ಪುತ್ತೂರು ಡಾ| ಶ್ರೀಧರ್ ಭಂಡಾರಿ ಸಂಸ್ಮರಣಾ ಕಾರ್ಯಕ್ರಮ, ಯಕ್ಷಗಾನ ಬಯಲಾಟ : ಡಾ|ಶ್ರೀಧರ್ ಭಂಡಾರಿ ಯಕ್ಷದೇಗುಲ ಪ್ರಶಸ್ತಿ ಪ್ರದಾನ, ಯಕ್ಷ ರಕ್ಷಾ ನಿಧಿ ವಿತರಣೆ

0

ಮನಸ್ಸಿನಲ್ಲಿ ಉಳಿಸಿಕೊಳ್ಳುವ ಸೇವೆಯನ್ನು ಯಕ್ಷಗಾನ ರಂಗಕ್ಕೆ ನೀಡಿದವರು- ಎಡನೀರು ಶ್ರೀ
ಕಲಾಸೇವಕರನ್ನು ಆರಾಧಿಸುವುದು ಉತ್ತಮ ಕಾರ್ಯ – ಸಂಜೀವ ಮಠಂದೂರು
ಸ್ವ ಪ್ರಯತ್ನದಿಂದ ಅಭಿಮಾನಗಳಿಸಿದವರು- ಡಾ|ಟಿ.ಶ್ಯಾಮ ಭಟ್
ಯಕ್ಷಗಾನ ಕಲಾವಿದರಿಗೆ, ಕುರಿಯಕ್ಕೆ ನೀಡಿದ ಸನ್ಮಾನ – ಗಣಪತಿ ಶಾಸ್ತ್ರೀ
ಶ್ರೀಧರ್ ಭಂಡಾರಿಯವರ ಮಕ್ಕಳಿಗೆ ದೇವರ ಅನುಗ್ರಹವಿರಲಿ – ಶಕುಂತಳಾ ಶೆಟ್ಟಿ
ಶಾಲೆಗಳಲ್ಲೂ ಯಕ್ಷಗಾನ ಕಲೆಗೆ ಪ್ರೋತ್ಸಾಹ ಸಿಗಲಿ – ಕೇಶವಪ್ರಸಾದ್ ಮುಳಿಯ
ತನ್ನ ಶಿಷ್ಯರ ಗೆಲುವಿನಲ್ಲಿ ತನ್ನ ಗೆಲುವನ್ನು ಕಂಡವರು -ಮಹೇಶ್ ಕಜೆ
ನಮ್ಮ ಒಂದೊಂದು ಅಗಳು ಯಕ್ಷಗಾನದ್ದು-ಅನಿಲಾ ದೀಪಕ್ ಶೆಟ್ಟಿ

ಪುತ್ತೂರು:ಯಕ್ಷಗಾನದ ಸಿಡಿಲಮರಿ ರಂಗಸ್ಥಳದ ರಾಜ, ಯಕ್ಷನಾಟ್ಯ ಚತುರ, ಶತ ಧಿಗಿಣಗಳ ಸರದಾರ, ಯಕ್ಷಗಾನ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿರುವ ಯಕ್ಷರಂಗದ ದಿಗ್ಗಜ ಪುತ್ತೂರು ಡಾ| ಶ್ರೀಧರ್ ಭಂಡಾರಿಯವರ ಕುಟುಂಬದವರಿಂದ ೨ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮ ಫೆ.೧೯ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ನಡುವೆ ನಡೆದ ಸಮಾರಂಭದಲ್ಲಿ ಡಾ| ಶ್ರೀಧರ್ ಭಂಡಾರಿ ಅವರ ಭಾವ ಚಿತ್ರದ ಎದುರು ಎಡನೀರು ಶ್ರೀಗಳು ದೀಪ ಪ್ರಜ್ವಲನೆ ಮಾಡಿದರು. ಬಳಿಕ ಡಾ| ಶ್ರೀಧರ ಭಂಡಾರಿ ಕುಟುಂಬದವರಿಂದ ಯಕ್ಷಗಾನದ ಹಿರಿಯ ಭಾಗವತ ಕುರಿಯ ಶ್ರೀ ಗಣಪತಿ ಶಾಸಿಯವರಿಗೆ ಡಾ| ಶ್ರೀಧರ ಭಂಡಾರಿ ಯಕ್ಷದೇಗುಲ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಶ್ರೀಧರ್ ಭಂಡಾರಿಯವರ ಪ್ರವಾಸಿ ಯಕ್ಷಗಾನ ಕಲಾ ಸಂಘದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ವಾಮನ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಆಶಾ ವಾಮನ್ ಕುಮಾರ್ ಅವರಿಗೆ ಱಯಕ್ಷ ರಕ್ಷಾ ನಿಽೞ ಸಮರ್ಪಣೆ ಮಾಡಲಾಯಿತು.

ಮನಸ್ಸಿನಲ್ಲಿ ಉಳಿಸಿಕೊಳ್ಳುವ ಸೇವೆಯನ್ನು ಯಕ್ಷಗಾನ ರಂಗಕ್ಕೆ ನೀಡಿದವರು:

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.ಶ್ರೀಧರ್ ಭಂಡಾರಿಯವರ ನೆನಪುಗಳು ಇನ್ನೂ ಹಸಿರಾಗಿ ನಿಂತಿರುವುದಕ್ಕೆ ಅವರು ಯಕ್ಷಗಾನಕ್ಕೆ ನೀಡಿದ ಸೇವೆ ಮತ್ತು ಪಡೆದ ಸಾಧನೆ ಕಾರಣವಾಗಿದೆ.ಅವರ ಮನೆಮಂದಿ ಸೇರಿಕೊಂಡು ತಂದೆ ನೆನಪಿನಲ್ಲಿ ಇಂತಹ ಕಾರ್ಯಕ್ರಮ ಮಾಡಿ ಇನ್ನಷ್ಟು ಅರ್ಥಪೂರ್ಣವಾಗಿರಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ಮತ್ತು ನಿಽ ಸಮರ್ಪಣೆ ಕಾರ್ಯಕ್ರಮ ಅವರ ನೆನಪನ್ನು ಮತ್ತಷ್ಟು ಕಾಡುತ್ತದೆ.ಯಕ್ಷಗಾನದಲ್ಲಿ ಬಬ್ರುವಾಹನ, ಅಭಿಮನ್ಯು, ರತಿಕಲ್ಯಾಣದ ಕೃಷ್ಣನ ಪಾತ್ರವನ್ನು ನೋಡುವಾಗ ನಮ್ಮಲ್ಲಿ ಇನ್ನಷ್ಟು ಶ್ರೀಧರ್ ಭಂಡಾರಿಯವರು ಕಾಣುತ್ತಾರೆ.ತನ್ನದೇ ಆದ ರೀತಿಯಲ್ಲಿ ಪಾತ್ರಗಳನ್ನು ನಿರೂಪಿಸಿದ ಅವರು ಬೇರೆ ಯಾರಿಂದಲೂ ಸಾಧ್ಯವಿಲ್ಲ ಅನ್ನುವಂತಹ ರೀತಿಯಲ್ಲಿ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ಪಾತ್ರವನ್ನು ತೋರಿಸಿಕೊಟ್ಟು ಮುಂದಿನ ಪೀಳಿಗೆಗೆ ಕೂಡಾ ಅದನ್ನು ವರ್ಗಾಯಿಸಿದ್ದಾರೆ.ಹತ್ತು ಹಲವು ಶಿಷ್ಯರನ್ನು ತಯಾರಿಸಿ ಅವರಲ್ಲಿ ಯಕ್ಷಗಾನ ಅಭಿರುಚಿಯನ್ನು ಹುಟ್ಟಿಸಿದ ಮೇರು ಕಲಾವಿದನಿಗೂ ಎಡನೀರು ಮಠಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಅವರು ಕಲಾವಿದ ಮಾತ್ರವಲ್ಲದೆ ಅತ್ಯುನ್ನತ ಸಜ್ಜನ ಸಹೃದಯಿ ವ್ಯಕ್ತಿಯಾಗಿದ್ದು ಮನಸ್ಸಿನಲ್ಲಿ ಉಳಿಸಿಕೊಳ್ಳುವ ಸೇವೆಯನ್ನು ಯಕ್ಷಗಾನ ರಂಗಕ್ಕೆ ನೀಡಿದ್ದಾರೆ ಎಂದರು.

ಕಲಾಸೇವಕರನ್ನು ಆರಾಽಸುವುದು ಉತ್ತಮ ಕಾರ್ಯ:

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪರಶುರಾಮ ಭೂಮಿಯಲ್ಲಿ ವೈಶಿಷ್ಟಪೂರ್ಣ ಕಲೆ ಹುಟ್ಟಿದೆ. ತುಳುನಾಡು ಎಂದರೆ ಯಕ್ಷಗಾನ, ಯಕ್ಷಗಾನ ಇಲ್ಲದಿದ್ದರೆ ತುಳುನಾಡು ಇಲ್ಲ. ಕಲಾ ಸೇವೆ ನೀಡುವ ಈ ನಾಡಿನಲ್ಲಿ ನಾಗಾರಾಧನೆ, ಭಜನೆ, ಭೂತಾರಾಧನೆ ಜೊತೆಗೆ ಕಲೆಯ ಆರಾಧನೆ ಮಾಡುತ್ತಿದ್ದೇವೆ.ಯಾಕೆಂದರೆ ಯಕ್ಷಗಾನ ಆಡಿಸುವ ಮೂಲಕ ದೇವರನ್ನು ಕಾಣುವ ನಂಬಿಕೆ ಇದೆ. ಶ್ರೀಧರ್ ಭಂಡಾರಿಯವರ ಕಲಾಸೇವೆಯನ್ನು ಗುರುತಿಸಿ ನಮ್ಮ ಸರಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.ಇವತ್ತು ಅವರ ಮಕ್ಕಳಿಂದ ಕಲಾಸೇವಕರನ್ನು ಆರಾಧಿಸುವ ಕೆಲಸ ಆಗುತ್ತಿದೆ. ಇದು ಉತ್ತಮ ಕಾರ್ಯ ಎಂದರು.

ಸ್ವ ಪ್ರಯತ್ನದಿಂದ ಅಭಿಮಾನ ಗಳಿಸಿದವರು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ|ಟಿ.ಶ್ಯಾಮ ಭಟ್ ಅವರು ಮಾತನಾಡಿ ತನ್ನ ಪ್ರಯತ್ನ, ಉತ್ತಮ ಪ್ರದರ್ಶನ ನೀಡಿ ಜನಮಾನಸದಲ್ಲಿ ಉಳಿದು ಕೊಂಡವರು ಶ್ರೀಧರ್ ಭಂಡಾರಿಯವರು.ಅವರು ಇವತ್ತಿನಂತೆ ವಾಟ್ಸಪ್ ಗ್ರೂಪ್‌ನಲ್ಲಿ ವೈಭವೀಕರಿಸಲ್ಪಟ್ಟ ಕಲಾವಿದರಲ್ಲ.ಸ್ವ ಪ್ರಯತ್ನದಿಂದ ಅಭಿಮಾನಿಗಳನ್ನು ಗಳಿಸಿದವರು. ಅವರು ಮೇಳದ ಸಂದರ್ಭ ನನಗೆ ಬೆನ್ನೆಲುಬಾಗಿದ್ದವರು.ಹಾಗಾಗಿ ನನ್ನಿಂದ ಅವರು ಹೆಚ್ಚು ಉಪಕೃತರಾದವರಲ್ಲ.ಬದಲಾಗಿ ನಾನೇ ಅವರಿಂದ ಹಲವು ಸಹಕಾರ ಪಡೆದಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಟಿ.ಶ್ಯಾಮ ಭಟ್ ಅವರನ್ನು ಡಾ| ಶ್ರೀಧರ್ ಭಂಡಾರಿ ಮನೆಯವರು ಸನ್ಮಾನಿಸಿದರು.

ಯಕ್ಷಗಾನ ಕಲಾವಿದರಿಗೆ, ಕುರಿಯಕ್ಕೆ ನೀಡಿದ ಸನ್ಮಾನ:

ಯಕ್ಷಗಾನ ಹಿರಿಯ ಭಾಗವತಿಕೆಗಾರ ಕುರಿಯ ಶ್ರೀ ಗಣಪತಿ ಶಾಸಿಯವರು ಯಕ್ಷದೇಗುಲ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಶ್ರೀಧರ್ ಭಂಡಾರಿಯವರ ಮನೆಯವರು ಕುರಿಯ ಮನೆತನವನ್ನು ಗುರುತಿಸಿರುವುದು ಸಂತೋಷ. ಶೀನಪ್ಪ ಭಂಡಾರಿಯವರು ಮಗ ಶ್ರೀಧರ ಭಂಡಾರಿಯವರನ್ನು ಕುರಿಯ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಹಾಗೆ ಬಂದವರು ಯಕ್ಷಗಾನ ಕುಣಿತ ಕಲಿತರು. ಲೀಲೆಯ ಶ್ರೀಕೃಷ್ಣ, ಬಬ್ರುವಾಹನ, ಅಭಿಮನ್ಯು, ಭಾರ್ಗವ ರಾಮ ಇವೆಲ್ಲ ಬೇರೆ ಬೇರೆ ವಿಧದ ವೇಷಗಳು. ಮಾಡುವುದು ಒಬ್ಬನೆ ಆದರೆ ಇದನ್ನು ಶ್ರೀಧರ ಭಂಡಾರಿಯವರ ಕುಣಿತದಿಂದ ನೋಡಲು ಸಾಧ್ಯವಾಗುತ್ತಿತ್ತು. ಹೀಗೆ ನಮ್ಮ ಮನೆಯಲ್ಲಿ ಸಾಮಾನ್ಯ ಸದಸ್ಯರಂತಿದ್ದ ಶ್ರೀಧರ ಭಂಡಾರಿಯವರು ಒಂದು ನಿಮಿಷವು ಸಮಯ ವ್ಯರ್ಥಮಾಡದೆ ಯಕ್ಷಗಾನ ಕಲಿಯುತ್ತಿದ್ದರು. ಇವತ್ತು ಅವರ ಮನೆಯವರು ಪ್ರಶಸ್ತಿಗೆ ನಮ್ಮ ಕುರಿಯ ಮನೆಯನ್ನೇ ಗುರುತಿಸಿದ್ದಾರೆ. ಈ ಹಿಂದೆ ಶ್ರೀಧರ್ ಭಂಡಾರಿಯವರು ಅವರ ತಂದೆ ಶೀನಪ್ಪ ಭಂಡಾರಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದರು. ಅದನ್ನು ಕೂಡಾ ಪ್ರಥಮವಾಗಿ ಕೊಟ್ಟದ್ದು ಕುರಿಯಕ್ಕೆ, ಇವತ್ತು ಶ್ರೀಧರ್ ಭಂಡಾರಿಯವರ ಮಕ್ಕಳಿಂದ ಮತ್ತೊಮ್ಮೆ ಪ್ರಥಮ ಪ್ರಶಸ್ತಿ ಕುರಿಯಕ್ಕೆ ನೀಡಿರುವುದು ಪುಣ್ಯದ ಕೆಲಸವಾಗಿದೆ. ಅವರ ಮಕ್ಕಳು ಮಾಡುವ ಕಾರ್ಯಕ್ರಮ ಗ್ರೇಟ್. ಇದು ಯಕ್ಷಗಾನ ಕಲಾವಿದರಿಗೆ ಮತ್ತು ಕುರಿಯಕ್ಕೆ ನೀಡಿದ ಸನ್ಮಾನ ಎಂದರು.

ಶ್ರೀಧರ್ ಭಂಡಾರಿಯವರ ಮಕ್ಕಳಿಗೆ ದೇವರ ಅನುಗ್ರಹವಿರಲಿ:

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಪುಂಡುವೇಷದ ಶ್ರೀಧರ್ ಭಂಡಾರಿಯವರು ಎಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆಂಬುದನ್ನು ಅವರ ನಿಧನದ ಸಮಯ ಜನಸಮೂಹದಲ್ಲಿ ಸಣ್ಣ ಸಣ್ಣ ಮಕ್ಕಳು ಗುರುಗಳಿಗೆ ನಮನ ಸಲ್ಲಿಸುವುದನ್ನು ನೋಡಿದಾಗ ತಿಳಿದಿದೆ. ಯಕ್ಷಗಾನವನ್ನು ಉಳಿಸಿದ ಶ್ರೀಧರ್ ಭಂಡಾರಿಯವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಮಕ್ಕಳಿಗೆ ದೇವರ ಅನುಗ್ರಹ ಸದಾ ಇರಲಿ ಎಂದರು.

ಶಾಲೆಗಳಲ್ಲೂ ಯಕ್ಷಗಾನ ಕಲೆಗೆ ಪ್ರೋತ್ಸಾಹ ಸಿಗಲಿ:

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶಪ್ರಸಾದ್ ಮುಳಿಯ ಅವರು ಮಾತನಾಡಿ ಯಕ್ಷಗಾನ ಕಲೆ ಮುಂದೆ ಶಾಲೆಗಳಲ್ಲೂ ನಿತ್ಯ ಅಭ್ಯಾಸ ಮಾಡುವಂತೆ ಪ್ರೋತ್ಸಾಹ ಸಿಗಬೇಕೆಂದು ಹೇಳಿದರು.

ತನ್ನ ಶಿಷ್ಯರ ಗೆಲುವಿನಲ್ಲಿ ತನ್ನ ಗೆಲುವನ್ನು ಕಂಡವರು:

ನ್ಯಾಯವಾದಿ ಮಹೇಶ್ ಕಜೆ ಅವರು ಶ್ರೀಧರ ಭಂಡಾರಿಯವರ ಸಂಸ್ಮರಣೆ ಮಾಡಿದರು.70ರ ವಯಸ್ಸಿನಲ್ಲೂ ವೇದಿಕೆಯನ್ನು ಏರಿದ್ದರು ಎಂದಾದರೆ ಅವರು ಸಿಂಹದ ಹಾಗೆ ವೇದಿಕೆಯನ್ನು ಪುಡಿಗಟ್ಟುತ್ತಿದ್ದರು ಎಂದು ಪತ್ರಿಕೆಯೊಂದು ಹೇಳಿತ್ತು.ಅದೇ ರೀತಿ ಅವರು ವೇದಿಕೆಯಲ್ಲಿ ಜಿಗಿ ಜಿಗಿದು ಜಿಗಿಯುವ ಚಿಗರೆಯ ಮರಿ, ಸಿಡಿ ಸಿಡಿದು ಸಿಡಿಯುವ ಸಿಡಿಲ ಮರಿ. ಇದು ಖಂಡಿತವಾಗಿಯೂ ತಪ್ಪಲ್ಲ. ಯಾಕೆಂದರೆ ಅವರು ಯಕ್ಷಗಾನಕ್ಕೆ ಬೇಕಾಗಿ ಬಾಲ್ಯದಲ್ಲಿ ಪೆಟ್ಟು ತಿಂದವರು.ಆದರೆ ಬಳಿಕದ ಬೆಳವಣಿಗೆಯಲ್ಲಿ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ, ನೂರೈವತಕ್ಕೂ ಮಿಕ್ಕಿ ಹೆಚ್ಚು ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನದ ಕುರಿತಾದ ಕಲಾವಿದನ ಜೀವನ ಚರಿತ್ರೆ ಇದ್ದರೆ ಅದು ಶ್ರೀಧರ ಭಂಡಾರಿಯವರ ಬಗ್ಗೆ ಮಾತ್ರ. ತನ್ನ ಶಿಷ್ಯರ ಗೆಲುವಿನಲ್ಲಿ ತನ್ನ ಸೋಲನ್ನು ಕಂಡರೂ ಕೂಡಾ ಅದು ತನ್ನ ಗೆಲುವು ಎಂದು ಹೇಳಿಕೊಂಡವರು. ಇವತ್ತು ಯಕ್ಷಕೂಟ ಎಂಬ ಬಾಲ ಕಲಾವಿದರನ್ನು ಕಟ್ಟಿ ಜೀವಂತ ಕಲಾ ಕುಟುಂಬದ ಧಾರೆಯನ್ನು ಕೊಟ್ಟಿದ್ದಾರೆ ಎಂದರು.ಹವ್ಯಾಸಿ ಕಲಾವಿದ ಶ್ರೀಧರ್ ಭಂಡಾರಿಯವರ ಶಿಷ್ಯ ಬೆಂಗಳೂರಿನ ಚಿಂಗೂರು ಚಿದಾನಂದ ಕಾಮತ್ ಅವರು ಸಾಂದರ್ಭಿಕ ಮಾತನಾಡಿದರು.

ನಮ್ಮ ಒಂದೊಂದು ಅಗಳು ಯಕ್ಷಗಾನದ್ದು:

ಡಾ| ಶ್ರೀಧರ್ ಭಂಡಾರಿಯವರ ಪುತ್ರಿ ಅನಿಲಾ ದೀಪಕ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ತಂದೆ ಕಲಾವಿದ ಮಾತ್ರವಲ್ಲ ಯಕ್ಷ ಸಂಘಟಕರೂ ಆಗಿದ್ದರು. ನಾವು ಇವತ್ತು ಸಮೃದ್ಧ ಕನ್ನಡದಲ್ಲಿ ಮಾತನಾಡಲು ಅದು ಯಕ್ಷಗಾನದ ಕೊಡುಗೆ ಇದೆ.ನಮ್ಮ ಒಂದೊಂದು ಅಗಳು ಕೂಡಾ ಯಕ್ಷಗಾನದ್ದು, ಇಂತಹ ಸಂದರ್ಭದಲ್ಲಿ ಅವರ ನೆನಪಿನಲ್ಲಿ ನಮ್ಮ ಸೇವೆ ಆರಂಭಿಸಿದ್ದೇವೆ.ನಮ್ಮ ಕೊನೆಯ ಉಸಿರು ಇರುವ ತನಕವೂ ಯಕ್ಷಗಾನ ಸೇವೆ ಮಾಡಬೇಕೆಂಬುದು ನಮ್ಮ ಆಸೆ ಎಂದರು. ಡಾ| ಶ್ರೀಧರ್ ಭಂಡಾರಿ ಅವರ ಪತ್ನಿ ಉಷಾ ಶ್ರೀಧರ್ ಭಂಡಾರಿ, ಪುತ್ರ ದೇವಿಪ್ರಕಾಶ್ ಭಂಡಾರಿ, ಪುತ್ರಿಯರಾದ ಕೋಕಿಲಾ ಜಯವರ್ಧನ್, ಶಾಂತಲಾ ಸಚ್ಚಿದಾನಂದ ಶೆಟ್ಟಿ, ಅನಿಲಾ ದೀಪಕ್ ಶೆಟ್ಟಿ, ಅಳಿಯಂದಿರಾದ ಸಚ್ಚಿದಾನಂದ ಶೆಟ್ಟಿ, ಜಯವರ್ಧನ್, ದೀಪಕ್ ಶೆಟ್ಟಿ ಮತ್ತು ಮೊಮ್ಮಕ್ಕಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಅರ್ಪಿತಾ ಶೆಟ್ಟಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಬಯಲಾಟ ಮುಂದುವರಿಯಿತು.

ಸುದ್ದಿಯಲ್ಲಿ ನೇರಪ್ರಸಾರ:

ಕಾರ್ಯಕ್ರಮ ಸುದ್ದಿ ನ್ಯೂಸ್ ಪುತ್ತೂರು ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here