- ಲಂಚದ (ದರೋಡೆ) ಹಣ ವಾಪಸ್ ಕೊಡಿಸುವ ಆಂದೋಲನ ಬರಲಿದೆ
ಲಂಚ, ಭ್ರಷ್ಟಾಚಾರ ನಿಲ್ಲಬೇಕೆಂದು ಎಲ್ಲರ ಮನಸ್ಸಿನಲ್ಲಿದೆ. ಆದುದರಿಂದ ಸುದ್ದಿ ಜನಾಂದೋಲನಕ್ಕೆ ಜನರು ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಪಂಚಾಯತ್‌ಗಳು, ಜನಪ್ರತಿನಿಧಿಗಳು ಕಾರ್ಯಕ್ರಮಗಳಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಫಲಕ, ಬ್ಯಾನರ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇನ್ನು 86 ದಿನಗಳಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು ಮಾತ್ರವಲ್ಲ, ಲಂಚವಾಗಿ ಹಣ ಕೊಟ್ಟರೂ ತೆಗೆದುಕೊಳ್ಳದೆ ಉತ್ತಮ ಸೇವೆ ನೀಡುವ ಊರು, ತಾಲೂಕು ನಮ್ಮದಾಗಲಿದೆ. ಜಿಲ್ಲೆಯಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಯಾಕೆ ಜಗತ್ತಿನಲ್ಲೇ ಎಲ್ಲಿಯೂ ಇಲ್ಲದ, ನಡೆಯದ ಕೆಲಸ ಇಲ್ಲಿ ಆಗಲಿದೆ ಎಂಬುವುದು ನಮ್ಮ ಹೆಮ್ಮೆಯ ವಿಷಯವಾಗಲಿದೆ.
ಅದು ಕಾರ್ಯರೂಪಕ್ಕೆ ಬರಲು, ಕಾನೂನುಗಳು ಜನರಿಗೆ ತೊಂದರೆ ಕೊಡಲಿಕ್ಕಾಗಿಯೇ ಇರುವುದಲ್ಲ. ಜನರಿಗೆ ಸೇವೆ ಕೊಡಲು ಇರಬೇಕು. ಅಧಿಕಾರಿಗಳು ಜನರ ಸುಲಿಗೆಗಾಗಿ ಅಲ್ಲ. ಸೇವೆಗಾಗಿ ಇರಬೇಕು ಎಂಬುವುದನ್ನು ಜನರು ತಮ್ಮ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಪಕ್ಷಗಳಿಗೆ ಮನವರಿಕೆ ಮಾಡಬೇಕು. ಅದಕ್ಕಾಗಿ ಲಂಚ, ಭ್ರಷ್ಟಾಚಾರಕ್ಕೆ ಪೂರಕವಾದ ಜನವಿರೋಧಿ ಕಾನೂನುಗಳು ರದ್ದುಗೊಳ್ಳಬೇಕು. ಸೇವೆಗಾಗಿ ಕಾನೂನು ರಚಿತವಾಗಿ ಸರಳೀಕರಣಗೊಳ್ಳಬೇಕು. ಪಾರದರ್ಶಕವಾಗಿ ಇರಬೇಕು. ಇಲಾಖೆಗಳಲ್ಲಿ ಕುಂದುಕೊರತೆ ನಿವಾರಣೆಯಾಗಿ ಜನತೆಗೆ ಸೇವೆ ನೀಡುವ ವಾತಾವರಣ ಸೃಷ್ಠಿಯಾಗಬೇಕು. ಹಾಗೆ ಆದಾಗ ನಾವು ನಿಜವಾಗಿಯೂ ರಾಜರಾಗುತ್ತೇವೆ. ಜನಪ್ರತಿನಿಧಿಗಳು ರಾಜರುಗಳಾಗುವುದಿಲ್ಲ. ನಮ್ಮ ಪ್ರತಿನಿಧಿಗಳಾಗುತ್ತಾರೆ. ಅಧಿಕಾರಿಗಳು ನಮ್ಮ ಜನಸೇವಕರಾಗುತ್ತಾರೆ ಎಂಬುವುದನ್ನು ಪುನಃ ಪುನಃ ನೆನಪಿಸುತ್ತಿದ್ದೇನೆ.
ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಸುದ್ದಿ ವೈಯಕ್ತಿಕ ಮುಂದಾಳುತನ ವಹಿಸುವುದಿಲ್ಲ. ಭ್ರಷ್ಟಾಚಾರ ಕಂಡು ಹಿಡಿಯಲು, ಕೇಸು ಮಾಡಲು ಹೋಗುವುದಿಲ್ಲ. ಹಾಗೆ ಮಾಡಿದರೆ ಅದು ಸುದ್ದಿಯ ಆಂದೋಲನವಾಗಿ ತಾತ್ಕಾಲಿಕ ಪರಿಣಾಮ ಬೀಳಬಹುದು. ಶಾಶ್ವತವಾಗಲಾರದು. ಅದು ಜನಾಂದೋಲನವಾದರೆ ಮಾತ್ರ ಶಾಶ್ವತ ಎಂಬ ಕಾರಣಕ್ಕೆ ಜನರು ತಮ್ಮ ಸಮಸ್ಯೆಗಳನ್ನು, ಪ್ರಕರಣಗಳನ್ನು ಧ್ವನಿ ಏರಿಸಿ ತಿಳಿಸುವಂತೆ ಮಾಡುವ ಲಂಚ, ಭ್ರಷ್ಟಾಚಾರವನ್ನು ಬಹಿಷ್ಕರಿಸಿ ಉತ್ತಮ ಸೇವೆಗೆ ಪುರಸ್ಕಾರ ನೀಡುವ ಜನಾಂದೋಲನವಾಗುವಂತೆ ಮಾಡುತ್ತಿದ್ದೇವೆ. ಅಧಿಕಾರಿಗಳು ಲಂಚ, ಭ್ರಷ್ಟಾಚಾರ ಮಾಡುವವರು, ಅದಕ್ಕೆ ಬೆಂಬಲ ನೀಡುವವರು, ಜನಪ್ರತಿನಿಧಿಗಳು ಆಯಾ ಊರಿನ ಜನರಿಗೆ ಹೆದರಬೇಕು `ಸುದ್ದಿ’ಗಲ್ಲ. ಜನರಿಗೆ ಉತ್ತಮ ಸೇವೆ ನೀಡುವಂತೆ ಆಗಬೇಕು. ಅದುವೇ ಪ್ರಜಾಪ್ರಭುತ್ವ. ಮಹಾತ್ಮ ಗಾಂಧಿಯವರ ಆಶಯದ ಜನರ ಆಡಳಿತವಾಗುತ್ತದೆ ಎಂದು ಹೇಳಲು ಬಯಸುತ್ತೇನೆ.
ಯತೀಶ್ ಉಳ್ಳಾಲ್‌ರಿಗೆ ಸನ್ಮಾನವಾದರೆ ಲಂಚ ಭ್ರಷ್ಟಾಚಾರಕ್ಕೆ ಪುರಸ್ಕಾರ ದೊರಕಿದಂತಾಗುತ್ತದೆ. ಬರುವ ಅಧಿಕಾರಿ ದೊಡ್ಡ ಲಂಚ ಕೋರ ಆಗಬಹುದು.
ಎ.ಸಿ.ಯತೀಶ್ ಉಳ್ಳಾಲ್‌ರವರು ವರ್ಗಾವಣೆ ಆದ ಮೇಲೆ ಅವರ ಬಗ್ಗೆ ಬರೆದಿರುವುದು ಯಾಕೆ?. ಮೊದಲೇ ಬರೆಯಲಿಲ್ಲ ಯಾಕೆ? ಎಂಬ ಪ್ರಶ್ನೆ ಕೆಲವರಲ್ಲಿದೆ. ರೋಟರಿ ಸಭೆಯಲ್ಲಿ ಬಂದಿದೆ. ಸಾಮಾನ್ಯವಾಗಿ ನಾವು ಆ ರೀತಿ ಬರೆಯುವುದಿಲ್ಲ. ಜನರಿಗೆ ಅವಕಾಶವನ್ನು ಕೊಡುತ್ತೇವೆ. ಇಲ್ಲಿ ಎ.ಸಿ.ಯತೀಶ್ ಉಳ್ಳಾಲ್ ವರ್ಗಾವಣೆಯ ನಂತರ ಪುತ್ತೂರಿನ ಪ್ರಮುಖ ಸೇವಾ ಸಂಸ್ಥೆ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದೆ ಎಂಬ ಸುದ್ದಿ ಬಂದಾಗ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಹೋರಾಟ ವಿಫಲವಾಗುತ್ತದೆ. ಲಂಚ, ಭ್ರಷ್ಟಾಚಾರಕ್ಕೆ ಪುರಸ್ಕಾರ ಸಿಕ್ಕಿದರೆ ಇನ್ನು ಮುಂದೆ ಇಲ್ಲಿಗೆ ಬರುವ ಎ.ಸಿ. ಮತ್ತು ಯಾವುದೇ ಅಧಿಕಾರಿ ಹಿಂದಿನವರ ಕೆಲಸಕ್ಕೆ ಜನರ ಮೆಚ್ಚುಗೆ ಇದೆ ಎಂದು ತಿಳಿದುಕೊಂಡು ಅವರಿಗಿಂತ ದೊಡ್ಡ ಲಂಚಕೋರ, ಭ್ರಷ್ಟಾಚಾರಿ ಆಗಬಹುದು ಆ ರೀತಿ ಸನ್ಮಾನ ದೊರಕಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬ ಹೆದರಿಕೆಯಿಂದ ಅದು ನಡೆಯದಂತೆ ಮಾಡಲು ಬರೆದಿದ್ದೇನೆಯೇ ಹೊರತು ಭ್ರಷ್ಟಾಚಾರದ ವಿರುದ್ಧದ ಜನರ ಹೋರಾಟದ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಿಲ್ಲ.
ಲಂಚದ ಹಣ ಮದ್ದಿಗೆ ಬೀಳಲಿ, ನಾಶಕ್ಕೆ ಕಾರಣವಾಗಲಿ ಎಂದು ಶಾಪ ನೀಡಿಯೇ ಕೊಡುತ್ತಾರೆ. ಪುತ್ತೂರಿನ ರೋಟರಿ ಪುತ್ತೂರು ಇದರ `ನಮ್ಮ ಚಿತ್ತ ಭ್ರಷ್ಟಾಚಾರ ಮುಕ್ತ ಸಮಾಜದತ್ತ’ ಎಂಬ ಸಭಾಕಾರ್ಯಕ್ರಮದಲ್ಲಿ ಓರ್ವ ಸದಸ್ಯರು, “ಜನರು ಲಂಚದ ಹಣ ಕೊಡುವಾಗ ಅದು ಮದ್ದಿಗೆ ಬೀಳಲಿ. ಅವರ ನಾಶಕ್ಕೆ ಕಾರಣವಾಗಲಿ, ಎಂದು ಶಾಪ ನೀಡಿಯೇ ಕೊಡುತ್ತಾರೆ ಹೊರತು ಸಂತೋಷದಿಂದ ಅಲ್ಲ” ಎಂದು ತಿಳಿಸಿದ್ದಾರೆ. ಜನರಿಗೆ ತೊಂದರೆ ಕೊಟ್ಟು ಹಣ ವಸೂಲಿ ಮಾಡುವ ಅಧಿಕಾರಿಗಳಿಗೆ ಅವರ ಶಾಪ ತಟ್ಟುವುದು ಖಂಡಿತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಆದುದರಿಂದ ಕೇಸಿಗೆ ಹೆದರಿ ಅಲ್ಲ. ಜನರ ಶಾಪ ಬೇಡ. ಪ್ರೀತಿ, ಗೌರವವೇ ಮುಖ್ಯ ಎಂದು ಲಂಚ ಭ್ರಷ್ಟಾಚಾರ ಮಾಡುವವರು ತಿಳಿಯಬೇಕೆಂಬುವುದಕ್ಕಾಗಿ ಅದನ್ನು ಇಲ್ಲಿ ಉಲ್ಲೇಖಿಸಿದ್ದೇನೆ.
ಅಧಿಕಾರಿಗಳಿಗೆ ಜನಸೇವೆಗೆ ತೊಂದರೆ ಇದ್ದರೆ ಅದರ ಪರಿಹಾರಕ್ಕೆ ಜನ ಬೆಂಬಲ ದೊರಕಲಿದೆ. ಸುದ್ದಿಯ ಜನಾಂದೋಲನ ಸ್ವಾತಂತ್ರ್ಯದ ರಥ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಸಂಚರಿಸಲಿದೆ. ಈಗಾಗಲೇ ಗ್ರಾಮ ಗ್ರಾಮಗಳಲ್ಲಿ ಜನಜಾಗೃತಿ ಉಂಟು ಮಾಡಿದೆ. ಇನ್ನೂ ಮಾಡಲಿದೆ. ಲಂಚ, ಭ್ರಷ್ಟಾಚಾರ ನಿರ್ಮೂಲನ ಅತೀ ದೊಡ್ಡ ಜನಸೇವೆ. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ. ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಅಂದರೆ ದೇಶದ್ರೋಹ ಎಂಬ ಫಲಕಗಳು, ಬ್ಯಾನರ್‌ಗಳು ಅಲ್ಲಲ್ಲಿ ಬೀಳಲಿದೆ. ಘೋಷಣೆ ಮೊಳಗಲಿದೆ. ಅದರೊಂದಿಗೆ ಲಂಚ, ಭ್ರಷ್ಟಾಚಾರದ ಪ್ರಕರಣಗಳಲ್ಲಿ ಕೇಸು ಮಾಡುವವರು ಕೇಸು ಮಾಡಲಿ ಅಥವಾ ಕೇಸು ಮಾಡದೇ ಇರಲಿ. ಅದು ಏನೇ ಇದ್ದರೂ ಲಂಚವಾಗಿ ಸುಲಿಗೆ ಮಾಡಿದ ಹಣವನ್ನು ಜನರಿಗೆ ಹಿಂತಿರುಗಿಸುವಂತೆ ಮಾಡುವ ಜನಾಂದೋಲನಕ್ಕೆ ಮುಂದಿನ ವಾರದಿಂದ ಚಾಲನೆ ನೀಡಲಿದ್ದೇವೆ. ಲಂಚದ (ದರೋಡೆಯ) ಹಣ ವಾಪಸು ಕೊಡುವಂತಾದರೆ ಏನಾಗಬಹುದು. ಲಂಚ ಪಡೆದವನ ಮನಸ್ಥಿತಿ ಹೇಗಿದ್ದೀತು? ಹಣ ಕೊಟ್ಟವ ಕ್ಷಮಿಸಿಯಾನು, ಆದರೆ ಸಮಾಜ ಕ್ಷಮಿಸೀತೇ? ಮನೆಯವರು, ಮಕ್ಕಳು ಅದನ್ನು ಮರೆತಾರೇ? ಅವರಿಗುಂಟಾಗುವ ನೋವಿಗೆ ಪರಿಹಾರವೇನು? ಆದುದರಿಂದ ಲಂಚ ಭ್ರಷ್ಟಾಚಾರ ಮಾಡದಿರುವುದು, ಅಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳುವುದು ಎಲ್ಲರಿಗೂ ಒಳ್ಳೆಯದು. ಹಾಗೆ ಮಾಡಿದರೆ ಲಂಚ ಭ್ರಷ್ಟಾಚಾರ ನಿಂತು ಉತ್ತಮ ಸೇವೆ ದೊರಕುವುದು ಖಂಡಿತವಾದ್ದರಿಂದ ಆಯಾ ಊರಿನ ಸಂಘ ಸಂಸ್ಥೆಗಳು, ಸಂಘಟನೆಗಳು, ಎಲ್ಲಾ ಪಕ್ಷಗಳು, ಜನಪ್ರತಿನಿಧಿಗಳು, ಶಾಸಕರು ಈ ಮೇಲಿನ ಹಣ ವಾಪಸು ಕೊಡಿಸುವ ಕಾರ್ಯದ ನೇತೃತ್ವ ವಹಿಸಿ ಜನರ ಕಣ್ಣೀರು ಒರೆಸಿ ಜನ ಸೇವೆ, ದೇಶ ಸೇವೆ ಮಾಡಬೇಕೆಂದು ವಿನಂತಿಸುತ್ತಿದ್ದೇವೆ. ಆ ಬಗ್ಗೆ ಪ್ರತಿಜ್ಙೆ ಮಾಡುವಂತೆ ಕರೆ ನೀಡುತ್ತಿದ್ದೇವೆ.
ಜನರ ಸೇವೆ ಮಾಡುವ ಅಧಿಕಾರಿಗಳಿಗೆ ಮೇಲಾಽಕಾರಿಗಳ ಕಿರುಕುಳ ಇದ್ದರೆ, ಜನಪ್ರತಿನಿಧಿಗಳ ಒತ್ತಡವಿದ್ದರೆ, ಹಣ ಸುಲಿಗೆ ಮಾಡುವ ಅನಿವಾರ್ಯತೆ ಇದ್ದರೆ ಅದನ್ನು ನಿವಾರಿಸಲು, ಎದುರಿಸಲು ಜನರ ಬೆಂಬಲ ದೊರಕಲಿದೆ ಎಂದು ಜನಾಂದೋಲನದ ಪರವಾಗಿ ತಿಳಿಸಲು ಇಚ್ಛಿಸುತ್ತೇನೆ.
ಜನಮೆಚ್ಚಿದ ಅಧಿಕಾರಿಗಳಿಗೆ ಸನ್ಮಾನ
ಇದೇ ಬರುವ ಅಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ದಿನದಂದು ಉತ್ತಮ ಸೇವೆ ನೀಡುವ ಅಧಿಕಾರಿಗಳನ್ನು ಜನರ ಓಟಿನ ಮೂಲಕ ಆಯ್ಕೆ ಮಾಡಲಾಗುವುದು. ಜನಮೆಚ್ಚಿದ ಅಧಿಕಾರಿಗಳನ್ನು ಸನ್ಮಾನಿಸುವುದು ಮಾತ್ರವಲ್ಲ ಆಯಾ ಊರಿನಲ್ಲಿ ಮೆರವಣಿಗೆ ಮಾಡಿ ಸಾರ್ವಜನಿಕವಾಗಿ ಗುರುತಿಸಬೇಕು ಎಂದು ಜನರಿಗೆ ಕರೆ ಕೊಡುತ್ತಿದ್ದೇನೆ. ಸುದ್ದಿಯ ಗ್ರಾಮೋತ್ಸವ, ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಅದಕ್ಕೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇವೆ.
ಇನ್ನು 86 ದಿನಗಳಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ಮಾತ್ರವಲ್ಲ ಲಂಚವಾಗಿ ಹಣ ಕೊಟ್ಟರೂ ತೆಗೆದುಕೊಳ್ಳದೆ ಉತ್ತಮ ಸೇವೆ ನೀಡುವ ಊರು, ತಾಲೂಕು ನಮ್ಮದಾಗಲಿದೆ ಎಂದು ಬರೆದಿದ್ದೇನೆ. ಆ ವಿಷಯದಲ್ಲಿ ನಂಬಿಕೆ ಇಲ್ಲದವರು ನೀಡುವ ಪಂಥಾಹ್ವಾನವನ್ನು (ಬೆಟ್ಟಿಂಗ್‌ನ್ನು) ಸ್ವೀಕರಿಸಲು ಸಿದ್ಧನಿದ್ದೇನೆ. ನಂಬಿಕೆ ಇಲ್ಲದವರು ಮುಂದೆ ಬನ್ನಿ, ಸವಾಲು ಸ್ವೀಕರಿಸಿ. ಅಲ್ಲದಿದ್ದರೆ ಆಂದೋಲನಕ್ಕೆ ಕೈ ಜೋಡಿಸಿ