ಪುತ್ತೂರು: ಡಿಕ್ಕಿ ಹೊಡೆದು ದ್ವಿಚಕ್ರ ವಾಹನವನ್ನು ಎಳೆದೊಯ್ದ ಕಾರು

0

ಪುತ್ತೂರು: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸುಮಾರು 100 ಮೀಟರ್‌ನಷ್ಟು ಎಳೆದೊಯ್ದ ಘಟನೆ ಪುತ್ತೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜ.28ರ ರಾತ್ರಿ ನಗರದ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. 

ಪುತ್ತೂರಿನಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆಯುತ್ತಿದ್ದ ಕಾರಣ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಜನಸಂಚಾರ ಎಂದಿಗಿಂತ ಹೆಚ್ಚಾಗಿತ್ತು. ಈ ವೇಳೆ ಪುತ್ತೂರಿನಿಂದ ಪುರುಷರಕಟ್ಟೆ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ಆಕ್ಟೀವಾ (ಕೆ.ಎ 21 ವಿ 5313)ಗೆ ಮೋಹನ್‌ ಕೋಲ್ಡ್‌ ಹೌಸ್‌ ಸಮೀಪ ಬ್ರೀಝಾ ಕಾರೊಂದು (ಕೆಎ21 ಪಿ6498) ಮುಖಾಮುಖಿ ಡಿಕ್ಕಿಯಾಗಿದೆ. ಕಾರೊಂದು ರಾಂಗ್‌ ಸೈಡಲ್ಲಿ (ಬಲಭಾಗದಲ್ಲಿ) ಬಂದು ಇನ್ನೇನು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಯಲಿದೆ ಎನ್ನುವುದನ್ನು ಅರಿತ ದ್ವಿಚಕ್ರ ವಾಹನ ಆಕ್ಟೀವಾದಲ್ಲಿದ್ದ ಇಬ್ಬರು ಜೀವಭಯದಿಂದ ಆಕ್ಟೀವಾ ಬಿಟ್ಟು ಜಿಗಿದು ನಡೆಯಬಹುದಾಗಿದ್ದ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಡಿಕ್ಕಿ ಹೊಡೆದ ಕಾರಿನ ಮುಂಭಾಗದಲ್ಲಿ ಸಿಲುಕಿಕೊಂಡಿದ್ದ ದ್ವಿಚಕ್ರ ವಾಹನವನ್ನು ಕಾರು ಚಾಲಕ ಸುಮಾರು 100 ಮೀ.ನಷ್ಟು ದೂರ ಎಳೆದೊಯ್ದಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಕಾರನ್ನು ಜಿ.ಎಲ್‌ ಕಾಂಪ್ಲೆಕ್ಸ್‌ ಬಳಿ ತಡೆದು ನಿಲ್ಲಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಪುತ್ತೂರಿನ ಪ್ರತಿಷ್ಟಿತ ಕಂಪೆನಿಯೊಂದರ ಉದ್ಯೋಗಿಯೆಂದು ಗುರುತಿಸಲಾಗಿದೆ. ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡಿದ್ದ ಆತನಿಗೆ ಇದ್ಯಾವುದರ ಅರಿವೂ ಇರಲಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಬ್ರೀಝಾ ಕಾರು ಮತ್ತು ಚಾಲಕನನ್ನು ಸ್ಟೇಷನ್‌ಗೆ ಕರೆದೊಯ್ದು ಕೇಸು ದಾಖಲಿಸಿಕೊಂಡಿದ್ದಾರೆ. ದೂರದ ದೆಲ್ಲಿ ಬೆಂಗಳೂರು, ಹೈದರಾಬಾದ್‌ನಲ್ಲಿ ನಡೆದ ಇಂತಹ ಘಟನೆ ಪುತ್ತೂರಿನಲ್ಲಿಯೂ ನಡೆದಿರುವುದು ಎಲ್ಲರನ್ನು ಚಕಿತಗೊಳಿಸಿದೆ.

LEAVE A REPLY

Please enter your comment!
Please enter your name here