ನರಹಂತಕ ಆನೆ ಬೇಟೆ ಆರಂಭ
ಮೈಸೂರು, ಮಡಿಕೇರಿ ಆನೆ ಶಿಬಿರದ 5 ಸಾಕಾನೆಗಳ ಬಳಕೆ

0
  • ತಜ್ಞ ವೈದ್ಯರ ತಂಡವೂ ಆಗಮನ
  • ಎನ್‌ಐಟಿಕೆ ತಂಡದಿಂದ ಡ್ರೋನ್ ಬಳಕೆಗೆ ಸಿದ್ಧತೆ
  • ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮೊಕ್ಕಾಂ

ನೆಲ್ಯಾಡಿ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿರುವ ಕಾಡಾನೆಯ ಸೆರೆ ಕಾರ್ಯಾಚರಣೆ ಫೆ..21ರಂದು ಬೆಳಗ್ಗಿನಿಂದಲೇ ಆರಂಭಗೊಂಡಿದೆ. ಕೊಣಾಜೆ ರಕ್ಷಿತಾರಣ್ಯದಲ್ಲಿ ದಿನಪೂರ್ತಿ ಆನೆ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಗಾಗಿ ಮೈಸೂರು ಹಾಗೂ ಮಡಿಕೇರಿಯ ಸಾಕಾನೆ ಶಿಬಿರದಿಂದ 5 ಸಾಕಾನೆಗಳನ್ನು ತರಿಸಲಾಗಿದೆ. ಇದರ ಜೊತೆಗೆ ತಜ್ಞ ಐವರು ವೈದ್ಯರ ತಂಡವೂ ಆಗಮಿಸಿದೆ. ಅರಣ್ಯ ಹಾಗೂ ಸುರತ್ಕಲ್ ಎನ್‌ಐಟಿಕೆಯ ಥರ್ಮಲ್ ಡ್ರೋನ್ ತಂಡವೂ ಇದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲಿದ್ದು ಸೂಕ್ತ ಮಾರ್ಗದರ್ಶನ ನೀಡಿದರು.

ಫೆ.20ರಂದು ಬೆಳ್ಳಂಬೆಳಿಗ್ಗೆ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪ ನಡೆದ ಆನೆ ದಾಳಿಗೆ ರೆಂಜಿಲಾಡಿ ಗ್ರಾಮದ ನೈಲ ನಿವಾಸಿ ರಾಜೀವ ಶೆಟ್ಟಿ-ಸುಂದರಿ ದಂಪತಿಯ ಪುತ್ರಿ, ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ(22ವ.)ಹಾಗೂ ನೈಲ ನಿವಾಸಿ ದಿ.ತಿಮ್ಮಪ್ಪ ಶೆಟ್ಟಿ ಎಂಬವರ ಪುತ್ರ ರಮೇಶ್ ರೈ(55ವ.)ಎಂಬವರು ಮೃತಪಟ್ಟಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ.ದಿನೇಶ್‌ಕುಮಾರ್‌ರವರು, ಪ್ರಕರಣಕ್ಕೆ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಆನೆಯ ಸ್ಥಳಾಂತರಿಸಲು ಕಾರ್ಯಾಚರಣೆ ಮಾಡುವುದಾಗಿ ಹಾಗೂ ಈ ಬಗ್ಗೆ ಈಗಾಗಲೇ ಕೆಲಸ ಪ್ರಾರಂಭಿಸಿರುವುದಾಗಿ ಹೇಳಿದ್ದರು. ಆನೆ ಹಾವಳಿ ತಪ್ಪಿಸಲು ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ರವರು ಸಹ ಭರವಸೆ ನೀಡಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಫೆ.21ರಂದು ಬೆಳಗ್ಗಿನಿಂದಲೇ ಕಾಡಾನೆ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

5 ಸಾಕಾನೆಗಳ ಆಗಮನ: ಕಾಡಾನೆ ಸೆರೆಗೆ ಮೈಸೂರಿನ ತಿಥಿಮತಿ ಹಾಗೂ ಮಡಿಕೇರಿ ದುಬಾರೆಯ ಸಾಕಾನೆ ಶಿಬಿರದಿಂದ 5 ಸಾಕಾನೆಗಳನ್ನು ಆನೆಗಳ ಕ್ಷಿಪ್ರ ಕಾರ್ಯಪಡೆ ವಾಹನದ ಮೂಲಕ ಕರೆತರಲಾಗಿತ್ತು. ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಗೆ ಬಂದಿದೆ. ಆನೆಗಳ ಮಾವುತರು ಜತೆಗಿದ್ದಾರೆ. ಲಾರಿ ಮೂಲಕ ಬಂದ ಸಾಕಾನೆಗಳನ್ನು ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ತುಂಬೆ ಅರಣ್ಯ ಪ್ರದೇಶದಲ್ಲಿ ಲಾರಿಯಿಂದ ಇಳಿಸಲಾಗಿತ್ತು. ಫೆ.21ರಂದು ಮುಂಜಾನೆಯೇ ರೆಂಜಿಲಾಡಿಗೆ ಆಗಮಿಸಿದ್ದ ಸಾಕಾನೆಗಳಿಗೆ ಬೆಳಿಗ್ಗೆ ಪೂಜೆ ಸಹ ಸಲ್ಲಿಸಲಾಗಿದೆ. ಜೊತೆಗೆ ಕಾರ್ಯಾಚರಣೆಗೆ ಬೇಕಾದ ಸಲಕರಣೆ, ಔಷಧಗಳನ್ನು ತರಲಾಗಿದೆ. ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆ ಹಾಗೂ ಎನ್‌ಐಟಿಕೆಯ ಡ್ರೋನ್‌ಗಳನ್ನು ಬಳಸಿಕೊಳ್ಳಲು ಸಿದ್ಧಪಡಿಸಿಕೊಳ್ಳಲಾಗಿದೆ.

ಬೆಳಿಗ್ಗಿನಿಂದಲೇ ಬೇಟೆ ಆರಂಭ: ಕಾಡಾನೆ ಸೆರೆಹಿಡಿಯಲು ಸಕಲ ಸಿದ್ಧತೆ ನಡೆಸಿರುವ ಅರಣ್ಯ ಇಲಾಖೆ ಫೆ.21ರಂದು ಬೆಳಗ್ಗಿನಿಂದಲೇ ಪತ್ತೆ ಕಾರ್ಯ ಆರಂಭಿಸಿತು. ಇದಕ್ಕಾಗಿ ಮೂರು ತಂಡಗಳನ್ನು ರಚಿಸಿಕೊಂಡಿದೆ. ಮೈಸೂರು, ಮಡಿಕೇರಿ, ಬಿಆರ್‌ಟಿಯ ಐವರು ವೈದ್ಯರೂ ಈ ತಂಡದಲ್ಲಿದ್ದಾರೆ. ಡಾ.ಮುಜೀಬ್, ಡಾ. ವೆಂಕಟೇಶ್, ಡಾ.ರಮೇಶ್, ಡಾ.ಅಕ್ರಂ, ಡಾ.ಮೇಘನಾ, ಡಾ.ಯಶಸ್ವಿ ವೈದ್ಯರ ತಂಡದಲ್ಲಿದ್ದಾರೆ. ಇಬ್ಬರನ್ನು ಬಲಿ ಪಡೆದುಕೊಂಡಿರುವ ಮೀನಾಡಿ ಬಳಿಯ ನೈಲ, ರೆಂಜಿಲಾಡಿ, ಕೊಣಾಜೆ ಅರಣ್ಯ ಪ್ರದೇಶದ ಬಾಂತಾಜೆ ಬಳಿ, ನೂಜಿಬಾಳ್ತಿಲ ಗ್ರಾಮದ ನಿಡ್ಡೋ, ಪುತ್ತಿಗೆ ಭಾಗದಲ್ಲಿ ಪತ್ತೆ ಕಾರ್ಯಾಚರಣೆ ನಡೆಸಿದರು. ಸ್ಥಳೀಯರು ನೀಡಿದ ಮಾಹಿತಿ ಹಾಗೂ ಕಾಡಾನೆ ಲಗ್ಗೆ ಇಟ್ಟ ಕುರುಹುಗಳ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳೀಯರು, ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕಾಡು ಜೇನು ಕುರುಬರು ಜತೆಗೂಡಿ ಅರಣ್ಯದೊಳಗೆ ತೆರಳಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಆನೆ ಪತ್ತೆಗಾಗಿ ಅರಣ್ಯದೊಳಕ್ಕೆ ತೆರಳಿರುವ ತಂಡದಿಂದ ಕಾಡಾನೆ ಇರುವ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಶಿಬಿರದ ಐದು ಸಾಕಾನೆಗಳನ್ನು ಕಾಡಾನೆ ಇರುವ ಪ್ರದೇಶಕ್ಕೆ ಕೊಂಡೊಯ್ದು ಸೆರೆ ಹಿಡಿದು ಅರಿವಳಿಕೆ ನೀಡಲಾಗುತ್ತದೆ. ಬಳಿಕ ವೈದ್ಯರ ಸೂಚನೆಯಂತೆ ಮುಂದಿನ ಕಾರ್ಯ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ಆನೆದಾಳಿ ಸುದ್ದಿ: ಉದನೆ ಸಮೀಪದ ಪುತ್ತಿಗೆ ಎಂಬಲ್ಲಿ ಫೆ.21ರಂದು ಮಧ್ಯಾಹ್ನದ ವೇಳೆಗೆ ಮಹಿಳೆಯೊಬ್ಬರನ್ನು ಕಾಡಾನೆಯೊಂದು ಅಟ್ಟಾಡಿಸಿದೆ ಹಾಗೂ ಅರಣ್ಯದೊಳಗೆ ಹಾದುಹೋಗಿರುವ ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟಿ ಹಾಗೂ ಪಿಕಪ್ ವಾಹನ ಸವಾರರಿಗೂ ಕಾಡಾನೆ ಗೋಚರಿಸಿದೆ ಎಂಬ ಸುದ್ದಿ ಬಂತು. ಆದರೆ ಇದು ಸ್ಪಷ್ಟವಾಗಿಲ್ಲ. ಇದೇ ವೇಳೆ ರೆಂಜಿಲಾಡಿಯಲ್ಲಿದ್ದ 5 ಸಾಕಾನೆಗಳನ್ನು ಲಾರಿ ಮೂಲಕ ಪುತ್ತಿಗೆ ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ, ವೈದ್ಯರ ತಂಡವೂ ಅಲ್ಲಿಗೆ ತೆರಳಿತು. ಪತ್ತೆ ಕಾರ್ಯಾಚರಣೆಗೆ ಅರಣ್ಯದೊಳಗೆ ಹೋಗಿದ್ದ ತಂಡಕ್ಕೆ ಮೂರು ಕಾಡಾನೆ ಇರುವ ಕುರುಹು ಲಭ್ಯವಾಗಿದೆ ಎಂದು ವರದಿಯಾಗಿದೆ. ಸಂಜೆಯಾದ ಹಿನ್ನಲೆಯಲ್ಲಿ ದಿನದ ಮಟ್ಟಿಗೆ ಪತ್ತೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಫೆ.22ರಂದು ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಆರ್.ಗಿರೀಶ್, ರಾಘವೇಂದ್ರರವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

ಕಾಡಾನೆ ಸೆರೆಗೆ ’ಅಭಿಮನ್ಯು’ ನಾಯಕತ್ವ
ಮೈಸೂರು ದಸರಾ ವೇಳೆ ಅಂಬಾರಿ ಹೊರುವ ಗಜ

ನೆಲ್ಯಾಡಿ: ಮೈಸೂರು ದಸರಾ ಮೆರವಣಿಗೆ ಸಂದರ್ಭ ಅಂಬಾರಿ ಹೊರುವ ’ಅಭಿಮನ್ಯು’ ಕಾಡಾನೆ ಸೆರೆಗೆ ರೆಂಜಿಲಾಡಿಗೆ ಆಗಮಿಸಿರುವ ಗಜಪಡೆಗೆ ನಾಯಕ. ದೂರ ದೂರುಗಳಿಂದ ಆಗಮಿಸಿದ ನೂರಾರು ಮಂದಿ ಅಭಿಮನ್ಯುನನ್ನು ನೋಡಿ ಸಂಭ್ರಮಿಸಿದರು.

ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಳಗಿರುವ ಅಭಿಮನ್ಯುವನ್ನೇ ರೆಂಜಿಲಾಡಿಗೂ ಕರೆ ತರಲಾಗಿದೆ. ಮೈಸೂರಿನ ತಿಥಿಮತಿ ಸಾಕಾನೆ ಶಿಬಿರದಿಂದ ಅಭಿಮನ್ಯುವನ್ನು ಕರೆತರಲಾಗಿದೆ. 11 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಮಾವುತನನ್ನೇ ಕೊಂದು ಅಟ್ಟಹಾಸ ಮೆರೆದಿದ್ದ ಲಕ್ಷ್ಮೀಶ ಎಂಬ ಆನೆಯನ್ನು ಬಂಧಿಸಿ ಸ್ಥಳಾಂತರಗೊಳಿಸುವಲ್ಲಿ ಈ ಅಭಿಮನ್ಯು ಪ್ರಮುಖ ಪಾತ್ರ ವಹಿಸಿದ್ದ. ಇದೀಗ ರೆಂಜಿಲಾಡಿಗೂ ಆಗಮಿಸಿರುವ ಅಭಿಮನ್ಯು ಗಜಪಡೆಯ ಕೇಂದ್ರಬಿಂದುವಾಗಿದೆ.

ಜಿಲ್ಲೆಯಲ್ಲಿ ಮೊದಲ ಪ್ರಯೋಗ
ಈ ಭಾಗದ ಜನತೆಯ ಬೇಡಿಕೆ ಹಾಗೂ ಕಾಡಾನೆ ಹಾವಳಿ ಗಮನದಲ್ಲಿಟ್ಟುಕೊಂಡು ಕಾಡಾನೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಾಡಾನೆ ಹಾವಳಿ ಇದ್ದರೂ ಶಿಬಿರದ ಸಾಕಾನೆ ನೆರವಿನಿಂದ ಕಾಡಾನೆ ಸೆರೆ ಹಿಡಿಯುವ ಪ್ರಯೋಗ ನಡೆದಿಲ್ಲ. ರೆಂಜಿಲಾಡಿಯಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆ ಜಿಲ್ಲೆಯ ಮೊದಲ ಕಾರ್ಯಾಚರಣೆ ಆಗಿದೆ.
-ವೈ.ಕೆ.ದಿನೇಶ್ ಕುಮಾರ್
ಡಿಎಫ್‌ಒ ಮಂಗಳೂರು

LEAVE A REPLY

Please enter your comment!
Please enter your name here