ಸರಕಾರಿ ಪತ್ರಿಕಾಭವನದಲ್ಲಿ ಮುಂದುವರಿಯುತ್ತಲೇ ಇದೆ…. ಅವ್ಯವಹಾರದ ದಂಧೆ
ಪತ್ರಿಕಾ ಭವನಕ್ಕೆ ವಾರೀಸುದಾರರು, ಕೇಳುವವರು ಯಾರು?
ಅದಕ್ಕೆ ಮುಕ್ತಿಹಾಕಲು ಶಾಶ್ವತ ಬೀಗದ ವ್ಯವಸ್ಥೆ ಅಥವಾ ಎಲ್ಲಾ ಪತ್ರಕರ್ತರನ್ನು ಸೇರಿಸಿ ಪ್ರೆಸ್‌ಕ್ಲಬ್‌ನ್ನು ರಚಿಸಬೇಕಾಗಿದೆ

0

ಪುತ್ತೂರು: ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿ ಕಾರ್ಯ ನಿರ್ವಹಿಸುತ್ತಿರುವ ಸರಕಾರದ ವಾರ್ತಾ ಇಲಾಖೆಯ ಕಟ್ಟಡವಾದ ಪತ್ರಿಕಾ ಭವನಕ್ಕೆ ವಾರೀಸುದಾರರು ಯಾರು, ಅಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಕೇಳುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಸರಕಾರಿ ಕಟ್ಟಡವಾಗಿರುವ ಪತ್ರಿಕಾ ಭವನದಲ್ಲಿ ಕೆಲವು ಪತ್ರಕರ್ತರಿಂದ (ಅನೀಶ್ ಕುಮಾರ್ ನೇತೃತ್ವದ ತಂಡದಿಂದ) ನಡೆಯುತ್ತಿರುವ ಅನೈತಿಕ, ಅವ್ಯವಹಾರದ ದಂಧೆ, ಬ್ಲ್ಯಾಕ್‌ಮೆಲ್ ವ್ಯವಹಾರ ಇನ್ನೂ ಮುಂದುವರಿಯುತ್ತಲೇ ಇದೆ. ಪತ್ರಕರ್ತರ ಸಂಘಟನೆಗಳು, ಶಾಸಕರು, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಂಡು ಪ್ರೆಸ್‌ಕ್ಲಬ್‌ನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಅದನ್ನು ನೋಡಿಕೊಳ್ಳಲಿಕ್ಕೆ ಪ್ರಾಮಾಣಿಕ ಉತ್ತಮ ಪತ್ರಕರ್ತರನ್ನು ಸೇರಿಸಿ ಪ್ರೆಸ್ ಕ್ಲಬ್‌ನ್ನು ರಚಿಸಿ ಈಗಿನ ಅವ್ಯವಹಾರಕ್ಕೆ, ಬ್ಲ್ಯಾಕ್‌ಮೇಲ್‌ಗೆ ಮುಕ್ತಿ ಹಾಕಬೇಕು ಎಂದು ಪ್ರಜ್ಞಾವಂತ ನಾಗರಿಕರು ಮತ್ತು ಬಹುತೇಕ ಪತ್ರಕರ್ತರಿಂದ ಆಗ್ರಹ ವ್ಯಕ್ತವಾಗಿದೆ.

ಪತ್ರಿಕಾ ಭವನಕ್ಕೆ ವಾರೀಸುದಾರರು ಯಾರು?: ಪತ್ರಕರ್ತರಿಗೆ ಕಾರ್ಯ ನಿರ್ವಹಿಸುವುದಕ್ಕಾಗಿ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿಯ ಸರಕಾರಿ ಕಟ್ಟಡವನ್ನು ವಾರ್ತಾ ಇಲಾಖೆಯ ಅಧೀನಕ್ಕೆ 2005ರಲ್ಲಿ ಸರಕಾರ ಒಪ್ಪಿಸಿತ್ತು. ವಾರ್ತಾಧಿಕಾರಿಯವರ ಹೆಸರಿನಲ್ಲಿಯೇ ಈ ಕಟ್ಟಡ ಈಗಲೂ ಇದೆ. ಹಿಂದೆ ವಾರ್ತಾಧಿಕಾರಿ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ವಾರ್ತಾಧಿಕಾರಿ ಕಛೇರಿಯನ್ನು ಮಂಗಳೂರಿಗೆ ವರ್ಗಾಯಿಸಿದಾಗ ಈ ಕಟ್ಟಡವನ್ನು ಆಗ ಇಲ್ಲಿ ಅಸ್ತಿತ್ವದಲ್ಲಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಹೆಸರಿನಲ್ಲಿ ಪತ್ರಕರ್ತರಿಗೆ ನೀಡಲಾಗಿತ್ತು. ಆದರೆ ಅದರ ಸದಸ್ಯರು ಮತ್ತು ಪದಾಧಿಕಾರಿಗಳು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಸದಸ್ಯರಾಗಿ ಸೇರ್ಪಡೆಗೊಂಡು ತಾವು ಪ್ರತಿನಿಧಿಸುತ್ತಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘವನ್ನು ತೊರೆದಿದ್ದಾರೆ. ಆದುದರಿಂದ ರಾಜ್ಯದಲ್ಲಿಯೇ ಉತ್ತಮ ಹೆಸರು ಪಡೆದಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘವೇ ಇದೀಗ ಅಸ್ತಿತ್ವದಲ್ಲಿಲ್ಲ!. ಇದೀಗ ಈ ಪತ್ರಿಕಾ ಭವನಕ್ಕೆ ವಾರೀಸುದಾರರೇ ಇಲ್ಲದಂತಾಗಿ ಪತ್ರಿಕಾ ಭವನವನ್ನು, ಅಲ್ಲಿ ನಡೆಯುವ ಅವ್ಯವಹಾರವನ್ನು ಕೇಳುವವರೂ ಇಲ್ಲದಂತಾಗಿದೆ.

ಪುತ್ತೂರಿನಲ್ಲಿ ಪ್ರಸ್ತುತ ಮೂರು ಪತ್ರಕರ್ತರ ಸಂಘಗಳಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಪುತ್ತೂರು ತಾಲೂಕು ಘಟಕ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಗಳು ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಮೂರೂ ಪತ್ರಕರ್ತರ ಸಂಘಗಳಿಗೂ ಪತ್ರಿಕಾ ಭವನದಲ್ಲಿ ಹಕ್ಕು ಸ್ಥಾಪಿಸಲು ಸದ್ಯಕ್ಕೆ ಸಾಧ್ಯವಿಲ್ಲ. ವಾರ್ತಾಧಿಕಾರಿಯವರು ವಾರೀಸುದಾರರಾಗಿರುವ ಪತ್ರಿಕಾ ಭವನವನ್ನು ನಿರ್ವಹಣೆ ಮಾಡಲು ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಈ ಹಿಂದೆ ಅವಕಾಶ ನೀಡಲಾಗಿತ್ತಾದರೂ ಇದೀಗ ಪುತ್ತೂರು ತಾಲೂಕು ಪತ್ರಕರ್ತರ ಸಂಘವೇ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಹಿಂದಿನಿಂದಲೇ ಅಲ್ಲಿ ಅವ್ಯವಹಾರ ನಡೆಸುತ್ತಿರುವ ಪುತ್ತೂರಿನ ಸ್ಯಾಂಟ್ರೋ ರವಿ ಎಂದು ಹೆಸರು ಗಳಿಸಿರುವ ಅನೀಶ್ ಕುಮಾರ್‌ರ ನೇತೃತ್ವ ತಂಡ ತಮ್ಮ ಚಟುವಟಿಕೆಯನ್ನು ಮುಂದುವರಿಸಲು ಆ ಪತ್ರಿಕಾ ಭವನವನ್ನು ಕೇಂದ್ರವನ್ನಾಗಿ ಉಪಯೋಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಶಾಸಕರು, ಜನಪ್ರತಿನಿಧಿಗಳು, ವಾರ್ತಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಪತ್ರಕರ್ತರ ಸಂಘಟನೆಗಳು, ಸಾರ್ವಜನಿಕರು ಕೂಡಲೇ ಕ್ರಮಕೈಗೊಂಡು ಪುತ್ತೂರಿನ ಎಲ್ಲಾ ಪತ್ರಕರ್ತರನ್ನು ಸೇರಿಸಿ ಉತ್ತಮ ಹಾಗೂ ಪ್ರಾಮಾಣಿಕ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ನಡೆಸುವ ಅವಕಾಶವನ್ನು ನೀಡಬೇಕು ಮತ್ತು ಈಗಿನ ಅವ್ಯವಹಾರಕ್ಕೆ ಇತಿಶ್ರೀ ಹಾಡಬೇಕು–. ಆದು ಸಾಧ್ಯವಾಗದಿದ್ದರೆ ಪತ್ರಕರ್ತರಿಗೆ ಉಚಿತವಾಗಿ ನೀಡಿರುವ ಆ ಕಟ್ಟಡಕ್ಕೆ ಶಾಶ್ವತ ಬೀಗದ ವ್ಯವಸ್ಥೆ ಮಾಡುವುದು ಅಥವಾ ಆ ಕಟ್ಟಡವನ್ನು ಸರಕಾರ ವಾಪಾಸ್ ಪಡೆದುಕೊಳ್ಳುವುದು ಒಳಿತು ಎಂದು ಪ್ರಜ್ಞಾವಂತ ನಾಗರೀಕರು, ಪತ್ರಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here