12 ವಿದ್ಯಾರ್ಥಿಗಳಿಂದ ‘ಕೇಂದ್ರ ಮುಂಗಡಪತ್ರದ ವಿಶ್ಲೇಷಣೆ’
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರಿಯ ಸೇವಾ ಯೋಜನೆ ಘಟಕದ ವತಿಯಿಂದ ‘ಕೇಂದ್ರ ಮುಂಗಡಪತ್ರ -2023-24ರ ವಿಶ್ಲೇಷಣೆ’ ಕಾರ್ಯಕ್ರಮ ನಡೆಯಿತು. ದ್ವಿತೀಯ ಬಿ.ಎ.ಎಲ್.ಎಲ್.ಬಿ.ಯ 12 ವಿದ್ಯಾರ್ಥಿಗಳು ಬಜೆಟ್‌ನಲ್ಲಿ ಗುರುತಿಸಲಾದ ವಿವಿಧ ವಲಯಗಳ ಮುಖ್ಯಾಂಶಗಳ ಕುರಿತು ವಿಚಾರ ಮಂಡಿಸಿ, ಹೊಸ ಬಜೆಟ್‍ನಿಂದ ಸಾಮಾನ್ಯ ಜನರಿಗೆ, ಸರಕಾರಕ್ಕೆ, ಉದ್ಯಮಿಗಳಿಗೆ ಮತ್ತು ಇತರರಿಗೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಣೆ ಮಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶ್ರೀಕೃಷ್ಣ ಭಟ್ ಮಾತನಾಡಿ, ಕೇಂದ್ರದ ಬಜೆಟ್ ಕುರಿತು ಪ್ರತಿಯೊಬ್ಬರಿಗೂ ಕುತೂಹಲದ ದೃಷ್ಟಿ ಇರುತ್ತದೆ. ವಿದ್ಯಾರ್ಥಿಗಳು ಬಜೆಟ್ ನಂತಹ ವಿಷಯಗಳನ್ನು ಸೂಕ್ಷ್ಮವಾಗಿ ತಿಳಿದುಕೊಂಡಾಗ ದೇಶದ ಆಗುಹೋಗುಗಳ ಕುರಿತು ಸುಲಭವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದರು. ಜೊತೆಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಮುಂಗಡ ಪತ್ರದ ಕುರಿತಾದ ತಿಳುವಳಿಕೆಯು ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯ. ಅದು ನಾಗರಿಕ ಪ್ರಜ್ಞೆಯ ಭಾಗವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಇದು ಅತಿ ಅಗತ್ಯ. ದೇಶದ ಅಭಿವೃದ್ಧಿ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಮುಂಗಡ ಪತ್ರದ ಅರಿವು ಪೂರಕ ಎಂದರಲ್ಲದೆ, ಭಾರತದಲ್ಲಿ ಮುಂಗಡ ಪತ್ರ ತಯಾರಿಯ ವಿವಿಧ ಹಂತಗಳು ಹಾಗೂ ಈ ವರ್ಷದ ಮುಂಗಡ ಪತ್ರ ವೈಶಿಷ್ಟ್ಯಗಳನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್ ಎಸ್ ಎಸ್ ಘಟಕದ ಸಂಯೋಜಕರಾದ ಲಕ್ಷ್ಮಿಕಾಂತ ರೈ ಅನಿಕೂಟೇಲ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ, ಕೇಂದ್ರದ ಬಜೆಟ್ ವಿಶ್ಲೇಷಣೆಯ ಮಹತ್ವ, ಅಗತ್ಯತೆ ಹಾಗೂ ಪ್ರಸ್ತುತತೆ ಕುರಿತು ತಿಳಿಸಿ, ಈ ಸ್ಪರ್ಧಾತ್ಮಕ ಯುಗದಲ್ಲಿ ನಾವು ಹೊಸ ಹೊಸ ವಿಷಯಗಳನ್ನು ಕಲಿಯುವಲ್ಲಿ ಆಸಕ್ತಿ ವಹಿಸಬೇಕು. ಪ್ರತಿಯೊಂದು ವಿಷಯದ ಬಗ್ಗೆ ವಿದ್ಯಾರ್ಥಿಗಳು ಅಗತ್ಯವಾಗಿ ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸರಕಾರದ ಮುಂಗಡಪತ್ರವನ್ನು ವಿಶ್ಲೇಷಿಸುವ ಮೂಲಕ ಅದರ ಹೂರಣವನ್ನು ಅರಿತುಕೊಳ್ಳಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವಿದ್ಯಾರ್ಥಿನಿ ಶ್ರೀರಕ್ಷಾ ಪ್ರಾರ್ಥಿಸಿದ್ದು, ವಿದ್ಯಾರ್ಥಿನಿ ಚೈತನ್ಯ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದ್ದು, ವಿದ್ಯಾರ್ಥಿನಿ ಭೂಮಿಕಾ ವಂದಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.