ಆಲಂಕಾರು: ಜೇಸಿಐ ಆಲಂಕಾರು ಇದರ ಪೂರ್ವಾಧ್ಯಕ್ಷರೂ, ಶಿಕ್ಷಕ ಪ್ರದೀಪ್ ಬಾಕಿಲ ಹಾಗೂ ಶಿಕ್ಷಕಿ ಹೇಮಲತಾ ಪ್ರದೀಪ್ ಅವರ ಪುತ್ರ ಮಾಸ್ಟರ್ ಆಶ್ಲೇಷ್‌ರವರ 10ನೇ ವರ್ಷದ ಹುಟ್ಟುಹಬ್ಬ ಆಚರಣೆ, ಜೇಸಿಐ ಸದಸ್ಯರ ಹುಟ್ಟುಹಬ್ಬ ಆಚರಣೆ, ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಪ್ರಶಸ್ತಿ ವಿತರಣೆ ಹಾಗೂ ಜೇಸಿ ಕುಟುಂಬೋತ್ಸವ ಆಲಂಕಾರು ಬಾಕಿಲ ಹೊಂಬೆಳಕು ನಿವಾಸದಲ್ಲಿ ನಡೆಯಿತು.
ಬಾಕಿಲ ಮೋನಪ್ಪ ಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಡು ಬಡತನದ ಸಂಕಷ್ಟಗಳನ್ನು ಮೆಟ್ಟಿನಿಂತು ಪ್ರಸ್ತುತ ಬೆಂಗಳೂರಿನಲ್ಲಿ ಗುಪ್ತಚರ ಇಲಾಖೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಕುಂತೂರು ನಿವಾಸಿ ಗಣೇಶ್ ಶೆಟ್ಟಿ ಅವರಿಗೆ ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ತುಳು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಜ್ಞಾ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮ ಆಯೋಜಿಸಿದ ಮೋನಪ್ಪ ಗೌಡ ಹಾಗೂ ಸಾವಿತ್ರಿ ದಂಪತಿಯನ್ನು ಜೇಸಿಐ ಆಲಂಕಾರು ಘಟಕದ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಧುರಾಜ್ ಗುರುಪುರ ಮತ್ತು ತಂಡದವರಿಂದ ಆಕರ್ಷಕ ಆಟಗಳು ಹಾಗೂ ಮನೋರಂಜನಾ ಕಾರ್ಯಕ್ರಮ, ಅದ್ವಿಕಾ ಬಾಕಿಲ ಮತ್ತು ತಂಡದವರಿಂದ ನೃತ್ಯ ಕಾರ್ಯಕ್ರಮ, ಜೇಸಿಐ ಆಲಂಕಾರು ಘಟಕದ ಸದಸ್ಯರಾದ ಪ್ರೇಮ್‌ಕುಮಾರ್, ಪ್ರವೀಣ್, ಗುರುಕಿರಣ್ ಶೆಟ್ಟಿ ಬಾಲಾಜೆ, ದೀಕ್ಷಾ ಪಿ.ಆಳ್ವ, ಮಂಜುನಾಥ ಮಣಕವಾಡ್, ತಾರಾ ಹಾಗೂ ಅಗಮ್ಯ ಪ್ರೇಮ್ ಇವರಿಂದ ಆಕರ್ಷಕ ಹಳೆಯ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಲಂಕಾರು ಜೇಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ವಲಯ ಉಪಾಧ್ಯಕ್ಷ ಅಜಿತ್‌ಕುಮಾರ್ ರೈ, ವಿಶ್ರಾಂತ ಪ್ರಾಂಶುಪಾಲ ವಿಠಲ ರೈ, ಪ್ರಕಾಶ್ ಬಾಕಿಲ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರು, ಜೇಸಿಐ ಸದಸ್ಯರು ಉಪಸ್ಥಿತರಿದ್ದರು. ಪ್ರದೀಪ್ ಬಾಕಿಲ ಸ್ವಾಗತಿಸಿದರು. ಹೇಮಲತಾ ಪ್ರದೀಪ್ ವಂದಿಸಿದರು. ಮಾಸ್ಟರ್ ಆಶ್ಲೇಷ್ ಹಾಗೂ ಅದ್ವಿಕಾ ಸಹಕರಿಸಿದರು.