ಪುತ್ತೂರು: ಹತ್ತು ಹಲವು ಕಾರಣಿಕತೆಗಳ ಮೂಲಕ ಹತ್ತೂರಲ್ಲೂ ಭಕ್ತಸಮೂಹವನ್ನು ಹೊಂದಿರುವ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಪ್ರಥಮ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವ ‘ಎಲಿಯ ಜಾತ್ರೆʼ ಫೆ.06 ಮತ್ತು 7 ರಂದು ಸಂಭ್ರಮದಿಂದ ಜರಗಲಿದೆ. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ, ಎಲಿಯ ಜಾತ್ರಾ ಸಮಿತಿ ಹಾಗೂ ಊರ ಕೂಡುಕಟ್ಟಿನ ಯಜಮಾನತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆಯೊಂದಿಗೆ ನಡೆಯುವ ಎಲಿಯ ಜಾತ್ರೋತ್ಸವಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ ಫೆ.05 ರಂದು ಬೆಳಿಗ್ಗೆ ನಡೆಯಲಿದೆ. ಪ್ರಥಮ ವಾರ್ಷಿಕ ವರ್ಧಂತಿಗೆ ಹಸಿರು ಹೊರೆಕಾಣಿಕೆಯಾಗಿ ಸೋನಾಮಸೂರಿ ಬೆಳ್ತಿಗೆ ಅಕ್ಕಿ, ತೆಂಗಿನ ಕಾಯಿ, ಅಡಿಕೆ ಗೊನೆ, ಸಿಯಾಳ ಗೊನೆ, ಬಾಳೆ ಗೊನೆ, ತರಕಾರಿ, ದನದ ತುಪ್ಪ, ದನದ ಹಾಲು, ಎಳ್ಳೆಣ್ಣೆ, ತೆಂಗಿನೆಣ್ಣೆ, ಬೆಲ್ಲ, ಸಕ್ಕರೆ, ಬಾಳೆಎಲೆ, ಹೂವು, ಹಿಂಗಾರ, ತುಳಸಿ, ಮಲ್ಲಿಗೆ, ಸೇವಂತಿಗೆ ಇತ್ಯಾದಿ ವಸ್ತುಗಳನ್ನು ಸ್ವೀಕರಿಸಲಾಗುವುದು. ಹಸಿರು ಹೊರೆಕಾಣಿಕೆ ಮೆರವಣಿಗೆಯು ಬೆಳಿಗ್ಗೆ 10 ಗಂಟೆಗೆ ತಿಂಗಳಾಡಿ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ಹೊರಡಲಿದೆ. ಹಸಿರು ಹೊರೆಕಾಣಿಕೆ ಸಮರ್ಪಣೆ ಮಾಡುವವರು ಬೈಲುವಾರು ಸಮಿತಿಯನ್ನು ಸಂಪರ್ಕಿಸುವುದು, ಮೆರವಣಿಗೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ಪ್ರಕಟಣೆ ತಿಳಿಸಿದೆ.