ಅಂಬಿಕಾದಲ್ಲಿ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ವಿದಾಯ ಕೂಟ

0

ಪುತ್ತೂರು: ಕುಟುಂಬ ವ್ಯವಸ್ಥೆ ಭಾರತದ ಶಕ್ತಿ. ಕುಟುಂಬದಿಂದ ದೇಶ ಕಟ್ಟುವ ಕೆಲಸ ಪ್ರಾರಂಭವಾಗುವುದು. ಜನನಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು. ದೇಶಕ್ಕಾಗಿ ಅಳಿಲ ಸೇವೆ ಎಲ್ಲರೂ ಮಾಡಬೇಕು. ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರ ಕೆಲ ನಿಮಿಷಗಳ ಭಾಷಣ ಅವರನ್ನು ಜಗದ್ವಂದ್ಯರನ್ನಾಗಿ ಮಾಡಿತು. ಎಲ್ಲರೂ ಭಾರತವನ್ನು ಪ್ರೀತಿಸಿ. ನ್ಯೂನತೆಗಳನ್ನು ಪಕ್ಕದಲ್ಲಿಡಿ. ನಾವೇನು ಮಾಡಬೇಕೆಂಬುದನ್ನು ಯೋಚಿಸಿ. ನಮಗಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎಂಬ ನುಡಿಯಂತೆ ಬಾಳೋಣ. ಭಗವಂತನ ಕೃಪೆಯೊಂದಿದ್ದರೆ ಏನನ್ನೂ ಸಾಧಿಸಬಹುದು. ಗುರಿ, ಶಿಸ್ತು, ಪ್ರಯತ್ನದಿಂದ ಮುಂದೆ ಬನ್ನಿ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ. ಇತರರ ನೋವಿಗೆ ಸ್ಪಂದಿಸಿ. ಅಂಬಿಕಾ ವಿದ್ಯಾಲಯ ಕೇವಲ ಶಾಲೆ ಅಲ್ಲ ಜ್ಯೋತಿಯ ಪಂಜು ಎಂದು ಖ್ಯಾತ ವಾಗ್ಮಿ ರಂಜನ್ ಬೆಳ್ಳರ್ಪಾಡಿಯವರು ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫ಼ೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮತ್ತು ಬಪ್ಪಳಿಗೆಯ ದ್ವಿತೀಯ ಪಿ.ಯು. ವಿದ್ಯಾರ್ಥಿಗಳ ವಿದಾಯ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಭಾರತದ ಆದರ್ಶ ವ್ಯಕ್ತಿಗಳ ಜೀವನ ಹಾಗೂ ದಿವ್ಯ ಸಂದೇಶಗಳನ್ನು ತಿಳಿಸಿ ಅವರನ್ನನುಕರಿಸಿ ಜೀವನದಲ್ಲಿ ಮುಂದೆ ಬರುವಂತೆ ಪ್ರೇರೇಪಿಸಿದರು.

       ಧರ್ಮವನ್ನು ಪಾಲಿಸಿ ಧರ್ಮದಿಂದ ಅರ್ಥ, ಕಾಮ, ಮೋಕ್ಷ – ಪಡೆಯಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳೆಲ್ಲಾ ಉತ್ತಮ ಪ್ರಯತ್ನದೊಂದಿಗೆ ದ್ವಿತೀಯ ಪಿ.ಯು.ಸಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸನ್ಮಾನಕ್ಕೆ ಪಾತ್ರರಾಗಿ ಎಂದು ನಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

       ಅಂಬಿಕಾ ಮಹಾವಿದ್ಯಾಲಯದಲ್ಲಿ ತತ್ವ ಶಾಸ್ತ್ರ ಮತ್ತೆ ಪುನರುಜ್ಜೀವನ ಪಡೆಯುತ್ತಿದೆ. ಫಿಲೋಸಫಿ ಕಲಿಯಿರಿ. ದೇಶಕ್ಕಾಗಿ ಬಾಳಿ. ದೇಶ ಕಟ್ಟುವ ವೀರರಾಗಿ. ಸಮಾಜದ ಋಣ ನಮ್ಮೆಲ್ಲರಲ್ಲೂ ಇದೆ. ಏನಾದ್ರೂ ಸಮಾಜಕ್ಕಾಗಿ ನೀಡುವಂತವರಾಗಿ , ಮನುಷ್ಯರಾಗಿ, ದೇಶ ಭಕ್ತರಾಗಿ ಬಾಳಿ. ಎಲ್ಲೇ ಇರಿ ಹೇಗೇ ಇರಿ ದೇಶಕ್ಕಾಗಿ ಎಲ್ಲವನ್ನೂ ಮುಡಿಪಾಗಿಡುವ ಪ್ರತಿಜ್ಞೆಯನ್ನು ಮಾಡಿ. ಶುಭವಾಗಲಿ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ವಿದಾಯ ಕೂಟದ ಸಭಾಧ್ಯಕ್ಷರೂ ಆದ ಸುಬ್ರಹ್ಮಣ್ಯ ನಟ್ಟೋಜರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

         ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸುರೇಶ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಿಶೋರ್ ಗೌಡ, ಅಪೂರ್ವ.ಡಿ, ಗ್ರೀಷ್ಮ. ಕೆ, ಯಶು.ಜಿ, ಸಮೃದ್ಧ್, ಹಿಷಾ ತಮ್ಮ ಅನಿಸಿಕೆಗಳ ಅನುಭವಗಳನ್ನು  ಹಂಚಿಕೊಂಡರು.

        ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವಿರಿಸಿ, ಸ್ಮರಣಿಕೆ ನೀಡಿ ಹರಸಿದರು. ವಿದ್ಯಾರ್ಥಿನಿ ಸುಧಾ ಕೋಟೆ ಪ್ರಾರ್ಥಿಸಿದರು. ಅಂಬಿಕಾ ಪ.ಪೂ. ವಿದ್ಯಾಲಯ ಬಪ್ಪಳಿಗೆಯ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಎಲ್ಲರನ್ನೂ ಸ್ವಾಗತಿಸಿದರು. ಅಂಬಿಕಾ ಪ.ಪೂ.ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದನಾರ್ಪಣೆಗೈದರು. ಜೀವ ಶಾಸ್ತ್ರ ಉಪನ್ಯಾಸಕಿ ಗೀತಾ.ಸಿ.ಕೆ ಕಾರ್ಯಕ್ರಮ ನಿರೂಪಿಸಿದರು.  .

LEAVE A REPLY

Please enter your comment!
Please enter your name here