ಮಗುವಿನ ಆಸಕ್ತಿಗನುಗುಣವಾಗಿ ಶಿಕ್ಷಣ ನೀಡುವಂತಾಗಲಿ-ಲೋಕೇಶ್ ಎಸ್.ಆರ್
ಚಿತ್ರ: ಕೃಷ್ಣಾ ಪುತ್ತೂರು
ಪುತ್ತೂರು:ತಮ್ಮ ಮಗು ಭವಿಷ್ಯದಲ್ಲಿ ಏನಾಗಬೇಕೆಂಬ ಸಾಕಷ್ಟು ಕನಸುಗಳನ್ನು ಹೆತ್ತವರು ತಮ್ಮ ಮಕ್ಕಳಲ್ಲಿ ಇಟ್ಟುಕೊಂಡಿರುತ್ತಾರೆ. ಮಗುವು ಸಣ್ಣ ಹರೆಯದಲ್ಲಿಯೇ ಯಾವ ಕ್ಷೇತ್ರದಲ್ಲಿ ಅದರ ವರ್ತನೆಯಿದೆ ಎಂದು ಗ್ರಹಿಸಿ ಆ ಕ್ಷೇತ್ರದಲ್ಲಿ ಸಾಗುವ ಭರವಸೆಯ ಪ್ರಯತ್ನ ಮಾಡುವಲ್ಲಿ ಹೆತ್ತವರ ಜವಾಬ್ದಾರಿಯಾಗಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹೇಳಿದರು.
ಫೆ.17 ರಂದು ನೆಹರುನಗರದಲ್ಲಿನ ಸುದಾನ ವಸತಿಯುತ ಶಾಲೆಯ ‘ಇರುವುದೊಂದೇ ಭೂಮಿ ಉಳಿಸೋಣ ಬನ್ನಿ’ ಎಂಬ ಪರಿಕಲ್ಪನೆಯೊಂದಿಗೆ ಎಲ್ಕೆಜಿ, ಯುಕೆಜಿ ಪುಟಾಣಿ ಮಕ್ಕಳ ಕಿಂಡರ್ ಕೇರ್ ಘಟಿಕೋತ್ಸವ ಮತ್ತು 2022-23ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯು ಸುದಾನ ಉದ್ಯಾನ ಆವರಣದಲ್ಲಿ ಸಂಜೆ ಜರಗಿದ್ದು, ಈ ಘಟಿಕೋತ್ಸವದಲ್ಲಿ ಅವರು ಸಮನ್ವಯಕಾರರಾಗಿ ಪುಟಾಣಿ ಮಕ್ಕಳಿಗೆ ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು. ಕನಸುಗಳು ಈಡೇರಬೇಕಾದರೆ ಮಗು ಶಾಲೆಯಲ್ಲಿ ಹೇಗೆ ಕಲಿಯಬೇಕು ಮಾತ್ರವಲ್ಲ ಹೆಚ್ಚಿನ ಸಮಯ ಕಳೆಯುವ ಮನೆಯಲ್ಲಿ ತಾಯಂದಿರು ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಮಕ್ಕಳಿಗೆ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡುವಂತಾಗಬೇಕು ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಾ ಉನ್ನತ ಹುದ್ದೆಗಳನ್ನು ಅಲಂಕರಿಸುವವರಾಗಬೇಕು ಎಂದರು.
ಮುಖ್ಯ ಅತಿಥಿ, ವಿವೇಕಾನಂದ ಪದವಿ ಅಡ್ವಾನ್ಸ್ ಅಧ್ಯಯನ ಕೇಂದ್ರದ ಪ್ರೊಫೆಸರ್ ಹಾಗೂ ಡೀನ್ ಡಾ|ವಿಜಯ ಸರಸ್ವತಿ ಬಿರವರು ಮಾತನಾಡಿ, ಮಗುವಿನ ಕನಸು ಹಾಗೂ ಆಸೆ ಏನಿದೆಯೋ ಅದನ್ನು ಅರ್ಥಮಾಡಿಕೊಂಡು ಬೆಳೆಯಲು ಪ್ರೋತ್ಸಾಹಿಸಬೇಕು. ಬಾಹ್ಯ ಒತ್ತಡಗಳಿಂದ ಮಗುವಿನ ಪ್ರಗತಿ ಸಾಧ್ಯವಿಲ್ಲ. ಆಂತರಿಕವಾಗಿ ಪ್ರೇರಣೆ ಮೂಡಬೇಕು. ಮಗುವಿನಲ್ಲಿರುವ ಜೀವನೋತ್ಸಾಹವನ್ನು ಅರಳಿಸುವುದೇ ನಿಜವಾದ ಯಶಸ್ಸು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸುದಾನ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ನಾಗಾರಾಜುರವರು ಮಾತನಾಡಿ, ಸುದಾನದಲ್ಲಿ ಹೊಸ ಚಿಗುರುಗಳು ಹಾಗೂ ಹಳೆಯ ಬೇರುಗಳು ಜೊತೆಯಾಗಿ ಸೇರುವಂತಹ ಅಭಿನಂದಿಸುವ ಅರ್ಥಪೂರ್ಣವಾದ ದಿನ. ಇದುವರೆಗೂ ಆಟದೊಂದಿಗೆ ಪಾಠವನ್ನು ಕಲಿಯುತ್ತಿದ್ದ ಮಕ್ಕಳು ಇನ್ನು ಮುಂದೆ ವಿದ್ಯುಕ್ತವಾಗಿ ಕ್ರಮಬದ್ಧ ಶಿಕ್ಷಣ ವ್ಯವಸ್ಥೆಗೆ ಪಾದಾರ್ಪಣೆ ಮಾಡಲಿದ್ದಾರೆ. ಇದು ಮಕ್ಕಳ ಶಿಸ್ತುಬದ್ಧ ಹಾಗೂ ಆಸಕ್ತಿದಾಯಕ ಕಲಿಕೆಗೆ ದಾರಿ ತೋರಲಿದೆ ಎಂದರು.
ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯ ಅಂಗವಾಗಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಹರ್ಷಿತ್ ಎಂ.ಬಿರವರು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಶ್ರಮವಿರುತ್ತದೆ. ವಿದ್ಯಾರ್ಥಿಗಳ ಜೀವನದ ಯಶಸ್ಸಿಗೆ ಶಿಕ್ಷಕರು ಅಭಿಮಾನ ಪಡುತ್ತಾರೆ. ಸುದಾನ ಶಾಲೆಯಲ್ಲಿ ಇಂತಹ ವಾತಾವರಣವಿದೆ ಎಂದರು.
ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ|ಮಾಧವ ಭಟ್, ಸುದಾನ ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್, ಕಾರ್ಯದರ್ಶಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷ ಮಾಮಚ್ಚನ್ ಎಂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ|ರಾಜೇಶ್ ಬೆಜ್ಜಂಗಳ, ಸುದಾನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಶಾಂತ್ ಹಾರ್ವಿನ್, ಉಪಾಧ್ಯಕ್ಷ ಡಾ.ವಿಖ್ಯಾತ್ ನಾರಾಯಣ್, ಕಾರ್ಯದರ್ಶಿ ಸತ್ಯಾತ್ಮ ಭಟ್ ಉಪಸ್ಥಿತರಿದ್ದರು.
ಒಂದನೇ ತರಗತಿಯ ಬೇಬಿ ಆರಾಧ್ಯ ಜೈನ್ ಹಾಗೂ ಬೇಬಿ ಅನಿಕಾ ಪಿ.ಜೆ ಸ್ವಾಗತಿಸಿದರು. ಶಾಲಾ ನಾಯಕ ಸನ್ವರ್ಯ ರೈ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಯುಕೆಜಿಯ ಬೇಬಿ ಮಾಹುಮ್ ಮರಿಯಂ ಹಾಗೂ ಬೇಬಿ ಲಕ್ಷ್ಯ ಪಿ.ಎಂ ಹಾಗೂ ಉಪ ಮುಖ್ಯ ಶಿಕ್ಷಕಿ ಲವೀನಾ ಹನ್ಸ್ ವಂದಿಸಿದರು. ಶಿಕ್ಷಕಿ ವಿನಯ ರೈ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕರಾದ ರೇಶ್ಮಾ ಬಲ್ನಾಡು ಹಾಗೂ ಗೀತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಲ್.ಕೆ.ಜಿ, ಯುಕೆಜಿ ಹಾಗೂ ಪ್ರೀ ಕೆ.ಜಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಲಿಟಲ್ ಚ್ಯಾಂಪ್ಸ್ ಗೌರವ…
ಎಳವೆಯಲ್ಲೇ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ವಿಶೇಷ ಸಾಧನೆ ಮಾಡಿದ ಪುಟಾಣಿಗಳಾದ ಈಜು ಸ್ಪರ್ಧೆಯಲ್ಲಿ, ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ವಿಶೇಷ ಸಾಧನೆ ಮಾಡಿದ ಜೊತೆಗೆ ಕಲಿಕೆಯಲ್ಲಿ ಹಾಗೂ ಡ್ರಾಯಿಂಗ್ನಲ್ಲಿ ಗಮನಾರ್ಹ ಸಾಧನೆಗೈಯ್ದಿರುವ ಯುಕೆಜಿ ಪುಟಾಣಿ ವಿಷ್ಣು ಭಟ್ ಹಾಗೂ ಪ್ರೀತಿರವರ ಪುತ್ರ ಮಾಸ್ಟರ್ ಅಮೋಘ್ ಕೆ ಹಾಗೂ ಸುದ್ದಿ ಗ್ರೂಪ್ ಆಫ್ ಕಂಪೆನಿ ನಡೆಸಿದ ಪರ್ಲ್ ಸಿಟಿ ಮುದ್ದು ಪುಟಾಣಿ ಸ್ಪರ್ಧೆಯಲ್ಲಿ ವಿನ್ನರ್ ಎನಿಸಿದ ಹಾಗೂ ಸಕ್ರಿಯ ಪುಟಾಣಿ, ಉತ್ತಮ ನರೇಟರ್ ಆಗಿರುವ ಯುಕೆಜಿ ಪುಟಾಣಿ, ಅಬೂಬಕ್ಕರ್ ಹಾಗೂ ನಸ್ರೀನ್ರವರ ಪುತ್ರಿ ಮಹೂಂ ಮರಿಯಂರವರಿಗೆ ಅತಿಥಿ ಗಣ್ಯರು ‘ಲಿಟಲ್ ಚ್ಯಾಂಪ್ಸ್’ ಗೌರವ ನೀಡಿ ಅಭಿನಂದಿಸಲಾಯಿತು.
ಭಿತ್ತಿಪತ್ರಿಕೆ ಬಿಡುಗಡೆ..
ವಿದ್ಯಾರ್ಥಿಗಳಲ್ಲಿನ ಸೂಕ್ತ ಪ್ರತಿಭೆಯನ್ನು ಹೊರ ಸೂಸಲು ಶಾಲೆಯ ಲಹರಿ ಸಾಹಿತ್ಯ ಸಂಘವು ‘ವಾಯ್ಸ್ ಆಫ್ ಸುದಾನ’ ಎಂಬ ಭಿತ್ತಿಪತ್ರಿಕೆಯನ್ನು ಹೊರ ತಂದಿದ್ದು, ಈ ಭಿತ್ತಿಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರು ನೆರವೇರಿಸಿದರು.