ಪುತ್ತೂರು: ಕೆಲವು ಕಡೆ ಭೌಗೋಳಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಬನ್ನೂರಿನಲ್ಲಿ ಶಾಶ್ವತ ಆರೋಗ್ಯ ಕೇಂದ್ರ ಎಂಬ ಬೇಡಿಕೆಯನ್ನು ಒಂದು ಹಂತದಲ್ಲಿ ನೀಗಿಸುವ ಕೆಲಸ ನಮ್ಮ ಕ್ಲಿನಿಕ್ ಮೂಲಕ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
“ನಗರದ ಬಡವರ, ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ಜನರು ಮತ್ತು ಗುಡಿಸಲುಗಳಲ್ಲಿ ವಾಸಿಸುವ ಜನರ ಆರೋಗ್ಯ ಅಗತ್ಯಗಳನ್ನು ಪರಿಹರಿಸಲು ಸರಕಾರ ಕಾರ್ಯಕ್ರಮವನ್ನು ಕೇಂದ್ರೀಕರಿಸಲಾಗಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರಂಭಿಸಲಾದ ದ.ಕ.ಜಿಲ್ಲೆಯ 11ನೇ ನಮ್ಮ ಕ್ಲಿನಿಕ್ ಬನ್ನೂರಿನಲ್ಲಿ ಫೆ.18ರಂದು ಅವರು ಉದ್ಘಾಟಿಸಿ ಬಳಿಕ ನಡೆದ ಸಮಾಂಭದಲ್ಲಿ ಮಾತನಾಡಿದರು. ದೇಶದ ಪ್ರಧಾನಿ ಯೋಗವನ್ನು ಪ್ರಪಂಚಕ್ಕೆ ಪರಿಚಯ, ಪಾರಂಪರಿ ಆರ್ಯವೇದ ವೈದ್ಯವನ್ನು ಪರಿಚಯಿಸಿದರು. ಆಯುಷ್ಮಾನ್ ಭಾರತ್ ಯೋಜನೆ ಹೀಗೆ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಯೋಜನೆಯನ್ನೂ ಜಾರಿಗೆ ತಂದಿದ್ದಾರೆ. ಇವೆಲ್ಲದರ ಜೊತೆಗೆ ಎಲ್ಲಾ ಆರೋಗ್ಯ ಕೇಂದ್ರದಲ್ಲಿ ನೂರಕ್ಕೆ ನೂರು ವೈದ್ಯರ ನೇಮಕವನ್ನೂ ಮಾಡುವ ಮೂಲಕ ಮನೆ ಬಾಗಿಲಿಗೆ ಆಸ್ಪತ್ರೆ ಎಂಬ ಸಂದೇಶ ಕೊಡುವ ಕೆಲಸ ನಮ್ಮ ರಾಜ್ಯ ಸರಕಾರ ಮಾಡುತ್ತಿದೆ ಎಂದರು.
ಜಿಲ್ಲೆಗೆ ಇನ್ನೂ 5 ಕ್ಲಿನಿಕ್ ಬರಲಿದೆ:
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ಮಾತನಾಡಿ ಜಿಲ್ಲೆಗೆ 12 ನಮ್ಮ ಕ್ಲಿನಿಕ್ ಮಂಜೂರಾಗಿತ್ತು. ಅದರಲ್ಲಿ 11ನೇ ಕ್ಲಿನಿಕ್ ಪುತ್ತೂರಿನಲ್ಲಿ ಉದ್ಘಾಟನೆ ಗೊಂಡಿದೆ. ವಿಟ್ಲ ಭಾಗದಲ್ಲಿ 12ನೇ ಕ್ಲಿನಿಕ್ ಉದ್ಘಾಟನೆಗೊಳ್ಳಲಿದೆ. ಮುಂದೆ ಇನ್ನೂ 5 ಕ್ಲಿನಿಕ್ ಬರಲಿದೆ. ಪ್ರತಿಯೊಬ್ಬ ಪ್ರಜೆಯು ಆರೋಗ್ಯವಂತರಾಗಿರಬೇಕೆಂಬ ನಿಟ್ಟಿನಲ್ಲಿ ಸರಕಾರ ಯೋಜನೆ ಜಾರಿಗೆ ತರುತ್ತಿದೆ ಎಂದರು.
ಎಸ್ಸಿಎಸ್ಟಿ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ನಮ್ಮ ಕ್ಲಿನಿಕ್:
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಕ್ಲಿನಿಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅತೀ ಹೆಚ್ಚಿರುವ ಅಥವಾ ಕಾಲೋನಿಗಳಿರುವ ಪರಿಸರದಲ್ಲಿ ನಗರಸಭೆ ವ್ಯಾಪ್ತಿಯ 5 ಕಿ.ಮೀ ದೂರದಲ್ಲಿ ಮಾಡಬೇಕೆಂಬ ಸೂಚನೆಯಂತೆ ಬನ್ನೂರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕಟ್ಟಡದ ಸಮಸ್ಯೆಯಿಂದ ಉದ್ಘಾಟನೆಗೆ ತಡವಾಯಿತು. ಇದೀಗ ಮನೆಯೊಂದನ್ನು ಕ್ಲಿನಿಕ್ ಆಗಿ ಪರಿವರ್ತಿಸಲಾಗಿದೆ. ಇಲ್ಲಿ ಸುಮಾರು 12 ಕಾರ್ಯಕ್ರಮಗಳು ನಮ್ಮ ಕ್ಲಿನಿಕ್ ಮೂಲಕ ಸಿಗಲಿದೆ. ಎಲ್ಲವು ಉಚಿತವಾಗಿರಲಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಶುಭ ಹಾರೈಸಿದರು. ನಮ್ಮ ಕ್ಲಿನಿಕ್‌ಗೆ ಕಟ್ಟಡ ಕೊಟ್ಟ ಹರೀಶ್ ಮಲ್ಯ, ಗಾಯತ್ರಿ ದಂಪತಿಯನ್ನು ಆರೋಗ್ಯ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಆರೋಗ್ಯ ಇಲಾಖೆ ಕಚೇರಿಯ ಸಿಬ್ಬಂದಿ ಚಿತ್ರಾ ರೈ ಪ್ರಾರ್ಥಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ ರವಿ ಸ್ವಾಗತಿಸಿದರು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಕೃಷ್ಣಾನಂದ ವಂದಿಸಿದರು. ತಾಲೂಕು ಆಶಾ ಸಮಾಲೋಚಕಿ ಹರಿಣಿ ಕಾರ್ಯಕ್ರಮ ನಿರೂಪಿಸಿದರು.
ಆರ್ ಸಿ ಎಚ್ ಅಧಿಕಾರಿ ರಾಜೇಶ್ ಬಿ ವಿ, ತಾಲೂಕು ನೋಡೆಲ್ ಅಧಿಕಾರಿ ಡಾ. ಬದ್ರುದ್ದಿನ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಸಂಜನಾ, ಲಕ್ಷ್ಮೀ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜೆಸಿಂತಾ, ಶಾಂತಾ, ರವಿ, ಪೂಜಾ, ಸುಶ್ಮಿತಾ, ಚಿತ್ರಾ ಅತಿಥಿಗಳನ್ನು ಗೌರವಿಸಿದರು. ನಮ್ಮ ಕ್ಲಿನಿಕ್‌ನಲ್ಲಿ ಆರೋಗ್ಯಾಧಿಕಾರಿಯಾಗಿರುವ ಡಾ. ಸಂಜನಾ ಅವರು ಅಂಬಿಕಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿರುವ ಹಿನ್ನೆಲೆಯಲ್ಲಿ ಆಕೆಗೆ ಅಂಬಿಕಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರು ಶುಭ ಹಾರೈಸಿದರು.
ನಗರಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಲೀಲಾವತಿ, ಮೋಹಿನಿ ವಿಶ್ವನಾಥ ಗೌಡ, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಮೂಲ್ಯ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಶೆಟ್ಟಿ, ಸ್ಪೂರ್ತಿ ಯುವ ಸಂಸ್ಥೆಯ ಸಂಚಾಲಕ ದಿನೇಶ್ ಸಾಲಿಯಾನ್, ರಾಧಾಕೃಷ್ಣ ಗೌಡ ಬನ್ನೂರು, ರಮೇಶ್ ಗೌಡ, ಸುಲೋಚನಾ, ರಾಜೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.