ವಿವೇಕಾನಂದದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕದ ಪುತ್ತೂರು ಘಟಕ ಉದ್ಘಾಟನೆ

0
  • ಲಘು ಉದ್ಯೋಗ ಭಾರತಿ ಘಟಕವು ಉದ್ದಿಮೆದಾರರಿಗೆ ಪ್ರೇರಣಾದಾಯಕ – ಶಾಸಕ ಮಠಂದೂರು

ಪುತ್ತೂರು: ದೇಶದಲ್ಲಿ ನಡೆಯುವ ಪ್ರತಿಯೊಂದು ಆವಿಷ್ಕಾರಗಳು ಮತ್ತು ಅದರಿಂದೊದಗುವ ಪ್ರಯೋಜನಗಳು ಪ್ರತಿಯೊಬ್ಬ ವ್ಯಕ್ತಿಯನ್ನೂ ಮುಟ್ಟಬೇಕು ಎನ್ನುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ಮತ್ತು ಹಳ್ಳಿಗಳಲ್ಲಿ ಇದರ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಇದರ ಪುತ್ತೂರು ಘಟಕವನ್ನು ಉದ್ಘಾಟಿಸಿ ಮಾತಾಡಿದರು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎನ್ನುವ ಪರಿಕಲ್ಪನೆಯೊಂದಿಗೆ ಸ್ವದೇಶೀ ಚೀಂತನೆಯ ಮೂಲಕ ಸ್ವಾವಲಂಬೀ ಬದುಕನ್ನು ಕಂಡುಕೊಳ್ಳಲು ಸಹಕಾರಿಯಾಗಿರುವ ಲಘು ಉದ್ಯೋಗ ಭಾರತಿಯ ಪುತ್ತೂರು ಘಟಕವು ಉದ್ಘಾಟನೆಗೊಂಡದ್ದು ಅಲ್ಲಿನ ಉದ್ದಿಮೆದಾರರಿಗೆ ಪ್ರೇರಣಾದಾಯಕ ವಿಚಾರ ಎಂದರು. ಸ್ಥಳೀಯ ಪ್ರತಿಭೆಗಳನ್ನು ಅಲ್ಲಿಯೇ ಉಳಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಮೂಲಕ ಉದ್ದಿಮೆಗಳನ್ನು ಸ್ಥಾಪಿಸಿ ಬೆಳೆಸುವ ಚಿಂತನೆಗಳು ಅತ್ಯಂತ ಆವಶ್ಯಕ ಎಂದರು. ಈ ಬಗ್ಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಪ್ರಾರಂಭಿಸಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ನುಡಿದರು.

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ಲಘು ಉದ್ಯೋಗ ಭಾರತಿಯ ಪುತ್ತೂರು ಘಟಕದ ನಿರ್ಮಾಣಕ್ಕೆ ವಿವೇಕಾನಂದ ವಿದ್ಯಾಸಂಸ್ಥೆಯು ವೇದಿಕೆಯಾದದ್ದು ನಮಗೆ ಸಿಕ್ಕಿದ ಅಪೂರ್ವ ಅವಕಾಶ ಎಂದರು. ವಿದ್ಯಾರ್ಥಿಗಳನ್ನು ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ನಡೆಯುವಂತೆ ಮಾಡುವ ಸರ್ವ ಪ್ರಯತ್ನವನ್ನೂ ನಮ್ಮ ವಿದ್ಯಾಸಂಸ್ಥೆಯು ಮಾಡುತ್ತಿದೆ. ಲಘು ಉದ್ಯೋಗ ಭಾರತಿಯ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಗಳಲ್ಲಿ ನಡೆಸಲು ನಾವು ಉತ್ಸುಕರಾಗಿದ್ದೇವೆ ಎಂದು ನುಡಿದರು. ನಗರೀಕರಣದಿಂದಾಗಿ ಗ್ರಾಮದಿಂದಲೂ ದೂರ ಕುಟುಂಬದಿಂದಲೂ ದೂರ ಎನ್ನುವ ಮಾತಿಗೆ ಸವಾಲೆಸೆಯುವ ಕಾರ್ಯಗಳು ನಡೆಯಲಿ ಎಂದು ಅವರು ಆಶಿಸಿದರು.

ಲಘು ಉದ್ಯೋಗ ಭಾರತಿ ಪುತ್ತೂರು ಘಟಕದ ನೂತನ ಅಧ್ಯಕ್ಷ ಎಸ್‌ಆರ್‌ಕೆ ಇಂಡಸ್ಟ್ರೀಸ್‌ನ ಮಾಲಕ ಕೇಶವ.ಎ ಮಾತನಾಡಿ ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ದೇಶದ ಅಭಿವೃದ್ದಿ ಎನ್ನುವ ವಿಚಾರದಂತೆ ಪ್ರತಿ ಗ್ರಾಮದಲ್ಲಿ ಮತ್ತು ಹಳ್ಳಿಗಳಲ್ಲಿ ಸಣ್ಣ ಉದ್ದಿಮೆಗಳು ಸ್ಥಾಪನೆಯಾಗಬೇಕು ಎಂದರು. ಸಣ್ಣ ಸಣ್ಣ ಉದ್ದಿಮೆಗಳನ್ನು ಒಂದೆಡೆ ಸೇರಿಕೊಂಡು ಕೈಗಾರಿಕಾ ಕಾರಿಡಾರ್‌ನ ನಿರ್ಮಾಣ ಮಾಡುವುದು ಮತ್ತು ಸೂಕ್ತ ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಸಹಕಾರದೊಂದಿಗೆ ನೂತನ ಘಟಕವು ಕಾರ್ಯನಿರ್ವಹಿಸಲಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಲಘು ಉದ್ಯೋಗ ಭಾರತಿ ಕರ್ನಾಟಕದ ಪ್ರಭಾರಿ ಹಾಗೂ ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಕಾರ್ಯವಾಹ ಡಾ.ಜಯಪ್ರಕಾಶ.ಎಮ್ ಮಾತನಾಡಿ ಸಮೃದ್ಧ ಸಂಪನ್ಮೂಲಗಳೊಂದಿಗೆ ವಿಶ್ವವಿಖ್ಯಾತವಾಗಿದ್ದ ಭಾರತವನ್ನು ಬ್ರಿಟೀಷರು ಒಡೆದು ಹಾಕಿದರು. ನಮ್ಮನ್ನು ಉದ್ಯೋಗಿಗಳನ್ನಾಗಿ ಮಾಡಿದರು ಮತ್ತು ಅದಕ್ಕೆ ಪೂರಕವಾದ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದರು. ಸ್ವಾತಂತ್ರ್ಯದ ನಂತರದ ದಿನಗಳಲ್ಲೂ ನಾವು ಇದರಿಂದ ಹೊರಬರುವುದಕ್ಕೆ ಸಾಧ್ಯವಾಗಲೇ ಇಲ್ಲ ಎಂದರು. ಕೇಂದ್ರ ಸರ್ಕಾರವು ಪ್ರಾರಂಭಿಸಿದ ಮೇಕ್ ಇನ್ ಇಂಡಿಯಾ, ಲೋಕಲ್ ಫಾರ್ ವೋಕಲ್ ಮುಂತಾದ ಯೋಜನೆಗಳನ್ನು ಯಶಸ್ವಿಗೊಳಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು. ಪ್ಲಾಸ್ಟಿಕ್ ಮುಕ್ತ ದೇಶ, ರಾಸಾಯನಿಕಗಳನ್ನು ಬಳಸದೇ ಸಾವಯವ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಮುಂತಾದ ವಿಚಾರಗಳನ್ನು ಮನದಟ್ಟುಮಾಡಿಸುವ ಮೂಲಕ ಸ್ವಚ್ಚ ಹಾಗೂ ಸ್ವಸ್ಥ ರಾಷ್ಟನಿರ್ಮಾಣಕ್ಕೆ ಶ್ರಮಿಸೋಣ ಎಂದರು. ಲಘು ಉದ್ಯೋಗ ಭಾರತಿ ಕರ್ನಾಟಕದ ಅಧ್ಯಕ್ಷ ಸಚಿನ್ ಸಬ್ನಿಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ೧೯೯೪ ರಲ್ಲಿ ಪ್ರಾರಂಭಗೊಂಡ ಲಘು ಉದ್ಯೋಗ ಭಾರತಿಯು ಒಂದು ಲಾಭರಹಿತ ಸಂಸ್ಥೆಯಾಗಿದೆ ಎಂದರು. ಇಂದು ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಮತ್ತು ಸುಮಾರು ೪೦೦೦೦ ಸದಸ್ಯತ್ವವನ್ನು ಹೊಂದಿರುವ ಬೃಹತ್ ಉದ್ಯಮ ಜಾಲವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಲಘು ಉದ್ಯೋಗ ಭಾರತಿಯು ಸಮಾನ ಮನಸ್ಕ ಕೈಗಾರಿಕೋದ್ಯಮಿಗಳನ್ನು ಮತ್ತು ವಾಣಿಜ್ಯೋದ್ಯಮಿಗಳನ್ನು ಒಟ್ಟುಗೂಡಿಸಿ ಪ್ರಬಲ ಸಂಘಟನೆಯನ್ನು ಮಾಡಿದೆ. ತನ್ಮೂಲಕ ರಾಷ್ಟ್ರೀಯ ಮನೋಭಾವದೊಂದಿಗೆ ಮಹತ್ವಾಕಾಂಕ್ಷಿ ಉದ್ಯಮಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಬೇಕಾದ ತಂತ್ರಗಳನ್ನು, ನಿರ್ವಹಣಾ ವಿಧಾನಗಳನ್ನು, ತರಬೇತಿಗಳನ್ನು, ಜ್ಞಾನ ಮತ್ತು ತಂತ್ರಜ್ಞಾನದ ವರ್ಗಾವಣೆಯನ್ನು ಇದು ಒದಗಿಸಿಕೊಡುತ್ತದೆ ಎಂದರು. ಲಘು ಉದ್ಯೋಗ ಭಾರತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಘು ಉದ್ಯೋಗ ಭಾರತಿ ಕರ್ನಾಟಕದ ನಿರ್ದೇಶಕರು, ಪುತ್ತೂರು ಘಟಕದ ಸಂಚಾಲಕ ಹಾರ್ಧಿಕ್ ಹರ್ಬಲ್ಸ್‌ನ ಮುರಳೀಧರ.ಕೆ, ಪುತ್ತೂರು ಘಟಕದ ಸದಸ್ಯರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ. ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. ಪುತ್ತೂರು ಘಟಕದ ಕಾರ್ಯದರ್ಶಿ ವೆಂಕಟಕೃಷ್ಣ.ಎಂ.ಎನ್ ವಂದಿಸಿದರು. ಗೋಲಕ್ಷ್ಮಿ ಎಂಟರ್‌ಪ್ರೈಸಸ್‌ನ ಕೃಷ್ಣಮೋಹನ್.ಪಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು.

ಪದಸ್ವೀಕಾರ : ಲಘು ಉದ್ಯೋಗ ಭಾರತಿ ಪುತ್ತೂರು ಘಟಕದ ಪದಾಧಿಕಾರಗಳ ಪದ ಸ್ವೀಕಾರ ನಡೆಯಿತು. ಅಧ್ಯಕ್ಷರಾಗಿ ಎಸ್‌ಆರ್‌ಕೆ ಇಂಡಸ್ಟ್ರೀಸ್‌ನ ಮಾಲಕ ಕೇಶವ.ಎ, ಉಪಾಧ್ಯಕ್ಷರುಗಳಾಗಿ ನಿತ್ಯ ಫುಡ್ ಪ್ರಾಡಕ್ಟ್ಸ್‌ನ ರಾಧಾಕೃಷ್ಣ ಮತ್ತು ಎಸ್‌ಡಿಪಿ ರೆಮೆಡೀಸ್‌ನ ಮೇಘನಾ ಪಾಣಾಜೆ, ಕಾರ್ಯದರ್ಶಿಗಳಾಗಿ ಮಧು ಮಲ್ಟಿಪಲ್ಸ್‌ನ ವೆಂಕಟಕೃಷ್ಣ.ಎಂ.ಎನ್ ಜವಾಬ್ಧಾರಿಯನ್ನು ವಹಿಸಿಕೊಂಡರು.

LEAVE A REPLY

Please enter your comment!
Please enter your name here