆ. ಹೀಗಾಗಿ ಸಾತ್ವಿಕ ಹಾಗೂ ಪರಿಶುದ್ದವಾದ ಅಹಾರ ಸೇವಿಸಿದಾಗ ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಆಧಾರ ಸ್ಥಂಬಗಳಂತಿರುವ ತ್ಯಾಗ, ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬೆಳೆಯಲು ಸಾಧ್ಯ. ನಾವು ಬೆಳೆಯುವ ಜೊತೆಗೆ ಸಮಾಜವನ್ನು ಬೆಳೆಸಬೇಕು. ಜೀವನದಲ್ಲಿ ಆಳವಡಿಸುವ ಧರ್ಮ, ನಾವು ಗಳಿಸುವ ಸಂಪತ್ತು, ನಮ್ಮ ಆಸೆ, ಬೇಡಿಕೆಗಳು ಧರ್ಮಯುತ್ತವಾಗಿದ್ದರೆ ಮೋಕ್ಷ ತನ್ನಿಂದತಾನಾಗಿಯೇ ಪ್ರಾಪ್ತಿಯಾಗುತ್ತದೆ. ಧರ್ಮದ ಅಡಿಪಾಯ ಭದ್ರವಾಗಿಸಿ, ನಾವು ಧರ್ಮದ ಚೌಕಟ್ಟಿನಲ್ಲಿ ಮುನ್ನಡೆದಾಗ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಹೇಳಿದರು.
ಪ್ರತಿಷ್ಠಾನದ ಕಾರ್ಯಗಳಿಗೆ ತನ್ನಿಂದಾಗ ಸಹಕಾರ ನೀಡಲಾಗುವುದು-ಮಲ್ಲಿಕಾ ಪಕಳ:
ಮುಖ್ಯ ಅತಿಥಿಯಾಗಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ ಮಲಾರಬೀಡು ಮಾತನಾಡಿ, ಮಹಾವಿಷ್ಣು ಸೇವಾ ಪ್ರತಿಷ್ಠಾನವು ಕಳೆದ ೨೫ ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬಡವರ ಸೇವೆ, ರಕ್ತದಾನದಂತಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವು ಶ್ಲಾಘನೀಯ. ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಾನವ ಕುಲದ ಆರೋಗ್ಯ ಕಾಪಾಡುವ ಧನ್ವಂತರಿ ಯಾಗ ಹಾಗೂ ಕರ್ಮಫಲ ನಿವಾರಿಸುವ ಶನೃಶ್ಚರ ಪೂಜೆ ಆಯೋಜನೆಗೊಂಡಿದೆ. ಪ್ರತಿಷ್ಠಾನದ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಸುವರ್ಣ ಸಂಭ್ರಮ, ಅಮೃತಮಹೋತ್ಸವ, ಶತಮಾನೋತ್ಸವನ್ನು ಕಾಣುವಂತಾಗಲಿ, ತನ್ನಿಂದಾಗುವ ಎಲ್ಲಾ ರೀತಿಯ ಸಹಕಾರಗಳನ್ನು ನೀಡುವುದಾಗಿ ಅವರು ತಿಳಿಸಿದರು.

ಧಾರ್ಮಿಕ ಕಾರ್ಯಗಳನ್ನು ಒಟ್ಟು ಸೇರಿ ಮಾಡುವುದರಿಂದ ಭಕ್ತಿಯ ಸಂಚಯನ-ನವೀನ್ ಡಿ.:
ನರಿಮೊಗರು ಪ್ರಾಥರ್ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ ಮಾತನಾಡಿ, ಆರೋಗ್ಯ ಪೂರ್ಣ ಸಮಾಜಕ್ಕಾಗಿ ಎಲ್ಲರೂ ಒಟ್ಟು ಸೇರಿ ಮಾಡುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಯ ಸಂಚಯನವಾಗಲಿದೆ. ನಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕರಾತ್ಮಕ ಶಕ್ತಿಗಳು ಮೈಗೂಡಿಕೊಂಡು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.
ಯಜ್ಞ, ಯಾಗಾದಿಗಳಿಂದ ಸಮಾಜ, ದೇಶಕ್ಕೆ ಒಲಿತು-ಶಿವರಾಮ ಭಟ್:
ಅಧ್ಯಕ್ಷತೆ ವಹಿಸಿದ್ದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಭಟ್ ಬಾವಾ ಮಾತನಾಡಿ, ಧರ್ಮವನ್ನು ನಾವು ರಕ್ಷಣೆ ಮಾಡಿದಾಗ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ. ನಾವು ಅನಾವಶ್ಯಕವಾಗಿ ಹಣ ಖರ್ಚು ಮಾಡುವುದು ಸರಿಯಲ್ಲಿ. ದೇವತಾ ಕಾರ್ಯಗಳಿಗೆ ನಾವು ಮಾಡುವ ಖರ್ಚು ಅದು ಬ್ಯಾಂಕ್‌ನಲ್ಲಿ ಠೇವಣಿಯಿಟ್ಟಂತೆ. ಠೇವಣಿಗೆ ಬಡ್ಡಿ ದೊರೆಯುವಂತೆ ದೇವರ ಅನುಗ್ರಹವು ನಮಗೆ ಪ್ರಾಪ್ತಿಯಾಗುತ್ತದೆ. ಯಜ್ಞ, ಯಾಗಾದಿಗಳನ್ನು ಮಾಡುವುದರಿಂದ ಸಮಾಜ, ದೇಶಕ್ಕೆ ಒಲಿತಾಗಲಿದೆ ಎಂದು ಹೇಳಿದರು.
ಮಹಾವಿಷ್ಠು ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಸಂತ ಗೌಡ ಸೇರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತಿ ಕಾಡಮನೆ ಪ್ರಾರ್ಥಿಸಿದರು. ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ನಿರಂಜನ ಕುಲಾಲ್ ಸ್ವಾಗತಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿ, ಅಕ್ಷತಾ ಗುರುಪ್ರಸಾದ್ ಆನಾಜೆ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹರೀಶ್ ಆಚಾರ್ಯ ದಂಪತಿ ಸ್ವಾಮಿಜಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ಭವಿತ್ ಆನಾಜೆ, ಭವಾನಿ ಕುಲಾಲ್, ವಿಜಯ ಕುಮಾರ್ ಅತಿಥಿಗಳಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.
ಧನ್ವಂತರಿ ಯಾಗ;
ಬೆಳಿಗ್ಗೆ ವೀರಮಂಗಲ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರ ನೇತೃತ್ವದಲ್ಲಿ ನಡೆದ ಧನ್ವಂತರಿ ಯಾಗ ಪ್ರಾರಂಭಗೊಂಡಿತು. ಈ ಸಮಯದಲ್ಲಿ ಪುರುಷರಕಟ್ಟೆ ನವಚೇತನ ಹಿರಿಯ ಮಹಿಳಾ ನಾಗರಿಕರಿಂದ ಮದ್ಭಗೀತೆ ಪಾರಾಯಣ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಅಪರಾಹ್ನ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ವೀರಮಂಗಲ, ಶ್ರೀ ಸದಾಶಿವ ಭಜನಾ ಮಂಡಳಿ ಹಾಗೂ ಶ್ರೀರಾಮ ಭಜನಾ ಮಂದಿರ ಆನಡ್ಕ ಇವರಿಂದ ಭಜನಾ ಸೇವೆ, ಸಂಜೆ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿದ ಶ್ರೀ ಶನೈಶ್ಚರ ಚರಿತ್ರೆ’ ಎಂಬ ಭರತನಾಟ್ಯ ಮತ್ತು ನೃತ್ಯರೂಪಕ ನೆರವೇರಿತು.
ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಮಹಾವಿಷ್ಣು ಸೇವಾ ಪ್ರತಿಷ್ಠಾನದ ಕಾರ್ಯದಲ್ಲಿ ಊರಿನ ಪ್ರತಿಯೊಬ್ಬರ ಪರಿಶ್ರಮವಿದೆ. ಪರಸ್ಪರ ಸಹಕಾರ, ಆತ್ಮವಿಶ್ವಾಸದಿಂದ ಪ್ರತಿಷ್ಠಾನವು 25 ವರ್ಷಗಳನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ. ಪ್ರತಿಷ್ಠಾನದ ಕಾರ್ಯಗಳಲ್ಲಿ ಆಧ್ಯಾತ್ಮಿಕವಾದ ಸ್ಪರ್ಶವಿದೆ. ಇಲ್ಲಿನ ಸಹೋದರರ ಕಾರ್ಯಗಳು ಸಂಘಟನೆಗೆ ಸಾಕ್ಷಿಯಾಗಿದೆ.