ಬಿಇಓ, ಹೆಚ್‌ಎಮ್, ಎಸ್‌ಡಿಎಂಸಿಗೆ ತಿಳಿಸದೇ ವಿದ್ಯಾರ್ಥಿಗಳನ್ನು ಕರೆದುಕೊಂಡ ಹೋದ ಶಿಕ್ಷಕಿ!
ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ: ಪೊಲೀಸರಿಗೆ ಮೌಖಿಕ ಮಾಹಿತಿ
ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರಿಗಾಗಲೀ, ಮುಖ್ಯೋಪಾಧ್ಯಾಯರಿಗಾಗಲೀ, ಎಸ್‌ಡಿಎಂಸಿಯವರಿಗಾಗಲೀ ತಿಳಿಸದೆ ಸಹಶಿಕ್ಷಕಿಯೋರ್ವರು ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡ ಹೋಗಿ ಆತಂಕ ಸೃಷ್ಠಿಸಿರುವ ವಿಲಕ್ಷಣ ಘಟನೆಯೊಂದು ಚಿಕ್ಕಮುಡ್ನೂರು ಗ್ರಾಮದ ಬೀರ‍್ನಹಿತ್ಲು ಶಾಲೆಯಲ್ಲಿ ನಡೆದಿದೆ.
ಪ್ರವಾಸದ ವಿವಾದ:
ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಬೀರ‍್ನಹಿತ್ಲು ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾರತಿ ಎಂಬವರು ಶಾಲೆಯ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಘಟನೆ ಫೆ.4ರಂದು ಬೆಳಕಿಗೆ ಬಂದಿದೆ. ಶಿಕ್ಷಕಿ ಭಾರತಿಯವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗಾಗಲೀ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರಿಗಾಗಲೀ, ಮುಖ್ಯ ಶಿಕ್ಷಕರಿಗಾಗಲೀ ಮಾಹಿತಿ ಇರಲಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಫೆ.4ರಂದು ಸುಮಾರು 38 ಮಕ್ಕಳು ಶಾಲೆಗೆ ಗೈರು ಹಾಜರಾಗಿದ್ದಾರೆ. ಇದರಲ್ಲಿ ಕೆಲವು ವಿದ್ಯಾರ್ಥಿಗಳು ಶಾಲೆಗೆ ರಜೆ ಮಾಡಿ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆಗೆ ತೆರಳಿದ್ದಾರೆ. ಉಳಿದ ವಿದ್ಯಾರ್ಥಿಗಳು ಶಿಕ್ಷಕಿ ಭಾರತಿಯವರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸಕ್ಕೆ ಅಧಿಕೃತವಾಗಿ ಎಷ್ಟು ಮಕ್ಕಳು ತೆರಳಿದ್ದಾರೆ ಎಂಬ ಮಾಹಿತಿ ಇನ್ನೂ ಸಂಬಂಧಿಸಿದವರಿಗೆ ಗೊತ್ತಾಗಿಲ್ಲ. ಮಧ್ಯಾಹ್ನದವರೆಗೆ ಶಿಕ್ಷಕಿ ಭಾರತಿಯವರನ್ನು ಸಂಪರ್ಕಿಸಲು ಮುಖ್ಯ ಶಿಕ್ಷಕಿ ಪುಷ್ಪಾ ಮತ್ತು ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ಅವರು ಪ್ರಯತ್ನಿಸಿದರೂ ಭಾರತಿಯವರ ಮೊಬೈಲ್ ಫೋನ್ ಸ್ವಿಚ್ಛ್ ಆಫ್ ಆಗಿದೆ. ಪ್ರವಾಸಕ್ಕೆ ತೆರಳಿರುವ ಬಸ್‌ನ ಮಾಹಿತಿಯೂ ಸಿಕ್ಕಿಲ್ಲ. ಇದರಿಂದಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯಲ್ಲಿ 6 ಮತ್ತು 7ನೇ ತರಗತಿಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತಿಯವರು 3ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ವಾರದ ಹಿಂದೆಯೇ ಇವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು ಈ ಬಗ್ಗೆ ಯಾರಿಗೂ ಹೇಳದಂತೆ ವಿದ್ಯಾರ್ಥಿಗಳಿಗೆ ಹೇಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಶಾಲೆಯಿಂದ ಅಧಿಕೃತ ಪ್ರವಾಸ ಹೋಗಲಾಗುತ್ತಿದೆ ಎಂದು ತಿಳಿದು ಮಕ್ಕಳನ್ನು ಪೋಷಕರು ಕಳುಹಿಸಿಕೊಟ್ಟಿದ್ದಾರೆ. ಆದರೆ, ಘಟನೆ ಬೆಳಕಿಗೆ ಬಂದಾಗ ಪೋಷಕರು ಆತಂಕಕ್ಕೀಡಾಗಿದ್ದಾರೆ. ಈ ಕುರಿತು ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರು ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಗೆ ಮೌಖಿಕ ಮಾಹಿತಿ ನೀಡಿದ್ದಾರೆ. ‘ಪ್ರವಾಸಕ್ಕೆ ಹೋಗುವ ಕುರಿತು ಯಾವುದೇ ನಿರ್ಧಾರ ಆಗಿಲ್ಲ. ಪ್ರವಾಸ ಹೋಗಲು ಯಾರಿಗೂ ಒಪ್ಪಿಗೆ ನೀಡಿಲ್ಲ. ಅನಧಿಕೃತವಾಗಿ ಶಿಕ್ಷಕಿ ಭಾರತಿ ಅವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು ಈ ಬಗ್ಗೆ ದೂರು ನೀಡಲಿದ್ದೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ತಿಳಿಸಿದ್ದಾರೆ.