ಪುತ್ತೂರು: ಅಂಗಳದಲ್ಲಿ ಹಾಕಲಾಗಿದ್ದ ಅಡಿಕೆಯನ್ನು ಕಳವು ಮಾಡಲು ಯತ್ನಿಸುತ್ತಿದ್ದ ಮೂವರ ಪೈಕಿ ಓರ್ವನನ್ನು ಸೆರೆ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಮತ್ತು ಈರ್ವರು ಬೈಕ್ ಬಿಟ್ಟು ಪರಾರಿಯಾದ ಘಟನೆ ಕೋಡಿಂಬಾಡಿಯ ಬಾರಿಕೆ ಮೇಲಿನಹಿತ್ಲು ಎಂಬಲ್ಲಿ ಜ.28ರಂದು ಮಧ್ಯರಾತ್ರಿ 12.30ರ ವೇಳೆಗೆ ನಡೆದಿದೆ.
ಕಳ್ಳರ ಕರಾಮತ್ತು
ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿಯ ಪಕ್ಕದಲ್ಲಿರುವ ಬಾರಿಕೆ ಮೇಲಿನಹಿತ್ಲು ನಿವಾಸಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಲೀಲಾವತಿ ಲಕ್ಷ್ಮಣ ಗೌಡರವರ ಮನೆಯ ಅಂಗಳದಲ್ಲಿ ಹಾಕಲಾಗಿದ್ದ ಅಡಿಕೆಯನ್ನು ಕಳವು ಮಾಡಲೆಂದು ಪ್ರಯತ್ನಿಸುತ್ತಿದ್ದ ಮೂವರ ತಂಡ ಅಡಿಕೆಯನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟಿತ್ತು. ತಮ್ಮ ಚಪ್ಪಲಿಯನ್ನು ಮನೆಯ ಗೇಟ್ ಮುಂಭಾಗದಲ್ಲಿ ಇಟ್ಟಿದ್ದ ಮೂವರು ಅಡಿಕೆಯನ್ನು ಗೋಣಿಗೆ ತುಂಬಿಸಿ ಬೈಕ್ ನಲ್ಲಿ ಕೊಂಡು ಹೋಗಲು ತಯಾರಿ ನಡೆಸಿದ್ದರು. ಈ ವೇಳೆ ಲೀಲಾವತಿ ಲಕ್ಷ್ಮಣ ಗೌಡರವರ ಪುತ್ರ ದೀಕ್ಷಿತ್ ಎಂ.ಎಲ್.ರವರು ಕಾರ್ಯಕ್ರಮವೊಂದರ ಫ್ಲೆಕ್ಸ್ ಅಳವಡಿಸಲು ಹೋಗಿ ವಾಪಸ್ ಬರುತ್ತಿದ್ದಾಗ ಅವರಿಗೆ ಕಳ್ಳರ ಸುಳಿವು ದೊರೆತಿತ್ತು. ಕೂಡಲೇ ಅವರು ಮನೆಯವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದರು. ಈ ವೇಳೆಗೆ ಈರ್ವರು ಬೈಕ್ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಓರ್ವನನ್ನು ಹಿಡಿದು ಪುತ್ತೂರು ನಗರ ಪೊಲೀಸ್ ಠಾಣೆಗೆ ಬೈಕ್ ಸಹಿತ ಒಪ್ಪಿಸಲಾಗಿದೆ. ಪೊಲೀಸ್ ವಶವಾದ ವ್ಯಕ್ತಿ ಕಡೇಶಿವಾಲಯದ ಸಚಿನ್ ಎಂದು ಮಾಹಿತಿ ಲಭ್ಯವಾಗಿದೆ. ಪರಾರಿಯಾದ ಇನ್ನಿಬ್ಬರೂ ಕಡೇಶಿವಾಲಯ ನಿವಾಸಿಗಳೆಂದು ತಿಳಿದು ಬಂದಿದೆ. ಲೀಲಾವತಿರವರ ಅಳಿಯ ಮೋಹನ್ ಕುಮಾರ್ ಘಟನೆಯ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.