ಪುತ್ತೂರು: ಮಾರಾಟಿ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಮಹಮ್ಮಾಯಿ ಅಮ್ಮನವರ ಸಾಮೂಹಿಕ ಗೋಂದೋಳು ಪೂಜೆಯು ಸಂಘದ ಕಟ್ಟಡದಲ್ಲಿ ಫೆ.7ರಂದು ನಡೆಯಿತು.
ಸುಮಾರು 10 ವರ್ಷಗಳ ನಂತರ ಮತ್ತೊಮ್ಮೆ ನಡೆದ ಗೋಂದೋಳು ಪೂಜೆ ಕಾರ್ಯಕ್ರಮ ಸಂಜೆ ಆರಂಭಗೊಂಡು, ಭಜನೆ, ನೃತ್ಯ ಭಜನೆ ಕಾರ್ಯಕ್ರಮ ನಡೆಯಿತು. ಧನಂಜಯ ಕಾನುಮೂಲೆ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ಪೆರ್ಲಂಪಾಡಿಯ ಚೋಮ ನಾಯ್ಕ ಅವರು ದರ್ಶನ ಪಾತ್ರಿಯಾಗಿ ಎಲ್ಲರಿಗೂ ಅಭಯಹಸ್ತ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಹಿತ ಅನೇಕ ಗಣ್ಯರು ಆಗಮಿಸಿದ್ದರು. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ್, ಪೂಜಾ ಸಮಿತಿ ಸಂಚಾಲಕ ನ್ಯಾಯವಾದಿ ಎನ್.ಎಸ್ ಮಂಜುನಾಥ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಹ ಸಂಸ್ಥೆಗಳಾದ ಮಹಿಳಾ ವೇದಿಕೆ, ಯುವ ವೇದಿಕೆ, ಗ್ರಾಮ ಸಮಿತಿಗಳು, ಸಮಾಜದ ಎಲ್ಲಾ ಭಕ್ತರು ಗೋಂದೋಳು ಪೂಜೆಯಲ್ಲಿ ಭಾಗವಹಿಸಿದ್ದರು.