ಸದಸ್ಯರಲ್ಲಿ ವಿಚಾರಿಸದೆ ಬ್ಯಾನರ್ ತೆಗೆದ ವಿಚಾರ: ಕಲಾಪ ಬಿಟ್ಟು ಹೊರ ನಡೆದ ಸದಸ್ಯರು
ರದ್ದುಗೊಂಡ‌ ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆ

0

ಬೆಟ್ಟಂಪಾಡಿ: ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಬ್ಯಾನರ್ ಗಳನ್ನು ಪಂಚಾಯತ್ ಸದಸ್ಯರ ಗಮನಕ್ಕೆ ಬಾರದೆ ಪಿಡಿಒರವರು ತೆಗೆಸಿದ ವಿಚಾರ ಮುಂದಿಟ್ಟುಕೊಂಡು ಬಹುತೇಕ ಸದಸ್ಯರು ಸಾಮಾನ್ಯ ಸಭೆ ಕಲಾಪ ಬಿಟ್ಟು ಹೊರನಡೆದ ಘಟನೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ನಲ್ಲಿ ಫೆ. 17 ರಂದು ನಡೆದಿದೆ.

ಸಭೆಯು ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ. ಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತ್ತು.
ಪಿಡಿಒ ಸೌಮ್ಯರವರು ಲೆಕ್ಕಪತ್ರ ವರದಿ ಮಂಡಿಸಲು ಆರಂಭಿಸುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಸದಸ್ಯೆ ಉಮಾವತಿಯವರು ‘ಬ್ಯಾನರ್ ತೆಗೆಯಲು ಪಂಚಾಯತ್ ಗೆ ಸುತ್ತೋಲೆ ಬಂದಿದೆಯಾ ? ಮೊದಲು ಅದನ್ನು ಸಭೆಯ ಮುಂದಿಡಿ’ ಎಂದರು. ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಸದಸ್ಯರಾದ ಪ್ರಕಾಶ್ ರೈ, ಮಹೇಶ್ ಕೆ., ಗಂಗಾಧರ, ಚಂದ್ರಶೇಖರ್ ರೈ, ಪಾರ್ವತಿ, ವಿದ್ಯಾಶ್ರೀ ಮತ್ತಿತರರು ಸಭೆಯಲ್ಲಿ ತೀವ್ರ ಗದ್ದಲ ಎಬ್ಬಿಸಿದರು. ಬ್ಯಾನರ್ ತೆಗೆಯಬೇಕಾದರೆ ಪಂಚಾಯತ್ ನ ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತಂದು ಬಳಿಕ ತೆಗೆಯಬೇಕಿತ್ತು. ಕೇವಲ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒರವರು ತೀರ್ಮಾನ ತೆಗೆದುಕೊಳ್ಳುವುದಾದರೆ ಉಳಿದ ಸದಸ್ಯರು ಯಾಕೆ ? ಸಾಮಾನ್ಯ ಸಭೆ ಯಾಕೆ ? ನಿಮಗೇ ಪಂಚಾಯತ್ ನಡೆಸಬಹುದಲ್ವಾ ಎಂದು ಆರೋಪಿಸಿದ ಸದಸ್ಯರು ಕಲಾಪ ಬಿಟ್ಟು ಹೊರನಡೆದರು.

ಇತ್ತೀಚೆಗೆ ನಡೆದ ಪಂಚಾಯತ್ ಗ್ರಾಮ ಸಭೆಯಲ್ಲಿ ಗ್ರಾಮಸ್ಥರೋರ್ವರು ಬ್ಯಾನರ್ ವಿಷಯ ಪ್ರಸ್ತಾಪಿಸಿ ನ್ಯಾಯಾಲಯದ ಆದೇಶವನ್ನು ಪ್ರಸ್ತಾಪಿಸಿದ್ದರು‌. ಆಗ ಸದಸ್ಯ ಪ್ರಕಾಶ್ ರೈ ಯವರು ’10 ದಿನಗಳೊಳಗಾಗಿ ತೆಗೆಯುತ್ತೇವೆ’ ಎಂದಿದ್ದರು. ಆದರೆ ಫೆ. 15 ರಂದು ಏಕಾಏಕಿ ಸದಸ್ಯರ ಗಮನಕ್ಕೆ ಬಾರದೆ ಬ್ಯಾನರ್ ಗಳನ್ನು ಹರಿದು ತೆಗೆದಿರುವುದು ಕಾರ್ಯಕರ್ತರಿಗೆ ನೋವು ಅವಮಾನ ಮಾಡಿದಂತಾಗಿದೆ ಎಂದು ಹೊರನಡೆದಿರುವ ಸದಸ್ಯರು ಹೇಳಿದರು.

ಅಧ್ಯಕ್ಷರು, ಉಪಾಧ್ಯಕ್ಷರಿದ್ದೇ ನಿರ್ಣಯ ಮಾಡಿದ್ದೆವು
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಒ ಸೌಮ್ಯರವರು ಗ್ರಾಮ ಸಭೆಯ ದಿನ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದೇ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದೆವು’. ಉಪಾಧ್ಯಕ್ಷರಿಗೆ ಹೇಳಿದ ನಂತರ ಪಂಚಾಯತ್ ಸಿಬಂದಿ ಹೋಗಿ ಬ್ಯಾನರ್ ತೆಗೆದಿದ್ದಾರೆ’ ಎಂದರು.

ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ವಿನೋದ್ ರೈಯವರು ಗೈರಾಗಿದ್ದುದರಿಂದ ಈ ಬಗ್ಗೆ ಕೇಳಲು ಪ್ರಕಾಶ್ ರೈಯವರು ವಿನೋದ್ ರೈಯವರಿಗೆ ಕರೆ ಮಾಡಿ ವಿಚಾರಿಸಿದರು. ಈ ವೇಳೆ ತುಸು ಗೊಂದಲ ಉಂಟಾಯಿತು.

ಅಧ್ಯಕ್ಷರು ಉಪಾಧ್ಯಕ್ಷರಲ್ಲದೇ ಇತರ ಸದಸ್ಯರೊಡನೆಯೂ ಕೇಳಿ ನಂತರ ಬ್ಯಾನರ್ ತೆಗೆಯಬೇಕಿತ್ತು’ ಎಂದು ಪಿಡಿಒ ವಿರುದ್ದ ಗರಂ ಆದ ಕೆಲ ಸದಸ್ಯರು ಕಲಾಪದಿಂದ ಹೊರ ನಡೆದರು‌. ಅವರಿಗೆ ಬೆಂಬಲವಾಗಿ ಇತರ ಕೆಲ ಸದಸ್ಯರೂ ಹೊರ ನಡೆದರು. ಕೊನೆಗೆ ಸುಮ್ಮನೆ ಕುಳಿತಿದ್ದ ಇತರ ಸದಸ್ಯರೂ ಸಾಮಾನ್ಯ ಸಭೆ ರದ್ದಾಯಿತೆಂದು ಹೇಳಿ ಹೊರ ಹೋದರು. ಅಧ್ಯಕ್ಷೆ ಮತ್ತು ಪಿಡಿಒರವರು ಸಭೆಯನ್ನು ಮೊಟಕುಗೊಳಿಸಿದರು.

ಸಭೆಯ ಆರಂಭದಲ್ಲಿ ಸದಸ್ಯರಾದ ಪ್ರಕಾಶ್ ರೈ, ಪಾರ್ವತಿ, ಉಮಾವತಿ, ಮಹೇಶ್, ಚಂದ್ರಶೇಖರ ರೈ, ಗಂಗಾಧರ ಎಂ.ಎಸ್., ವಿದ್ಯಾಶ್ರೀ, ಮೊಯಿದುಕುಂಞಿ, ಲಲಿತಾ ಚಿದಾನಂದ, ಲಲಿತಾ, ರಮ್ಯಾ ಕೆ. ಹಾಜರಿದ್ದರು.

LEAVE A REPLY

Please enter your comment!
Please enter your name here