ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್‌ರವರಿಗೆ ಜಾತಿ ನಿಂದನೆ – ಆರೋಪಿ ರೂಪಾ ಶೆಟ್ಟಿ ಕೋರ್ಟ್‌ಗೆ ಶರಣು-ಜಾಮೀನು

0

ಪುತ್ತೂರು:ನಗರ ಸಭಾ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡ್‌ರವರಿಗೆ ಜಾತಿ ನಿಂದನೆ ಮಾಡಿದ್ದ ಆರೋಪ ಎದುರಿಸುತ್ತಿರುವ ಹಿಂದಿನ ಪೌರಾಯುಕ್ತರಾದ ಶ್ರೀಮತಿ ರೂಪಾ ಟಿ ಶೆಟ್ಟಿಯವರು ಪುತ್ತೂರು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ರೂಪಾ ಶೆಟ್ಟಿಯವರು ನನಗೆ ಜಾತಿ ನಿಂದನೆ ಮಾಡಿ ಅವಮಾನಿಸಿರುತ್ತಾರೆ ಎಂದು ಆರೋಪಿಸಿ ಹಿಂದಿನ ನಗರಸಭಾಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡು ಅವರು ೨೦೧೮ರ ಸೆ.೭ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪುತ್ತೂರು ನಗರ ಠಾಣೆಯ ಆಗಿನ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್‌ರವರು ಈ ದೂರಿನಂತೆ ಎ-ಐಆರ್ ದಾಖಲಿಸದೇ ಹಿಂಬರಹ ನೀಡಿದ್ದರು ಎಂದು ಜಯಂತಿ ಬಲ್ನಾಡ್‌ರವರು ಮಂಗಳೂರಿನ ಸೆಷನ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.ದೂರನ್ನು ವಿಚಾರಣೆಗೆತ್ತಿಕೊಂಡ ಸೆಷನ್ಸ್ ನ್ಯಾಯಾಲಯ ಈ ಕುರಿತು ತನಿಖೆ ನಡೆಸುವಂತೆ ಪುತ್ತೂರು ಡಿವೈಎಸ್ಪಿಯವರಿಗೆ ಆದೇಶ ಮಾಡಿತ್ತು.ಆ ಸಂದರ್ಭ ಡಿವೈಎಸ್ಪಿಯಾಗಿದ್ದ ಶ್ರೀನಿವಾಸ್‌ರವರು ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು.ಇದಕ್ಕೆ ದೂರುದಾರೆ ಜಯಂತಿ ಬಲ್ನಾಡ್‌ರವರು ಆಕ್ಷೇಪ ಸಲ್ಲಿಸಿದ್ದರು.ಈ ಮಧ್ಯೆ ಈ ಪ್ರಕರಣವು ಮಂಗಳೂರಿನಿಂದ ಪುತ್ತೂರು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.ತನಿಖೆ ಕೈಗೆತ್ತಿಕೊಂಡ ಪುತ್ತೂರು ಸೆಷನ್ಸ್ ನ್ಯಾಯಾಲಯವು ಪ್ರಕರಣದ ದೂರುದಾರರಾದ ಜಯಂತಿ ಬಲ್ನಾಡ್, ಮುಖ್ಯ ಸಾಕ್ಷಿದಾರರಾದ ಎಚ್.ಮಹಮ್ಮದ್ ಅಲಿ ಹಾಗೂ ಜಿನ್ನಪ್ಪ ನಾಯ್ಕ್‌ರವರ ವಿಚಾರಣೆ ನಡೆಸಿತ್ತು.

ಬಿ ರಿಪೋರ್ಟ್ ರದ್ದು:ದೂರುದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, ಈ ಪ್ರಕರಣದ ಬಗ್ಗೆ ಪುತ್ತೂರು ಡಿವೈಎಸ್ಪಿಯವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಿ ರಿಪೋರ್ಟ್‌ನ್ನು ರದ್ದು ಪಡಿಸಿತ್ತಲ್ಲದೆ, ಫೆ.21ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿ ರೂಪಾ ಶೆಟ್ಟಿಯವರಿಗೆ ಸಮನ್ಸ್ ಜ್ಯಾರಿ ಮಾಡಿತ್ತು.ಆದರೆ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ರೂಪಾ ಶೆಟ್ಟಿಯವರ ವಿರುದ್ಧ ನ್ಯಾಯಾಲಯ ವಾರಂಟ್ ಜ್ಯಾರಿ ಮಾಡಿ ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತ್ತು.ಈ ನಡುವೆ ಆರೋಪಿ ರೂಪಾ ಶೆಟ್ಟಿಯವರು ಮಾ.2ರಂದು ನ್ಯಾಯಾಲಯಕ್ಕೆ ಶರಣಾಗಿದ್ದು, 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಸಹಿತ ಕೆಲವೊಂದು ಶರತ್ತುಗಳನ್ನು ವಿಽಸಿ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.ಈ ಪ್ರಕರಣದಲ್ಲಿ ದೂರುದಾರರ ಪರ ನ್ಯಾಯವಾದಿಗಳಾದ ಪ್ರಶಾಂತ್ ರೈ ಹಾಗೂ ಹರಿಪ್ರಸಾದ್ ಪಿ ರೈಯವರು ವಾದಿಸಿದ್ದರು.

LEAVE A REPLY

Please enter your comment!
Please enter your name here