ಪುತ್ತೂರು:ಕಾರಣಿಕ ಕ್ಷೇತ್ರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಜಾಗರಣೆಯೂ ಜಾತ್ರೆ ಸಹಿತವಾಗಿ ಪೂರ್ವಶಿಷ್ಟ ಪದ್ಧತಿಯಂತೆ ನಡೆಯುತ್ತದೆ.ಈ ಬಾರಿ ಫೆ.18ರಂದು ಶಿವರಾತ್ರಿ ವೈಭವದಿಂದ ನಡೆಯಲಿದೆ.
ಮಧ್ಯಾಹ್ನ ಹವನ ಅಭಿಷೇಕ ಪೂಜಾದಿಗಳು ಜರಗಿ ರಾತ್ರಿಯ ವೇಳೆಗೆ ಶ್ರೀ ದೇವರ ಉತ್ಸವದ ಬಲಿ ಹೊರಟು, ತಂತ್ರ ಸುತ್ತು ಜರಗಿ ಹೊರಾಂಗಣದಲ್ಲಿ ಉಡಕೆ, ಚಂಡೆ,ವಾದ್ಯ, ಸರ್ವವಾದ್ಯಸುತ್ತುಗಳ ನಂತರ ಕಟ್ಟೆಪೂಜೆ, ಪಲ್ಲಕಿ ಉತ್ಸವ, ಚಂದ್ರಮಂಡಲ ರಥೋತ್ಸವ,ಕೆರೆ ಉತ್ಸವ,ತೆಪ್ಪೋತ್ಸವದೊಂದಿಗೆ ಉತ್ಸವ ಮುಗಿದು, ತಡರಾತ್ರಿಯಲ್ಲಿ ಮಹಾಮಹಿಮಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ,ಬಲಿಉತ್ಸವ ನೆರವೇರಲಿದೆ.ಇದರ ಜೊತೆಗೆ ಪಲ್ಲಕಿ ಉತ್ಸವ ನಡೆದ ಬಳಿಕ ಅಷ್ಟಾವಧಾನ ಸೇವೆ ನಡೆಯಲಿದೆ.
ಶಿವನ ಜಾಗರಣೆ:
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿವನ ಜಾಗರಣೆಯೊಂದಿಗೆ ಪ್ರದಕ್ಷಿಣೆ ನಮಸ್ಕಾರ, ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ.ಉಪವಾಸವೃತ ಕೈಗೊಂಡವರು ಸನ್ನಿಧಿಗೆ ಬಂದು ಅರ್ಘ್ಯಪ್ರದಾನ ಮಾಡುತ್ತಾರೆ.
ಬಿಲ್ವ ಪ್ರಿಯ ಶಿವ:
ಮಹಾಶಿವನು ಜಲಪ್ರಿಯನೂ ಬಿಲ್ವ ಪ್ರಿಯನೂ ಹೌದು.ಬಿಲ್ವಪತ್ರೆಯಲ್ಲಿ ಹೇರಳ ಶಿವತತ್ತ್ವವಿದೆ.ಇದನ್ನು ಅರ್ಚಿಸುವುದರಿಂದ ದೇವತೆಗಳ ಸತ್ವವು ಅಧಿಕಗೊಂಡು ಪರಿಸರದ ರಜ ತಮಗಳ ಪರಿಣಾಮಗಳ ಮೇಲೆ ಪ್ರಭಾವ ಉಂಟಾಗುತ್ತದೆ.ತ್ರಿದಳ ಬಿಲ್ವಪತ್ರೆಯು ಶಿವನ ನೇರ ಧಾರ್ಮಿಕ ಭಾವನೆಗೆ ಒಳಪಟ್ಟಿದೆ.ಶ್ರೀಕೃಷ್ಣನಿಗೆ ತುಳಸೀದಳ ಎಷ್ಟು ಪ್ರಿಯವೋ ಶಿವನಿಗೆ ಬಿಲ್ವವು ಅಷ್ಟೇ ಪ್ರಿಯ.ತ್ರಿದಳ ಬಿಲ್ವಪತ್ರೆಯು ಈಶ್ವರನ ತ್ರಿನೇತ್ರದ ಸಂಕೇತ.ಬಿಲ್ವಪತ್ರ ಔಷಧಿಯುಕ್ತ.ಪುರಾಣದ ಉಲ್ಲೇಖದಂತೆ ಬಿಲ್ವವೃಕ್ಷವು ಮಹಾಲಕ್ಷ್ಮಿಯ ಬಲದ ಕರದಲ್ಲಿರುವ ಕಮಲದಿಂದ ಸೃಷ್ಟಿಯಾಗಿದೆ. ಮರದ ಮುಳ್ಳುಗಳು ಶಕ್ತಿಮಾತೆಯನ್ನು, ಕೊಂಬೆಗಳು ವೇದಗಳನ್ನು,ಬೇರುಗಳು ಈಶ್ವರನನ್ನು ಸಂಕೇತಿಸುತ್ತದೆ.ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವನಿಗೆ ಸಮರ್ಪಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ದೇವಾಲಯಗಳ ಅಧ್ಯಯನಕಾರ ಪಿ.ಜಿ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ವಿವಿಧ ಸೇವೆಗಳು
ಶಿವರಾತ್ರಿಯ ಅಂಗವಾಗಿ ದೇವಳದಲ್ಲಿ ಮಹಾರುದ್ರಯಾಗ, ಏಕ ಬಿಲ್ವಂ ಶಿವಾರ್ಪಣಂ ಸೇವೆ ಜರುಗಲಿದೆ.ಮಹಾರುದ್ರಯಾಗ ಸೇವೆ ಅನ್ನದಾನ ಸಹಿತ ರೂ.1 ಸಾವಿರ, ಮಹಾರುದ್ರಯಾಗ ಸೇವೆ ರೂ.300, ಸಂಕಲ್ಪಸಹಿತ ಬಿಲ್ವಾರ್ಚನೆ ಸೇವೆಗೆ ರೂ.40, ಅನ್ನದಾನ ಸೇವೆಗೆ ರೂ.1 ಸಾವಿರ, ಶತರುದ್ರಾಭಿಷೇಕ ಸೇವೆಗೆ ರೂ.100, ಏಕ ಬಿಲ್ವಂ ಶಿವಾರ್ಪಣಂ ಸೇವೆಗೆ ರೂ.10ನ್ನು ದೇವಳದ ಕೌಂಟರ್‌ನಲ್ಲಿ ನೀಡಿ ರಶೀದಿ ಪಡೆಯುವಂತೆ ದೇವಳದ ಪ್ರಕಟಣೆ ತಿಳಿಸಿದೆ.
ಸಂತತಿ ಫಲ:
ಸಂತಾನ ಪ್ರಾಪ್ತಿಯಾಗದ ದಂಪತಿಗಳು ಒಂದು ಮಂಡಲ ಕಾಲ ಬಿಲ್ವವೃಕ್ಷವನ್ನು ಪೂಜಿಸಿ ಬಿಲ್ವಪತ್ರೆಯನ್ನು ಸೇವಿಸಿದಲ್ಲಿ ಸಂತಾನ ಪ್ರಾಪ್ತಿಯಾಗುವುದು ಎಂಬ ಉಲ್ಲೇಖ ಧರ್ಮಗ್ರಂಥಗಳಲ್ಲಿ ಸಿಗುತ್ತದೆ.ಶ್ರೀವೃಕ್ಷವೆಂದೂ ಕರೆಯಲ್ಪಡುವ ಬಿಲ್ವವೃಕ್ಷದ ಕಡ್ಡಿಗಳನ್ನು ಹವನದಲ್ಲಿ ಆಹುತಿ ನೀಡಿದಾಗ ಶುಭ ಫಲಗಳು ಪ್ರಾಪ್ತಿಯಾಗುತ್ತದೆ.–ಪಿ.ಜಿ.ಚಂದ್ರಶೇಖರ್ ರಾವ್ , ದೇವಾಲಯಗಳ ಅಧ್ಯಯನಕಾರ