ಕಡಬ ತಾಲೂಕು ಕಛೇರಿಗೆ ಜಿಲ್ಲಾಧಿಕಾರಿ ಭೇಟಿ

0
  • ಕೇವಲ ಎಚ್ಚರಿಕೆ ಕೊಡುವುದು ಮಾತ್ರವಲ್ಲ, ಅಧಿಕಾರಿಗಳ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇನೆ-ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ

ಕಡಬ: ಕಡಬ ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಅವ್ಯವಹಾರಗಳ ಸಮಗ್ರ ತನಿಖೆ ನಡೆಸುತ್ತೇನೆ, ನಾನು ಬಂದು ಕೇವಲ ಎಚ್ಚರಿಕೆ ಕೊಟ್ಟು ಅಲ್ಲಿಗೆ ಬಿಡುವುದಿಲ್ಲ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.

 

ಅವರು ಮಾ.9ರಂದು ಕಡಬ ತಾಲೂಕು ಕಛೇರಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಡಬ ಕಂದಾಯ ಇಲಾಖೆಯಲ್ಲಿ ಅಕ್ರಮ-ಸಕ್ರಮ ಹಾಗೂ ಪ್ಲಾಟಿಂಗ್‌ಗೆ ಸಂಬಂಧಪಟ್ಟ ಪೈಲ್‌ಗಳ ವಿಲೇವಾರಿಯಲ್ಲಿ ಅವ್ಯವಹಾರಗಳು ನಡೆಯುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಮತ್ತು ಇಲಾಖೆಯಲ್ಲಿ ಮಧ್ಯವರ್ತಿಗಳು ಅಧಿಕಾರಿಗಳೊಂದಿಗೆ ಶಾಮಿಲಾಗಿರುವ ವಿಚಾರಕ್ಕೆ ಸಂಬಂಧಿಸಿ ನಾನು ಸಮಗ್ರ ತನಿಖೆ ನಡೆಸುತ್ತೇನೆ, ನಾನು ಕೇವಲ ಎಚ್ಚರಿಕೆ ಕೊಟ್ಟು ಹೋಗುವುದಿಲ್ಲ, ಎಲ್ಲವನ್ನು ತನಿಖೆ ಮಾಡುತ್ತೇನೆ, ಅಧಿಕಾರಿಗಳು ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಸತಾಯಿಸುವಂತಿಲ್ಲ, ಅಲ್ಲದೆ ಕಂದಾಯ ಇಲಾಖೆಯಲ್ಲಿರುವ ದಾಖಲೆಗಳನ್ನು ಅರ್ಜಿದಾರರು ತರದಿದ್ದರೂ ಅಧಿಕಾರಿಗಳೇ ಆ ದಾಖಲೆಗಳನ್ನು ಸಿದ್ದಪಡಿಸಬೇಕು, ಹಣ ಅಥಾವ ಇನ್ನಾವುದೋ ವಿಚಾರಕ್ಕೆ ಸಾರ್ವಜನಿಕರನ್ನು ಸತಾಯಿಸುವುದು ಕಂಡು ಬಂದರೆ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ ಜನರ ವಿಶ್ವಾಸಗಳಿಸಬೇಕು ಎಂದರು. ತಾಲೂಕು ಕಛೇರಿಯಲ್ಲಿ ಅಕ್ರಮ ಸಕ್ರಮ ಕಡತ, ಪ್ಲಾಟಿಂಗ್, ಮುಂತಾದ ಕಂದಾಯ ಇಲಾಖಾ ಕಡತಗಳನ್ನು ಮಂಜೂರು ಮಾಡುವಲ್ಲಿ, ಕಾನೂನುಬಾಹಿರ ಕೃತ್ಯ ಅಥವಾ ಭ್ರಷ್ಟಚಾರ ನಡೆಸಿದ್ದು ಕಂಡು ಬಂದಲ್ಲಿ ಆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು, ಈಗಾಗಲೇ ಕೇಸ್‌ವರ್ಕರ್‌ಗಳನ್ನು ಕರೆಸಿ ಅವರಿಗೆ ವಹಿಸಿರುವ ಕೆಲಸಗಳ ಕಡತಗಳನ್ನು ಪರಿಶಿಲಿಸದಾಗ ಅಕ್ರಮಗಳು ನಡೆದಿರುವುದು ಕಂಡು ಬಂದಿದೆ. ಆದ್ದರಿಂದ ಇವರಿಗೆಲ್ಲ ಎಚ್ಚರಿಕೆ ನೀಡಿ ಬಿಡಲಾಗುವುದು ಎಂದು ಭಾವಿಸುವುದು ಬೇಡ, ಇವರ ವಿರುದ್ಧ ಆಮೂಲಾಗ್ರ ತನಿಖೆ ನಡೆಸಲಾಗುವುದು, ಕೇವಲ ಮೀಡಿಯಾ ವರದಿಗಳನ್ನು ನೋಡಿ ಕ್ರಮ ಜರಗಿಸಲು ಸಾಧ್ಯವಾಗುವುದಿಲ್ಲ. ಯಾವ ಯಾವ ಕಡತಗಳನ್ನು ಕ್ಲೀಯರ್ ಮಾಡಲಾಗಿದೆ, ಅಥವಾ ಯಾಕೆ ಅವುಗಳನ್ನು ವಿಲೇ ಮಾಡದಿರುವುದರ ಬಗ್ಗೆ ತನಿಖೆ ನಡೆಸಲಾಗುವುದು, ಈ ಸಂದರ್ಭದಲ್ಲಿ ಭ್ರ್ರಷ್ಟಾಚಾರ ಕಾರಣಕ್ಕಾಗಿ ಅಥವಾ ಉದ್ದೇಶಪೂರಕವಾಗಿ ಕಡತಗಳನ್ನು ಪೆಂಡಿಗ್ ಮಾಡಿರುವುದು ಕಂಡು ಬಂದಲ್ಲಿ, ಅನಧಿಕೃತವಾಗಿ ಭೂಮಿ ಮಂಜೂರು ಮಾಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ನಿಶ್ಚಿತ, ಜಿಲ್ಲೆಯ ಎಲ್ಲಾ ಕಡೆ ಕಂದಾಯ ಇಲಾಖೆಯಲ್ಲಿನ ಶೇ 10 ಕಡತಗಳನ್ನು ಸ್ವತಃ ನಾನೇ ಪರಿಶೀಲಿಸುತ್ತೇನೆ, ಮುಂದಿನ ವಾರದಿಂದಲೇ ಈ ಕಾರ್ಯ ನಡೆಯಲಿದೆ ಎಂದರು.

ಕಳೆದ ಒಂದು ವಾರದಿಂದ ಕಡಬ ತಾಲೂಕು ಕಚೇರಿಯಲ್ಲಿ ನಡೆದಿದೆ ಎನ್ನಲಾದ ದಲ್ಲಾಲಿ ಹಾವಳಿಯ ಬಗ್ಗೆ ಸಹಾಯಕ ಆಯುಕ್ತರಿಂದ ವರದಿಯನ್ನು ಕೇಳಿದ್ದೇನೆ, ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರೊಂದಿಗ ಉತ್ತಮ ಭಾಂದವ್ಯ ಇಟ್ಟುಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಜನರಿಂದ ದೂರುಗಳ ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಳ್ಳಲಾಗುವುದು, ಯಾವುದೇ ತಪ್ಪಿತಸ್ಥ ಅಧಿಕಾರಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಜಿಲ್ಲಾಧಿಕಾರಿಯವರು ಕಡಬ ತಾಲೂಕು ಕಛೇರಿಗೆ ಸಿಸಿ ಕ್ಯಾಮಾರ ಅಳವಡಿಸಲಾಗುವುದು, ಮಾತ್ರವಲ್ಲದೆ ಸಣ್ಣ ಪುಟ್ಟ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗುವುದು. ಅಧಿಕಾರಿಗಳು ಕಡ್ಡಾಯವಾಗಿ ಮೋವ್‌ಮೆಂಟ್ ರಿಜಿಸ್ಟರ್‌ನ್ನು ಮಾಡಬೇಕು ಆ ಮೂಲಕ ಜನರಿಗೂ ಅನುಕೂಲ ಮಾಡುವಂತ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಅದಾಲತ್ ಮೂಲಕ ಪ್ಲಾಟಿಂಗ್ ಸಮಸ್ಯೆ ಪರಿಹಾರ:
ಅಕ್ರಮ ಸಕ್ರಮದಲ್ಲಿ ಮಂಜೂರಾದ ಭೂಮಿಯನ್ನು ಪ್ಲಾಟಿಂಗ್ ನಡೆಸಲು ಇರುವ ಸಮಸ್ಯೆಯಿಂದಾಗಿ ಭೂ ಪರಿವರ್ತನೆ ಆಗುತ್ತಿಲ್ಲ. ಭೂ ಪರಿವರ್ತನೆಯಾಗದೆ ಸ್ಥಳೀಯಾಡಳಿತ ಮನೆ, ಕಟ್ಟಡ ನಿರ್ಮಾಣ ಮಾಡಲು ಪರವಾನಿಗೆ ನೀಡುತ್ತಿಲ್ಲ. ಇದರಿಂದಾಗಿ ಜನ ಪರದಾಡುವಂತಾಗಿದೆ, ಅದೆಷ್ಟೋ ಜನ ಮನೆಕಟ್ಟಲು ಸಾಧ್ಯವಾಗದೆ ಕೈ ಚಲ್ಲಿದ್ದಾರೆ ಎಂದು ಪರ್ತಕರ್ತರು ಜಿಲ್ಲಾಧಿಕಾರಿಯವರ ಗಮನ ಸೆಳೆದಾಗ ಉತ್ತರಿಸಿ ಜಿಲ್ಲಾಧಿಕಾರಿವರು ಏಕ ವ್ಯಕ್ತಿ ಕೋರಿಕೆಯಲ್ಲಿ ಪ್ಲಾಟಿಂಗ್ ಮಡಲು ಅರ್ಜಿ ಸಲ್ಲಿಸಬಹುದಾದರೂ ಇದರಿಂದ ಪ್ರಯೋಜನವಾಗಿಲ್ಲ ಎನ್ನುವುದು ತಿಳಿದು ಬಂದಿದೆ. ಪ್ಲಾಟಿಂಗ್‌ಗೆ ಪೂರಕವಾದ ದಾಖಲೆಗಳನ್ನು ನೀಡಲು ಅಧಿಕಾರಿಗಳು ಸತಯಿಸುತ್ತಿದ್ದಾರೆ ಎನ್ನುವ ಆರೋಪವಿದೆ. ಅರ್ಜಿದಾರರು ದಾಖಲೆ ಸಂಗ್ರಹಿಸಿಕೊಡಬೇಕಾಗಿಲ್ಲ. ಇಲಾಖೆಯವರೇ ದಾಖಲೆಗಳನ್ನು ಸಂಗ್ರಹಿಸಬೇಕು, ಅದಕ್ಕೆ ಬೇಕಾದ ದಾಖಲೆಗಳು ನಮ್ಮ ಇಲಾಖೆಯಲ್ಲೇ ಇರುವುದರಿಂದ ಫಲಾನುಭವಿಯಿಂದ ಅವುಗಳನ್ನು ಕೊಡಿ ಎಂದು ಪೀಡಿಸುವ ಹಾಗಿಲ್ಲ. ದಾಖಲೆಗಳನ್ನು ಕೊಡಿಸುವ ನೆಪದಲ್ಲಿ ಅನಗತ್ಯವಾಗಿ ಹಾಗೂ ಉದ್ದೇಶಪೂರ್ವಕವಾಗಿ ಜನರಿಗೆ ತೊಂದರೆ ನೀಡುವಂತಿಲ್ಲ. ಏಕ ವ್ಯಕ್ತಿ ಕೋರಿಕೆಯ ವಿಚಾರದಲ್ಲಿ ಕಡತಗಳು ವಿಲೇವಾರಿಯಾಗದೆ ಇರುವುದಕ್ಕೆನು ಸಮಸ್ಯೆ ಇದೆ ಎನ್ನುವುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಹಾಗೂ ಏಕ ವ್ಯಕ್ತಿ ಕೋರಿಕೆಯ ಪ್ಲಾಟಿಂಗ್ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಅದಾಲತ್‌ಗಳನ್ನು ನಡೆಸಿ ವ್ಯವಸ್ಥೆಯನ್ನು ಸರಳೀಕರಿಸಲಾಗುವುದು. ಇನ್ನೊಂದು ವಾರದಲ್ಲಿ ಈ ಅದಾಲತ್ ಕಾರ್ಯಕ್ಕೆ ಕಡಬದಿಂದಲೇ ಚಾಲನೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

LEAVE A REPLY

Please enter your comment!
Please enter your name here