ನೆಲ್ಯಾಡಿ: ನಾಲ್ಕು ದಿನದ ಹಿಂದೆ ಬೆಳ್ಳಂಬೆಳಿಗ್ಗೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಇಬ್ಬರು ಅಮಾಯಕರನ್ನು ಬಲಿ ಪಡೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಫೆ.23ರಂದು ಯಶಸ್ವಿಯಾಗಿದೆ.
ಫೆ.20ರಂದು ಬೆಳ್ಳಂಬೆಳಿಗ್ಗೆ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪ ನಡೆದ ಆನೆ ದಾಳಿಗೆ ರೆಂಜಿಲಾಡಿ ಗ್ರಾಮದ ನೈಲ ನಿವಾಸಿ ರಾಜೀವ ಶೆಟ್ಟಿ-ಸುಂದರಿ ದಂಪತಿಯ ಪುತ್ರಿ, ಪೇರಡ್ಕದಲ್ಲಿರುವ ರೆಂಜಿಲಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ(22ವ.) ಹಾಗೂ ನೈಲ ನಿವಾಸಿ ದಿ.ತಿಮ್ಮಪ್ಪ ಶೆಟ್ಟಿ ಎಂಬವರ ಪುತ್ರ ರಮೇಶ್ ರೈ(55ವ.)ಎಂಬವರು ಮೃತಪಟ್ಟಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಫೆ.21ರಿಂದಲೇ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದಕ್ಕೆ ಮೈಸೂರಿನ ತಿತಿಮತಿ ಹಾಗೂ ಮಡಿಕೇರಿಯ ದುಬಾರೆ ಆನೆ ಶಿಬಿರದಿಂದ 5 ಸಾಕಾನೆಗಳು, ನಾಗರಹೊಳೆಯ ನುರಿತ ವೈದ್ಯರ ತಂಡ, ಸುರತ್ಕಲ್ ಎನ್‌ಐಟಿಕೆಯ ಥರ್ಮಲ್ ಡ್ರೋನ್ ತಂಡದವರನ್ನು ಕರೆಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಾಡುಜೇನು ಕುರುಬರ ತಂಡ ಅರಣ್ಯದೊಳಗೆ ತೆರಳಿ ಆನೆ ಪತ್ತೆ ಕೆಲಸ ಆರಂಭಿಸಿತ್ತು. ಮೊದಲ ದಿನವಾದ ಫೆ.21ರಂದು ಕೊಣಾಜೆ ಗ್ರಾಮದ ಪುತ್ತಿಗೆಯಲ್ಲಿ ಶೋಧ ನಡೆದಿದ್ದು 2ನೇ ದಿನವಾದ ಫೆ.22ರಂದು ಐತ್ತೂರು ಗ್ರಾಮದ ಆಜನ ಪ್ರದೇಶದಲ್ಲಿ ಶೋಧ ನಡೆಸಲಾಗಿತ್ತು. 2ನೇ ದಿನದ ಕಾರ್ಯಾಚರಣೆಯಲ್ಲಿ ಐತ್ತೂರು ಗ್ರಾಮದ ಆಜನ ಪ್ರದೇಶದಲ್ಲಿ ಕಾಡಾನೆ ಗೋಚರಿಸಿದರೂ ವೈದ್ಯರು ಪ್ರಯೋಗಿಸಿದ ಮದ್ದುಗುಂಡು ಗುರಿ ತಪ್ಪಿದ್ದರಿಂದ ಕಾರ್ಯಾಚರಣೆ ಕೈಕೊಟ್ಟಿತ್ತು.
3ನೇ ದಿನ ಯಶಸ್ವಿ: ಕಾರ್ಯಾಚರಣೆಯ ಮೂರನೇ ದಿನವಾದ ಫೆ.23ರಂದು ಬೆಳಿಗ್ಗೆ ಕೊಂಬಾರು ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕೊಂಬಾರು ಭಾಗದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಸುಂಕದಕಟ್ಟೆ-ಬೊಳ್ನಡ್ಕ, ಕೊಂಬಾರು ರಸ್ತೆಯಲ್ಲಿ ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು. ಕಾರ್ಯಾಚರಣೆ ಹಾಗೂ ಸಾಕಾನೆ ಸಾಗುವ ವ್ಯಾಪ್ತಿಯಲ್ಲಿ ಮೆಸ್ಕಾಂ ವತಿಯಿಂದ ಲೈನ್ ಆಫ್ ಮಾಡಿ ಮುಂಜಾಗ್ರತೆ ವಹಿಸಲಾಗಿತ್ತು. ಕೊಂಬಾರು ಗ್ರಾಮದ ಮಂಡೆಕರ ಸಮೀಪ ಮುಜೂರು ರಕ್ಷಿತಾರಣ್ಯದಲ್ಲಿ ಕಾಡಾನೆ ಇರುವಿಕೆಯನ್ನು ಪತ್ತೆ ಹಚ್ಚಿದ ಕಾರ್ಯಾಚರಣೆ ತಂಡ ಸಂಜೆ 4.30ರ ವೇಳೆಗೆ ಗನ್ ಮೂಲಕ ಆನೆಗೆ ಅರಿವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ಆನೆ ಪ್ರಜ್ಞೆ ತಪ್ಪುತ್ತಿದ್ದಂತೆ ಸೆಣಬಿನ ಹಗ್ಗ ಸೇರಿದಂತೆ ಇತರೇ ಸಲಕರಣೆಗಳ ಜೊತೆಗೆ ಸ್ಥಳಕ್ಕೆ ತೆರಳಿದ್ದ ಅರಣ್ಯ ಇಲಾಖೆಯ ತಂಡ ಕಾಡಾನೆಯ ಎರಡು ಕಾಲಿಗೆ ಹಾಗೂ ಕುತ್ತಿಗೆಗೆ ಸೆಣಬಿನ ಹಗ್ಗ ಬಿಗಿದು ಅಲ್ಲೇ ಪಕ್ಕದಲ್ಲಿದ್ದ ಮರಕ್ಕೆ ಕಟ್ಟಲಾಯಿತು. ಈ ವೇಳೆ ಆನೆಯ ಮೇಲೆ ನೀರು ಹಾಕಿ ಏನೂ ತೊಂದರೆಯಾಗದಂತೆಯೂ ಮುಂಜಾಗ್ರತೆ ವಹಿಸಲಾಗಿತ್ತು.
ಕಾಡಾನೆಯ ಪ್ರತಿರೋಧ: ಪ್ರಜ್ಞೆ ಬಂದ ಬಳಿಕ ಕಾಡಾನೆ ಪ್ರತಿರೋಧ ತೋರಿತಾದರೂ ಈ ವೇಳೆಗೆ ಸ್ಥಳದಲ್ಲಿದ್ದ ನಾಲ್ಕು ಸಾಕಾನೆಗಳು ಕಾಡಾನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾದವು. ಆದರೂ ಕಾಡಾನೆ ಪ್ರತಿರೋಧ ತೋರುತ್ತಲೇ ಇದ್ದುದರಿಂದ ನಾಲ್ಕು ಸಾಕಾನೆಗಳೂ ಹಿಂದೆ ಸರಿದವು. ಈ ವೇಳೆ ಅರಣ್ಯದ ಇನ್ನೊಂದು ಭಾಗಕ್ಕೆ ತೆರಳಿದ್ದ ಗಜಪಡೆಯ ನಾಯಕ ಅಭಿಮನ್ಯುವನ್ನು ತಕ್ಷಣ ಸ್ಥಳಕ್ಕೆ ಕರೆತರಲಾಯಿತು. ಬಳಿಕ 5 ಸಾಕಾನೆಗಳು ಕಾಡಾನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡವು. ಅಭಿಮನ್ಯು ತನ್ನ ಸೊಂಡಿಲಿನಿಂದ ಕಾಡಾನೆಗೆ ಹೊಡೆಯುವ ಮೂಲಕ ಎಚ್ಚರಿಕೆ ನೀಡಿತು. ಕಾಡಾನೆಯನ್ನು ಸುತ್ತುವರಿದ ಐದೂ ಸಾಕಾನೆಗಳಾದ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಕಾಡಾನೆಯನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡು ಅಲುಗಾಡದಂತೆ ಎಚ್ಚರಿಕೆ ವಹಿಸಿದವು.
ಹಿಟಾಚಿ ಮೂಲಕ ದಾರಿ: ಅರಣ್ಯದೊಳಗೆ ಸುಮಾರು 1 ರಿಂದ 1.5 ಕಿ.ಮೀ.ದೂರದ ದುರ್ಗಮ ಪ್ರದೇಶದಲ್ಲಿದ್ದ ಕಾಡಾನೆಯನ್ನು ಕರೆತರುವುದೂ ಅರಣ್ಯ ಇಲಾಖೆಗೆ ಸವಾಲಾಗಿತ್ತು. ಮೊದಲೇ ಸಿದ್ಧಪಡಿಸಲಾಗಿದ್ದ ಹಿಟಾಚಿ ಮೂಲಕ ಕಾಡಾನೆ ಸೆರೆಸಿಕ್ಕ ಜಾಗದ ತನಕ ಮಾರ್ಗ ಮಾಡಲಾಯಿತು. ಕಾಡಾನೆಯ ಎರಡು ಕಾಲಿಗೆ ಕಟ್ಟಲಾದ ಹಗ್ಗದ ಇನ್ನೊಂದು ತುದಿಯನ್ನು ಎರಡು ಮರಕ್ಕೆ ಕಟ್ಟಲಾಗಿದ್ದು ಅದನ್ನು ಬಿಚ್ಚಿ ಎರಡು ಸಾಕಾನೆಗಳ ಸೊಂಡಿಲಿಗೆ ಹಾಗೂ ಕಾಡಾನೆಯ ಸೊಂಡಿಲಿಗೆ ಬಿಗಿಯಲಾಗಿದ್ದ ಹಗ್ಗದ ಇನ್ನೊಂದು ತುದಿಯನ್ನು ಒಂದು ಸಾಕಾನೆಯ ಸೊಂಡಿಲಿಗೆ ಕಟ್ಟಿ ಅರಣ್ಯದಿಂದ ಹೊರ ತರಲಾಯಿತು. ಇನ್ನುಳಿದ ಎರಡು ಸಾಕಾನೆಗಳು ಎರಡು ಬದಿಯಲ್ಲಿ ಬೆಂಗವಲಾಗಿ ನಿಂತು ಮುನ್ನಡೆದವು. ಅರಣ್ಯಪ್ರದೇಶದಿಂದ ಹೊರ ತಂದ ಬಳಿಕ ಕ್ರೇನ್‌ನ ಸಹಾಯದಿಂದ ಕಾಡಾನೆಯನ್ನು ಲಾರಿಗೆ ಲೋಡ್ ಮಾಡಲಾಯಿತು. ಲಾರಿಯಲ್ಲಿದ್ದ ಕಬ್ಬಿಣದ ಗೂಡಿನೊಳಗೆ ಆನೆಯನ್ನು ಬಂಧನಕ್ಕೊಳಪಡಿಸಲಾಯಿತು. ಬಂಧಿತ ಕಾಡಾನೆಯನ್ನು ರಾತ್ರಿಯೇ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಕೊಂಡೊಯ್ಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೆರೆಸಿಕ್ಕಿರುವುದು ನರಹಂತಕನೇ: ಮೂರನೇ ದಿನದ ಕಾರ್ಯಾಚರಣೆ ವೇಳೆ ಅರಣ್ಯದಲ್ಲಿ ನಾಲ್ಕು ಕಾಡಾನೆಗಳು ಕಾರ್ಯಾಚರಣೆ ತಂಡಕ್ಕೆ ಗೋಚರಿಸಿವೆ. ಈ ಪೈಕಿ ಒಂದು ಆನೆಗೆ ಅರಿವಳಿಕೆ ಮದ್ದು ನೀಡುವಲ್ಲಿ ತಂಡ ಯಶಸ್ವಿಯಾಗಿದೆ. ಈ ರೀತಿಯಾಗಿ ಸೆರೆಯಾಗಿರುವ ಕಾಡಾನೆ ಫೆ.20ರಂದು ಇಬ್ಬರನ್ನು ಬಲಿ ಪಡೆದುಕೊಂಡಿರುವ ಕಾಡಾನೆಯೇ ಆಗಿದೆ ಎಂಬುದು ಸ್ಪಷ್ಟವಾಗಿದೆ. ಸೆರೆ ಸಿಕ್ಕಿರುವುದು ಗಂಡಾನೆಯಾಗಿದ್ದು ಇದಕ್ಕೆ 4೦ ವರ್ಷ ಪ್ರಾಯ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಸೆರೆ ಸಿಕ್ಕಿರುವ ಕಾಡಾನೆ ಸಾಕಾನೆ ಅಭಿಮನ್ಯುವಿಗಿಂತಲೂ ಬಲಿಷ್ಠವಾಗಿತ್ತು. ಬಂಧಿತ ಕಾಡಾನೆಯ ಕಾಲು ಹಾಗೂ ದಂತ(ಕೋರೆ) ಭಾಗದಲ್ಲಿ ರಕ್ತದ ಕಳೆ ಪತ್ತೆಯಾಗಿದೆ ಎನ್ನಲಾಗಿದ್ದು ಇದರಿಂದ ಮೊನ್ನೆ ಇಬ್ಬರನ್ನು ಬಲಿ ಪಡೆದ ಆನೆ ಇದೇ ಆಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜಾತ್ರೆಯಂತೆ ಆಗಮಿಸಿದ ಜನ: ಆನೆ ಸೆರೆ ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯರು ಸೇರಿದಂತೆ ಜನರು ತಂಡೋಪತಂಡವಾಗಿ ಜಾತ್ರೆಗೆ ಬರುವವರಂತೆ ಬರುತ್ತಿರುವುದು ಕಂಡು ಬಂತು. ಜನರು ಅರಣ್ಯಪ್ರದೇಶದೊಳಗೆ ಹೋಗದಂತೆ ಕಡಬ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ತಡೆ ಹಿಡಿದರು. ಸುಮಾರು 9 ಗಂಟೆ ವೇಳೆಗೆ ಆನೆಯನ್ನು ಅರಣ್ಯದಿಂದ ಹೊರತಂದು ಲಾರಿಗೆ ಹತ್ತಿಸಲಾಯಿತು. ಈ ವೇಳೆ ನೂರಾರು ಮಂದಿ ಸ್ಥಳದಲ್ಲಿದ್ದು ’ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆಗೆ ಸಾಕ್ಷಿಯಾದರು. ಆನೆಯನ್ನು ಶಿಬಿರಕ್ಕೆ ಸಾಗಿಸುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮನದಲ್ಲಿ ಮಂದಹಾಸ ಮೂಡಿದೆ. ಡಿಎಫ್‌ಒ ದಿನೇಶ್‌ಕುಮಾರ್, ಎಸಿಎಫ್ ಪ್ರವೀಣ್‌ಕುಮಾರ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಸೂಕ್ತ ನಿರ್ದೇಶನ ನೀಡಿದರು.
ವೈದ್ಯರ ತಂಡದಲ್ಲಿ ಪುತ್ತೂರಿನ ಡಾ.ಯಶಸ್ವಿ, ಡಾ.ಮೇಘನಾ ದಂಪತಿ
ಮೂರು ದಿನಗಳ ಕಾಲ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲಿ ಪುತ್ತೂರಿನ ಡಾ.ಯಶಸ್ವಿ ನಾರಾವಿ ಹಾಗೂ ಅವರ ಪತ್ನಿ ಡಾ.ಮೇಘನಾ ಅವರು ಪಾಲ್ಗೊಂಡಿದ್ದರು.
ಪುತ್ತೂರು ಹಾರಾಡಿ ನಿವಾಸಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಅವರ ಪುತ್ರ ಪಶುವೈದ್ಯ ಡಾ.ಯಶಸ್ವಿ ನಾರಾವಿ ಹಾಗೂ ಸೊಸೆ ಪಶುವೈದ್ಯೆ ಡಾ.ಮೇಘನಾ ಅವರು ಮಂಗಳೂರಿನ ಕುಲಶೇಖರದಲ್ಲಿ ಲಿಟ್ಲ್ ಪೌಸ್ ವೆಟರ್ನರಿ ಎಂಬ ಕ್ಲಿನಿಕ್ ಹೊಂದಿದ್ದಾರೆ. ಫೆ.18ರಂದು ಮಂಗಳೂರಿನ ನಿಡ್ಡೋಡಿಯಲ್ಲಿ ಆಳವಾದ ಬಾವಿಗೆ ಬಿದ್ದ ಚಿರತೆಯನ್ನು ಬಾವಿಯಲ್ಲೇ ಸ್ಮೃತಿ ತಪ್ಪಿಸಿ ಮೇಲಕ್ಕೆತ್ತುವಲ್ಲಿ ಈ ದಂಪತಿ ಯಶಸ್ವಿಯಾಗಿದ್ದರು. ಡಾ.ಮುಜೀಬ್, ಡಾ. ವೆಂಕಟೇಶ್, ಡಾ.ರಮೇಶ್, ಡಾ.ಅಕ್ರಂ ಅವರು ಆನೆ ಪತ್ತೆ ಕಾರ್ಯಾಚರಣೆಯಲ್ಲಿ ವೈದ್ಯರಾಗಿ ಸಹಕರಿಸಿದರು.
ಸೆರೆ ಸಿಕ್ಕಿರುವುದು ನರಹಂತಕ ಆನೆಯೇ ಆಗಿದೆ: ಡಿಸಿ ಸ್ಪಷ್ಟನೆ
ಕೊಂಬಾರು ಗ್ರಾಮದ ಮಂಡೆಕರ ಸಮೀಪ ಮುಜೂರು ರಕ್ಷಿತಾರಣ್ಯದಲ್ಲಿ ಸೆರೆ ಸಿಕ್ಕಿರುವುದು ಫೆ.2೦ರಂದು ರೆಂಜಿಲಾಡಿ ನೈಲದಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿರುವ ನರಹಂತಕ ಕಾಡಾನೆಯೇ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸೆರೆ ಸಿಕ್ಕಿರುವ ಕಾಡಾನೆಯ ದಂತ ಹಾಗೂ ಕಾಲಿನ ಭಾಗದಲ್ಲಿ ರಕ್ತದ ಕಲೆಇರುವುದರಿಂದ ಇದೇ ಆನೆ ಇಬ್ಬರನ್ನು ಕೊಂದಿರುವುದು ಸ್ಪಷ್ಟಗೊಂಡಿದೆ. ಗಂಡು ಆನೆ ಇದಾಗಿದೆ. ಸೆರೆ ಹಿಡಿಯಲಾದ ಆನೆ ವ್ಯಾಘ್ರಗೊಂಡಿದ್ದು, ಸೆರೆ ಹಿಡಿಯದೇ ಇರುತ್ತಿದ್ದಲ್ಲಿ ಇನ್ನೂ ಹಚ್ಚಿನ ಸಮಸ್ಯೆ ಮಾಡುವ ಸಾಧ್ಯತೆಯಿತ್ತು. ಜನರು ಇನ್ನು ನಿರ್ಭೀತಿಯಿಂದ ಇರಬಹುದು. ಇನ್ನೂ ಕಾಡಾನೆಗಳು ಇರುವ ಬಗ್ಗೆ ಸ್ಥಳೀಯರು ತಿಳಿಸಿದ್ದು ಅವುಗಳನ್ನು ಸೆರೆ ಹಿಡಿಯುವ ಕಾರ್ಯ ನಡೆಸಲಾಗುತ್ತದೆ. ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.