ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ 30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರನ್ನು ಸನ್ಮಾನಿಸಲಾಯಿತು.
ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿ ಕಿಲ್ಲೆ ಮೈದಾನದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಸಮಿತಿ ಅಧ್ಯಕ್ಷ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರೂ, ಕೋಟಿ ಚೆನ್ನಯ ಕಂಬಳ ಸಮಿತಿ ಸಂಚಾಲಕರೂ ಆಗಿರುವ ಎನ್.ಸುಧಾಕರ್ ಶೆಟ್ಟಿ, ಕಂಬಳದ ಕೋಣವನ್ನು ಪಳಗಿಸುವಲ್ಲಿ ಮತ್ತು ಓಟದಲ್ಲಿ ಸಾಧನೆ ಮಾಡಿದ ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಮೋಟಾರ್ ಬೈಕ್, ವಾಹನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಆಕಾಶ್ ಐತಾಳ್, ಕಂಬಳದ ಓಟದಲ್ಲಿ ಸಾಧನೆಗೈದ ಸತೀಶ್ ದೇವಾಡಿಗ ಅಳದಂಗಡಿ, ಬ್ಯಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ರವೀಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಇದರ ಜೊತೆಗೆ ವೇದಿಕೆಯ ಕೆಳಗಡೆ ಕಂಬಳ ಓಟಗಾರ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಮಾರೋಡಿ ಮತ್ತು ವಿಶೇಷವಾಗಿ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿಯವರ ಪ್ರಶಸ್ತಿ ಪುರಸ್ಕೃತ ಮಿಂಚಿನ ಓಟದ ಕೋಣ ‘ಚೆನ್ನ’ ನಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕೋಣದ ಯಜಮಾನ ಸುಕುಮಾರ ಶೆಟ್ಟಿಯವರ ಪುತ್ರ ಸೃಜಿತ್ ಅವರನ್ನು ಸನ್ಮಾನಿಸಲಾಯಿತು.