ಕಡಬ ತಾಲೂಕು ಕೊಂಬಾರು ಗ್ರಾಮದ ಮೆಟ್ಟುತ್ತಾರು ಎಂಬಲ್ಲಿ ಸೇತುವೆ ನಿರ್ಮಾಣ ಹಾಗೂ ಕೂಡು ರಸ್ತೆ ನಿರ್ಮಾಣ ಕಾರ್ಯವನ್ನು ಕೆ ಆರ್ ಆರ್ ಡಿ ಮೂಲಕ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ರೂಪಾಯಿ ಒಂದು ಕೋಟಿ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿ ಕರ್ನಾಟಕ ಹೈಕೋರ್ಟ್ ಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇಷ್ಟಕ್ಕೂ ತೃಪ್ತವಾಗದ ಹೈಕೋರ್ಟ್ ಎರಡು ವಾರದ ಒಳಗೆ ಹಣ ಬಿಡುಗಡೆ, ಸೇತುವೆ, ರಸ್ತೆ ನಿರ್ಮಾಣ ಕಾರ್ಯ ಆರಂಭ ಮತ್ತು ಮುಕ್ತಾಯದ ಬಗ್ಗೆ ವಿವರವಾದ ಇನ್ನೊಂದು ಪ್ರಮಾಣ ಪತ್ರ ಸಲ್ಲಿಸ ಬೇಕೆಂದು ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಎರಡು ವಾರಕ್ಕೆ ಮುಂದೂಡಿದೆ.
ಏನಿದು ಪ್ರಕರಣ?
ಕೊಂಬಾರು ಗ್ರಾಮದ ನಿವಾಸಿ ಭುವನೇಶ್ವರ ಗೌಡ ಅಮ್ಚೂರು ಎಂಬವರು ತಮ್ಮ ಗ್ರಾಮ ನಿವಾಸಿಗಳ ಬಹುಮುಖ್ಯ ಬೇಡಿಕೆಯಾಗಿದ್ದ ಮೆಟ್ಟುತ್ತಾರು ಎಂಬಲ್ಲಿನ ಸಂಪರ್ಕ ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಕೆಲವು ದಶಕಗಳಿಂದ ಬೇಡಿಕೆ ಸಲ್ಲಿಸಿದ್ದರೂ, ಯಾವುದೇ ಸರಕಾರ ಈ ಬಗ್ಗೆ ಇದುವರೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಹೈಕೋರ್ಟ್ ನ್ಯಾಯವಾದಿ ಪ್ರವೀಣ ಕುಮಾರ್ ಕಟ್ಟೆ ಇವರನ್ನು ಸಂಪರ್ಕಿಸಿ 2015 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯೊಂದನ್ನು ಸಲ್ಲಿಸಿದ್ದರು.
ಈ ಹಿಂದೆ ಹೈಕೋರ್ಟ್ ಇವರ ರಿಟ್ ಅರ್ಜಿ ಪರಿಗಣಿಸಿ ಭುವನೇಶ್ವರ್ ಅವರು 22- 11- 2014 ರಂದು ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಸಿದ ಮನವಿ ಬಗ್ಗೆ ಒಂದು ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು 22-09-2015 ರಂದು ನಿರ್ದೇಶನ ನೀಡಿತ್ತು. ಆದರೆ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭುವನೇಶ್ವರ್ ಸುಪ್ರೀಂಕೋರ್ಟ್ ವರೆಗೆ ಪ್ರಕರಣ ಕೊಂಡೊಯ್ದಿದ್ದರು.
ಮತ್ತೆ ಹೈಕೋರ್ಟ್ ಗೆ ಸ್ಪಷ್ಟ ನಿರ್ದೇಶನಕ್ಕಾಗಿ ಅರ್ಜಿ ಸಲ್ಲಿಸಬೇಕೆಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಅವರು ಮತ್ತೆ 2017ರಲ್ಲಿ ಕರ್ನಾಟಕ ಹೈಕೋರ್ಟ್ ಗೆ ಇನ್ನೊಂದು ರಿಟ್ ಅರ್ಜಿ ಸಲ್ಲಿಸಿ ಕರ್ನಾಟಕ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂಬ ಆದೇಶ ಕೋರಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಸರಕಾರ ರೂಪಾಯಿ 40,00,000/- ಹಣವನ್ನು ಮಂಜೂರು ಮಾಡಿರುವುದಾಗಿಯೂ ಚುನಾವಣಾ ನೀತಿ ಸಂಹಿತೆ ಮುಕ್ತಾಯವಾದ ನಂತರ ಸಂಪರ್ಕ ಸೇತುವೆ ಹಾಗೂ ಕೂಡು ರಸ್ತೆ ಕಾಮಗಾರಿಯನ್ನು ಕೈಗೊಳ್ಳುವುದಾಗಿಯೂ ಸರಕಾರಿ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದನ್ನು ಪರಿಗಣಿಸಿ ನ್ಯಾಯಾಲಯ ರಿಟ್ ಅರ್ಜಿಯನ್ನು 14-3-2019 ರಂದು ಇತ್ಯರ್ಥ ಪಡಿಸಿತ್ತು.
ಈ ಬಗ್ಗೆ ಮತ್ತೆ ಭುವನೇಶ್ವರ್ ವಕೀಲರು ಸರಕಾರಕ್ಕೆ ಹಲವಾರು ಪತ್ರ ವ್ಯವಹಾರಗಳನ್ನು ನಡೆಸಿದ್ದರೂ, ಸರಕಾರ ಹಾಗೂ ಜಿಲ್ಲಾ ಪಂಚಾಯತ್ ತಮ್ಮ ಹೊಣೆಗಾರಿಕೆಯನ್ನು ಪರಸ್ಪರ ವರ್ಗಾಯಿಸಲು ಪ್ರಯತ್ನ ಮಾಡುತ್ತಿತ್ತೇ ವಿನಹ ನಾಲ್ಕು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಭುವನೇಶ್ವರ್ ಅವರು 2022 ರಲ್ಲಿ ಹೈಕೋರ್ಟ್ ಗೆ ಮೂರನೆಯ ರಿಟ್ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ ಉಚ್ಚ ನ್ಯಾಯಾಲಯ ಹೊಸ ರಿಟ್ ಅರ್ಜಿಯ ವಿಚಾರಣೆ ನಡೆಸಿ “ಹಿಂದಿನ ರಿಟ್ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಯಪಡಿಸಿದ ಮಂಜುರಾದ 40 ಲಕ್ಷ ಎಲ್ಲಿ ಹೋಯಿತು? ಮೆಟ್ಟುತ್ತಾರು ಸೇತುವೆಯ ಕಾಮಗಾರಿ ಯಾವ ಹಂತದಲ್ಲಿದೆ? ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು” ಸರಕಾರಿ ವಕೀಲರಿಗೆ ನಿರ್ದೇಶನ ನೀಡಿ ಪ್ರಕರಣವನ್ನು ದಿನಾಂಕ 21.02.2023 ಕ್ಕೆ ಮುಂದೂಡಿತ್ತು.
ಇಂದು ನ್ಯಾಯಾಲಯಕ್ಕೆ ಹಾಜರಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಿರ್ದೇಶಕ ನ್ಯಾಯಾಲಯಕ್ಕೆ ಅಫಿದವಿತ್ ಒಂದನ್ನು ಸಲ್ಲಿಸಿ ಸದರಿ ಕಾಮಗಾರಿಗೆ ಈ ತಕ್ಷಣವೇ ಒಂದು ಕೋಟಿ ರೂಪಾಯಿ ಹಣ ಅನುದಾನ ಮಾಡಿರುವುದಾಗಿಯೂ, ಈ ಬಗ್ಗೆ ಹೊಸ ಸರಕಾರಿ ಆದೇಶದ ಪ್ರತಿಯನ್ನು ಸಲ್ಲಿಸಿದರು.
ಈ ಪ್ರಕರಣವನ್ನು ತೀರಾ ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ “2019 ರಲ್ಲಿ 40 ಲಕ್ಷ ರೂಪಾಯಿ ಅನುದಾನ ಮಾಡಿರುವುದಾಗಿ ಹೇಳಿದ್ದಿರಿ. ಈಗ ಒಂದು ಕೋಟಿ ಅನುದಾನ ಪ್ರಕಟ ಮಾಡುತ್ತಿರುವುದಾಗಿ ನೀವು ಹೇಳುತ್ತಿದ್ದೀರಿ, ಸೇತುವೆ ಮತ್ತು ರಸ್ತೆ ನಿರ್ಮಾಣ ಕಾರ್ಯ ಕೇವಲ ಪೇಪರ್ ಹಾಳೆಗಳಲ್ಲಿ ಮಾತ್ರ ಮಾಡುತ್ತಿದ್ದೀರಾ? ಯಾವಾಗ ಮುಗಿಸುತ್ತೀರಿ? ಎಂದು ಖಾರವಾಗಿ ನುಡಿದು ಈ ಬಗ್ಗೆ ಸ್ಪಷ್ಟತೆಯನ್ನು ನ್ಯಾಯಾಲಯಕ್ಕೆ ನೀಡಬೇಕೆಂದು ಮೌಖಿಕವಾಗಿ ಕೇಳಿತು. ಸರಕಾರಿ ವಕೀಲರು ದಿನಾಂಕ 17.2. 2023 ರಂದು ಒಂದು ಕೋಟಿ ರೂಪಾಯಿ ಹಣದ ಬಿಡುಗಡೆ ಆದೇಶ ಮಾಡಿರುವುದಾಗಿಯೂ ಹಾಗೂ ದಿನಾಂಕ 20-2-2023 ರಂದು ಈ ಬಗ್ಗೆ ಆನ್ ಲೈನ್ ಟೆಂಡರ್ ಕರೆಯಲಾಗಿದೆ ಎಂದೂ ತಿಳಿಸಿ, ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಕೆಲಸ ಆರಂಭಿಸುವುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೂ ತೃಪ್ತವಾಗದ ನ್ಯಾಯಾಲಯ “ಟ್ರಾನ್ಸ್ಫರೆನ್ಸಿ ಆಕ್ಟ್ನಲ್ಲಿನ ಆನ್ಲೈನ್ ಟೆಂಡರಿಗೆ ಎಷ್ಟು ಸಮಯ ಬೇಕಾಗಿದೆ?” ಎಂದು ಮರು ಪ್ರಶ್ನಿಸಿ ” ಎರಡು ವಾರಗಳ ಒಳಗೆ ಹಣಬಿಡುಗಡೆ ಕೆಲಸ ಆರಂಭ, ಅಂತ್ಯದ ಬಗ್ಗೆ ನ್ಯಾಯಾಲಯಕ್ಕೆ ಇನ್ನೊಮ್ಮೆ ಅಫಿದವಿತ್ ನೀಡಬೇಕೆಂಬ” ನಿರ್ದೇಶನ ನೀಡಿ ಪ್ರಕರಣವನ್ನು ಒಂದು ವಾರ ಕಳೆದು ಮರು ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಪಟ್ಟಿ ಮಾಡಲು ಆದೇಶಿಸಿದೆ.