ಉದನೆ: ಧೂಳಿನ ಸಮಸ್ಯೆ-ವಿದ್ಯಾರ್ಥಿಗಳಿಗೆ ಅನಾರೋಗ್ಯ
ಪೋಷಕರಿಂದ ಗುತ್ತಿಗೆದಾರರ ಕಚೇರಿಗೆ ಮುತ್ತಿಗೆ; ನೀರು ಸಿಂಪಡಣೆ ಭರವಸೆ

0

ನೆಲ್ಯಾಡಿ: ಉದನೆ ಪೇಟೆಯಲ್ಲಿನ ಧೂಳಿನ ಸಮಸ್ಯೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಹೆದ್ದಾರಿಯಲ್ಲಿನ ಧೂಳಿನ ಸಮಸ್ಯೆಗೆ ಮುಕ್ತಿ ನೀಡುವಂತೆ ಒತ್ತಾಯಿಸಿ ಶಾಲಾ ಆಡಳಿತ ಮಂಡಳಿ, ಪೋಷಕರು, ವರ್ತಕರು ಹಾಗೂ ಗ್ರಾಮಸ್ಥರು ಶಿರಾಡಿಯಲ್ಲಿರುವ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಫೆ.9ರಂದು ನಡೆದಿದೆ. ಧೂಳು ಹರಡದಂತೆ ಹೆದ್ದಾರಿಯಲ್ಲಿ ನಿರಂತರ ನೀರು ಹಾಕಲಾಗುವುದು ಎಂದು ಈ ಸಂದರ್ಭದಲ್ಲಿ ಗುತ್ತಿಗೆದಾರ ಸಂಸ್ಥೆಯವರು ಭರವಸೆ ನೀಡಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇದರಿಂದಾಗಿ ಹೆದ್ದಾರಿಯುದ್ದಕ್ಕೂ ದೂಳು ಆವರಿಸಿಕೊಂಡಿದೆ. ಉದನೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಿದ್ದು ಇಲ್ಲಿನ ವಿದ್ಯಾರ್ಥಿಗಳು ಧೂಳಿನಿಂದಾಗಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು ಕೆಮ್ಮು, ವಾಂತಿ, ಜ್ವರ, ಅಲರ್ಜಿಗೆ ತುತ್ತಾಗುತ್ತಿದ್ದು ಅಸ್ವಸ್ಥರಾಗಿ ಆಸ್ಪತ್ರೆಗೂ ದಾಖಲಾಗುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರಿಗೆ ಹಾಗೂ ಹೆದ್ದಾರಿ ಇಲಾಖೆಗೆ ಈ ಹಿಂದೆ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಪೋಷಕರು, ಗ್ರಾಮಸ್ಥರು, ಉದನೆ, ಶಿರಾಡಿಯ ವರ್ತಕರು ಶಿರಾಡಿಯಲ್ಲಿರುವ ಗುತ್ತಿಗೆದಾರ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಮನವಿಗೆ ಸ್ಪಂದಿಸಿದ ಗುತ್ತಿಗೆದಾರ ಸಂಸ್ಥೆಯ ಮಹೇಶ್ ರೆಡ್ಡಿಯವರು, ಉದನೆ ಪೇಟೆ ಹಾಗೂ ಶಾಲಾ ವಠಾರದಲ್ಲಿ ಧೂಳು ಬರದಂತೆ ನಿರಂತರವಾಗಿ ನೀರು ಸಿಂಪಡಿಸುವ ಭರವಸೆ ನೀಡಿದರು. ಮುಂದೆ ನಿರ್ಲಕ್ಷ್ಯ ತೋರಿದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿಯೂ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಲಾಗಿದೆ.

ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಶಿರಾಡಿ ಗ್ರಾ.ಪಂ. ಉಪಾಧ್ಯಕ್ಷ ಕಾರ್ತಿಕೇಯನ್, ಶಾಲಾ ಮುಖ್ಯಗುರುಗಳು, ಶಿಕ್ಷಕರು, ಸಿಬ್ಬಂದಿಗಳು, ಉದನೆ, ಶಿರಾಡಿಯ ವರ್ತಕರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here