- ಮಾಡಿದ ಪಾಪಗಳಿಗೆ ಪಶ್ಚಾತ್ತಾಪ ಮಾಡಿ ರಂಝಾನ್‌ಗೆ ಸಿದ್ಧರಾಗಿ ; ಆಶಿಕ್ ದಾರಿಮಿ
ಪುತ್ತೂರು; ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಲ್ಲಾಹನು ನಿಷೇಧಿಸಿದ ಕಾರ್ಯದಲ್ಲಿ ತೊಡಗಿಸಿ ನಮ್ಮ ಆತ್ಮವನ್ನು ಆಸುದ್ದಿ ಮಾಡಿಕೊಂಡಿದ್ದಲ್ಲಿ ಅದನ್ನು ದೇವರಲ್ಲಿ ಕ್ಷಮೆ ಅಥವಾ ಪಶ್ಚಾತ್ತಾಪ ಮಾಡುವ ಮೂಲಕ ಅಜ್ಜನರಾಗಿ ಪವಿತ್ರ ರಂಝಾನ್‌ಗೆ ಸಿದ್ದತೆಮಾಡಿಕೊಳ್ಳಬೇಕು ಎಂದು ಆಶಿಕ್ ದಾರಿಮಿ ಆಲಪ್ಪುಝ ಕೇರಳ ಅವರು ಹೇಳಿದರು.
ಅವರು ಪಡುಮಲೆ (ಪಮ್ಮಲೆ) ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಆಂಡ್‌ನೇರ್ಚೆ ಪ್ರಯುಕ್ತ ನಡೆದ ಧಾರ್ಮಿಕ ಪ್ರಭಾಷಣದಲ್ಲಿ ಮಾತನಾಡಿದರು.
ಮರಣದ ಬಗ್ಗೆ ಪ್ರತೀಯೊಬ್ಬರಿಗೂ ಭಯ ಇರಬೇಕು, ಮರಣಾನಂತರ ನಮ್ಮ ಜೀವನ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ನಮ್ಮದಾಗಿದ್ದು ಇದಕ್ಕಾಗಿ ನಾವು ಮರಣಹೊಂದುವಾಗ ಅಲ್ಲಾಹನ ಇಷ್ಟದಾಸರಾಗಿ ಮರಣಹೊಂದಬೇಕಾಗಿದೆ. ಇದಕ್ಕಾಗಿ ನಾವು ಏನು ಸಿದ್ದತೆ ಮಾಡಿದ್ದೇವೆ ಎಂಬುದನ್ನು ಪ್ರತೀಯೊಬ್ಬರೂ ಆಲೋಚಿಸಬೇಕು. ನಾವು ಮಾಡಿದ , ಮಾಡುವ ಪಾಪಗಳ ಬಗ್ಗೆ ನಮಗೆ ಭಯ ಇರಲಿ. ನಾವು ಇಹಲೋಕದಲ್ಲಿ ಸಜ್ಜನರಾಗಿ ಬಾಳಿದರೆ ಮರಣಾನಂತದ ಜೀವನ ಸುಖದಿಂದ ಕೂಡಿರಲು ಸಾಧ್ಯವಾಗುತ್ತದೆ. ಜನಿಸಿದ ಪ್ರತೀಯೊಬ್ಬರಿಗೂ ಮರಣ ಕಡ್ಡಾಯವಾಗಿದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅನಾಚಾರಗಳಿಂದ ನಾವು ದೂರ ಇರಬೇಕು. ಸತ್ಕರ್ಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಅಲ್ಲಾಹನ ಇಷ್ಟದಾಸರಾದಲ್ಲಿ ಮಾತ್ರ ನಮಗೆ ನಾಳೆ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪಡುಮಲೆ ಮಸೀದಿಯ ಖತೀಬರಾದ ಸಂಶುದ್ದೀನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಡುಮಲೆ ಮಸೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿ ಮಿನಾರ್ ಗೆ ದಾನಿಗಳು ನೆರವು ನೀಡಿದ್ದಾರೆ, ಎಲ್ಲರೂ ಪರಸ್ಪರ ಸಹಕಾರ ಮನೋಭಾವದಿಂದ ಸಹಕರಿಸಿದ ಕಾರಣ ಯಾವುದೇ ಜಮಾತ್ ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ. ಪಡುಮಲೆ ಎಂಬ ಸೌಹಾರ್ದತೆಯ ನಾಡಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಕರಾಮತ್ತಿನಿಂದ ಪಡಮಲೆ ಇಂದು ಭವ್ಯ ಮಸೀದಿಯೊಂದು ಶ್ರದ್ದಾ ಕೇಂದ್ರವಾಗಿ ಕಂಗೊಳಿಸುತ್ತಿದೆ. ಇಲ್ಲಿನ ಐಕ್ಯತೆ, ಸಾಹೋದರ್ಯತೆ ಅನಂತಾನಂತವಾಗಿ ಹೀಗೇ ಮುಂದುವರೆಯಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಡುಮಲೆ ಜಮಾತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಮಸೀದಿಯ ಭವ್ಯ ಮಿನಾರ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಕೊಯಿಲ ಸದರ್ ಮುಅಲ್ಲಿಂ ಹಸನ್ ಬಾಖವಿ, ಮಿನಾವುಸದರ್ ಮುಅಲ್ಲಿಂ ಇಬ್ರಾಹಿಂ ಮುಸ್ಲಿಯಾರ್, ಸುಳ್ಯಪದವು ಸದರ್ ಮುಅಲ್ಲಿಂ ಅಹ್ಮದ್ ದಾರಿಮಿ, ಪಮ್ಮಲ ಮುಅಲ್ಲಿಂ ಶಾಫಿ ಅಝ್‌ಹರಿ, ಜಮಾತ್ ಕಮಿಟಿ ಉಪಾಧ್ಯಕ್ಷ ಫಕ್ರುದ್ದೀನ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.