ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಸ್ಪರ್ಧೆಗಳು
15 ವಿವಿಧ ರೀತಿಯ ಸ್ಪರ್ಧೆಗಳು
ಪುತ್ತೂರು: ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸುವ ರಾಜ್ಯಮಟ್ಟದ ಕನಸುಗಳು – 2025 ನವಂಬರ್ 7ರಂದು ನಡೆಯಲಿದೆ. ಕನಸುಗಳು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಗ್ಗೆ 9 ರಿಂದ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ನಿರ್ದೇಶಕರಾದ ಡಾ. ಕೃಷ್ಣ ಪ್ರಸನ್ನ ಕೆ. ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖಾ ನಡೆಸಿಕೊಡಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಲವು ರೀತಿಯ ಸ್ಪರ್ಧೆಗಳು ನಡೆಯಲಿದ್ದು,  ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚಿತ್ರಕಲೆ, ಕನ್ನಡ ಕವನರಚನೆ ಮತ್ತು ವಾಚನ, ಪ್ರಾಕೃತಿಕ ರಂಗೋಲಿ, ಯುವಪತ್ರಕರ್ತ, ಯುವ ವಾಣಿಜ್ಯೋದ್ಯಮಿ, ಮುಖವರ್ಣಿಕೆ, ವೀಡಿಯೋ ಸಂಕಲನ, ಚರ್ಚಾಸ್ಪರ್ಧೆ, ಯಕ್ಷಗಾನ ಭಾಗವತಿಕೆ, ಕಲರವ ಸಾಂಸ್ಕೃತಿಕ ವೈವಿಧ್ಯ, ನಿಧಿಶೋಧ, ಭಗವದ್ಗೀತಾ ಕಂಠಪಾಠ ಮುಂತಾದ ಸ್ಪರ್ಧೆಗಳು ನಡೆಯಲಿವೆ. 
ಅಪರಾಹ್ನ 2.00 ಕ್ಕೆ ಕನಸುಗಳು ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ ಇವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿಗ್‌ಬಾಸ್ ಖ್ಯಾತಿಯ ವಾಯ್ಸ್ ಓವರ್ ಕಲಾವಿದ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರದೀಪ್ ಬಡೆಕ್ಕಿಲ ಇವರು ಭಾಗವಹಿಸಲಿದ್ದಾರೆ.
