ರೋಟರಿ ಕ್ಲಬ್‌ನಿಂದ ಶಾಸಕರೊಂದಿಗೆ ಸಂವಾದ ‘ರೋಟರಿ ಜನತಾ ಅದಾಲತ್’

0
  • ಮಹಾಯೋಜನೆ ಮಂಜೂರಾದ್ರೆ ಕಟ್ ಕನ್ವರ್ಷನ್ ಸಮಸ್ಯೆ ನಿವಾರಣೆ
  • ಇನ್ನು ಮುಂದೆ ರಸ್ತೆ ಕಾಂಕ್ರಿಟೀಕರಣ ಮಾತ್ರ-ಡಾಮರೀಕರಣವಿಲ್ಲ

ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಈವರೆಗೆ ಆಗಿರುವ ಮತ್ತು ಮುಂದಕ್ಕೆ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಕುರಿತು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಶಾಸಕ ಸಂಜೀವ ಮಠಂದೂರು ಅವರೊಂದಿಗೆ ಸಂವಾದ ‘ರೋಟರಿ ಜನತಾ ಅದಾಲತ್’ ಕಾರ್ಯಕ್ರಮ ಪುತ್ತೂರು ಜೈನ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಜನತಾ ಅದಾಲತ್ ಕೋರ್ಟ್ ಕಲಾಪದ ಮಾದರಿಯಲ್ಲಿ ನಡೆಯಿತು. ಸಾರ್ವಜನಿಕರಿಂದ ಬಂದ ಆಯ್ದ ಪ್ರಶ್ನೆಗಳನ್ನು ಜೇಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಪಿ.ಎಸ್.ರವರು, ಕಟಕಟೆಯಲ್ಲಿ ಆಸೀನರಾಗಿದ್ದ ಶಾಸಕ ಸಂಜೀವ ಮಠಂದೂರುರವರಿಗೆ ಕೇಳಿದರು.ಶಾಸಕರು ಪ್ರಶ್ನೆಗಳಿಗೆ ಲೀಲಾಜಾಲವಾಗಿ, ಸ್ಪಷ್ಟವಾಗಿ ಉತ್ತರ ನೀಡಿದರು.ಹಿರಿಯ ನ್ಯಾಯವಾದಿ ರಾಮಮೋಹನ್ ರಾವ್‌ರವರು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.

ಸಂವಾದದಲ್ಲಿ ಕೇಳಿ ಬಂದ ಪ್ರಮುಖ ಪ್ರಶ್ನೆಗಳು ಮತ್ತು ಶಾಸಕರು ನೀಡಿರುವ ಉತ್ತರ

ಪ್ರಶ್ನೆ: ಕೌಡಿಚ್ಚಾರು-ಅರಿಯಡ್ಕ ಗ್ರಾಮದ ಜನರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಂತಹ ವ್ಯವಸ್ಥೆಗಳನ್ನು ಗ್ರಾಮೀಣ ಭಾಗದಲ್ಲಿ ಮಾಡಬಹುದಾ?, ಇದರಿಂದ ಈ ಭಾಗದ ಜನರು ಬಸ್‌ನಲ್ಲಿ ನೇತಾಡುತ್ತಾ ಕಾಲೇಜಿಗೆ ಹೋಗುವ ಪ್ರಮೇಯ ತಪ್ಪುತ್ತದಲ್ಲ?.
ಮಠಂದೂರು: ಪಾಲಿಟೆಕ್ನಿಕ್‌ಗೆ ಹೆಚ್ಚಿನ ಬೇಡಿಕೆಯಿದೆ.ಪುತ್ತೂರಿನಲ್ಲಿ ಸರಕಾರಿ ಪಾಲಿಟೆಕ್ನಿಕ್‌ಗಳಿಲ್ಲ.ಸರಕಾರಿ ಐಟಿಐ ಮಾಡ್ಬೇಕು, ಪಾಲಿಟೆಕ್ನಿಕ್ ಮಾಡ್ಬೇಕು ಅಂತ ಮೂರ‍್ನಾಲ್ಕು ಗ್ರಾಮಗಳಿಂದ ಬೇಡಿಕೆಗಳು ಬಂದಿದ್ದು ಎರಡು ಗ್ರಾಮಗಳಲ್ಲಿ ಈಗಾಗಲೇ ಜಾಗವನ್ನು ಗೊತ್ತುಪಡಿಸಿದ್ದೇವೆ.ಅರಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಪಾಲಿಟೆಕ್ನಿಕ್ ಆರಂಭ ಮಾಡುವಂತೆ ಕುಂಬಾರರ ಗುಡಿ ಕೈಗಾರಿಕಾ ಸಂಘದಿಂದಲೂ ಬೇಡಿಕೆ ಬಂದಿದೆ.ಕುಂಬಾರರ ಗುಡಿ ಕೈಗಾರಿಕಾ ಸಂಘದವರು, ನಮಗೆ ಪಾಲಿಟೆಕ್ನಿಕ್ ಕೊಟ್ರೆ ಇವತ್ತಿನ ಯೋಚನೆಗೆ ಅನುಗುಣವಾಗಿ ಈ ಮಣ್ಣಿನಲ್ಲಿ ಹೊಸ ಹೊಸ ಸಲಕರಣೆಗಳನ್ನು, ಶೋಕೇಸ್‌ನಲ್ಲಿ ಇಡುವಂತಹ ವಸ್ತುಗಳನ್ನು ತಯಾರು ಮಾಡಬಹುದು ಎಂದು ಈಗಾಗಲೇ ಬೇಡಿಕೆ ಸಲ್ಲಿಸಿದ್ದಾರೆ.ನಾನು ಈಗಾಗಲೇ ಉನ್ನತ ಶಿಕ್ಷಣ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಿದ್ದೇನೆ.ಪುತ್ತೂರಿಗೆ ಸರಕಾರಿ ಪಾಲಿಟೆಕ್ನಿಕ್ ಮಂಜೂರು ಮಾಡುವ ಭರವಸೆಯನ್ನು ಸಚಿವರು ಕೊಟ್ಟಿದ್ದಾರೆ.ಇಲ್ಲಿ ಯಾವುದೇ ಸರಕಾರಿ ಪಾಲಿಟೆಕ್ನಿಕ್ ಇಲ್ಲದ ಕಾರಣ ನಮಗೆ ಹೆಚ್ಚಿನ ಅವಕಾಶವಿದೆ.

ಪ್ರಶ್ನೆ: ಈಗ ಇರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಬಸ್ಸುಗಳನ್ನು ನಿಲ್ಲಿಸಲು ಜಾಗ ಸಾಕಾಗೋದಿಲ್ಲ.ಆನೆಮಜಲಿನಲ್ಲಿ ಐದು ವರುಷದ ಹಿಂದೆ ಕೆಎಸ್‌ಆರ್‌ಟಿಸಿಗೆ ಜಾಗ ಕೊಟ್ಟಿದ್ರಂತೆ.ಆದರೆ ಈಗ ಅದು ಕೋರ್ಟಿಗೆ ಮಂಜೂರು ಆಗಿದೆ.ಎರಡನೇ ಡಿಪೋ ಬಗ್ಗೆ ಏನಾದರೂ ಕೆಲಸ ಆಗಿದೆಯಾ?
ಮಠಂದೂರು: ಕರ್ನಾಟಕದಲ್ಲಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಬಸ್ಸುಗಳ ಪಾಸು ವಿತರಣೆ ಆಗಿರೋದು ಪುತ್ತೂರು ವಿಭಾಗದಲ್ಲಿ.ಮಂಗಳೂರು ವಿಭಾಗ ಇಬ್ಭಾಗವಾಗಿ, ೧೪ ವರ್ಷದ ಹಿಂದೆ ಅಂದಿನ ಸಾರಿಗೆ ಸಚಿವರಾಗಿದ್ದ ಆರ್.ಅಶೋಕ್‌ರವರು ಮಡಿಕೇರಿ, ಸುಳ್ಯ, ಧರ್ಮಸ್ಥಳ, ಬಿಸಿರೋಡು ಡಿಪೋಗಳಿಗೆ ಕೇಂದ್ರ ಸ್ಥಾನವನ್ನಾಗಿ ಪುತ್ತೂರು ವಿಭಾಗ ಆರಂಭ ಮಾಡಿದರು. ಪ್ರಸ್ತುತ ಪುತ್ತೂರು ಘಟಕದ ಒಂದು ಡಿಪೋ, ಇನ್ನೊಂದು ವಿಭಾಗೀಯ ಡಿಪೋ ಇದೆ.ಮೂರನೇ ಡಿಪೋದ ಬೇಡಿಕೆ ಸಹಜವಾಗಿ ಪುತ್ತೂರಿನಲ್ಲಿದೆ.ಪುತ್ತೂರು-ಉಪ್ಪಿನಂಗಡಿ, ಪುತ್ತೂರು-ವಿಟ್ಲ, ಪುತ್ತೂರು-ಮಂಗಳೂರು ಇರಬಹುದು.ಇಲ್ಲಿ ಹೆಚ್ಚು ಬಸ್ಸುಗಳು ಓಡಾಡುವುದರಿಂದ ಇನ್ನೊಂದು ಡಿಪೋದ ಅವಶ್ಯಕತೆ ಇದೆ ಎಂದು ಏಳು ವರ್ಷದ ಹಿಂದೆ ಬೇಡಿಕೆ ಬಂದಾಗ ಪುತ್ತೂರಿನಲ್ಲಿ ಸೆಕೆಂಡ್ ಡಿಪೋ ಮಾಡುವಂತಹ ಯೋಚನೆ ಬಂತು.ಆಗ ಹಿರಿಯರು ಉಪ್ಪಿನಂಗಡಿಯಲ್ಲಿ ಮಾಡೋಣ ಅಂದ್ರು. ಉಪ್ಪಿನಂಗಡಿಯಲ್ಲಿ ಹೆಚ್ಚು ಬಸ್ಸುಗಳಿವೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸುಗಳು ಕೆಟ್ಟು ಹೋದರೆ ಮೈಂಟೆನೆನ್ಸ್‌ಗೆ ನಾವು ಬಿಸಿರೋಡ್, ಮಂಗಳೂರು ಡಿಪೋ ಅಥವಾ ಸಕಲೇಶಪುರ ಡಿಪೋಗೆ ಹೋಗಬೇಕು, ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿದೆ ಅಂತ ಹೇಳಿ ಸುಮಾರು ನಾಲ್ಕು ಎಕ್ರೆ ಜಾಗ ಬಸ್‌ಸ್ಟ್ಯಾಂಡ್ ಮತ್ತು ಡಿಪೋಗೆ ಐಡೆಂಟಿ- ಮಾಡಿ ಅದು ಫಾರ್ ವನ್ ನೋಟಿಫಿಕೇಶನ್ ಆಯ್ತು,ಕೆಎಸ್‌ಆರ್‌ಟಿಸಿಯವರು ರೂ.೭೦ ಲಕ್ಷ ಹಣವನ್ನು ನಮ್ಮ ಎಸಿಯವರ ಲ್ಯಾಂಡ್ ಎಕ್ವಿಶಿಷನ್ ಖಾತೆಗೆ ಕಟ್ಟಿದ್ದರು.ಆಮೇಲೆ ಕೆಲವರು ಕೋರ್ಟಿಗೆ ಹೋದರು.ಅದು ಪೆಂಡಿಂಗ್ ಆಯ್ತು.ಆಮೇಲೆ ಮತ್ತೆ ನಮಗೆ ಮಾಡ್ಲಿಕ್ಕೆ ಅಲ್ಲಿ ಲ್ಯಾಂಡ್ ಎಕ್ವಿಸಿಶನ್ ತೊಂದರೆ ಆಗಿ ಅಲ್ಲೇ ನಿಂತು ಹೋಯಿತು.ಈಗ ಎಲ್ಲಿಯಾದರೂ ಸರಕಾರಿ ಜಾಗವಿದೆಯೇ ಎಂದು ಹುಡುಕುತ್ತಿದ್ದೇವೆ.ನಮಗೆ ಸರಕಾರಿ ಜಾಗ ಸಿಗ್ಲಿಲ್ಲ.ಕೊರೋನಾ ನಂತರ ಕೆಎಸ್‌ಆರ್‌ಟಿಸಿಯವರು ನಷ್ಟದಲ್ಲಿದ್ದಾರೆ.ಆದ್ದರಿಂದ ನಮಗೆ ಖಾಸಗಿ ಜಾಗ ಖರೀದಿ ಮಾಡಲು ಕಷ್ಟ. ಇವತ್ತಿನ ಲ್ಯಾಂಡ್ ಎಕ್ವಿಸಿಶನ್ ಕಾಯ್ದೆ ಪ್ರಕಾರ ಅಷ್ಟು ಹಣ ನೀಡಲು ಕಷ್ಟ. ಸರಕಾರಿ ಜಾಗ ಕೊಡಿ ಅಂತ ಕೇಳಿದ್ದಾರೆ.ಕೆಎಸ್‌ಆರ್‌ಟಿಸಿಗೆ ೪ ಎಕ್ರೆ ಜಾಗ ಐಡೆಂಟಿ- ಮಾಡಿಕೊಡಲು ಈಗಾಗಲೇ ತಹಶೀಲ್ದಾರರು, ಸಹಾಯಕ ಆಯುಕ್ತರು, ಡಿಸಿಯವರಿಗೆ ಮನವಿ ಮಾಡಿದ್ದೇವೆ.ಸಿಕ್ಕಿದರೆ ಖಂಡಿತವವಾಗಿಯೂ ದ್ವಿತೀಯ ಡಿಪೋವನ್ನು ಉಪ್ಪಿನಂಗಡಿ ಅಥವಾ ಪುತ್ತೂರಿನಲ್ಲಿ ಮಾಡಲಿದ್ದೇವೆ.ಆನೆಮಜಲಿನಲ್ಲಿ ಈಗಾಗಲೇ ಐದು ಎಕ್ರೆ ಜಾಗವನ್ನು ಕೋರ್ಟಿಗೆ ಹಸ್ತಾಂತರ ಮಾಡಿದ್ದೇವೆ.ರೂ.೫೫ ಕೋಟಿಯ ಕಟ್ಟಡ, ಬಾರ್ ಅಸೋಸಿಯೇಶನ್ ಕಟ್ಟಡ ಈಗಾಗಲೇ ಉದ್ಘಾಟನೆಯಾಗಿದೆ.ಅಲ್ಲಿ ಸ್ಥಳಾವಕಾಶವಿಲ್ಲ.

ಪ್ರಶ್ನೆ: ರಿಜಿಸ್ಟರ್ ಕಛೇರಿಯಲ್ಲಿ, ಸುಮಾರು ಹನ್ನೊಂದು ವರ್ಷಗಳ ಹಿಂದೆ ಎಲ್ಲಾ ಡಿಜಿಟಲೈಸ್ ಮಾಡಿದ್ದೇವೆ ಎಂದು ಪತ್ರಿಕೆಯಲ್ಲಿ ಓದಿದ್ದೇವೆ.ಇನ್ನು ಕೆಲಸ ಬೇಗನೇ ಆಗ್ತದೆ, ಕಾಯಬೇಕಾಗಿಲ್ಲ,ಸಮಯ ಉಳೀತದೆ ಎಂದು ನಾವೆಲ್ಲ ಖುಷಿ ಪಟ್ಟೆವು.ಆದ್ರೆ ಇವತ್ತಿಗೂ ಅದು ಸರಿಯಾಗಿಲ್ಲ.ಬಹಳಷ್ಟು ತೊಂದರೆಗಳಾಗ್ತಿವೆ.ಪ್ರಥಮ ಅಂತಸ್ತಿನಲ್ಲಿ ಕಟ್ಟಡವಿದೆ,ಹಿರಿಯ ನಾಗರಿಕರಿಗೆ ಲಿಫ್ಟ್ ಸಮಸ್ಯೆ ಇದೆ.ಇದು ಯಾವಾಗ ಸರಿ ಹೋಗಬಹುದು?
ಮಠಂದೂರು: ಇವತ್ತು ರೆವೆನ್ಯೂ ವಿಷಯಗಳು ಬಗೆಹರಿಸಲಾಗದಂತಹ ಹಂತಕ್ಕೆ ಮುಟ್ಟಿದ್ದು ಬಹಳಷ್ಟು ಸುಧಾರಣೆ ಮಾಡಬೇಕು ಎಂದು ಸರಕಾರ ಇವತ್ತು ಡಿಜಿಟಲ್ ವ್ಯವಸ್ಥೆ ತಂದಿದೆ.ಆದರೂ ಇನ್ನೂ ಸುಧಾರಣೆಯಾಗಲಿಲ್ಲ.ನಾನು ಶಾಸಕನಾಗುವಾಗ ಮಿನಿ ವಿಧಾನಸೌಧ ಆಗಿತ್ತು. ಅಲ್ಲಿ ಕಛೇರಿಗಳು ಆರಂಭವಾಗಿತ್ತು.ಆದರೆ ಸಬ್ ರಿಜಿಸ್ಟರ್ ಕಛೇರಿ ಇಲ್ಲಿಗೆ ಬರಲು ಒಪ್ಪಿರಲಿಲ್ಲ.ನಾನು ಹಠ ಕಟ್ಟಿ ನಮ್ಮ ಐಜಿಆರ್ ಹತ್ರ ಮಾತಾಡಿ ಅಲ್ಲಿಂದ ಹಳೆ ಕಟ್ಟಡದಿಂದ ಶಿಫ್ಟ್ ಮಾಡಿಸುವ ಕೆಲಸ ಮಾಡಿದೆ.ಮರುದಿವಸ ಸಬ್ ರಿಜಿಸ್ಟರ್ ಟ್ರಾನ್ಸ್‌ಫರ್ ಪಡೆದುಕೊಂಡು ಹೋದ್ರು. ಬಹುಶ ಇಲ್ಲಿ ಕೂತುಕೊಳ್ಳೋದಿಕ್ಕೆ ಆಗೋದಿಲ್ಲ, ನಮ್ಮ ಜನಪ್ರತಿನಿಧಿಗಳ ಒತ್ತಡ ಇದೆ ಎಂದು ಹೇಳಿ ಟ್ರಾನ್ಸ್‌ಫರ್ ತೆಗೆದುಕೊಂಡು ಹೋದ್ರು.ಒಂದಷ್ಟು ಸುಧಾರಣೆ ತಗೊಂಡು ಬರ‍್ಬೇಕು ಅಂತ ಹೇಳಿ ಅವರಿಗೆ ಸಲಹೆ ಸೂಚನೆಗಳನ್ನು ನೀಡಿದ್ದೆ.ಸಬ್ ರಿಜಿಸ್ಟರ್ ಕಛೇರಿಯ ನೋಂದಾವಣೆ ಇಲಾಖೆಯ ಸುಪ್ರೀಂ, ಐಎಎಸ್ ಅಧಿಕಾರಿ ಬೆಂಗಳೂರಿನ ಐಜಿಆರ್‌ರವರಲ್ಲಿ ಹೋಗಿ ಇಲ್ಲಿನ ಸಮಸ್ಯೆಗಳ ಬಗ್ಗೆ ಒಂದಷ್ಟು ಮಾತನಾಡಿ ಎರಡು ಮಂದಿ ಹೆಚ್ಚುವರಿ ನೌಕರರನ್ನು ಕೊಡುವಂತಹ ಕೆಲಸವನ್ನು ಮಾಡಿದ್ದೇನೆ.ಹೆಚ್ಚುವರಿ ಕಂಪ್ಯೂಟರ್ ಹಾಕುವಂತಹ ಕೆಲಸವನ್ನು ಮಾಡಿದ್ದೇನೆ. ಆನ್‌ಲೈನ್‌ನಲ್ಲಿ ಬರುವಂತಹ ಸಮಸ್ಯೆಗಳನ್ನು ನಿವಾರಣೆ ಮಾಡ್ಬೇಕು ಎಂಬಂತೆ ಯೋಚನೆ ಮಾಡಿದ್ದೇನೆ.ಆಮೇಲೆ ರೈತರು ಸಾಲ ಪಡೆಯಬೇಕಾದರೆ ರಿಜಿಸ್ಟ್ರೇಶನ್ ಮಾಡಬೇಕು, ಅದಕ್ಕೆ ಪೂರಕವಾಗಿ ಕುಡ್ಸೆ ಆಪೊಂದನ್ನು ತಂದು ಇದರಿಂದ ಹೊರತುಪಡಿಸುವಂತಹ ಕೆಲಸವನ್ನು ಮಾಡಿದ್ದೇನೆ.ಈಗ ಮದುವೆ, ಜಾಗದ ರಿಜಿಸ್ಟ್ರೇಷನ್ ಇಷ್ಟಕ್ಕೆ ಸೀಮಿತವಾಗಿ ಅದು ನಡೆಯುತ್ತಿಲ್ಲ. ಸಮಸ್ಯೆಗಳು ಬಂದಾಗ ಅದಕ್ಕೆ ತಕ್ಷಣ ಸ್ಪಂದಿಸುವ ಕೆಲಸವನ್ನು ಕೊಡ್ತಿದ್ದೇನೆ.ನಮಗೆ ಪ್ರಾಮಾಣಿಕ ಅಽಕಾರಿ ಯಾರಿದ್ದಾರೆ ಅಂತ ಹುಡುಕಿ ಅವರನ್ನು ಹಾಕಿಕೊಳ್ಳುವ ಕೆಲಸ ಮಾಡುವುದರ ಜೊತೆಗೆ ಅಲ್ಲಿನ ತಾಂತ್ರಿಕ ಸಮಸ್ಯೆಗಳು, ನೆಟ್‌ವರ್ಕ್ ಸಮಸ್ಯೆಗಳು ಇದರ ಬಗ್ಗೆ ಬೆಂಗಳೂರಿನ ಭೂಮಿ ಕೇಂದ್ರದಲ್ಲಿ ಮಾತನಾಡಿ ಪರಿಹಾರ ಕಂಡುಕೊಳ್ಳುವ ಯೋಚನೆಯನ್ನು ಮಾಡಿದ್ದೇವೆ.ಸಬ್ ರಿಜಿಸ್ಟರ್ ಹಾಗೂ ಆರ್‌ಟಿಒ ಕಛೇರಿಯನ್ನು ನೂರಕ್ಕೆ ನೂರು ಡಿಜಿಟಲೈಸೇಷನ್ ಮಾಡಬೇಕು ಎನ್ನುವ ವ್ಯವಸ್ಥೆಯನ್ನು ಸರಕಾರ ಮಾಡಲು ಚಿಂತನೆ ನಡೆಸುತ್ತಿದೆ.

ಪ್ರಶ್ನೆ: ಎಲ್ಲಾ ಕಡೆಗಳಲ್ಲಿ ರಿಕ್ಷಾಗಳಿಗೆ ಮೀಟರ್ ಅಳವಡಿಸಿದ್ದಾರೆ, ಪುತ್ತೂರಿನಲ್ಲಿ ಯಾಕಿಲ್ಲ,?ರಿಕ್ಷಾಗಳ ಚಾಲಕರು ಹಾಗೂ ಮಾಲಕರು ಈ ವ್ಯವಸ್ಥೆಯನ್ನು ಒಪ್ಪುವ ಹಾಗೆ ಕಾಣುತ್ತದೆ.ಆರ್‌ಟಿಒ ಇಲಾಖೆಯ ಜೊತೆಗೂಡಿ ಈ ಮೀಟರ್ ವ್ಯವಸ್ಥೆಯನ್ನು ಕಡ್ಡಾಯ ಮಾಡುವ ವ್ಯವಸ್ಥೆ ಮಾಡಬಹುದಾ?
ಮಠಂದೂರು:ಮಹಾನಗರ ಮತ್ತು ಬೃಹತ್ ಮಹಾನಗರಗಳಲ್ಲಿ ಈ ಮೀಟರ್ ಅಳವಡಿಕೆ ಮಾಡಿದ್ದಾರೆ.ಅಳವಡಿಕೆ ಮಾಡಿದ ಕೂಡಲೇ ಸಮಸ್ಯೆ ಬಗೆ ಹರಿದಿದೆ ಅಂತ ಅಲ್ಲ.ಕೆಲವೊಂದು ಕಡೆ ಶೋಷಣೆ ನಿಲ್ತಿಲ್ಲ.ಇಲ್ಲಿ ಕೂಡ ಪ್ರಾಮಾಣಿಕ ಆಟೋದವರು ತುಂಬಾ ಮಂದಿ ಇದ್ದಾರೆ.ರಿಕ್ಷಾಗಳ ಬೇರೆ ಬೇರೆ ಯೂನಿಯನ್‌ಗಳಲ್ಲಿ ಮೀಟರ್ ಅಳವಡಿಕೆ ಬಗ್ಗೆ ಮಾತನಾಡಿದಾಗ ಮೊದಲು ಒಪ್ಪಿದವರು ಬಳಿಕ ಮೀಟರ್ ಅಳವಡಿಕೆಗೆ ಒಂದಷ್ಟು ಖರ್ಚುವೆಚ್ಚಗಳು ಬೀಳುತ್ತವೆ, ಆ ಖರ್ಚುವೆಚ್ಚಗಳನ್ನು ಯಾರಾದರೂ ಭರಿಸಿದರೆ ನಾವು ಅಳವಡಿಸಿಕೊಳ್ಳುತ್ತೇವೆ ಎಂದು ಉಲ್ಲೇಖ ಮಾಡಿರುತ್ತಾರೆ. ಮಂಗಳೂರು ಸಿಟಿ ಕಾರ್ಪೊರೇಶನ್‌ಗಳಲ್ಲಿ, ಬೆಂಗಳೂರು ಬಿಬಿಎಂಪಿಯಲ್ಲಿ ಅಳವಡಿಕೆ ಮಾಡುವಂತಹುದು ಸರಕಾರ ಮಾಡಿದೆ ಆದರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮಿತಿಯಲ್ಲಿ ಹೆಚ್ಚಿನ ಆಟೋಗಳು ನಗರದಿಂದ ಗ್ರಾಮಾಂತರಕ್ಕೆ ಸಂಚರಿಸುತ್ತವೆ.ಗ್ರಾಮಾಂತರದಿಂದ ನಗರಕ್ಕೂ ಬರುತ್ತವೆ.ಇದರಿಂದಾಗಿ ಮೀಟರ್ ಅಳವಡಿಕೆಗೆ ಒಂದಷ್ಟು ಸಮಸ್ಯೆಗಳೂ ಇದೆ.ಗ್ರಾಮಾಂತರದಲ್ಲಿ ಒಂದಷ್ಟು ರಸ್ತೆಗಳು ಸರಿಯಾಗಿಲ್ಲದ್ದರಿಂದ ಮೀಟರ್ ಅಳವಡಿಕೆಗೆ ಅವರು ಸ್ವಲ್ಪ ಹಿಂದೇಟು ಹಾಕಬಹುದು.ಈ ಬಗ್ಗೆ ಇಲ್ಲಿನ ಎರಡ್ಮೂರು ಯೂನಿಯನ್‌ಗಳ ಜೊತೆ ಮಾತುಕತೆ ಮಾಡಿದ್ದೇವೆ.ಕಾನೂನಿನ ವಿಚಾರಗಳನ್ನು ತಿಳ್ಕೊಂಡು ಇದರ ಬಗ್ಗೆ ಟ್ರಾಫಿಕ್, ಆರ್‌ಟಿಒ ಸಲಹೆ ಪಡಕೊಂಡು ಜನರ ಬೇಡಿಕೆ ಇದ್ರೆ ಪುತ್ತೂರಿನ ನಾಗರಿಕರು ಬೇಕೇ ಬೇಕು ಅಂತ ಹೇಳಿದ್ರೆ ಅದನ್ನು ಅಳವಡಿಕೆ ಮಾಡಲು ಕಮಿಷನ್‌ರವರ ಹತ್ತಿರ ಮಾತನಾಡಿ ಆದೇಶ ಮಾಡಿಸುವ ಕುರಿತು ಮಾತಾಡುತ್ತೇನೆ.ಆದರೆ ಜನರು ಅದರ ಅಗತ್ಯ ಇದೆ ಅಂತ ಹೇಳಬೇಕು, ಇವತ್ತು ರಿಕ್ಷಾದವರು ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆ ಎಂಬ ಭಾವನೆ ಅವರಲ್ಲಿದ್ರೆ ಖಂಡಿತಾ ಒಪ್ಪಲಾಗದು.

ಪ್ರಶ್ನೆ: ಎಪಿಎಂಸಿ ಅಂಡರ್ ಪಾಸ್ ಜನರ ಅನೇಕ ವರ್ಷಗಳ ಬೇಡಿಕೆ.ಇದೀಗ ಅಂಡರ್ ಪಾಸ್ ಬದಲಿಗೆ ಓವರ್ ಬ್ರಿಡ್ಜ್ ಮಾಡುತ್ತಿದ್ದಾರೆ ಅದೂ ತುಂಬಾ ದೂರದಲ್ಲಿ.ಇಲ್ಲಿ ಅಂಡರ್ ಪಾಸ್ ಮಾಡಲು ಒಳ್ಳೆಯ ಸ್ಥಳ.ಇಲ್ಲಿ ರೈಲ್ವೇ ಹಳಿಗಳ ಸಮಸ್ಯೆ ಎಂದಾದರೆ ಮಂಗಳೂರಿನ ಪಡೀಲ್‌ನಲ್ಲಿ ಟ್ರಾಫಿಕ್ ಜಾಮ್ ಜಾಸ್ತಿ ಇದೆ,ಅಲ್ಲಿ ಅಂಡರ್ ಪಾಸ್ ಮಾಡಿಲ್ವೆ?.ಭಾರತದಲ್ಲಿ ಟೆಕ್ನೋಲಜಿಗೆ ಕೊರತೆನಾ?. ಒಳ್ಳೆಯ ಇಂಜಿನಿಯರ‍್ಸ್ ಇದ್ದಾರಲ್ಲ?..
ಮಠಂದೂರು: ಹನ್ನೊಂದು ಕೋಟಿಯ ಈ ಬ್ರಿಡ್ಜ್ ಆಗ್ಬೇಕಿದ್ರೆ ಅದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ೫೦:೫೦ ಶೇರ್ ಇದೆ. ಅಂಡರ್ ಪಾಸ್ ಮಾಡ್ಬೇಕಿದ್ರೆ ನಾವು ಎಸ್ಟಿಮೇಟ್ ಮಾಡ್ತೇವೆ.ಅಲ್ಲಿ ಏನು ಮಾಡ್ಬೇಕು, ಜನರಿಗೆ ಯಾವುದು ಉಪಯೋಗವಾಗ್ಬೇಕು ಎನ್ನುವ ನಿಟ್ಟಿನಲ್ಲಿ ಮಣ್ಣಿನ ಪರೀಕ್ಷೆ ನಡೆಯುತ್ತದೆ.ಮಣ್ಣಿನ ಪರೀಕ್ಷೆ ಮಾಡಿ ಅಲೈನ್‌ಮೆಂಟ್ ನೋಡ್ತಾರೆ ಇಂಜಿನಿಯರ್‌ಗಳು. ಆರಂಭದಲ್ಲಿ ಆದರ್ಶ ಆಸ್ಪತ್ರೆ ಬಿಡ್ಜ್‌ನಿಂದ ನೇರವಾಗಿ ಅಂಡರ್ ಪಾಸ್ ಮಾಡಬಹುದು ಎಂದು ಇಂಜಿನಿಯರ್ ಸಲಹೆ ನೀಡ್ತಾರೆ.ಆವಾಗ ಎಲೈನ್‌ಮೆಂಟ್ ಬರ‍್ಲಿಲ್ಲ.ಮತ್ತೊಂದು ಎಸ್ಟಿಮೇಟ್ ಮಾಡಲಾಯ್ತು. ಆವಾಗ ಅಲ್ಲಿಂದ ೫೦೦ಮೀ ದೂರದಲ್ಲಿ ಅಂಡರ್ ಬ್ರಿಡ್ಜ್ ಮಾಡ್ತೇವೆ ಎಂದಾಗ ನಾನೂ ಕೂಡ ಒಪ್ಪಲಿಲ್ಲ.ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೆ ಇಂಧನ ಎಷ್ಟು ಖರ್ಚಾಗುತ್ತದೆ ಎಂಬುದು ಮುಖ್ಯವಾಗುತ್ತದೆ.ಆವಾಗ ಇಲ್ಲಿನ ತಾಂತ್ರಿಕ ಸಮಸ್ಯೆಗಳು ಏನೆಂದರೆ ಎಪಿಎಂಸಿ ಬ್ರಿಡ್ಜ್ ಹಾಗೂ ರೈಲ್ವೇ ಸ್ಟೇಷನ್ ಬಲು ಹತ್ತಿರದಲ್ಲಿರುವುದಾಗಿದೆ.ಆದರೂ ಈ ಭಾಗದಲ್ಲಿ ಬಹಳ ವೇಗವಾಗಿ ರೈಲ್ವೇ ಕಾಮಗಾರಿ ನಡೆಯುತ್ತಿದೆ.ವಿವೇಕಾನಂದ ಕಾಲೇಜಿನಲ್ಲಿ ಸುಮಾರು ೫ ಕೋಟಿ ವೆಚ್ಚದಲ್ಲಿ ಓವರ್ ಬ್ರಿಡ್ಜ್ ಆಗ್ತಾ ಇದೆ.ಅದೂ ಕೂಡ ಕೇಂದ್ರ ಸರಕಾರದ ರೈಲ್ವೇ ಇಲಾಖೆ ಅನುದಾನ ಒದಗಿಸುತ್ತಿದೆ.ಕೆಲಸ ಆಗ್ಬೇಕಿದ್ರೆ ರಾಜ್ಯ ಸರಕಾರದ ಒಪ್ಪಿಗೆ ತೆಗೆದುಕೊಂಡೇ ಆಗುವುದು.ಆದ್ದರಿಂದ ಕೆಲಸ ಖಂಡಿತಾ ಆಗುತ್ತದೆ.ಅದರಲ್ಲೂ ಪುತ್ತೂರನ್ನು ಆದರ್ಶ ರೈಲ್ವೇ ಸ್ಟೇಷನ್ ಆಗಿ ಸಂಸದರು ಮಾಡಿದ್ದಾರೆ.ಅದರ ಜೊತೆಯಲ್ಲಿ ರೈಲ್ವೆಗೆ ಪ್ಯಾರಲಾಲ್ ರಸ್ತೆಯಾಗಿ ೨೫ ವರ್ಷಗಳಿಂದ ಬಾಕಿ ಇದ್ದಂತಹ, ಹಾರಾಡಿಯಿಂದ ರೈಲ್ವೇ ಸ್ಟೇಷನಿಗೆ ಸಂಪರ್ಕ ಮಾಡುವಂತಹ ರಸ್ತೆಯನ್ನು ರೂ.೧ ಕೋಟಿಯಲ್ಲಿ ಕಾಂಕ್ರಿಟೀಕರಣ ಮಾಡಿ ರೈಲ್ವೇ ಸ್ಟೇಷನಿಗೆ ಸಂಪರ್ಕ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಪ್ರಶ್ನೆ: ನಗರಸಭೆಯ ವ್ಯಾಪ್ತಿಗಿಂತ ೫ಕಿ.ಮೀ ಸುತ್ತಳತೆಯಲ್ಲಿ ೯೪ಸಿ ಹಾಗೂ ೫೭ ಕೂಡ ಆಗುವುದಿಲ್ಲ.ಬಲ್ನಾಡು,ಕೊಡಿಪ್ಪಾಡಿ, ಆರ್ಯಾಪು, ಬೆಳ್ಳಿಪ್ಪಾಡಿ, ನರಿಮೊಗರು ಇಂತಹ ಪುತ್ತೂರಿಗೆ ಆಸುಪಾಸಿನಲ್ಲಿರುವವರಿಗೆ ಕಷ್ಟವಾಗಿದೆ.ಅವರಿಗೆ ಪೇಟೆಯ ಒಳಗೆ ೧೦, ೫ ಸೆಂಟ್ಸ್ ಜಾಗವೂ ಸಿಗುವುದಿಲ್ಲ,೨.೫೦ ಸೆಂಟ್ಸ್ ಜಾಗ ಸಿಗುವುದು.ಇದಕ್ಕೆ ಮುಂದಿನ ಶಾಸನ ಸಭೆಯಲ್ಲಿ, ಅಧಿವೇಶನದಲ್ಲಿ ಬದಲಾವಣೆ ಮಾಡಲು ಸಾಧ್ಯವಿದೆಯೇ?.
ಮಠಂದೂರು: ಲ್ಯಾಂಡ್ ರೆವೆನ್ಯೂ ಕಾಯ್ದೆಯಲ್ಲಿ ಪಟ್ಟಣ ಪಂಚಾಯಿತಿನಿಂದ ಮೂರು ಕಿ.ಮೀ ವ್ಯಾಪ್ತಿ, ಪುರಸಭೆ, ನಗರಸಭೆಯಿಂದ ೫ ಕಿ.ಮೀ ವ್ಯಾಪ್ತಿ, ಮಹಾನಗರಪಾಲಿಕೆಯಿಂದ ೧೦ ಕಿ.ಮೀ ವ್ಯಾಪ್ತಿ ಬಫರ್ ಝೋನ್ ಎಂದು ಕನ್ಸಿಡರ್ ಮಾಡ್ಬೇಕು.ಮುಂದೆ ಆ ಪಟ್ಟಣ, ಪುರಸಭೆ, ನಗರಸಭೆ ವಿಸ್ತರಣೆಯಾಗಬೇಕಿದ್ರೆ ಅಲ್ಲಿ ಕೃಷಿ ಚಟುವಟಿಕೆ ಇರಬಾರದು.ಆ ನಗರವಾಸಿಗಳಿಗೆ ನಿವೇಶನ ಕೊಡ್ಲಿಕ್ಕೆ, ಕೈಗಾರಿಕೆಗಳಿಗೆ, ವಾಣಿಜ್ಯ ಕಟ್ಟಡಗಳಿಗೆ, ಬೇರೆ ಬೇರೆ ಸರಕಾರಿ ಕಟ್ಟಡಗಳಿಗೆ ಸ್ಥಳಾವಕಾಶ ಬೇಕು ಎಂದು ಲ್ಯಾಂಡ್ ರೆವಿನ್ಯೂ ಕಾಯ್ದೆಯಲ್ಲಿ ಅಳವಡಿಕೆ ಮಾಡಿದೆ.ಆದ್ದರಿಂದ ಆ ಬಫರ್ ಝೋನ್‌ಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗ್ತಿಲ್ಲ. ೯೪ಸಿ, ೫೭ ಅನ್ವಯವಾಗ್ತಿಲ್ಲ. ಇವತ್ತು ಪುತ್ತೂರು ನಗರಸಭೆ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಫರ್ ಝೋನ್‌ನಲ್ಲಿ ಕೃಷಿ ಚಟುವಟಿಕೆಗೆ ಅವಕಾಶವಿಲ್ಲದ ಕಾರಣ ಅರ್ಜಿ ಹಾಕಿದವನಿಗೆ ರೆಗ್ಯುಲರೈಸ್ ಮಾಡೋದಿಕ್ಕೆ ಆಗ್ತಾ ಇಲ್ಲ. ಲ್ಯಾಂಡ್ ರೆವೆನ್ಯೂ ಕಾಯ್ದೆ ನವೀಕರಣವಾಗಬೇಕಿದ್ರೆ ಅದು ಶಾಸನ ಸಭೆಯಲ್ಲಿ ಆಗಬೇಕು. ನಿಯಮಗಳ ಬದಲಾವಣೆ ಕ್ಯಾಬಿನೆಟ್‌ನಲ್ಲಿ ಆಗ್ಬೇಕು. ಇದು ರಾಜ್ಯಕ್ಕೆ ಅನುಷ್ಟಾನವಾಗುವ ಕಾರಣ ವಿಧಾನಸಭೆಯಲ್ಲಿ ಬಹುಮತದಿಂದ ವಿಧಾನಸಭೆ ಹಾಗೂ ವಿಧಾನಪರಿಸತ್‌ನಿಂದ ಮಂಜೂರು ಮಾಡಿ ರಾಜ್ಯಪಾಲರ ಅಂಕಿತ ದೊರೆತ ಮೇಲಷ್ಟೇ ಮಾಡ್ಬೇಕು.

ಪ್ರಶ್ನೆ: ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಎಲೆಕ್ಷನ್ ಆಗಿದೆ, ಇನ್ನೂ ಅಧ್ಯಕ್ಷ, ಉಪಾಧ್ಯಕ್ಷ ಆಗಿಲ್ಲ ಯಾಕೆ?.
ಮಠಂದೂರು: ವಿಟ್ಲ ಪಟ್ಟಣ ಪಂಚಾಯತ್ ಆಗಿ ೭ ವರ್ಷ ಆಗಿದೆ.ಎರಡನೇ ಬಾರಿಗೆ ಚುನಾವಣೆ ಆಗಿ ಒಂದು ವರ್ಷ ಆಗಿದೆ.ಇದರ ಮಧ್ಯದಲ್ಲಿ ಕರ್ನಾಟಕದಲ್ಲಿ ಗ್ರಾಮ ಪಂಚಾಯತ್‌ಗಳನ್ನು ಆಪ್‌ಡೇಟ್ ಮಾಡುವ ಕೆಲಸ ಆಗಿದೆ.ಪುದು ಹಾಗೂ ಪಕ್ಕದ ಕಡಬ ಇವು ಆಪ್‌ಡೇಟ್‌ಗಳಾಗಿವೆ.ಈ ಆಪ್‌ಡೇಟ್ ಆಗ್ಬೇಕಿದ್ರೆ ಯಾವುದು ಎಕ್ಸಿಸ್ಟಿಂಗ್ ಇದೆಯೋ ಇದಕ್ಕೆಲ್ಲ ರಾಜ್ಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿಯನ್ನು ಒಮ್ಮೆಲೇ ಮಾಡ್ಬೇಕು.ಅದು ಎಸ್ಸಿ, ಎಸ್ಟಿ, ಓಬಿಸಿ, ಮಹಿಳೆ. ಈ ಮೀಸಲಾತಿ ಮಾಡ್ಬೇಕಿದ್ರೆ ಆಪ್‌ಡೇಟ್ ಆದ ಪಂಚಾಯತ್‌ಗಳಲ್ಲಿ ಮಾಡಬೇಕಾದ ಪರಿಸ್ಥಿತಿ ಬಂದಿರುತ್ತದೆ. ಆಪ್‌ಡೇಟ್ ಆದ ಪಂಚಾಯತ್‌ಗಳಲ್ಲಿ ಚುನಾವಣೆಗಳಾಗ್ಲಿಲ್ಲ.ಇಲ್ಲಿ ಒಂದಷ್ಟಕ್ಕೆ ಚುನಾವಣೆ ಆಯಿತು.ಈ ಮಧ್ಯೆ ರಿಸರ‍್ವೇಶನ್ ತಂದ್ರು. ರಿಸರ್ವೆಶನ್ ಬಗ್ಗೆ ಕೆಲವರು ಕೋರ್ಟಿಗೆ ಹೋದ್ರು. ಕೋರ್ಟಿಗೆ ಹೋಗಿ ಅದು ಮತ್ತೆ ಪೆಂಡಿಂಗ್ ಆಯಿತು. ಖಂಡಿತಾ ನಮ್ಮ ಕಡೆಯಿಂದ ಪ್ರಯತ್ನಗಳು ಆಗ್ತಾ ಇದೆ.
ಪ್ರಶ್ನೆ: ಕಬಕ-ವಿಟ್ಲ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಆಗಿದೆ. ಆದರೆ ಕಾಮಗಾರಿಯ ಪ್ರಗತಿ ನೋಡಿದ್ರೆ ಏನೂ ಇಲ್ಲ ಯಾಕೆ?.
ಮಠಂದೂರು: ಕಬಕ-ವಿಟ್ಲ-ಸಾಲೆತ್ತೂರು-ಮಂಚಿ ರಸ್ತೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ.ಸುರತ್ಕಲ್‌ನಿಂದ ಅದು ಆರಂಭವಾಗ್ತದೆ.ಸುಮಾರು ಎಂಟು ವರ್ಷದ ಹಿಂದೆ ಓರ್ವ ಗುತ್ತಿಗೆದಾರರು ಇದಕ್ಕೆ ಟೆಂಡರ್ ಹಾಕಿದ್ರು. ಟೆಂಡರ್ ಹಾಕಿ ಕೆಲಸ ಮಾಡದೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರನ್ನು ಕೋರ್ಟಿಂದ ಬಿಡುಗಡೆಗೊಳಿಸಿ ಮತ್ತೇ ರಿ-ಟೆಂಡರ್ ಮಾಡುವ ಕೆಲಸವನ್ನು ನಾವು ಕಳೆದ ವರ್ಷ ಮಾಡಿದ್ದೇವೆ. ಸುಮಾರು ರೂ.೯ ಕೋಟಿಗೆ ಓರ್ವರು ಟೆಂಡರ್ ಹಾಕಿ ಈಗಾಗಲೇ ಅದರ ಕೆಲಸ ಕಾರ್ಯಗಳನ್ನು ಆರಂಭ ಮಾಡಿದ್ದಾರೆ. ಈಗ ಅದು ಐದುವರೆ ಮೀಟರ್ ರಸ್ತೆ ಅಗಲವಿದೆ. ಅದನ್ನು ಏಳು ಮೀಟರ್ ರಸ್ತೆಯನ್ನಾಗಿ ಪರಿವರ್ತನೆ ಮಾಡ್ತಾ ಇದ್ದೇವೆ. ಜಲ್ಲಿ ಹಾಕಿ, ರೋಲ್ ಮಾಡಿ ಇನ್ನು ಹದಿನೈದು ದಿವಸದಲ್ಲಿ ಪೂರ್ತಿ ಡಾಮರೀಕರಣ ಮಾಡುವ ಕೆಲಸವಾಗಲಿದೆ.

ಪ್ರಶ್ನೆ: ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿಯನ್ನು ಮಾಡದಿದ್ದರೆ ಕೂಡಲೇ ಸ್ಪೀಡ್ ಅಪ್ ಮಾಡುವ ವ್ಯವಸ್ಥೆ ಮಾಡಲು ಸಾಧ್ಯವಿಲ್ವೆ ಅಥವಾ ಬ್ಲ್ಯಾಕ್ ಲಿಸ್ಟ್ ಮಾಡುವುದು?
ಮಠಂದೂರು: ಅವರಿಗೆ ಟೆಂಡರ್ ಪಿರೇಡ್ ಅಂತ ಇದೆ. ಕೋವಿಡ್ ಬಂದ ಸಂದರ್ಭದಲ್ಲಿ ಅವರು ಒಂದಷ್ಟು ಸಮಯ ಕೇಳ್ತಾರೆ. ಪ್ರಾಕೃತಿಕ ವಿಕೋಪಗಳಾದಾಗ, ಅಕಾಲಿಕ ಮಳೆ ಬಂದಾಗ ಅವರು ಮತ್ತೆ ಹೆಚ್ಚುವರಿ ಸಮಯವನ್ನು ಕೇಳ್ತಾರೆ. ಆವಾಗ ನಾವು ಹೆಚ್ಚುವರಿ ಸಮಯ ಕೊಡಲೇ ಬೇಕಾಗುತ್ತದೆ.ಆಮೇಲೇನೂ ಮಾಡದಿದ್ರೆ ಅವರನ್ನು ನಾವು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಬೇಕಾಗುತ್ತದೆ. ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿದಾಗ ಅವರು ಕೋರ್ಟಿಗೆ ಹೋಗ್ತಾರೆ. ಆವಾಗ ಮತ್ತಷ್ಟು ಸಮಯ ಹೋಗ್ತದೆ.

ಪ್ರಶ್ನೆ: ಬರಿಮಾರಿನಿಂದ ಬರುವ ಕುಡಿಯುವ ನೀರಿನ ವ್ಯವಸ್ಥೆ ಪಾಸಾಗಿದೆಯಾ?
ಮಠಂದೂರು: ಈಗಾಗಲೇ ರಾಜ್ಯದ ನಗರದಲ್ಲಿ ಜಲಸಿರಿ, ಗ್ರಾಮಾಂತರದಲ್ಲಿ ಜಲಧಾರೆ ಅಂತ ಯೋಜನೆ ಬಂದಿದೆ. ಕೇಂದ್ರ ಸರಕಾರ ಜಲಜೀವನ್ ಮಿಶನ್ ಅಂತ ಒಂದು ಯೋಜನೆ ತಂದಿದೆ.ಹಿಂದಿನ ಸರಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಂದಿತ್ತು. ಈ ಎಲ್ಲಾ ಯೋಜನೆಗೆ ಶಾಶ್ವತವಾಗಿ ನದಿ ನೀರಿನಿಂದಲೇ ಯೋಜನೆಗಳನ್ನು ಅನುಷ್ಟಾನ ಮಾಡಬೇಕು ಅಂತ ಯೋಜನೆ ತಯಾರು ಮಾಡಿದ್ದಾರೆ. ಇವತ್ತು ವಿಟ್ಲ-ಅಳಿಕೆ-ಕೇಪು ಈ ಭಾಗದಲ್ಲಿ ಯಾವಾಗಲೂ ನೀರಿನ ಸಮಸ್ಯೆ. ಅಲ್ಲಿ ನಿರಂತರವಾಗಿ ೩೬೪ ದಿನಗಳು ಹರಿಯುವಂತಹ ನದಿಗಳಿಲ್ಲ. ಬೋರ್‌ವೆಲ್ ಕೂಡ ಹಾಗೆ. ಅಳಿಕೆ ವಿದ್ಯಾಸಂಸ್ಥೆಯವರು ತಮ್ಮ ಶಾಲೆ, ಕಾಲೇಜಿಗೆ ನೀರಿಲ್ಲ ಎಂಬುದಾಗಿ ಯಾವಾಗಲೂ ಮನವಿ ಮಾಡುತ್ತಿರುತ್ತಾರೆ. ನದಿಯಿಂದ ನೀರನ್ನು ತಂದು ಅಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆ ಮಾಡಬೇಕು ಅಂತ ಕಡೇಶಿವಾಲಯ ಪಕ್ಕ ಬರಿಮಾರು ಎ.ಎಂ.ಆರ್ ಡ್ಯಾಮ್ ನಲ್ಲಿ ಈಗಾಗಲೇ ಒಂದು ಪ್ರಾಜೆಕ್ಟ್ ತಯಾರು ಮಾಡಿ ಸುಮಾರು ರೂ.೩೦೦ ಕೋಟಿಗೂ ಮಿಕ್ಕಿ ವಿಟ್ಲ ಪಟ್ಟಣ ಪಂಚಾಯತ್, ಅಳಿಕೆ ಗ್ರಾಮ ಪಂಚಾಯತ್, ಕೇಪು ಗ್ರಾಮ ಪಂಚಾಯತ್‌ಗೆ ಸಂಬಂಧಪಟ್ಟಂತೆ ಈ ಯೋಜನೆ ಹಾಕಿ ಅದು ಡಿಪಿಆರ್ ಆಗಿ ಇಂದು -ನಾನ್ಸ್ ಡಿಪಾರ್ಟ್‌ಮೆಂಟಿನಿಂದ ಕ್ಯಾಬಿನೆಟ್‌ಗೆ ಹೋಗಿ ಮುಂದಿನ ಒಂದು ವಾರದಲ್ಲಿ ಕ್ಯಾಬಿನೆಟ್‌ಗೆ ಬರುವ ಲಕ್ಷಣಗಳಿದೆ.ಅದು ಬಂದ್ರೆ ವಿಟ್ಲ ಪುತ್ತೂರು ಭಾಗಕ್ಕೆ ಹೇಗೆ ೨೪೭ ನೀರು ಕೊಡಲು ಬದ್ಧರಾಗಿದ್ದೇವೆಯೋ ಹಾಗೆಯೇ ಅಲ್ಲಿ ನೀರು ಕೊಡಲಿಕ್ಕೆ ನಮ್ಮ ಸರಕಾರ ಬದ್ಧವಾಗಿದೆ.

ಪ್ರಶ್ನೆ: ೧೦ ವರ್ಷದ ಹಿಂದೆ ಎಡಿಬಿ ಸಾಲ ಎಂಬಂತೆ ಪತ್ರಿಕೆಗಳಲ್ಲಿ ಬಂದಿದೆ.ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕಿಂದ ರೂ.೬೯ ಕೋಟಿ ಹಣ ಪುತ್ತೂರಿಗೆ ಸಾಲ ತೆಗೊಂಡಿದ್ದೆವು. ಅದರಲ್ಲಿ ಮೊಟ್ಟೆತ್ತಡ್ಕ ಎನ್‌ಆರ್‌ಸಿಸಿ ಬಳಿ ಒಳ್ಳೆಯ ರಸ್ತೆ ಆಗಿದೆ.ಅದರೊಟ್ಟಿಗೆ ಪುತ್ತೂರಿಗೆ ೨೪೭ ನೀರು ಬರುತ್ತದೆ. ಅದಕ್ಕೆ ರೂ.೨೭ ಕೋಟಿ ತೆಗೆದಿಟ್ಟಿದ್ದೇವೆ ಅಂತ ಪತ್ರಿಕೆಗಳಲ್ಲಿ ವರದಿಯಾಗಿತ್ತು.ಉಪ್ಪಿನಂಗಡಿಯಿಂದ ಪುತ್ತೂರು ನೀರಾವರಿ ಯೋಜನೆಯ ಕೆಲಸ ಕಾರ್ಯಗಳು ಅಪ್‌ಗ್ರೇಡ್ ಮೂಲಕ ಆರಂಭವಾದುವು.ಇದಕ್ಕೆ ಪೂರಕವೆಂಬಂತೆ ನಗರಸಭೆ ಶುಲ್ಕ ಕೂಡ ಅಪ್‌ಗ್ರೇಡ್ ಆಯಿತು.ಆದರೆ ಕಳೆದ ೧೧ ವರ್ಷಗಳಿಂದ ಇವತ್ತಿನವರೆಗೂ ನೀರು ಮೊದಲು ಬಂದಷ್ಟೇ ಬರುವುದು.ನಂತರ ಎರಡನೇ ಯೋಜನೆ ಕುಡ್ಸೆಂಪ್ ಯೋಜನೆ ಕೂಡ ೨೦೨೨, ಜುಲೈಯಲ್ಲಿ ಮುಗೀಬೇಕಿತ್ತು. ಇನ್ನೂ ಅದು ಏನಾಗ್ತಿದೆ ಅಂತ ಯಾರಿಗೂ ಗೊತ್ತಿಲ್ಲ.
ಮಠಂದೂರು: ಹಿಂದಿನ ಯೋಜನೆಗಳ ಬಗ್ಗೆ ನಾನು ಮಾತನಾಡೋದಿಲ್ಲ. ರಾಮಭಟ್‌ರವರ ಕಾಲದಲ್ಲಿ ಉಪ್ಪಿನಂಗಡಿಯಿಂದ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿತ್ತು. ಸದಾನಂದ ಗೌಡರವರ ಕಾಲದಲ್ಲಿ ಮತ್ತೊಂದು ಯೋಜನೆ ಅನುಷ್ಟಾನ ಆಯಿತು. ಈಗ ನನ್ನ ಅವಽಯಲ್ಲಿ ರೂ.೧೧೫ ಕೋಟಿ ಜಲಸಿರಿ ಯೋಜನೆಗೆ ಶಿಲಾನ್ಯಾಸ ಮಾಡಿ, ಉದ್ಘಾಟನೆ ಮಾಡಲಿದ್ದೇನೆ.ರೂ.೧೧೫ ಕೋಟಿಯ ಜಲಸಿರಿ ಯೋಜನೆ ಹಿಂದಿನ ನಮ್ಮ ಎಡಿಬಿ ಯೋಜನೆಯ ಮುಂದುವರೆದ ಭಾಗವಾಗಿ ಈ ಯೋಜನೆ ಮಾಡುತ್ತಿದ್ದೇವೆ. ಈಗ ನಮಗೆ ಉಪ್ಪಿನಂಗಡಿಯಿಂದ ಪಂಪ್‌ಹೌಸ್ ೧೧೫ ಎಚ್‌ಬಿಯ ಪಂಪ್‌ನಿಂದ ನೀರು ಬರ‍್ತಾಇದೆ. ನಮ್ಮ ಪುತ್ತೂರು ಜನಸಂಖ್ಯೆ ೭೦ ಸಾವಿರ. ನಮ್ಮ ಜನಸಂಖ್ಯೆಗಣುಗುಣವಾಗಿ ೧೧೦ ಎಚ್‌ಬಿ ಪಂಪಲ್ಲಿ ಬರುವ ನೀರು ಸಾಕಾಗ್ತಾ ಇಲ್ಲ. ಜಿಯೋಗ್ರಾಫಿಕಲಿ ಅಂದರೆ ನಗರಸಭೆಯ ಎಕ್ಸ್ಟೆಂಡೆಡ್ ಪ್ರದೇಶಕ್ಕೆ ಆ ನೀರು ಹೋಗ್ತಾ ಇಲ್ಲ. ಅಲ್ಲಿ ಸುಮಾರು ೪೦-೫೦ ಬೋರ್‌ವೆಲ್‌ಗಳಿಂದ ನೀರನ್ನು ಸಪ್ಲೈ ಮಾಡ್ತಾ ಇದ್ದೇವೆ. ಇದನ್ನೆಲ್ಲಾ ಮನಗಂಡು ಮುಂದೆ ಪುತ್ತೂರಿನ ಜನಸಂಖ್ಯೆ ಒಂದು ಲಕ್ಷ ಆದಾಗ ಎಷ್ಟು ನೀರು ಬೇಕು ಅಂತ ಯೋಚನೆ ಮಾಡಿಕೊಂಡು ಅದಕ್ಕೆ ಈಗ ನಾವು ಜಲಸಿರಿಯಲ್ಲಿ ೧೧೫ ಕೋಟಿಯಲ್ಲಿ ಯೋಜನೆಯನ್ನು ರೆಡಿ ಮಾಡಿ ಪುತ್ತೂರು ನಗರದ ಸುತ್ತ ಸುಮಾರು ಎಂಟು ಓವರ್‌ಹೆಡ್ ಟ್ಯಾಂಕ್ ಅದರಲ್ಲಿ ಪ್ರಮುಖವಾದದ್ದು ಬೊಳ್ವಾರು ಕರ್ಮಲದಲ್ಲಿನ ಟಾಂಕಿ. ಅಲ್ಲಿಂದ ಮತ್ತೆ ಅದನ್ನು ಲಿಫ್ಟ್ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ. ಇವತ್ತು ಜಲಸಿರಿ ಯೋಜನೆ ಕಾಮಗಾರಿ ಶೇ.೭೦ರಷ್ಟು ಮುಗಿದಿದೆ. ಈ ಕಾಮಗಾರಿಯ ಬಗ್ಗೆ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಪುಡಾದ ಅಧ್ಯಕ್ಷರೊಂದಿಗೆ ನಾನು ವೀಕ್ಷಣೆ ಮಾಡಿದ್ದೇನೆ. ಈ ಯೋಜನೆ ಮಾರ್ಚ್‌ಗೆ ಮುಗೀಬೇಕು. ಶೇ.೯೯ ಮುಗಿಸುವ ಕಾರ್ಯ ಮಾಡ್ತೇವೆ. ಪೈಪ್‌ಲೈನ್ ಜೋಡಣೆ ಬಗ್ಗೆ ಸಮಸ್ಯೆ ಇದೆ. ಹೊಸ ಮೀಟರ್ ಅಳವಡಿಕೆಯಿಂದ ಹೆಚ್ಚಿನ ಬಿಲ್ ಬರುತ್ತಿದೆ ಎಂದು ಗ್ರಾಹಕರ ಆರೋಪವೂ ಇದೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಜಲಸಿರಿ ಯೋಜನೆಯ ಮೂಲಕ ಒಂದು ಮನೆಗೆ ಪ್ರತಿ ದಿನ ೫೫ಲೀಟರ್ ನೀರು ಕೊಡಬೇಕು ಎನ್ನುವ ಆಶಯ ನಮ್ಮದಾಗಿದೆ. ಹಿಂದೆ ಕುಡ್ಸೆಂಪ್, ಎಡಿಬಿ ಅನುದಾನದಲ್ಲಿ ಕೆಲಸ ಕಾರ್ಯಗಳು ಆಗುತ್ತಿತ್ತು. ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದಲ್ಲಿ ಕೆಲಸ ಕಾರ್ಯಗಳು ಆಗುತ್ತಿವೆ. ನೀರಿನ ಸೆಸ್ ಸ್ವಲ್ಪ ಜಾಸ್ತಿಯಾಗಬಹುದು. ಜನರ ತೆರಿಗೆ ಹಣದಲ್ಲಿಯೇ ಇಂದು ಕೆಲಸ ಕಾರ್ಯಗಳು ನಡೆಯುತ್ತಿರುವುದು.‌

ಪ್ರಶ್ನೆ: ಪುತ್ತೂರಿನಲ್ಲಿ ಇಂಡಸ್ಟ್ರಿಯಲ್ ಏರಿಯಾ ಅಭಿವೃದ್ಧಿಯಾದಾಗ ಉದ್ಯೋಗಗಳು ಜಾಸ್ತಿಯಾಗುತ್ತದೆ. ಕ್ಯಾಂಪ್ಕೋ, ಬಿಂದು -ಕ್ಟರಿ ಬಂದ ಮೇಲೆ ಅನೇಕರಿಗೆ ಉದ್ಯೋಗ ಸಿಕ್ಕಿದೆ. ಆದರೆ ಇನ್ನೂ ಹೆಚ್ಚಿನ ಇಂಡಸ್ಟ್ರಿಯಲ್ ಏರಿಯಾ ಆಗಬೇಕು ಎನ್ನುವ ನಿರೀಕ್ಷೆ ನಮ್ಮದು.ಇಂಡಸ್ಟ್ರೀ ಮಾಡುವುದರಿಂದ ಯುವಕರಿಗೆ ಆಶಾಕಿರಣವಿದೆಯೇ?
ಮಠಂದೂರು: ನೂರಕ್ಕೆ ನೂರು ಇದೆ.ಇವತ್ತು ಕೈಗಾರಿಕೆಗಳಿಂದ ಮಾತ್ರ ಉದ್ಯೋಗ ಸೃಷ್ಟಿ ಮಾಡಬಹುದು. ನಗರವು ಬೃಹತ್ ಮಹಾನಗರಪಾಲಿಕೆಯಾಗಿ ಬೆಳೆಯಬೇಕಾದರೆ ಅದಕ್ಕೆ ಕಾರಣ ಅಲ್ಲಿಯ ಕೈಗಾರಿಕೆಗಳು. ಅತ್ಯಧಿಕ ಜಿಎಸ್‌ಟಿ ಕಟ್ಟುನ ನಗರ ಮಂಗಳೂರು ಆಗಬೇಕಿದ್ರೆ ಅಲ್ಲಿನ ಎಂಆರ್‌ಪಿಎಲ್.ಕ್ಯಾಂಪ್ರೋ ಮತ್ತು ಬಿಂದು ಸಾವಿರಾರು ಜನರಿಗೆ ಉದ್ಯೋಗ ಕೊಡ್ತಾ ಇದೆ.ದೇಶದ ರಾಷ್ಟ್ರಪತಿ ಪುತ್ತೂರಿಗೆ ಬರಲು ಕಾರಣ ಕ್ಯಾಂಪ್ರೋ. ಇಂದು ದೇಶದ ಗೃಹ ಸಚಿವರು ಪುತ್ತೂರಿಗೆ ಬರಲು ಕಾರಣ ಅದೇ ಕ್ಯಾಂಪ್ರೋ.ಇಲ್ಲಿಯ ಮಣ್ಣು, ವಾತಾವರಣ ಕಾರ್ಖಾನೆಗಳಿಗೆ ಸೂಕ್ತವಾಗಿದೆ. ಕೊರೋನಾ ಸಂದರ್ಭದಲ್ಲಿ ಪುತ್ತೂರಿನಿಂದ ಹೋದಂತಹ ಕೆಲವು ಉದ್ಯಮಿಗಳನ್ನು ನಾನು ಬೆಂಗಳೂರಿನಲ್ಲಿ ಸೇರಿಸಿದೆ.ಇವತ್ತು ಪ್ಯಾಕೇಜಿಂಗ್ ಇಂಡಸ್ಟ್ರೀ ಇರಬಹುದು, ಗಾರ್ಮೆಂಟ್ ಇಂಡಸ್ಟ್ರೀ ಇರಬಹುದು, ಥರ್ಮೋಕೂಲ್ ಇಂಡಸ್ಟ್ರೀ ಇರಬಹುದು. ಇಂತಹ ತುಂಬಾ ಇಂಡಸ್ಟ್ರೀಗಳನ್ನು ಬೆಂಗಳೂರಿನಲ್ಲಿ ನಮ್ಮ ಪುತ್ತೂರಿನವರು ಹೋಗಿ ಮಾಡಿದ್ದಾರೆ.ನೀವು ಪುತ್ತೂರಿಗೆ ಬನ್ನಿ. ನಿಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕೊಡಬಲ್ಲೆ ಎಂದು ನಾನವರಲ್ಲಿ ಹೇಳಿದಾಗ ಅವರು ಸಂತೋಷದಿಂದ ಒಪ್ಪಿಕೊಂಡ್ರು.ನೀವು ಇಂಡಸ್ಟ್ರೀಗೆ ಜಾಗ ಕೊಟ್ರೆ ಬರುತ್ತೇವೆ, ನಮಗೆ ಸಿಂಗಲ್ ವಿಂಡೋದಲ್ಲಿ ಎಲ್ಲಾ ಕ್ಲಿಯರೆನ್ಸ್ ಆಗಬೇಕು.ಅದರಂತೆ ನಾನು ಜಾಗ ಹುಡುಕಲು ಪ್ರಾರಂಭಿಸಿದೆ.ನೂರು ಎಕ್ರೆಯಾದ್ರೂ ಇಂಡಸ್ಟ್ರಿಯಲ್ ಏರಿಯಾ ಮಾಡ್ಬೇಕು ಅಂತ.ಅದನ್ನು ಲೇಔಟ್ ಮಾಡಿದಾಗ ಸಿಗುವುದು ೬೦ ಎಕ್ರೆ ಮಾತ್ರ.ಎರಡ್ಮೂರು ಜಾಗವನ್ನು ಐಡೆಂಟಿಫೈ ಮಾಡಿದೆವು.ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿದೆವು.ಬೃಹತ್ ಕೈಗಾರಿಕಾ ಸಚಿವರಲ್ಲಿ ಮಾತನಾಡಿದೆವು.ಇದರ ನಡುವೆ ಕೆಲವು ಸಮಸ್ಯೆಗಳು ಬಂದು ತಡ ಆಗಿದೆ.ಇದರ ಮಧ್ಯೆದಲ್ಲಿ ಸಣ್ಣ ಕೈಗಾರಿಕೆ ಆರಂಭ ಮಾಡೋಣ ಅಂತ ಇಲ್ಲಿನ ಸಣ್ಣ ಕೈಗಾರಿಕಾ ಸಹಕಾರ ಸಂಘದವರು ನನ್ನತ್ರ ಬಂದಿದ್ದರು. ನಮಗೆ ಸ್ವಲ್ಪ ಜಾಗ ಮಾಡಿಕೊಡಿ, ೧೦ ರಿಂದ ೨೫ ಸೆಂಟ್ಸ್ ಖಾಲಿ ಜಾಗ ಸಾಕು ಅಂತ ಹೇಳಿದ್ದಿಕ್ಕೆ ಕಾವಿನಲ್ಲಿ ಎಸ್‌ಐಡಿಸಿ ಮೂಲಕ ಜಾಗ ಮಂಜೂರು ಮಾಡಿದೆವು. ಆಮೇಲೆ ಆರ್ಯಾಪು ಹತ್ತಿರ ಹದಿನೈದು ಎಕರೆ ಜಾಗ ಗುರುತು ಮಾಡಿ ಅದಕ್ಕೆ ಡಿಸಿಯವರು ನೋಟಿಫಿಕೇಶನ್ ಮಾಡಿದ್ದಾರೆ. ಪ್ರಸ್ತುತ ಅದಕ್ಕೆ ಕೋರ್ಟಿನಿಂಡ ತಡೆಯಾe ಬಂದಿದೆ. ಇವತ್ತು ಜಾಗದ ಕೊರತೆ ಇದೆ. ಎಲ್ಲಿ ಹೋದ್ರೂ ಅದು ಕುಮ್ಕಿ ಜಾಗ, -ರೆಸ್ಟ್, ಬ-ರ್ ಹೀಗೆ ಒಂದೊಂದು ಸಮಸ್ಯೆಗಳಿಂದಾಗಿ ಪುತ್ತೂರಿನ ಕೈಗಾರಿಕೋದ್ಯಮಿಗಳಿಗೆ ಜಾಗದ ಲಭ್ಯತೆ ಇಲ್ಲ.ಇವತ್ತು ಜಾಗ ಎಲ್ಲಿ ಲಭ್ಯತೆ ಇದೆಯೋ ಯಾರೇ ಆಗಲಿ ಎಲ್ಲಿ ಜಾಗ ಕೊಟ್ರೂ ನಾವು ಖಂಡಿತಾ ಇಂಡಸ್ಟ್ರೀ ಮಾಡ್ಲಿಕ್ಕೆ ಏನೆಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಿಕೊಳ್ಳುವ ಮೂಲಕ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಮಾಡಿದ ಉದ್ಧೇಶವೇ ಅದು, ಏನಾದರೂ ಕೈಗಾರಿಕೆಗಳನ್ನು ತರಬೇಕು. ಕೈಗಾರಿಕೆಗಳನ್ನು ತಂದಾಗ ಅದಕ್ಕೆ ಏನೆಲ್ಲಾ ಬೇಕು ಎಲ್ಲವನ್ನೂ ನೋಡಬೇಕಾಗುತ್ತದೆ. ನಮ್ಮಲ್ಲಿ ಮ್ಯಾನ್ ಪವರ್ ಇದೆ. ಉದ್ಯೋಗ ಸೃಷ್ಟಿ ಮಾಡಿದ್ರೆ ಪುತ್ತೂರು ಅಭಿವೃದ್ಧಿಯಾಗುತ್ತದೆ ಮಾತ್ರವಲ್ಲ ಪುತ್ತೂರು ಜಿಲ್ಲಾ ಕೇಂದ್ರವಾಗಲು ಅದು ಸಹಕಾರಿಯಾಗುತ್ತದೆ.

ಪ್ರಶ್ನೆ: ದೇಶದಲ್ಲಿ ಸರಕಾರಕ್ಕೆ ರೆವಿನ್ಯೂ ಕಟ್ಟುವುದರಲ್ಲಿ ಮಹಾರಾಷ್ಟ್ರ ಬಿಟ್ಟರೆ ನಂತರದ ಸ್ಥಾನ ಕರ್ನಾಟಕವಿರುವುದು. ಕರ್ನಾಟಕದಲ್ಲಿ ಲೆಕ್ಕ ಹಾಕಿದರೆ ಬೆಂಗಳೂರು ಮುಂಚೂಣಿಯಲ್ಲಿದೆ. ದ್ವಿತೀಯ ಸ್ಥಾನವಿರುವುದು ದಕ್ಷಿಣ ಕನ್ನಡಕ್ಕೆ. ರೆವಿನ್ಯೂ ನೀಡುವುದು ಬೆಂಗಳೂರು ಬಿಟ್ರೆ ಮಂಗಳೂರು. ಇಲ್ಲಿ ಏರ್‌ಪೋರ್ಟ್, ಬಂದರು ಇದೆ. ಇಲ್ಲಿ ನಮ್ಮವರು ಬೆಂಗಳೂರಿಗೆ ಬರಲು ಚೆನ್ನೈಗೆ ಹೋಗುವುದು ಯಾಕೆಂದರೆ ಮಂಗಳೂರು-ಬೆಂಗಳೂರು ರಸ್ತೆ ಸರಿ ಇಲ್ಲ, ಈ ಭಾಗದಲ್ಲಿನ ಕಾಮಗಾರಿಗಳು ನಿಧಾನ ಯಾಕೆ?.
ಮಠಂದೂರು: ಬಿಸಿ ರೋಡ್‌ನಿಂದ ಅಡ್ಡಹೊಳೆ ತನಕದ ಕಾಮಗಾರಿಗೆ ಪ್ರತಿಷ್ಠಿತ ಸಂಸ್ಥೆಯೊಂದು ಟೆಂಡರ್ ಹಾಕಿ ಅರ್ಧದಲ್ಲಿ ಬಿಟ್ಟು ಮತ್ತೆ ಅದು ರೀ-ಎಸ್ಟಿಮೇಟ್ ಆಗಿ, ಡಿಪಿಆರ್ ಆಗಿ, ಪುನಃ ಟೆಂಡರ್ ಆಗಿ ಈಗ ಆಂಧ್ರ ಮೂಲದ ಕೆಎನ್‌ಆರ್ ಕಂಪೆನಿಗೆ ಅನುಷ್ಟಾನ ಮಾಡಿದೆ.ಪ್ರಸ್ತುತ ಕಾಮಗಾರಿಯನ್ನು ಅವರು ಶರವೇಗದಲ್ಲಿ ಮಾಡುತ್ತಿದ್ದಾರೆ ಎಂಬುದು ನನ್ನ ಭಾವನೆ. ಉಪ್ಪಿನಂಗಡಿಯಲ್ಲಿ ಹತ್ತು ವರ್ಷದ ಹಿಂದೆ ಕುಮಾರಧಾರಾ ಸೇತುವೆ ಆಗಬೇಕಿದ್ರೆ ನಾಲ್ಕೈದು ವರ್ಷ ತೆಗೆದುಕೊಂಡಿದ್ದಾರೆ. ಕೆಎನ್‌ಆರ್ ಕಂಪೆನಿಯು ಒಂದೂವರೆ ವರ್ಷದಲ್ಲಿ ಒಂದು ಸೇತುವೆಯನ್ನು ಮುಗಿಸಿರುತ್ತಾರೆ. ಸುಮಾರು ೧೦-೧೫ಕಿ.ಮೀ ಸಿಸಿ ರಸ್ತೆಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಅಂಡರ್ ಪಾಸ್‌ಗಳಾಗಿದೆ, ಸರ್ವಿಸ್ ರಸ್ತೆಗಳಾಗಿದೆ ಕೆಲಸ ವೇಗ ಪಡ್ಕೊಂಡಿದೆ. ನಮ್ಮ ಸಂಸದರು ಮೂರು ತಿಂಗಳಿಗೊಮ್ಮೆ ಪರಿಶೀಲನೆ ಮಾಡುವ ಕಾರ್ಯ ಮಾಡುತ್ತಿರುತ್ತಾರೆ. ಕೆಲವೊಂದು ಕಡೆ ಜಾಗದ ತಕರಾರು ಇದೆ, ಕೋರ್ಟಿಗೆ ಹೋಗಿದ್ದಾರೆ. ಮೆಸ್ಕಾಂ ಕಾರ್ಯ ಆಗಬೇಕಿದೆ, ಪೈಪ್‌ಲೈನ್ ಕಾರ್ಯ ಆಗಬೇಕಿದೆ. ಹೀಗೆ ಕೆಲವು ಕಾನೂನಾತ್ಮಕ ಸಮಸ್ಯೆಗಳು, ಕೆಲವು ಸ್ಥಳೀಯ ಸಮಸ್ಯೆಗಳು, ತಾಂತ್ರಿಕ ಸಮಸ್ಯೆಗಳಿಂದ ತಡ ಆಗಿದೆ. ಸುಮಾರು ೬೮ಕಿ.ಮೀ ರಸ್ತೆ ವೇಗವಾಗಿ ಆಗ್ತಿದೆ. ಜೊತೆಯಲ್ಲಿ ಶಿರಾಡಿ ಘಾಟ್‌ನ ಸುರಂಗಕ್ಕೆ ಎಸ್ಟಿಮೇಟ್ ಆಗಿ ಡಿಪಿಆರ್ ಎಲ್ಲಾ ಆಗಿದೆ. ಪರಿಸರವಾದಿಗಳು ಇದಕ್ಕೆ ಅಪಸ್ವರ ಎತ್ತುವಂತಹ ಸಂಗತಿ ಆಗ್ತಿದೆ. ನಾಳೆ ಅವರು ಎನ್‌ಜಿಟಿಗೆ ಹೋದ್ರೆ ಅದೂ ಕೂಡ ನಿಲ್ಲುವಂತಹ ಕೆಲಸ ಆಗ್ಬಹುದು, ನನಗೆ ಗೊತ್ತಿಲ್ಲ. ನಮ್ಮದು ಆಗ್ಲೇಬೇಕು ಎನ್ನುವ ಚಿಂತನೆಯಿದೆ. ಚೆನ್ನೈಯಿಂದ ಮಂಗಳೂರು ಈ ಎರಡು ಬಂದರುಗಳನ್ನು ಸಂಪರ್ಕ ಮಾಡುವಂತಹ, ರಾಜಧಾನಿಯನ್ನು ಹಾದು ಹೋಗುವಂತಹ ಈ ರಸ್ತೆ ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕ ಮಾಡುವಂತಹ ರಸ್ತೆ ಆಗಬೇಕೆನ್ನುವ ಬೇಡಿಕೆಯಲ್ಲಿದ್ದೇವೆ. ಎಂಆರ್‌ಪಿಎಲ್‌ನಂತಹ ಪ್ರತಿಷ್ಠಿತ ಸಂಸ್ಥೆಯಿಂದ ಪೆಟ್ರೋಲಿಯಂ ಪ್ರಾಡಕ್ಟ್ ಅನ್ನು ಕೊಂಡೊಯ್ಯಬೇಕಾದರೆ ಎನ್‌ಎಚ್ ೨೭೫ ಆಗಬೇಕು, ಬದಲಿ ರಸ್ತೆಗಳಿಲ್ಲ. ಹೀಗಾಗಿ ಕೇಂದ್ರ ಸರಕಾರ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ ಎನ್‌ಎಚ್‌ಐಯವರು ಈ ಕಾಮಗಾರಿಗೆ ವೇಗವನ್ನು ಕೊಡುವಂತಹ ಕೆಲಸ ಮಾಡ್ತಿದ್ದಾರೆ. ಭೌಗೋಳಿಕವಾಗಿ ನಮ್ಮದು ಬಯಲುಸೀಮೆಯಲ್ಲ. ಗುಡ್ಡಗಾಡು ಪ್ರದೇಶ. ಮೈಸೂರಿನ ರಸ್ತೆಗಳಿಗಿಂತ ಮುಂದಿನ ದಿನಗಳಲ್ಲಿ ನಮ್ಮ ರಸ್ತೆ ಬಹಳ ಚೆನ್ನಾಗಿ ಮೂಡಿಬರುತ್ತದೆ.

ಪ್ರಶ್ನೆ: ಪುತ್ತೂರಿನಲ್ಲಿ ಕಟ್ ಕನ್ವರ್ಷನ್ ತುಂಬಾ ಸಮಸ್ಯೆಯಾಗಿದೆ. ಈ ಕಟ್ ಕನ್ವರ್ಷನ್‌ನಿಂದಾಗಿ ಹಲವಾರು ಮಂದಿ ಪುತ್ತೂರು ಬಿಟ್ಟು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ.ಇಂಥ ಸಣ್ಣ ಸಣ್ಣ ಸಮಸ್ಯೆಗಳಿಂದಾಗಿ ಪುತ್ತೂರು ಬೆಳೆಯಲು ಸಾಧ್ಯವಿಲ್ಲ.ನಮ್ಮಲ್ಲಿ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್ ಎನ್ನುವ ಉತ್ತಮ ಟೀಮ್ ಇದೆ.ಅವರಿಗೂ ಇಲ್ಲಿ ಉದ್ಯೋಗ ಕಡಿಮೆ ಆಗಬಹುದು. ಇದಕ್ಕೆ ಪರಿಹಾರವೇನು?.
ಮಠಂದೂರು: ಪುತ್ತೂರಿನ ಪೇಸ್ ಸಂಘಟನೆ ಕಟ್ ಕನ್ವರ್ಷನ್ ಬಗ್ಗೆ ಎರಡ್ಮೂರು ವರ್ಷದ ಹಿಂದೆಯೇ ನಮ್ಮ ಗಮನಕ್ಕೆ ತಂದಿದ್ದರು. ನಮ್ಮ ಡಾಕ್ಯುಮೆಂಟ್ ರೈಟರ‍್ಸ್, ವಕೀಲರು, ನಾಗರಿಕರು ಕೂಡ ಈ ಸಮಸ್ಯೆಯನ್ನು ತಂದಿದ್ದಾರೆ. ಒಟ್ಟಾರೆ ಇದು ರಾಜ್ಯದ ಸಮಸ್ಯೆ. ಅದರಲ್ಲೂ ಭೌಗೋಳಿಕವಾಗಿ ನಮ್ಮ ಕರಾವಳಿ ಪ್ರದೇಶದಲ್ಲಿ. ದ.ಕ, ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು ಈ ಭಾಗದಲ್ಲಿ ಕಟ್ ಕನ್ವರ್ಷನ್ ಸಮಸ್ಯೆ ಇದೆ. ಮತ್ತು ಇದು ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆ ಪರಿಮಿತಿಯಲ್ಲಿ ಇದೆ. ಮಂಗಳೂರಿನಲ್ಲಿ ಇದು ಸಮಸ್ಯೆ ಇಲ್ಲ. ಅಲ್ಲಿ ಏನಾಗಿದೆ ಅಂದರೆ ಅಲ್ಲಿ ಮಹಾಯೋಜನೆ ಮಹಾನಗರಪಾಲಿಕೆಗಳಲ್ಲಿ ಮಂಜೂರಾಗಿದೆ. ನಮ್ಮದು ಮಹಾಯೋಜನೆ ಯಾವುದೇ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಗಳಲ್ಲಿ ಆಗ್ಲಿಲ್ಲ. ಮಹಾಯೋಜನೆ ಮಾಡಿದ್ರೆ ಆ ಮಹಾಯೋಜನೆಯಲ್ಲಿ ಇದನ್ನೆಲ್ಲಾ ಅಳವಡಿಸಬಹುದು. ನಮ್ಮ ಪಟ್ಟಣ ಹೇಗಿರ‍್ಬೇಕು, ಅಲ್ಲಿನ ರಸ್ತೆ ಹೇಗಿರ‍್ಬೇಕು, ಡ್ರೈನೇಜ್ ಸಮಸ್ಯೆ ಸರಿಪಡಿಸಬೇಕು ಈ ಎಲ್ಲಾ ಯೋಜನೆಗಳನ್ನು ಮಹಾಯೋಜನೆಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಪುತ್ತೂರು ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ ಮಹಾಯೋಜನೆಯನ್ನು ತಯಾರಿಸಿ ಈಗ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ. ಅದು ಮಂಜೂರು ಆದರೆ ಈ ಕಟ್ ಕನ್ವರ್ಷನ್ ಸಮಸ್ಯೆ ನಿವಾರಿಸಬಹುದು. ಕಟ್ ಕನ್ವರ್ಷನ್‌ನಲ್ಲಿ -ಮಿಲಿ ಪ್ರಾಪರ್ಟಿಗೆ ರಿಲ್ಯಾಕ್ಸೇಶನ್ ಕೊಡ್ಬೇಕು.ನಾನೂ ಕೂಡ ಸಚಿವರಲ್ಲಿ ಈ ಬಗ್ಗೆ ಮನವಿ ಮಾಡಿದ್ದೇನೆ. ಈ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಗೆ ಪೌರಾಡಳಿತ ಇಲಾಖೆ ಬರುತ್ತದೆ. ಮಹಾನಗರಪಾಲಿಕೆಗೆ ನಗರಾಭಿವೃದ್ಧಿ ಇಲಾಖೆ ಬರುತ್ತದೆ. ಈ ಎರಡು ಇಲಾಖೆಗಳೊಂದಿಗೆ ಸ್ವಲ್ಪ ಹೊಂದಾಣಿಕೆ ಸಮಸ್ಯೆ. ಈ ಕಟ್ ಕನ್ವರ್ಷನ್ ಯಾಕೆ ಹೀಗೆ ಆಯಿತು ಅಂದ್ರೆ ನಗರವನ್ನು ವ್ಯವಸ್ಥಿತವಾಗಿ ಬೆಳೆಸಬೇಕು ಅಂತ. ಇವತ್ತು ರಸ್ತೆಗಳ ಸಮಸ್ಯೆ ಇರಬಹುದು, ಡ್ರೈನೇಜ್ ಸಮಸ್ಯೆ ಇರಬಹುದು ಹೀಗೆ ಬೇರೆ ಬೇರೆ ಸಮಸ್ಯೆ ಇದೆ. ಈ ಕಟ್ ಕನ್ವರ್ಷನ್ ಒಂದಷ್ಟು ಇತಿಮಿತಿಯನ್ನು ಹಾಕಿ, ಕಾನೂನಾತ್ಮಕ ತೊಡಕುಗಳು ಬಂದುವು. ಇದರಿಂದಾಗಿ ತಂದೆಯಿಂದ ಮಕ್ಕಳಿಗೆ -ಮಿಲಿ ಪ್ರಾಪರ್ಟಿ ಹಂಚಬೇಕಾದರೆ, ಮನೆ ಕಟ್ಟಿಸಿಕೊಳ್ಳುವುದಕ್ಕೆ ಸಮಸ್ಯೆಯಾಗಿದೆ. ಕೃಷಿ ಭೂಮಿಯಲ್ಲಿ ಹೆಚ್ಚೇನೂ ಸಮಸ್ಯೆ ಆಗೋದಿಲ್ಲ. ಆದರೆ ಕನ್ವರ್ಷನ್ ಭೂಮಿಯಲ್ಲಿ ಸ್ವಲ್ಪ ಸಮಸ್ಯೆ ಇದೆ. ಖಂಡಿತಾ ಈ ಕಟ್ ಕನ್ವರ್ಷನ್ ಅನ್ನುವುದು ಪುತ್ತೂರಿನ ಜ್ವಲಂತ ಸಮಸ್ಯೆ. ಇದರ ಬಗ್ಗೆ ಪುಡಾ, ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ ಮತ್ತು ನಾನು ಇದಕ್ಕೆ ಪರಿಹಾರವನ್ನು ಕಂಡುಕೊಳ್ತೇವೆ. ತಕ್ಷಣಕ್ಕೆ ನಾವು ಇದಕ್ಕೆ ಮಧ್ಯಂತರ ಪರಿಹಾರವನ್ನು ಕಂಡುಕೊಳ್ಳಲು ನಾನು, ಮೂಡಬಿದ್ರೆ, ಬಂಟ್ವಾಳ ಶಾಸಕರು ಸೇರಿ ಸಚಿವರಲ್ಲಿ ಮಾತಾಡಿದ್ದೇವೆ. ಅಽವೇಶನದಲ್ಲಿ ಈ ಬಗ್ಗೆ ಮಾತಾನಾಡಿದ್ದೇನೆ, ಆದರೆ ಅವರು ಮಹಾಯೋಜನೆ ಮಾಡಿದ್ರೆ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದ್ದಾರೆ.‌

ಪ್ರಶ್ನೆ: ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ಯಾಕಿಲ್ಲ. ಮಂಗಳೂರಿನಲ್ಲಿ ಇದೆ. ಮುಂದೆ ಜಿಲ್ಲಾ ಕೇಂದ್ರವಾದಾಗ ಇದು ನಮಗೆ ಹಿರಿಮೆಯಾಗುತ್ತದೆ. ಇದರ ಬಗ್ಗೆ ಏನಾದರೂ ಮಾಹಿತಿ ಇದೆಯಾ?.
ಮಠಂದೂರು: ನಮ್ಮ ಶಾಸಕರ ಬೇರೆ ಬೇರೆ ಸಮಿತಿಗಳಿವೆ.ಅದರ ಎಸ್ಟಿಮೇಟ್ ಸಮಿತಿಯಲ್ಲಿ ನಾನೂ ಒಬ್ಬ. ಬೀದರ್ ಮೆಡಿಕಲ್ ಕಾಲೇಜು, ಗುಲ್ಬರ್ಗ ಮೆಡಿಕಲ್ ಕಾಲೇಜು, ಹಾಸನ ಮೆಡಿಕಲ್ ಕಾಲೇಜ್‌ಗೆ ಭೇಟಿ ಮಾಡೋದಿಕ್ಕಿದೆ. ಆಗ ಕೇಂದ್ರ ಸರಕಾರ ಒಂದು ಯೋಜನೆಯನ್ನು ತಂದಿತ್ತು. ಯಾವ್ಯಾವ ಜಿಲ್ಲೆಯಲ್ಲಿ ಯಾವ ಮೆಡಿಕಲ್ ಕಾಲೇಜು ಇಲ್ವೋ ಅಲ್ಲಿ ಕೇಂದ್ರ ಸರಕಾರ ನೇರವಾಗಿ ಅನುದಾನ ನೀಡಿ ಸ್ಥಾಪನೆ ಮಾಡೋದು.ಆಮೇಲೆ ಮತ್ತೆ ಸರಕಾರ ಒಂದು ಯೋಜನೆ ತಂದಿತು. ಮೆಡಿಕಲ್ ಕಾಲೇಜು ಇಲ್ಲದಿದ್ದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ೫೦:೫೦ ಅನುಪಾತದಲ್ಲಿ ಮಾಡಬಹುದು ಎಂದು. ಆಮೇಲೆ ಕೇಂದ್ರ ಸರಕಾರ ಅನುದಾನ ಕೊಡುವುದನ್ನು ನಿಲ್ಲಿಸಿತು. ರಾಜ್ಯ ಸರಕಾರ ಯಾವುದೇ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲದಿದ್ದರೆ ನಾವು ಅನುದಾನ ಮಂಜೂರು ಮಾಡುತ್ತೇವೆ ಎನ್ನುವ ಪ್ರಸ್ತಾವ ಇಟ್ಟಿತು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೨ ಮೆಡಿಕಲ್ ಕಾಲೇಜು ಇದೆ. ಸರಕಾರಿ ಮೆಡಿಕಲ್ ಕಾಲೇಜು ಇಲ್ಲ. ಪುತ್ತೂರು ಗ್ರಾಮಾಂತರ ಅಂತ ಹೇಳಿದ್ರೆ ಅವರು ಸುಳ್ಯದ ಮೆಡಿಕಲ್ ಕಾಲೇಜನ್ನು ಉಲ್ಲೇಖ ಮಾಡಿದ್ರು -ಮಿಲಿ ಹೆಲ್ತ್‌ಕೇರ್ ಕಮಿಷನರು.ಅದು ಗ್ರಾಮಾಂತರದಲ್ಲಿದೆ, ನಿಮಗೆ ಅದು ಸಾಕಾಗ್ತದೆ ಅಂದ್ರು. ಆಗ ಡಿಎಚ್‌ಒರವರ ಸಲಹೆಯಂತೆ ಮೊದಲು ನೀವು ಮೆಡಿಕಲ್ ಆಸ್ಪತ್ರೆ ಮಾಡಿ, ಆವಾಗ ಕೇಳೋದಿಕ್ಕೆ ಅರ್ಹತೆ ಬರುತ್ತದೆ. ಮೊದಲು ಪುತ್ತೂರಿನ ೧೦೦ ಬೆಡ್‌ನ ಆಸ್ಪತ್ರೆಯನ್ನು ೩೦೦ ಬೆಡ್‌ಗಳ ಆಸ್ಪತ್ರೆ ಮಾಡಿ ಅಂತ ಸಲಹೆ ಕೊಟ್ರು. ಇದು ಸರಿ ಅಂತ ಕಂಡಿತು ನನಗೆ. ಇದಕ್ಕೆ ಜಾಗ ಬೇಕಲ್ಲ ಅಂದಾಗ ಪುತ್ತೂರಿನಲ್ಲಿನ ತಾಲೂಕು ಕಛೇರಿ, ಸಬ್ ರಿಜಿಸ್ಟ್ರಾರ್ ಕಛೇರಿ, ಸಬ್ ಜೈಲು, ಪಿಡಬ್ಲ್ಯೂಡಿಯ ಸ್ವಲ್ಪ ಜಾಗ, ಅಂಬೇಡ್ಕರ್ ಭವನದ ಜಾಗ ಹೀಗೆ ಎಲ್ಲವನ್ನೂ ಸೇರಿಸಿಕೊಂಡು ಸುಮಾರು ೫ ಎಕ್ರೆಯಷ್ಟು ಜಾಗ ತಹಶೀಲ್ದಾರ್‌ರವರ ಗಮನಕ್ಕೆ ತಂದು ಆಸ್ಪತ್ರೆಯ ಹೆಸರಿನಲ್ಲಿ ಆರ್‌ಟಿಸಿ ಮಾಡಿ ಇಟ್ಟಿದ್ದೇವೆ.೩೦೦ ಬೆಡ್‌ನ ಆಸ್ಪತ್ರೆಗೆ ರೂ.೩೫೦ ಕೋಟಿಯ ಪ್ಲ್ಯಾನಿಂಗ್ ಎಸ್ಟಿಮೇಟ್ ಮಾಡಿ ಅದನ್ನೀಗ ಪ್ರಿನ್ಸಿಪಾಲ್ ಸೆಕ್ರೆಟರಿ ಮುಖಾಂತರ ಸರಕಾರಕ್ಕೆ ಕಳುಹಿಸುವ ಯೋಜನೆಯನ್ನು ಮಾಡಿದ್ದೇವೆ. ಆಗ ಆಸ್ಪತ್ರೆ ಆದ್ರೆ ನಮಗೆ ಮೆಡಿಕಲ್ ಕಾಲೇಜಿಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದು.ಭೌಗೋಳಿಕವಾಗಿ ಅದಕ್ಕೆ ಬೇಕಾದ ಫೀಡ್‌ಬ್ಯಾಕ್ ಕೊಟ್ಟಿದ್ದೇವೆ. ನಮ್ಮ ಕಡೆಯಿಂದ ಏನು ಬೇಕು ಅಂತ ಅಂಕಿ-ಅಂಶ ಸಮೇತ ಮಾಡಿಕೊಟ್ಟಿದ್ದೇವೆ.

ಪ್ರಶ್ನೆ: ಪುತ್ತೂರನ್ನು ಬೇರೆಯೇ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು. ಅದರಂತೆ ಪ್ರವಾಸೋದ್ಯಮಕ್ಕೂ ಪುತ್ತೂರನ್ನು ಸಜ್ಜುಗೊಳಿಸಬೇಕು. ಪ್ರಸ್ತುತ ಹನುಮಗಿರಿ, ಬೀರಮಲೆ ಇದೆ. ಈ ಬಗ್ಗೆ ಅನಿಸಿಕೆ ಏನು ಸರ್?.
ಮಠಂದೂರು: ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡಬೇಕು ಅಂತ ಶ್ರೀನಿವಾಸ ಪೂಜಾರಿಯವರು ಉಸ್ತುವಾರಿ ಸಚಿವರಾಗಿದ್ದಾಗ ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ಒಂದು ಕ್ರಿಯಾ ಯೋಜನೆಯನ್ನು ತಂದೆವು. ರೂ.೧೦ ಕೋಟಿ ಹಣವನ್ನು ರೋಪ್-ವೇಗೆ ಎಂದು ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದೆವು. ಆದರೆ ಆ ಪ್ರಸ್ತಾವನೆಯು ಕೇಂದ್ರದಲ್ಲಿ ಮಂಜೂರು ಆಗ್ಲಿಲ್ಲ.ಬೀರಮಲೆಯಲ್ಲಿ ಮಕ್ಕಳ ಪಾರ್ಕ್ ಮಾಡಬಹುದು.ಯಾಕೆಂದರೆ ಪಕ್ಕದಲ್ಲಿ ಬಾಲವನ ಇದೆ ಅಂತ ಯೋಜನೆ ಮಾಡಿಕೊಂಡು ಕನ್ನಡ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಿಗೆ ಸುಮಾರು ರೂ.೫ ಕೋಟಿಯ ಬೇಡಿಕೆಯನ್ನು ಕೊಟ್ಟಿದ್ದೆವು. ಅದು ಪರಿಶೀಲನೆಯ ಹಂತದಲ್ಲಿದೆ. ಅದರ ಜೊತೆಯಲ್ಲಿ ಶಿವರಾಮ ಕಾರಂತ ಬಾಲವನದಲ್ಲಿ ಐದು ಎಕರೆ ಜಾಗವಿದೆ. ಈಗಾಗಲೇ ಸರಕಾರ ಸುಮಾರು ಒಂದೂವರೆ ಕೋಟಿಯನ್ನು ಕೊಟ್ಟು ಅಲ್ಲಿ ನಿರಂತರ ಸಾಂಸ್ಕೃತಿಕ ಚಟುವಟಿಕೆ ಆಗಬೇಕೂಂತ ಹೇಳಿ ಕಾರಂತರ ಹೆಸರಿನಲ್ಲಿ ಭವನವನ್ನು ಕಟ್ಟಿದ್ದೇವೆ.ಇನ್ನೊಂದು ಅಲ್ಲಿ ಓಪನ್ ಥಿಯೇಟರ್ ಮಾಡಬೇಕು ಅಂತ ಕಟ್ಟಡವನ್ನು ಕಟ್ಟಿದ್ದೇವೆ. ಇಲ್ಲಿ ಕೂಡ ಈ ಜಾಗವನ್ನು ಪ್ರವಾಸಿ ಕೇಂದ್ರ ಮಾಡಬೇಕೂಂತ ಇನ್ನೂ ಎರಡು ಎಕ್ರೆ ಜಾಗ ಅಲ್ಲಿ ಪಕ್ಕದಲ್ಲಿ ಸರಕಾರಿ ಜಾಗವನ್ನು ಸೇರಿಸಿ ಅದನ್ನು ಕೂಡ ಕಾರಂತರ ಹೆಸರಿನಲ್ಲಿ ಕಲೆ, ಸಾಹಿತ್ಯ, ಯಕ್ಷಗಾನ ಇದಕ್ಕೆ ಪೂರಕವಾಗಿ ಬಿಡಿಸಬೇಕು ಎನ್ನುವಂತೆ ಚಟುವಟಿಕೆಗಳು ಆಗ್ತಿವೆ.ಇನ್ನೊಂದು, ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ ಬೇಂದ್ರ್‌ತೀರ್ಥ. ಈಗಲೂ ಬಿಸಿನೀರು ಇದೆ. ರೋಗ ಗುಣವಾಗುತ್ತದೆ ಎಂಬ ನಂಬಿಕೆಯೂ ಇದೆ. ಅದರ ಪಕ್ಕದಲ್ಲಿ ರೈತರೋರ್ವರು ಬೋರ್‌ವೆಲ್ ತೆಗೆದಿದ್ದಾರೆ. ಅವರು ಬೋರ್‌ವೆಲ್ ಪಂಪ್ ಆಪರೇಟ್ ಮಾಡಿದಾಗ ಇಲ್ಲಿಯ ಬಿಸಿನೀರು ನಿಂತು ಹೋಗುತ್ತಿರುವುದು ಸಮಸ್ಯೆ ಆಗಿದೆ. ಅಲ್ಲಿ ಸ್ನಾನಗೃಹ ಬಾಕಿ ಎಲ್ಲಾ ವ್ಯವಸ್ಥೆಯನ್ನು ಮಾಡಿ ನಮ್ಮ ಮಕ್ಕಳು ಬಿಸಿನೀರಿನ ಬುಗ್ಗೆಯನ್ನು ವೀಕ್ಷಣೆ ಮಾಡುವ ಬಗ್ಗೆ ಯೋಜನೆಯನ್ನು ಹಾಕಿಕೊಂಡಿದ್ದೇನೆ.ಹನುಮಗಿರಿ ಪಕ್ಕದಲ್ಲಿ ಗೆಜ್ಜೆಗಿರಿ ಇದೆ. ಎಲ್ಲವನ್ನೂ ಜೋಡಿಸಿಕೊಂಡು ಒಂದು ಪ್ರವಾಸಿ ಕೇಂದ್ರ ಮಾಡಬಹುದಾ ಅಂತ ಹೇಳಿ ಸಂಕಪಾಲ ಬೆಟ್ಟ ಅಭಿವೃದ್ಧಿಗೆಂದು ರೂ.ಐದು ಕೋಟಿಯ ಕ್ರೀಯಾ ಯೋಜನೆಯನ್ನು ಮಾಡಿದ್ದೇನೆ.ಸುಮಾರು ಒಂದೂವರೆ ಕೋಟಿ ಹಣವನ್ನು ಸರಕಾರ ಅದಕ್ಕೆ ಬಿಡುಗಡೆ ಮಾಡಿ ಅಲ್ಲಿ ಕೋಟಿ-ಚೆನ್ನಯರು ಹುಟ್ಟಿದಂತಹ ಜಾಗದಲ್ಲಿ ಸಂಕಪಾಲ ಬೆಟ್ಟವಿದೆ, ಆ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಮಾಡುವುದು, ಅಲ್ಲಿ ಸರೋವರವನ್ನು ನಿರ್ಮಾಣ ಮಾಡುವಂತಹುದು, ಸಭಾಭವನ ನಿರ್ಮಾಣ ಕೆಲಸ ಕೂಡ ಮಾಡಿದ್ದೇವೆ. ಜೊತೆಯಲ್ಲಿ ನಮ್ಮದು ಟೆಂಪಲ್ ಟೂರಿಸಂಗೆ ಆದ್ಯತೆ ಕೊಡಬೇಕು ಅಂತೇಳಿ ‘ಎ’ ಗ್ರೇಡ್ ದೇವಸ್ಥಾನಗಳಾದ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರಿಗೆ ಯಾತ್ರಿಕ್ ನಿವಾಸ್ ಕಟ್ಟಬೇಕು.ಉಪ್ಪಿನಂಗಡಿಯ ಸಂಗಮ ಕ್ಷೇತ್ರಕ್ಕೆ ರೂ.೭೦ ಕೋಟಿಯ ವೆಂಟೆಡ್ ಡ್ಯಾಂ ಕಟ್ಟಿಸಿ ನೀರನ್ನು ನಿಲ್ಲಿಸಿ ಅಲ್ಲಿ ಬೋಟಿಂಗ್ ವ್ಯವಸ್ಥೆ ಬೇಸಿಗೆಯಲ್ಲಿ ಮಾಡ್ಬೇಕು ಎನ್ನುವ ಪ್ರಸ್ತಾವನೆ ಇದೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಎಂಟು ಕೋಟಿಯಷ್ಟು ಹಣ ಪ್ರವಾಸೋದ್ಯಮಕ್ಕೆ ಖರ್ಚು ಮಾಡುವ ಕೆಲಸ ಮಾಡಿದ್ದೇವೆ.

ಪ್ರಶ್ನೆ: ಕಬಕ ಗ್ರಾಮದ ಕಿದುವಡ್ಕ ಕಾಲನಿ ಸಂಪರ್ಕ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಯಾಕೆ?.
ಮಠಂದೂರು: ನೀರಿನ ಸಮಸ್ಯೆಗೆ ಪಂಚಾಯತ್ ವ್ಯವಸ್ಥೆಯಲ್ಲಿ ಸಾಕಷ್ಟು ಅನುದಾನಗಳಿವೆ.ನಗರದಲ್ಲಿ ಏನು ೫೫ಲೀ. ನೀರು ಕೊಡಬೇಕು ಎನ್ನುವ ಯೋಜನೆ ಇದೆಯೋ ಹಾಗೆಯೇ ಈಗ ಜಲಸಿರಿ ಯೋಜನೆಯಲ್ಲಿ ಕೇಂದ್ರ ಸರಕಾರ ಪ್ರತಿ ಪಂಚಾಯತ್‌ನಲ್ಲಿ ಜೆಜೆಎಂ ಯೋಜನೆಯನ್ನು ಅನುಷ್ಟಾನಕ್ಕೆ ತಂದಿದೆ. ಕಬಕ ಪಂಚಾಯತ್‌ಗೆ ನಾನು ರೂ.೨ ಕೋಟಿಯಷ್ಟು ಕುಡಿಯುವ ನೀರಿಗಾಗಿ ಕೊಟ್ಟಿರಬಹುದು. ಈಗಾಗಲೇ ಸರ್ವೆ ಮಾಡಿದ್ದಾರೆ, ಎಲ್ಲೆಲ್ಲಿ ನೀರು ಯಾರ‍್ಯಾರಿಗೆ ಕೊಡಬೇಕೂಂತ ಪಂಚಾಯತ್‌ರವರು ಸರ್ವೆ ಮಾಡಿ, ಅಲ್ಲಿ ನೀರಿನ ಲಭ್ಯತೆ ನೋಡಿ ಅಲ್ಲಿ ಈಗಾಗಲೇ ಓವರ್‌ಹೆಡ್ ಟಾಂಕಿ ನಿರ್ಮಾಣ ಮಾಡಿದ್ದಾರೆ. ಬೋರ್‌ವೆಲ್ ಕೊರೆದಿದ್ದಾರೆ. ಕೆಲವು ಕಡೆ ಪಂಪುಗಳನ್ನು ಅಳವಡಿಸಿದ್ದಾರೆ. ಕೆಲವು ಕಡೆ ಪಂಪುಗಳನ್ನು, ಓವರ್‌ಹೆಡ್ ಟಾಂಕಿಗಳನ್ನು ಅಳವಡಿಸಿಲ್ಲ. ಜೆಜೆಎಂ ಯೋಜನೆ ಪ್ರಥಮ, ದ್ವಿತೀಯ, ತೃತೀಯ ಹಂತ ಹೇಳಿ ಮೂರು ಹಂತಗಳಲ್ಲಿ ತೆಗೆದುಕೊಂಡಿದ್ದಾರೆ. ಒಂದಷ್ಟು ಸಮಸ್ಯೆಗಳು ಬಂದಿರಬಹುದು. ಸ್ಥಳೀಯ ಪಂಚಾಯತ್ ಆಡಳಿತ, ಸ್ಥಳೀಯ ಪಿಡಿಒ, ಇಒ ಹತ್ತಿರ ಮಾತನಾಡಿದ್ದೇವೆ.ಬೋರ್‌ವೆಲ್‌ಗಳಾಗಿದೆ, ಇನ್ನು ಅವುಗಳನ್ನು ಜೆಜೆಎಂನಲ್ಲಿ ಪೂರ್ತಿಗೊಳಿಸುತ್ತೇವೆ ಅಂತ ಮಾತು ಕೊಟ್ಟಿದ್ದಾರೆ. ಇನ್ನು ಕಿದುವಡ್ಕ ಭಾಗ ಅದು ಕಬಕದಿಂದ ವಿದ್ಯಾಪುರ ಆಗಿ ಮುರ ಭಾಗಕ್ಕೆ ಬರುವಂತಹ ರಸ್ತೆ. ಅಲ್ಲಿ ಏನಾಗಿದೆ ಅಂದರೆ ಒಂದು ತೋಡು, ಬಳಿಕ ಅಡಿಕೆ ತೋಟವಿತ್ತು, ರೆಸಿಡೆನ್ಸಿಯಲ್ ಮನೆಗಳಿದ್ದವು.ಅದನ್ನು ಹಾದು ಬರ್ಬೇಕಿತ್ತು. ಜೊತೆಗೆ ಜಾಗದ ಸಮಸ್ಯೆ ಇತ್ತು. ಎಚ್‌ಟಿ ಲೈನ್ ಸಮಸ್ಯೆ ಇವೆಲ್ಲವನ್ನೂ ನಾನೇ ಬಗೆಹರಿಸಿದ್ದೇನೆ. ಇದಕ್ಕೆ ಸುಮಾರು ೬೦ ಲಕ್ಷ ಹಣವನ್ನು ಕೊಟ್ಟಿದ್ದೇನೆ. ಈಗ ಅವರು ಮೂರ‍್ನಾಲ್ಕು ಕಿ.ಮೀ ಸುತ್ತು ಬಂದು ಬರಬೇಕಾಗುತ್ತದೆ. ಈ ರಸ್ತೆ ಆದ್ರೆ ಕೇವಲ ಒಂದೇ ಕಿ.ಮೀ ಸಾಕು. ಆ ಭಾಗದಲ್ಲಿ ಬ್ರಿಡ್ಜ್ ಕೆಲಸ ಆರಂಭ ಮಾಡಿದಾಗ ಮಳೆ ಬಂದು ಬ್ರಿಡ್ಜ್ ಕೆಲಸ ನಿಂತೋಯ್ತು. ಮಳೆ ಕೊನೆಯವರೆಗೂ ಬಂದ ಕಾರಣ ಬ್ರಿಡ್ಜ್ ಕೆಲಸ ಮಾಡಲು ಸಾಧ್ಯವಾಗಿರದಿರುವುದೇ ಸಮಸ್ಯೆಯಾಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಮಾರ್ಚ್, ಏಪ್ರಿಲ್‌ನಲ್ಲಿ ಕಾಮಗಾರಿ ಮುಗಿಸುತ್ತೇನೆ.

ಪ್ರಶ್ನೆ: ಕಸದಿಂದ ರಸ ಯೋಜನೆ ಬಗ್ಗೆ ನಗರಸಭೆ ಹಾಗೂ ರೋಟರಿ ಕ್ಲಬ್ ಸ್ವಚ್ಛ ಪುತ್ತೂರು ಟ್ರಸ್ಟ್‌ನಿಂದ ಉತ್ತಮ ಕೆಲಸ ನಡೀತಿದೆ. ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನಿಂದ ಬಹಳ ದೊಡ್ಡ ಯೋಜನೆ. ಭಾರತದಲ್ಲಿಯೇ ಇದು ಪ್ರಥಮ. ಕಸವನ್ನು ಸಂಗ್ರಹಿಸಿ, ಅದನ್ನ ಡಂಪಿಂಗ್ ಯಾರ್ಡ್‌ನಲ್ಲಿ ವಿಂಗಡಣೆ ಮಾಡುವಂತಹುದು ಆಗ್ತಾ ಇದೆ. ಇದರೊಂದಿಗೆ ಕಸಗೊಬ್ಬರ ಕೊಡುವಂತಹ ವ್ಯವಸ್ಥೆ ಜನರಿಗೆ ಗೊತ್ತಾಗಿದೆ. ಈ ಕಸಗೊಬ್ಬರದ ಬಗ್ಗೆ ಸುದ್ದಿ ಪತ್ರಿಕೆ ಕೂಡ ಟೆರೇಸ್ ಗಾರ್ಡನ್ ಮೂಲಕ ಕೆಲಸ ಮಾಡುತ್ತಿದೆ. ಅಂತವರಿಗೆ ಈ ಕಸಗೊಬ್ಬರದ ಅವಶ್ಯಕತೆ ಇದೆ. ಇದರ ಬಗ್ಗೆ ಏನಾದರೂ ತೊಂದರೆಗಳಿದೆಯಾ?.
ಮಠಂದೂರು: ಪುತ್ತೂರು ರೋಟರಿಗೆ ಪ್ರಥಮವಾಗಿ ಅಭಿನಂದನೆ. ಪುತ್ತೂರು ನಗರಸಭೆ ಚುನಾವಣೆ ಆಗುವಂತಹ ಸಂದರ್ಭದಲ್ಲಿ ನಾವು ‘ಸ್ವಚ್ಛ ಪುತ್ತೂರು-ಸುಂದರ ಪುತ್ತೂರು’ ಎಂಬ ಪರಿಕಲ್ಪನೆಯನ್ನು ರೆಡಿ ಮಾಡಿದ್ದೆವು. ಚುನಾವಣಾ ಆಯೋಗದಲ್ಲಿ ಸ್ವಚ್ಛತೆಯ ಬಗ್ಗೆ ನಾವು ೩೬ನೇ ಸ್ಥಾನದಲ್ಲಿದ್ದೆವು. ಎರಡು ವರ್ಷದ ಹಿಂದೆ ಆರನೇ ಸ್ಥಾನಕ್ಕೆ ಬಂದೆವು. ಕಳೆದ ವರ್ಷಕ್ಕೆ ಮೂರನೇ ಸ್ಥಾನಕ್ಕೆ ಬಂದಿದ್ದೇವೆ. ಸ್ವಚ್ಛ ಪುತ್ತೂರು ಆಗಲು ಕಾರಣ ನಮ್ಮ ನಾಗರಿಕರು ಹಾಗೂ ರೋಟರಿ ಸಂಘ-ಸಂಸ್ಥೆಗಳು. ಪುತ್ತೂರಿನಲ್ಲಿ ಅಂಕಿ-ಸಂಖ್ಯೆ ಪ್ರಕಾರ ೧೫ ಸಾವಿರ ಮನೆಗಳಿವೆ. ಕಸ ವಿಲೇವಾರಿ ಮಾಡಲು ಸುಲಭವಾಗಲೆಂದು ಮನೆಮನೆಗೆ ಬಕೆಟ್ ವಿತರಣೆ ಮಾಡಿದೆವು. ಅದರಲ್ಲಿ ಒಣ ಕಸ, ಹಸಿ ಕಸ ಬೇರೆ ಬೇರೆ ಮಾಡುವಂತಹುದು. ಪ್ರತಿ ಮನೆಯವರು ಇದನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ.ನಾನು ಶಾಸಕನಾದ ಸಂದರ್ಭದಲ್ಲಿ ಇಲ್ಲಿ ನಾಲ್ಕು ಕಸ ಸಂಗ್ರಹ ವಾಹನಗಳಿದ್ದವು.ಈಗ ೧೫ ವಾಹನವಿದೆ. ಬೆಳಿಗ್ಗೆ ಸುಪ್ರಭಾತ ಹಾಕುವವರು ಅವರೇ.ನಮ್ಮ ಪೌರ ಕಾರ್ಮಿಕರ ಶ್ರಮ ಮೆಚ್ಚಬೇಕಾದ್ದೇ. ಇವತ್ತು ಪುತ್ತೂರು ರಾಜ್ಯದಲ್ಲಿ ಮಾದರಿ ಆಗಬೇಕಾದರೆ ಪೌರ ಕಾರ್ಮಿಕರ ಶ್ರಮವೂ ಇದೆ.ಕಸದಿಂದ ರಸ ಯೋಜನೆಯಡಿಯಲ್ಲಿ ಡಂಪಿಂಗ್ ಯಾರ್ಡ್‌ನಲ್ಲಿ ರೋಟರಿಯ ರೂ.೩ ಕೋಟಿಯ ಪ್ರಾಜೆಕ್ಟ್ ರೆಡಿಯಾಗಿ ಅದಕ್ಕೆ ಪರಿಸರ ಇಲಾಖೆಯ ಅನುಮತಿಯನ್ನು ಕಾಯ್ತಾ ಇದ್ದೇವೆ.ಪರಿಸರ ಇಲಾಖೆಗೆ ನಾನು ಮತ್ತು ನಗರಸಭೆ ಅಧ್ಯಕ್ಷರು ಎರಡ್ಮೂರು ಸಲ ಹೋಗಿ ಅದಕ್ಕೆ ಅಗತ್ಯ ಇಲ್ಲ.ಅದು ಇಕೋ -ಂಡ್ಲಿ ಅಂತ ಮಾನ್ಯತೆ ಆಗಿದೆ, ಅದಕ್ಕೆ ಬೇಡ ಅಂದ್ರು. ಆದ್ರೂ ನಾಳೆ ಏನಾದ್ರೂ ಗ್ಯಾಸಲ್ಲಿ ವ್ಯತ್ಯಾಸವಾದಾಗ ಬೇಕು ಲೈಸೆನ್ಸ್ ಅಂತ ಹೇಳಿ ಅದಕ್ಕೆ ಪ್ರಯತ್ನಗಳನ್ನು ಮಾಡಿದ್ದೇವೆ.ಅದು ಸಿಗುವಂತಹ ಹಂತದಲ್ಲಿದೆ. ಅದು ಆದ್ರೆ ರಾಜ್ಯದಲ್ಲಿ ಪ್ರಥಮ ಗ್ಯಾಸ್ ಉತ್ಪಾದನೆ ಮಾಡುವ ನಗರಸಭೆ ಪುತ್ತೂರು ಎಂಬ ಹೆಸರನ್ನು ಗಳಿಸುತ್ತದೆ.ಇನ್ನು ಕಸಗೊಬ್ಬರದ ಬಗ್ಗೆ ಕಸವನ್ನು ಗೊಬ್ಬರವಾಗಿ ಮತ್ತೆ ಬಳಸಬಹುದು. ಹಸಿಕಸವನ್ನು ಕಾಂಪೋಸ್ಟ್ ಮಾಡಿ ಗೊಬ್ಬರವನ್ನಾಗಿ ಮರುಬಳಕೆ ಮಾಡಬಹುದು.

ಪ್ರಶ್ನೆ: ಎಂಟಿ ರಸ್ತೆಯನ್ನು ಟು-ವೇ ಮಾಡಬಹುದಾ. ಬಸ್ಸ್‌ಸ್ಟ್ಯಾಂಡಿಗೆ ಬರಲು ಸುಲಭವಾಗುತ್ತದೆ ಅಲ್ವ ಎಂಬುದು ಜನರ ಅನಿಸಿಕೆ?
ಮಠಂದೂರು:ಟ್ರಾಫಿಕ್ ವ್ಯವಸ್ಥೆ ಬಗ್ಗೆ ಪೊಲೀಸ್ ಹಾಗೂ ನಗರಸಭೆಯಲ್ಲಿ ಮಾತಾಡಿ ಅದರ ಸಾಧಕ-ಬಾಧಕಗಳ ಬಗ್ಗೆ ತಿಳಿಯಬೇಕಾಗುತ್ತದೆ.

ಪ್ರಶ್ನೆ: ಪೋಳ್ಯ ದೇವಸ್ಥಾನ, ಆರ್ಯಾಪು, ಕ್ಯಾಂಪ್ಕೋ ಬಳಿ ಕಸವನ್ನು ತೊಟ್ಟೆಯಲ್ಲಿ ಕಟ್ಟಿ ಅಲ್ಲಿ ಬಿಸಾಡುವುದು.ಕೆಲವೊಂದು ಕಡೆ ಕಸ ಬಿಸಾಡಿದವರಿಗೆ ಗೂಸಾ ಸಿಕ್ಕಿದ್ದುಂಟು, ದಂಡ ತೆತ್ತಿದ್ದು ಉಂಟು. ಆದರೆ ನಮ್ಮ ಪರಿಸರದ ಸ್ವಚ್ಛತೆಯನ್ನು ಅರಿಯುವವರು ಯಾರು?. ಇದನ್ನು ಯಾರು ಸರಿ ಮಾಡುವುದು?.
ಮಠಂದೂರು: ಇವತ್ತು ಪ್ರತಿ ಗ್ರಾಮ ಪಂಚಾಯತ್‌ಗೆ ರೂ.೨೦ ಲಕ್ಷ ಅನುದಾನವನ್ನು ಸ್ವಚ್ಛತೆಗೆ ಕೊಡುತ್ತಾರೆ. ಒಂದು ಸ್ವಚ್ಛ ವಾಹಿನಿ ವಾಹನವನ್ನು ಕೊಟ್ಟಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಘಟಕವನ್ನು ಸರಕಾರ ಕೊಟ್ಟಿದೆ. ಅದೇ ರೀತಿ ಪುತ್ತೂರು ಸೇರಿದಂತೆ ಮೂರ‍್ನಾಲ್ಕು ತಾಲೂಕಿಗೆ ರೂ.೩ ಕೋಟಿಯ ಎಂಆರ್‌ಎಫ್ ಘಟಕ ಕೊಟ್ಟಿದೆ. ಇದು ಸುಗಮ ತ್ಯಾಜ್ಯ ವಿಲೇವಾರಿಗೆ ಇರುವಂತಹ ಒಂದು ವ್ಯವಸ್ಥೆ. ಇವತ್ತು ನಗರಸಭೆಯಲ್ಲಿ ಅಷ್ಟೊಂದು ಕಸ ಬೀಳುವುದಿಲ್ಲ ಆದರೆ ಗ್ರಾಮಾಂತರ ಪ್ರದೇಶವಾದ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಕಸ ಬೀಳುತ್ತಿದೆ ಎಂಬ ಕುತೂಹಲ ನನಗಿದೆ.ಈ ಬಗ್ಗೆ ಪಿಡಿಒಗಳನ್ನು ತರಾಟೆಗೆ ತೆಗೊಂಡಿದ್ದಿದೆ ಮಾತ್ರವಲ್ಲ ಮೆಮೋ ನೀಡಿದ್ದೂ ಇದೆ.ಅಲ್ಲದೆ ಈ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೂ ವಾರ್ನಿಂಗ್ ಕೊಟ್ಟು ನಾಳೆ ಏನಾದರೂ ಅನಾಹುತ ಸಂಭವಿಸಿದರೆ ನೀವೇ ಹೊಣೆ ಅಂತ ಹೇಳಿದ್ದೇನೆ. ಇದನ್ನು ನಿಯಂತ್ರಣ ಮಾಡಲು ಸಾಧ್ಯವಿದೆ.‌

ಪ್ರಶ್ನೆ: ಈಶ್ವರಮಂಗಲದಲ್ಲಿ ವಾಸವಾಗಿರುವ ಮುಖಾರಿ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಸಚಿವರಲ್ಲಿ ಮನವಿ ಕೊಟ್ಟಿದ್ದಾರೆ. ಈ ಬಗ್ಗೆ?.
ಮಠಂದೂರು: ಮುಖಾರಿ ಜನಾಂಗ ಎನ್ನುವುದು ಮೈಕ್ರೋ ಕಮ್ಯೂನಿಟಿ.ಭಾರೀ ಕಡಿಮೆ ಸಂಖ್ಯೆಯಲ್ಲಿ ಇರುವಂತಹ ಸಮುದಾಯ.ಕರ್ನಾಟಕ-ಕಾಸರಗೋಡು ಗಡಿ ಭಾಗದಲ್ಲಿ ಇರುವಂತಹ ಸಮುದಾಯ.ಅವರ ಸಂಖ್ಯೆ ಸುಮಾರು ೭೦೦ರಷ್ಟೇ ಇದೆ.ನಮ್ಮದು ಯಾವುದೇ ಜಾತಿಯ ಲಿಸ್ಟ್‌ನಲ್ಲಿಲ್ಲ,ಯಾವುದೇ ಸಮುದಾಯಕ್ಕೆ ಸೇರಿಸ್ಲಿಲ್ಲ, ರಾಜ್ಯ ಲಿಸ್ಟ್‌ನಲ್ಲಿ ಇಲ್ಲ.ಅದಕ್ಕೆ ನಾವು ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿಯನ್ನು ಅವರಿಂದ ಕೊಟ್ಟು ಹಿಂದುಳಿದ ವರ್ಗಗಳ ಆಯೋಗವು ಆ ಒಂದು ಕುಲಶಾಸ ಅಧ್ಯಯನ ಮಾಡಿ ಅವರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿಕೊಳ್ಳಬಹುದಾ ಅಂತ ಹೇಳಿ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಸಮಿತಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀನಿವಾಸ್ ಪೂಜಾರಿಯವರಿಗೆ ಮನವಿಯನ್ನು ಕೊಟ್ಟಿದೆ.ಅವರು ಅದನ್ನು ಕ್ಯಾಬಿನೆಟ್‌ಗೆ ತಂದು ಅದನ್ನು ಗೆಜೆಟ್ ನೋಟಿಫಿಕೇಶನ್ ಮಾಡಿ ಸೇರಿಸಿಕೊಳ್ಳುವಂತಹ ಕೆಲಸ ಮಾಡುತ್ತಾರೆ.ಅಲ್ಲದೆ ಓವಿ ಜನಾಂಗದಂತಹ ಇನ್ನುಳಿದ ಮೂರು ಸಮುದಾಯ ಇದೆ, ಅವನ್ನು ಪರಿಶೀಲಿಸಲಾಗುತ್ತದೆ.

ಪ್ರಶ್ನೆ: ಬೀದಿ ನಾಯಿಗಳ ಹಾವಳಿ ಬಹಳಷ್ಟು ಇದೆ.ಈ ಬೀದಿ ನಾಯಿಗಳು ವಾಹನ ಸವಾರರನ್ನು, ಪಾದಚಾರಿಗಳನ್ನು, ಮಕ್ಕಳನ್ನು ಸಾಕಷ್ಟು ಕಾಡುತ್ತಿರುತ್ತವೆ.ಈ ಬೀದಿ ನಾಯಿಗಳನ್ನು ಕೊಲ್ಲಲು ಆಗುವುದಿಲ್ಲ.ಆದರೆ ಅವುಗಳಿಗೆ ಸಂತಾನಹರಣ ಚಿಕಿತ್ಸೆಯನ್ನು ನೀಡಿ ಅವುಗಳು ವೃದ್ಧಿಸದಂತೆ ಏನಾದರೂ ಮಾಡಬಹುದಾ?. ಇದರಲ್ಲಿ ಏನಾದರೂ ಸಮಸ್ಯೆ ಇದೆಯಾ?.
ಮಠಂದೂರು: ಪ್ರಾಣಿ ಪ್ರಿಯರು ಪುತ್ತೂರಿನಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲೂ ಬೀದಿ ನಾಯಿ ಸಾಕುವವರು ತುಂಬಾ ಜನ ಇದ್ದಾರೆ.ನಮ್ಮ ಪಶುಸಂಗೋಪನಾ ಇಲಾಖೆ ಒಂದಷ್ಟು ವೈದ್ಯರ ಕೊರತೆಯನ್ನು ಎದುರಿಸುತ್ತಿದೆ.ನಮ್ಮಲ್ಲಿ ಸಾಕಷ್ಟು ಪಶು ವೈದ್ಯರು ಇಲ್ಲದೇ ಇರುವುದರಿಂದ ಯಾವುದೂ ಮಾಡಲು ಸಾಧ್ಯವಾಗುತ್ತಿಲ್ಲ.ವೈದ್ಯರ ಕೊರತೆ ನೀಗಿಸಿದ ಸಂದರ್ಭದಲ್ಲಿ ಒಂದಷ್ಟು ಸಂಘ-ಸಂಸ್ಥೆ, ನಗರಸಭೆ ಸೇರಿಕೊಂಡು ಬೀದಿ ನಾಯಿಗಳ ನಿಯಂತ್ರಣ ಹೇಗೆ ಮಾಡುವುದು ಎಂಬುದನ್ನು ನಗರಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು.

ಪ್ರಶ್ನೆ: ಹಿರಿಯ ನಾಗರಿಕರಿಗೆ ಸರಿಯಾದ ವಾಕಿಂಗ್ ವ್ಯವಸ್ಥೆಗಳಿಲ್ಲ, ಆಟೋ ರಿಕ್ಷಾಗಳು ಒಳ್ಳೆಯ ಸೇವೆ ನೀಡುತ್ತಾರೆ ಆದರೆ ಎಲ್ಲೆಂದರಲ್ಲಿ ತಿರುಗಿಸಿ ವಾಹನ ಚಲಾವಣೆಗೆ ಕಷ್ಟವಾಗ್ತಿದೆ,ಬೈಪಾಸ್ ಕ್ರಾಸಿಂಗ್‌ಗಳು ಸರಿಯಾಗಿಲ್ಲ, ಟ್ರಾಫಿಕ್ ಪೊಲೀಸ್‌ನವರು ಟ್ರಾಫಿಕ್ ಜಾಂ ಆಗುವಾಗ ಅವರ ಸಂಖ್ಯೆ ಕಡಿಮೆಯಾಗಿದೆ, ಜಾಸ್ತಿ ಓಡಾಡುವಂತಹ ಸ್ಥಳಗಳಲ್ಲಿ ಅಂದರೆ ದೇವಸ್ಥಾನ ಇರಬಹುದು, ಚರ್ಚ್ ಇರಬಹುದು, ಮಸೀದಿ ಇರಬಹುದು ಇಲ್ಲಿ ಪ್ರವೇಶ ಸ್ಥಳ ಕಡಿಮೆ ಈ ಬಗ್ಗೆ ಏನು ಮಾಸ್ಟರ್ ಪ್ಲ್ಯಾನ್ ಮಾಡಬಹುದು?.
ಮಠಂದೂರು: ನಾನು ಶಾಸಕನಾಗಬೇಕಾದ್ರೆ ಪುತ್ತೂರಿನಲ್ಲಿ ಒಂದು ಪಾರ್ಕ್ ಇತ್ತು.ಇಂದು ಎಂಟು ಪಾರ್ಕ್ ಆಗಿದೆ. ಪುತ್ತೂರಿನ ಬಸ್‌ಸ್ಟ್ಯಾಂಡ್‌ಗಳು ಇಂದು ಸ್ಮಾರ್ಟ್ ಬಸ್‌ಸ್ಟ್ಯಾಂಡ್‌ಗಳಾಗಿವೆ. ಆ ಬಸ್‌ಸ್ಟ್ಯಾಂಡ್‌ಗಳಲ್ಲಿ ಕೂತಾಗ ಒಂದಷ್ಟು ನೆಮ್ಮದಿ ಸಿಗುತ್ತದೆ.ಹಿರಿಯ ನಾಗರಿಕರಿಗೆ ಯಾವುದೇ ಅನಾಹುತವಾಗದಂತೆ ಬೆಳಗ್ಗೆ ಮತ್ತು ಸಂಜೆ ಹೊತ್ತು ವಾಯು ಸೇವನೆ ಮಾಡಲು ನಗರಸಭೆ ಅದಕ್ಕೆ ಸೂಕ್ತ ಜಾಗ ಹುಡುಕುವ ಕೆಲಸವನ್ನು ಮಾಡುತ್ತಿದೆ.ಸಿಕ್ಕಿದ್ರೆ ಒಳ್ಳೆಯ ಐದು ಎಕ್ರೆಯ ಪಾರ್ಕ್ ನಿರ್ಮಿಸಿ ಅಲ್ಲಿ ಹಿರಿಯ ನಾಗರಿಕರು ವಾಯು ಸೇವನೆ ಮಾಡುವಂತಹುದು ಮತ್ತು ಶಾರೀರಿಕ ದೃಢತೆಯನ್ನು ಹೆಚ್ಚಿಸುವಂತಹುದು ಮಾಡಬಹುದು. ಪುತ್ತೂರಿನ ರಸ್ತೆಗಳನ್ನು ಅಗಲೀಕರಣ ಮಾಡೋದಿಕ್ಕೆ ಸ್ವಲ್ಪ ಸಮಯವಕಾಶ ತೆಗೋಳ್ಬಹುದು. ಚತುಷ್ಪಥ ರಸ್ತೆಗಳಲ್ಲಿನ ಎಲ್ಲಾ ದಾರಿದೀಪಗಳನ್ನು ಎಲ್‌ಇಡಿ ಲೈಟ್ಸ್‌ಗಳಿಗೆ ಕನ್ವರ್ಟ್ ಮಾಡುವ ಕೆಲಸವನ್ನು ಮಾಡಿದ್ದೇವೆ. ರಸ್ತೆಗಳನ್ನು ಇನ್ನು ಮುಂದೆ ಕಾಂಕ್ರಿಟೀಕರಣ ಮಾಡುವುದೆಂದು ತೀರ್ಮಾನ ಮಾಡಿದ್ದೇವೆ. ಡಾಮಾರು ಹಾಕಿದರೆ ಅದು ಮಳೆಗಾಲಕ್ಕೆ ಎದ್ದು ಹೋಗುತ್ತದೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಈ ವಾಕಿಂಗ್ ಪಾಥ್ ಎಲ್ಲಿಯೂ ಇಲ್ಲ.ಕೆಲವೊಂದು ಕಡೆ ಇಂಟರ್‌ಲಾಕ್ ಅಳವಡಿಸಿದ್ದಿದೆ. ಇಲ್ಲಿ ವಾಹನಗಳೂ ಹೋಗ್ತಾ ಇದೆ. ಅರುಣಾ ಥಿಯೇಟರ್ ಬಳಿ, ಶ್ರೀಧರ್ ಭಟ್ ಬಳಿ, ಸಂಜೀವ ಶೆಟ್ಟಿ ಬಳಿ ಟ್ರಾಫಿಕ್ ಜಾಂ ಆಗುವಂತಹ ಎರಡ್ಮೂರು ಜಾಗಗಳನ್ನು ಗುರುತಿಸಿದ್ದೇವೆ.

ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ.ರವರು ಸ್ವಾಗತಿಸಿ, ಮಾಜಿ ಅಧ್ಯಕ್ಷ ವಾಮನ್ ಪೈ ವಂದಿಸಿದರು. ಉದ್ಯಮಿ ಬಲರಾಂ ಆಚಾರ್ಯ, ಮಾಜಿ ರೋಟರಿ ಡಿಜಿ ಡಾ.ಭಾಸ್ಕರ್, ಅಸಿಸ್ಟೆಂಟ್ ಗವರ್ನರ್ ಎ.ಜೆ ರೈಯವರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ಪ್ರೊ|ಝೇವಿಯರ್ ಡಿ’ಸೋಜ ಅತಿಥಿಗಳ ಪರಿಚಯ ಮಾಡಿದರು. ನ್ಯಾಯವಾದಿ ಚಿದಾನಂದ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.

ಸುಮಾರು ೪೦೦ ಪ್ರಶ್ನೆಗಳು..
ಅದಾಲತ್‌ಗಾಗಿ ಸುಮಾರು ೪೦೦ ಪ್ರಶ್ನೆಗಳು ಲಿಖಿತ ರೂಪದಲ್ಲಿ ಬಂದಿದ್ದು, ರೋಟರಿ ಪುತ್ತೂರು ಇದರ ಮುಖ್ಯಸ್ಥರು ನಾಲ್ಕೈದು ಬಾರಿ ಸೇರಿ ಪ್ರಶ್ನೆಗಳನ್ನು ಕ್ರೋಢೀಕರಿಸಿ ಪ್ರಸ್ತುತ ವಿದ್ಯಾಮಾನಕ್ಕೆ ಪೂರಕವಾದ ೨೦-೨೫ ಪ್ರಶ್ನೆಗಳನ್ನು ಆಯ್ದುಕೊಳ್ಳಲಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ, ಜಾತಿ, ಮತ, ಪಂಥ, ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಆಸ್ಪದವಿಲ್ಲವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ನಾವೆಲ್ಲಾ ಒಂದೇ ಎಂಬಂತೆ ಕಾರ್ಯಕ್ರಮದ ಆಯೋಜನೆಯಾಗಿತ್ತು.

ಶಾಸಕರಿಂದ ಐದು ವರ್ಷ ಶ್ಲಾಘನೆಯ ಪ್ರಯತ್ನ
ಶಾಸಕರಿಗೆ ಕೊಟ್ಟಂತಹ ಅವಧಿ ಐದು ವರ್ಷದ ಅವಧಿ. ನಮ್ಮ ಕಾನೂನನ್ನು ಜನರ ಉಪಯೋಗಕ್ಕೆ ಸರಿಯಾಗಿ ಎಲ್ಲರೂ ಮಾಡಬೇಕು. ಶಾಸಕರು ತಮ್ಮ ಅವಽಯಲ್ಲಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಶ್ಲಾಘನೆಯ ಪ್ರಯತ್ನಗಳನ್ನು ಮಾಡಿದ್ದಾರೆ. ಈ ವಿಷಯದಲ್ಲಿ ಎರಡು ಮಾತಿಲ್ಲ. ಜನಸ್ಪಂದನೆಗೆ ಅವರು ಕೊಟ್ಟ ಉತ್ತರವನ್ನು ಅವಲೋಕಿಸಬೇಕು. ಆದರೆ ಅಭಿಪ್ರಾಯವನ್ನು ಜಡ್ಜ್‌ಮೆಂಟ್ ಆಗಿ ಕೊಡುವಂತಹ ಅಧಿಕಾರ ಅದಾಲತ್‌ನಲ್ಲಿ ಇಲ್ಲ. ಜನಸಾಮಾನ್ಯರಿಗೆ ಅವರ ಸಮಸ್ಯೆಗಳನ್ನು ಎಷ್ಟರಮಟ್ಟಿಗೆ ಬಗೆಹರಿಸಿದ್ದಾರೆ ಎನ್ನುವುದು ಮುಖ್ಯ. ಚುನಾವಣೆಯಲ್ಲಿ ಅವರು ಪಾರ್ಟಿಯ ಸದಸ್ಯರಾಗಿದ್ದರು, ಪಾರ್ಟಿಯ ಧ್ಯೇಯಗಳನ್ನು ನಡೆಸತಕ್ಕವರು. ಆದರೆ ಒಮ್ಮೆ ಚುನಾಯಿತರಾದ ಮೇಲೆ ಅವರು ನಮ್ಮ ಕ್ಷೇತ್ರದ ಪ್ರತಿನಿಧಿ. ಕ್ಷೇತ್ರದ ಪ್ರತಿನಿಧಿಗಳಿಗೆ ಅವರು ಬೇಕಾದ ಕೆಲಸಗಳನ್ನು ಮಾಡಿದ್ದಾರೆಯೇ ಎಂಬುದು ಪ್ರಶ್ನೆ.ಕೆಲವು ಸಮಸ್ಯೆಗಳನ್ನು ಬಗೆ ಹರಿಸುವ ಸಂದರ್ಭದಲ್ಲಿ ಕಾನೂನು ಅಡಚಣೆ ಬಂತು, ಕೆಲವರು ತಡೆಯಾe ತಂದಿರುತ್ತಾರೆ. ಆದರೆ ಅದನ್ನು ಸರಕಾರಿ ಲೆವೆಲ್‌ನಲ್ಲಿ ಮುಂದುವರೆಸಿದರೆ ನಮ್ಮ ಪ್ರಗತಿಯ ಕಾರ್ಯವನ್ನು ಅಡಚಣೆಯಾದ ರೀತಿಯಲ್ಲಿ ಹೈಕೋರ್ಟ್ ಕೂಡ ಸರಿಯಾಗಿ ಸ್ಪಂದಿಸೀತು ಎನ್ನುವುದು ನನ್ನ ಅಭಿಪ್ರಾಯ.
-ರಾಮಮೋಹನ್ ರಾವ್, ಹಿರಿಯ ನ್ಯಾಯವಾದಿಗಳು ಹಾಗೂ ಅದಾಲತ್‌ನ ನಿರ್ಣಾಯಕರು

ಪುತ್ತೂರಿನಲ್ಲಿ ಮೂರನೇ ಬಾರಿ..
೧೯೬೫ರಲ್ಲಿ ಪ್ರಾರಂಭಗೊಂಡ ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಸಂಸ್ಥೆ ಪುತ್ತೂರು ರೋಟರಿ ಕ್ಲಬ್ ಪುತ್ತೂರಿನ ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಹುಟ್ಟಿ ಬೆಳೆದು ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ. ೧೯೯೮ರಲ್ಲಿ ಆಗಿನ ರೋಟರಿ ಅಧ್ಯಕ್ಷ ಗಣಪತಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಆಗಿನ ಶಾಸಕ ವಿನಯ ಕುಮಾರ್ ಸೊರಕೆ, ಹಿಂದೆ ಸಂಸದರಾಗಿದ್ದ ಧನಂಜಯ ಕುಮಾರ್ ಅವರೊಂದಿಗೂ ಕೂಡಾ ಅದಾಲತ್ ಮಾಡುವ ಮೂಲಕ ಪುತ್ತೂರಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗಿತ್ತು. ಇದೀಗ ಈಗಿನ ಶಾಸಕರಾಗಿರುವ ಸಂಜೀವ ಮಠಂದೂರು ಅವರ ಜೊತೆ ಅದಾಲತ್ ಕಾರ್ಯಕ್ರಮ ನಡೆಯಿತು. ರೋಟರಿ ಸಂಸ್ಥೆ ಪುತ್ತೂರಿನ ಪರಿಸರದಲ್ಲಿ ಹತ್ತು ಹಲವು ಶಾಶ್ವತ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಮಹಾವೀರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್, ಪುತ್ತೂರಿನಲ್ಲಿ ಎಲ್ಲಾ ಸೌಲಭ್ಯಗಳುಳ್ಳ ಸ್ಮಶಾನ, ರೋಟರಿಪುರದಲ್ಲಿ ಹಲವಾರು ಮನೆಗಳು, ವಿದ್ಯಾಸಂಸ್ಥೆಗಳಿಗೆ ಶಾಶ್ವತ ಕೊಡುಗೆಗಳು ಹೀಗೆ ಸಮುದಾಯಕ್ಕೆ ಕೊಡುಗೆಗಳನ್ನು ನೀಡುತ್ತಾ ಬಂದಿರುವುದಲ್ಲದೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಪುತ್ತೂರಿನ ಪ್ರಾಥಮಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ.

ಸಂವಾದದಲ್ಲಿ ಪ್ರಮುಖವಾಗಿ ಕೇಳಿದ್ದು..
ಪುತ್ತೂರಿಗೆ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರಾತಿ ಭರವಸೆಯನ್ನು ಕೊಟ್ಟಿದ್ದಾರೆ
ಕೆಎಸ್‌ಆರ್‌ಟಿಸಿಯವರಿಗೆ ನಾಲ್ಕು ಎಕ್ರೆ ಜಾಗ ಐಡೆಂಟಿಫೈ ಮಾಡಿಕೊಟ್ರೆ ಖಂಡಿತಾ ದ್ವಿತೀಯ ಡಿಪೋವನ್ನು ಉಪ್ಪಿನಂಗಡಿ ಅಥವಾ ಪುತ್ತೂರಿನಲ್ಲಿ ಮಾಡಲಿದ್ದೇವೆ
ಸಬ್‌ರಿಜೀಸ್ಟರ್, ಆರ್‌ಟಿಒ ಕಛೇರಿಯನ್ನು ನೂರಕ್ಕೆ ನೂರು ಡಿಜಿಟಲೈಸೇಷನ್ ಮಾಡಲು ಸರಕಾರ ಚಿಂತನೆ ನಡೆಸುತ್ತಿದೆ
ರಿಕ್ಷಾ ಯೂನಿಯನ್‌ರವರು ಒಪ್ಪಿದ್ರೆ ರಿಕ್ಷಾಗಳಿಗೆ ಮೀಟರ್ ಅಳವಡಿಸಲು ಚಿಂತನೆ-ಆದರೆ, ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆ ಎಂಬ ಭಾವನೆ ರಿಕ್ಷಾದವರಲ್ಲಿ ಬರಬಾರದು
ಲ್ಯಾಂಡ್ ರೆವೆನ್ಯೂ ಕಾಯ್ದೆಯಲ್ಲಿ ಪಟ್ಟಣ ಪಂಚಾಯಿತಿನಿಂದ ಮೂರು ಕಿ.ಮೀ ವ್ಯಾಪ್ತಿ, ಪುರಸಭೆ, ನಗರಸಭೆಯಿಂದ ೫ ಕಿ.ಮೀ ವ್ಯಾಪ್ತಿ, ಮಹಾನಗರಪಾಲಿಕೆಯಿಂದ ೧೦ ಕಿ.ಮೀ ವ್ಯಾಪ್ತಿ ಬಫರ್ ಝೋನ್ ಎಂದು ಕನ್ಸಿಡರ್ ಮಾಡ್ಬೇಕು
ರೂ.೩೦೦ ಕೋಟಿ ಯೋಜನೆಯು ಡಿಪಿಆರ್ ಆಗಿ ಇಂದು ಫೈನಾನ್ಸ್ ಡಿಪಾರ್ಟ್ ಮೆಂಟಿನಿಂದ ಮುಂದಿನ ಒಂದು ವಾರದಲ್ಲಿ ಕ್ಯಾಬಿನೆಟ್‌ಗೆ ಬರುವ ಲಕ್ಷಣಗಳಿವೆ.ಅದು ಬಂದ್ರೆ ವಿಟ್ಲ ಭಾಗಕ್ಕೆ ೨೪*೭ ನೀರು ಕೊಡಲು ಬದ್ಧರಾಗಿದ್ದೇವೆ
ನನ್ನ ಅವಧಿಯಲ್ಲಿ ರೂ.೧೧೫ ಕೋಟಿ ಜಲಸಿರಿ ಯೋಜನೆಗೆ ಶಿಲಾನ್ಯಾಸ ಮಾಡಿ, ಉದ್ಘಾಟನೆ ಮಾಡಲಿದ್ದೇನೆ.ರೂ.೧೧೫ ಕೋಟಿಯ ಜಲಸಿರಿ ಯೋಜನೆ ಹಿಂದಿನ ನಮ್ಮ ಎಡಿಬಿ ಯೋಜನೆಯ ಮುಂದುವರೆದ ಭಾಗವಾಗಿ ಈ ಯೋಜನೆ ಮಾಡುತ್ತಿದ್ದೇವೆ.
ಇವತ್ತು ಜಾಗದ ಕೊರತೆ ಇದೆ. ಎಲ್ಲಿ ಹೋದ್ರೂ ಅದು ಕುಮ್ಕಿ ಜಾಗ, ಫಾರೆಸ್ಟ್, ಬಫರ್ ಹೀಗೆ ಒಂದೊಂದು ಸಮಸ್ಯೆಗಳಿಂದಾಗಿ ಪುತ್ತೂರಿನ ಕೈಗಾರಿಕೋದ್ಯಮಿಗಳಿಗೆ ಜಾಗದ ಲಭ್ಯತೆ ಇಲ್ಲ
೩೦೦ ಬೆಡ್‌ನ ಆಸ್ಪತ್ರೆಗೆ ರೂ.೩೫೦ ಕೋಟಿಯ ಪ್ಲ್ಯಾನಿಂಗ್ ಎಸ್ಟಿಮೇಟ್ ಮಾಡಿ ಅದನ್ನೀಗ ಪ್ರಿನ್ಸಿಪಾಲ್ ಸೆಕ್ರೆಟರಿ ಮುಖಾಂತರ ಸರಕಾರಕ್ಕೆ ಕಳುಹಿಸುವ ಯೋಜನೆಯನ್ನು ಮಾಡಿದ್ದೇವೆ. ಆಗ ಆಸ್ಪತ್ರೆ ಆದ್ರೆ ನಮಗೆ ಮೆಡಿಕಲ್ ಕಾಲೇಜಿಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದು
ಪುತ್ತೂರು ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ ಮಹಾಯೋಜನೆಯನ್ನು ತಯಾರಿಸಿ ಈಗ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ.ಅಂತಿಮ ಹಂತದಲ್ಲಿ ಈಗ ಮಹಾಯೋಜನೆ ಇದೆ. ಅದು ಮಂಜೂರು ಆದರೆ ಈ ಕಟ್ ಕನ್ವರ್ಷನ್ ಸಮಸ್ಯೆ ನಿವಾರಿಸಬಹುದು
ಕಳೆದ ಐದು ವರ್ಷಗಳಲ್ಲಿ ಸುಮಾರು ಎಂಟು ಕೋಟಿಯಷ್ಟು ಹಣ ಪ್ರವಾಸೋದ್ಯಮಕ್ಕೆ ಖರ್ಚು ಮಾಡುವ ಕೆಲಸ ಮಾಡಿದ್ದೇವೆ.
ಕೆದುವಡ್ಕ ಭಾಗ ರೆಸಿಡೆನ್ಸಿಯಲ್ ಪ್ರದೇಶವಾಗಿದೆ. ಅಲ್ಲಿ ಖಾಸಗಿ ಜಾಗದ ಸಮಸ್ಯೆ ಇತ್ತು. ಎಚ್‌ಟಿ ಲೈನ್ ಸಮಸ್ಯೆ ಇವೆಲ್ಲವನ್ನೂ ನಾನೇ ಬಗೆಹರಿಸಿದ್ದೇನೆ. ಇದಕ್ಕೆ ಸುಮಾರು ೬೦ ಲಕ್ಷ ಹಣವನ್ನು ಕೊಟ್ಟಿದ್ದೇನೆ.
ಸ್ವಚ್ಛತೆಯ ವಿಚಾರದಲ್ಲಿ ನಾವು ೩೬ನೇ ಸ್ಥಾನದಲ್ಲಿದ್ದೆವು.ಎರಡು ವರ್ಷದ ಹಿಂದೆ ಆರನೇ ಸ್ಥಾನಕ್ಕೆ ಬಂದೆವು.ಕಳೆದ ವರ್ಷ ಮೂರನೇ ಸ್ಥಾನಕ್ಕೆ ಬಂದಿದ್ದೇವೆ.
ಇವತ್ತು ನಗರಸಭೆಯಲ್ಲಿ ಅಷ್ಟೊಂದು ಕಸ ಬೀಳುವುದಿಲ್ಲ ಆದರೆ ಗ್ರಾಮಾಂತರ ಪ್ರದೇಶವಾದ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಕಸ ಬೀಳುತ್ತಿದೆ ಯಾಕೆ ಎಂಬ ಕುತೂಹಲ ನನಗಿದೆ.
ಪಶುಸಂಗೋಪನಾ ಇಲಾಖೆ ವೈದ್ಯರ ಕೊರತೆಯನ್ನು ಎದುರಿಸುತ್ತಿದೆ. ನಮ್ಮಲ್ಲಿ ಸಾಕಷ್ಟು ಪಶು ವೈದ್ಯರು ಇಲ್ಲದೇ ಇರುವುದರಿಂದ ಯಾವುದೂ ಮಾಡಲು ಸಾಧ್ಯವಾಗುತ್ತಿಲ್ಲ
ರಸ್ತೆಗಳನ್ನು ಇನ್ನು ಮುಂದೆ ಕಾಂಕ್ರಿಟೀಕರಣ ಮಾಡುವುದೆಂದು ತೀರ್ಮಾನ ಮಾಡಿದ್ದೇವೆ.ಡಾಮರು ಹಾಕಿದರೆ ಅದು ಮಳೆಗಾಲಕ್ಕೆ ಎದ್ದು ಹೋಗುತ್ತದೆ

LEAVE A REPLY

Please enter your comment!
Please enter your name here