ಮುಂದಿನ ವರ್ಷ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ತಯಾರಿಗೆ ಒಪ್ಪಿಗೆ
ಪುತ್ತೂರು: ಶ್ರೀ ದೇವರ ಚೈತನ್ಯ ವೃದ್ಧಿಗಾಗಿ ಪ್ರತಿ 12 ವರ್ಷಗಳಿಗೊಮ್ಮೆ ದೇವಾಲಯಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುವುದು ಸಂಪ್ರದಾಯ. ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಆಗಿ 15 ವರ್ಷಗಳಾಗಿದ್ದು, 2024ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಈಗಲೇ ಕಾರ್ಯಪ್ರವೃತ್ತರಾಗುವ ಕುರಿತು, ಏ.3 ಮತ್ತು 4ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪೂರ್ವ ಸಿದ್ದತಾ ಸಭೆಯಲ್ಲಿ ಊರವರ ಒಪ್ಪಿಗೆ ಪಡೆಯಲಾಯಿತು.
ಫೆ.19ರಂದು ಬೆಳಿಗ್ಗೆ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಹೊರಾಂಗಣದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ವರ್ಷಾವಧಿ ಜಾತ್ರೋತ್ಸವಕ್ಕೆ ಉತ್ಸವ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದ ಬಳಿಕ ಸಭೆಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕುರಿತು ಚರ್ಚಿಸಿ, ಊರ ಭಕ್ತರ ಅಭಿಪ್ರಾಯ ಪಡೆಯಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ ಅವರು ಮಾತನಾಡಿ 2007ರಲ್ಲಿ ದೇವಳದ ಪುನರ್‌ನಿರ್ಮಾಣ ಬ್ರಹ್ಮಕಲಶೋತ್ಸವ ನಡೆದಿದ್ದು ಪ್ರಸ್ತುತ 15 ವರ್ಷ ಕಳೆದಿದೆ. ಈ ನಿಟ್ಟಿನಲ್ಲಿ ದೇವಳಕ್ಕೆ ವಾಸ್ತು ಶಿಲ್ಪಿಯವರನ್ನು ಕರೆಸಿ ದೇವಳದ ಸೂಕ್ಷ್ಮತೆಯ ಕುರಿತು ಚಿಂತಿಸಲಾಗಿದೆ. ಗಣಪತಿ ಗುಡಿ, ಶಾಸ್ತಾವು, ನಮಸ್ಕಾರ ಮಂಟಪ, ದೇವಳದ ಛಾವಣಿ ಕೆಲಸ ಮಾಡುವಂತೆ ಅವರು ತಿಳಿಸಿದ್ದಾರೆ. ಅದರಂತೆ ಮುಂದೆ ಪ್ರಶ್ನಾಚಿಂತನೆ ನಡೆಸಲು, ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಮುಂದುವರಿಯಲು ಊರ ಭಕ್ತರ ಸಹಮತ ಬೇಕಾಗಿದೆ ಎಂದರು.
ಮುಂದಿನ ವರ್ಷದ ಬ್ರಹ್ಮಕಲಶಕ್ಕೆ ಈಗಲೇ ತಯಾರಿ ನಡೆಸಬೇಕು: ಹಿರಿಯರಾದ ರಾಘವೇಂದ್ರ ಮಯ್ಯ ಅವರು ಮಾತನಾಡಿ 2024ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾಡುವ ನಿಟ್ಟಿನಲ್ಲಿ ದೇವಳದಲ್ಲಿ ಪ್ರಶ್ನೆ ಚಿಂತನೆ ನಡೆಸಬೇಕು.ಅದಕ್ಕಾಗಿ ವರ್ಷಾವಧಿ ಜಾತ್ರೆ ಮುಗಿದ ತಕ್ಷಣ ಕೆಲವೊಂದು ಜೀರ್ಣೋದ್ಧಾರ ಕಾರ್ಯಕ್ಕೆ ತಯಾರಿ ನಡೆಸಬೇಕು.ಮಳೆ ಬರುವ ಮೊದಲು ಮಾಡಿನ ಕೆಲಸ ಪೂರ್ಣಗೊಳಿಸಿ, ಗಣಪತಿ ಗುಡಿಯ ಕಾರ್ಯ ಮಾಡುವ ಮೊದಲು ಬಾಲಾಲಯ ಮಾಡಬೇಕು.ಇದಕ್ಕೆಲ್ಲ ಒಂದು ಹಂತದಲ್ಲಿ ಆರ್ಥಿಕ ವ್ಯವಸ್ಥೆಯೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಾತ್ರೋತ್ಸವ ಮುಗಿದ ತಕ್ಷಣ ಇನ್ನೊಂದು ಸಭೆ ಕರೆದು ಜೀರ್ಣೋದ್ದಾರ ಸಮಿತಿ ರಚನೆ ಮಾಡಬೇಕು ಎಂದು ಸಲಹೆ ನೀಡಿದರು. ರಾಜಶೇಖರ್ ಜೈನ್ ಅವರು ಧ್ವನಿಗೂಡಿಸಿ, ಜೀರ್ಣೋದ್ದಾರ ಸಮಿತಿಗೆ ಪ್ರತ್ಯೇಕ ತಂಡ ರಚನೆಯಾಗಬೇಕು.ಗ್ರಾಮದ ಎಲ್ಲಾ ಮನೆಗಳಿಂದ ಆರ್ಥಿಕ ದೇಣಿಗೆ ಸಂಗ್ರಹವಾಗಬೇಕು ಎಂದರು.ಸಭೆಯಲ್ಲಿದ್ದ ಊರಿನ ಭಕ್ತರು ಜೀರ್ಣೋದ್ಧಾರ ಕಾರ್ಯಕ್ಕೆ ಸಹಮತ ವ್ಯಕ್ತಪಡಿಸಿದರು.
ಗ್ರಾಮದ ಪ್ರಧಾನ ದೈವದ ಸ್ಥಾನಕ್ಕೆ ದೈವಜ್ಞರ ಸಲಹೆ: ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ ಗ್ರಾಮದ ಸೀಮೆ ದೇವಸ್ಥಾನವಾದ ಬಳಿಕ ಇದಕ್ಕೆ ಮತ್ತು ಗ್ರಾಮಕ್ಕೆ ಸಂಬಂಧಿಸಿ ನಾಲ್ಕು ಜಾಗದಲ್ಲಿ ದೈವಸ್ಥಾನವಿದೆ. ಅದರಲ್ಲೂ ಪೊನ್ನೆಮಾಡ ಪ್ರಧಾನ ದೈವಸ್ಥಾನವಾಗಿದೆ. ಈ ಕುರಿತು ಇತ್ತೀಚೆಗೆ ಗ್ರಾಮಸ್ಥರು ಸಭೆ ನಡೆಸಿದಾಗ ದೈವದ ಜಾಗ ಬೇರೆ ಬೇರೆಯವರ ಹೆಸರಿನಲ್ಲಿ ಇದೆ. ಅಲ್ಲಿ ಸದ್ಯ ದೈವಗಳಿಗೆ ತಂಬಿಲವನ್ನಾದರೂ ಮಾಡಬೇಕು. ಈ ಕುರಿತು ಮೂಲ ಜಾಗ ಎಲ್ಲಿದೆ ಎಂದು ತಿಳಿಯಬೇಕಾದರೆ ದೈವಜ್ಞರ ಸಲಹೆ ಅಗತ್ಯ. ಈ ನಿಟ್ಟಿನಲ್ಲಿ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಪ್ರಶ್ನಾ ಚಿಂತನೆ ನಡೆಸಿದಂತೆ ದೈವದ ಮೂಲ ಜಾಗಕ್ಕಾಗಿ ಇತ್ತೀಚೆಗೆ ಭಕ್ತರ ಸಭೆ ನಡೆಸಿದ ಸ್ಥಳದಲ್ಲಿ ಪ್ರಶ್ನಾ ಚಿಂತನೆ ನಡೆಸುವ ಕುರಿತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು. ಜಾತ್ರೋತ್ಸವದ ವೇಳೆ ಭಂಡಾರ ಬರುವ ಸಂದರ್ಭ ದರ್ಶನ ಪಾತ್ರಿಯನ್ನು ಬದಲಿಯಾಗಿ ತಾತ್ಕಾಲಿಕವಾಗಿ ಮುಂದುವರಿಸಿ, ಮುಂದೆ ತನಗೆ ಬೇಕಾದ ಪಾತ್ರಿಯನ್ನು ಪಡೆಯುತ್ತೇನೆಂದು ದೈವದ ನುಡಿಯಾಗಿರುವುದನ್ನು ಅಧ್ಯಕ್ಷರು ಸಭೆಗೆ ತಿಳಿಸಿದರು.ಹಿರಿಯರಾದ ಜಯಕುಮಾರ್ ಜೈನ್ ಅವರು ದೈವದ ನುಡಿಯ ಕುರಿತು ಮಾಹಿತಿ ತಿಳಿಸಿದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ದೈವದ ಪ್ರಧಾನ ಪಾತ್ರಿಯಾಗಿರುವ ಜಿ.ಈಶ್ವರ ಗೌಡ, ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ಛಾಯಾ ಪೈ, ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಕುಲಾಲ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಧರ್ಣಪ್ಪ ಮೂಲ್ಯ, ಲಕ್ಷ್ಮೀನಾರಾಯಣ ಗೌಡ, ಪ್ರಮೋದ್ ಮಯ್ಯ, ಪಾಂಡುರಂಗ ಗೌಡ, ಎನ್.ರವೀಂದ್ರ ಪೈ, ಚಂದ್ರಶೇಖರ್, ಮನೋಹರ್ ರೈ, ಪಿ.ಹರೀಶ್ ನೆಕ್ಕಿಲ, ಅಮರನಾಥ ಬನ್ನೂರು ಪಟ್ಟೆ, ಡಿ.ಕಾಂತಪ್ಪ ಗೌಡ, ಹೆಚ್.ಅಶೋಕ್, ಸುರೇಶ್ ಗೌಡ, ವಸಂತ ದೇವಸ್ಯ, ಚಿಂತನ್, ಅಶೋಕ್ ಕುಂಟ್ಯಾನ, ಭರತ್ ಕುಂಟ್ಯಾನ, ಹರಿಪ್ರಸಾದ್, ಪುರುಷೋತ್ತಮ ಹೆಚ್, ಕುಲ್‌ದೀಪ್ ಜಿ ಗೋಳ್ತಿಲ, ಅಕ್ಷಯ್ ಗೋಳ್ತಿಲ, ದಯಾನಂದ ಹಲಂಗ, ಹುಕ್ರಪ್ಪ ದೇವಸ್ಯ, ಶೀನಪ್ಪ ಗೌಡ ಗೋಳ್ತಿಲ, ರಾಮಣ್ಣ ಗೌಡ, ಬಾಲಕೃಷ್ಣ ಗೌಡ ಗೋಳ್ತಿಲ, ಜಿ.ಗಂಗಾಧರ ಗೌಡ ಗೋಳ್ತಿಲ, ರಕ್ಷಕ್ ಕುಲಾಲ್ ನೆಕ್ಕಿಲ, ವಿಶಾಖ್ ಹೆಚ್, ಗೌರೀಶ್ ಹೆಚ್, ಚಿದಾನಂದ, ಚೇತನ್ ಹೆಚ್, ಯಶ್ವಿತ್, ಪದ್ದು ಗೌಡ, ಹಿತೇಶ್, ಪದ್ಮನಾಭ ಕೆ, ರಮೇಶ್ ಗೌಡ ನೀರ್ಪಾಜೆ, ಅಣ್ಣು ಮೂಲ್ಯ, ರಾಮಪ್ರಸಾದ್ ಮಯ್ಯ, ದಿಲೀಪ್ ಕಜೆ, ಆನಂದ ಹಲಂಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಶೆಟ್ಟಿ ಆನೆಮಜಲು ಸ್ವಾಗತಿಸಿ, ಮೌನೀಶ್ ಕಾರ್ಯಕ್ರಮ ನಿರೂಪಿಸಿದರು.
ಜಾತ್ರೋತ್ಸವ ಸಮಿತಿ ರಚನೆ
ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಬನ್ನೂರು ಗ್ರಾ.ಪಂ ಮಾಜಿ ಸದಸ್ಯ ಶಶಿಧರ್ ಗೌಡ ಕುಂಟ್ಯಾನ, ಕಾರ್ಯದರ್ಶಿಯಾಗಿ ವಸಂತ ಗೌಡ ದೇವಸ್ಯ, ಖಜಾಂಜಿಯಾಗಿ ಉಮೇಶ್ ಶೆಟ್ಟಿ ಆನೆಮಜಲು, ಉಪಾಧ್ಯಕ್ಷರಾಗಿ ಮನೋಹರ್ ರೈ, ನಿವೃತ್ತ ಎಸ್.ಐ ಪಾಂಡುರಂಗ ಗೌಡ ಪಟ್ಟೆಯವರನ್ನು ಆಯ್ಕೆ ಮಾಡಲಾಯಿತು. ಚಪ್ಪರ ಸಮಿತಿ, ವೈದಿಕ ಸಮಿತಿ, ಕಾರ್ಯಾಲಯ ಸಮಿತಿ, ಸ್ವಾಗತ ಸಮಿತಿ ಸೇರಿ ಹಲವು ಉಪಸಮಿತಿಗಳಿಗೂ ಆಯ್ಕೆ ಮಾಡಲಾಯಿತು.