ಉಪ್ಪಿನಂಗಡಿ: ದಕ್ಷಿಣ ಕಾಶಿಯೆಂದೆನಿಸಿಕೊಂಡಿರುವ ಪುರಾಣ ಪ್ರಸಿದ್ಧ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವ ಮೂರು ಮಖೆ ಜಾತ್ರೆಗಳ ಪೈಕಿ ಮೊದಲ ಮಖೆ ಜಾತ್ರೆಯು ಶಿವರಾತ್ರಿ ಮಖೆ ಜಾತ್ರೆಯಾಗಿದ್ದು, ಫೆ.18ರಿಂದ ಫೆ.19ರ ಮಧ್ಯಾಹ್ನ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ತಿಳಿಸಿದ್ದಾರೆ.
ಶ್ರೀ ದೇವಾಲಯದಲ್ಲಿ ನಡೆದ ಭಕ್ತಾದಿಗಳ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಶ್ರೀ ದೇವಾಲಯದಲ್ಲಿ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಫೆ.18ರಿಂದ ಮಾ.24ರವರೆಗೆ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಮೊದಲನೇ ಮಹಾಶಿವರಾತ್ರಿ ಮಖೆಕೂಟವು ಫೆ.18ರಂದು ಜರಗಲಿದ್ದು, ಬೆಳಗ್ಗೆ 8:30ರಿಂದ ಭಕ್ತರೇ ಉದ್ಭವ ಲಿಂಗಕ್ಕೆ ಅಭಿಷೇಕ ಮಾಡುವ ಸ್ವಯಂ ಲಿಂಗಾಭಿಷೇಕ ನಡೆಯಲಿದೆ. ಸಂಜೆ 7ರಿಂದ ಉದ್ಭವಲಿಂಗದ ಬಳಿ ಅರ್ಘ್ಯ, ಶಿವಪೂಜೆ, ಸೇವೆಗಳು ನಡೆಯಲಿದೆ. ರಾತ್ರಿ 8ರಿಂದ 9ರವೆಗೆ ಉದ್ಭವ ಲಿಂಗದ ಬಳಿ ‘ರುದ್ರಪಾರಾಯಣ’ ನಡೆಯಲಿದೆ. ರಾತ್ರಿ 8ಕ್ಕೆ ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಲಿದೆ.
ಫೆ.19ರಂದು ಪ್ರಾತಃಕಾಲದಲ್ಲಿ ತೀರ್ಥಸ್ನಾನ ನಡೆಯಲಿದ್ದು, ಬೆಳಗ್ಗೆ 6:30ರಿಂದ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆಯಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಈ ಬಾರಿಯ ವಿಶೇಷವಾಗಿ ಎಸ್‌ಪಿವೈಎಸ್‌ಎಸ್ ಕರ್ನಾಟಕ ಇದರ ಯೋಗ ಸಮಿತಿಯ ವತಿಯಿಂದ ಫೆ.18ರ ಸಂಜೆ 6ರಿಂದ ಫೆ.19ರ ಬೆಳಗ್ಗೆ 7ರವರೆಗೆ ಶಿವಾಷ್ಟೋತ್ತರಶತನಾಮಾನಿ ಪಠಣ, ಪುಷ್ಪಾರ್ಚನೆ, ಶಿವರಾತ್ರಿ ಜಾಗರಣೆ, ಭಜನೆ, ಶಿವ ಪಂಚಾಕ್ಷರಿ ಜಪ, ಬಿಲ್ವಾರ್ಚನೆ, ಸಾಮೂಹಿಕ ಯೋಗ- ‘ಶಿವ ನಮಸ್ಕಾರ’ ಕಾರ್ಯಕ್ರಮಗಳು ನಡೆಯಲಿವೆ. ಫೆ.18ರ ಸೂರ್ಯೋದಯದಿಂದ 19ರ ಸೂರ್ಯೋದಯದವರೆಗೆ ‘ನಾಮ ಸಂಕೀರ್ತನಾ ಬಳಗ’ದಿಂದ ಅಖಂಡ ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಫೆ.18ರ ರಾತ್ರಿ 7:30ರಿಂದ ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 9ರಿಂದ ಆಕರ್ಷಕ ಸುಡುಮದ್ದು ಪ್ರದರ್ಶನ, 10ರಿಂದ ಯಕ್ಷನಂದನ ಕಲಾ ಸಂಘ ಗೋಕುಲನಗರ ಇವರಿಂದ ‘ತ್ರಿಪುರ ಮಥನ’ ಯಕ್ಷಗಾನ ಬಯಲಾಟ ನಡೆಯಲಿದೆ. ಅಲ್ಲದೇ, ಮಾ.4ರಿಂದ ಮಾ.10ರವರೆಗೆ ಪ್ರತಿದಿನ ಸಂಜೆ 6ಕ್ಕೆ ನೇತ್ರಾವತಿ ನದಿ ಕಿನಾರೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ‘ಸಂಗಮ ಉತ್ಸವ’ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಫೆ.25ರಂದು ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಪೂರ್ವಾಹ್ನ ಗಣಪತಿ ಹೋಮ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾ ಹೋಮ, ಅನ್ನ ಸಂತರ್ಪಣೆ ನಡೆಯಲಿದೆ. ಮಾ.4ರಂದು ಧ್ವಜಾರೋಹಣ ನಡೆಯಲಿದ್ದು, ಮಾ.5ರಂದು ಬೆಳಗ್ಗೆ ಮತ್ತು ರಾತ್ರಿ ಉತ್ಸವ ನಡೆಯಲಿದೆ. ಮಾ.6ರಂದು 2ನೇ ಮಖೆಕೂಟ ನಡೆಯಲಿದ್ದು, ಮಾ.7ರಂದು ಪ್ರಾತಃಕಾಲದಲ್ಲಿ ತೀರ್ಥಸ್ನಾನ ನಡೆಯಲಿದೆ. ಮಾ.8ರಿಂದ 10ರವರೆಗೆ ಬೆಳಗ್ಗೆ ಮತ್ತು ಸಂಜೆ ಉತ್ಸವ ನಡೆಯಲಿದ್ದು, 10ರಂದು ರಾತ್ರಿ ದೇವರು ಬಲಿ ಹೊರಟು ಕಟ್ಟೆಪೂಜೆಯಾಗಿ ಸಂಗಮದಲ್ಲಿ ಅವಭೃತ ಸ್ನಾನ ಮತ್ತು ಉದ್ಭವಲಿಂಗದ ಬಳಿ ರಂಗಪೂಜೆಯಾಗಿ, ಧ್ವಜಾವರೋಹಣ ನಡೆಯಲಿದೆ. ಮಾ. 14ರಂದು ಮೂರನೇ ಅಷ್ಟಮಿ ಮಖೆಕೂಟ ನಡೆಯಲಿದ್ದು, ಮಾ.15ರಂದು ಪ್ರಾತಃಕಾಲದಲ್ಲಿ ತೀರ್ಥಸ್ನಾನ ನಡೆಯಲಿದೆ. ಫೆ.21ರಂದು ರಾತ್ರಿ ಮಹಾಕಾಳಿ ಮೆಚ್ಚಿ ನಡೆಯಲಿದೆ. ಮಾ.24ರಂದು ದೊಂಪದ ಬಲಿ ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಜಯಂತ ಪೊರೋಳಿ, ಹರಿರಾಮಚಂದ್ರ, ಸುನಿಲ್ ಅನಾವು, ಹರಿಣಿ ಕೆ., ಪ್ರೇಮಲತಾ ಕಾಂಚನ, ಮಹೇಶ್ ಬಜತ್ತೂರು ಹಾಗೂ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಚಂದಪ್ಪ ಮೂಲ್ಯ, ಸುದರ್ಶನ್, ಚಂದ್ರಶೇಖರ್ ಮಡಿವಾಳ, ರಾಮಚಂದ್ರ ಮಣಿಯಾಣಿ, ರಾಜಗೋಪಾಲ ಭಟ್ ಕೈಲಾರ, ಗೋಪಾಲ ಹೆಗ್ಡೆ, ಸಂತೋಷ್ ಕುಮಾರ್, ವಿಶ್ವನಾಥ ಶೆಟ್ಟಿ ಕಂಗ್ವೆ, ಐ. ಚಿದಾನಂದ ನಾಯಕ್, ಸುರೇಶ್ ಅತ್ರಮಜಲು, ಶರತ್ ಕೋಟೆ, ಸ್ವರ್ಣೇಶ್ ಗಾಣಿಗ, ರಾಮಣ್ಣ ಶೆಟ್ಟಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ರವೀಂದ್ರ ಆಚಾರ್ಯ , ಸಚಿನ್, ಸುಧಾ ಹೆಗ್ಡೆ, ಸುಧಾಕರ ಶೆಟ್ಟಿ, ವಿದ್ಯಾಧರ ಜೈನ್, ಆನಂದ ಕುಂಟಿನಿ, ಡಾ. ಗೋವಿಂದ ಪ್ರಸಾದ್ ಕಜೆ, ಮತ್ತಿತರರು ಭಾಗವಹಿಸಿದ್ದರು.