ವರದಿ: ಹರೀಶ್ ಬಾರಿಂಜ
ನೆಲ್ಯಾಡಿ: ಮುಜೂರು ರಕ್ಷಿತಾರಣ್ಯದಲ್ಲಿ ಸೆರೆಸಿಕ್ಕ ಕಾಡಾನೆಯ ಹೆಡೆಮುರಿ ಕಟ್ಟುವಲ್ಲಿ ಪರಾಕ್ರಮ ತೋರಿದ್ದು ಸಾಕಾನೆ ಅಭಿಮನ್ಯು. ಮಹಾಭಾರತದಲ್ಲಿ ಬರುವ ಅಭಿಮನ್ಯು ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹ ಭೇದಿಸಿ ಒಳನುಗ್ಗಿದರೂ ಹೊರಬರುವಲ್ಲಿ ವಿಫಲನಾದ. ಆದರೆ ಮೈಸೂರಿನ ತಿತಿಮತಿ ಆನೆ ಶಿಬಿರದಿಂದ ಬಂದ ಸಾಕಾನೆ ಅಭಿಮನ್ಯು ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮುಜೂರು ದಟ್ಟ ರಕ್ಷಿತಾರಣ್ಯದ ದುರ್ಗಮ ಪ್ರದೇಶದಲ್ಲಿ ಸೆರೆಸಿಕ್ಕ ಕಾಡಾನೆಯನ್ನು ಪಳಗಿಸಿ ಹೆಡೆಮುರಿ ಕಟ್ಟಿ ದುಬಾರೆ ಆನೆ ಶಿಬಿರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.
ಕಾಡಾನೆಯ ಜಾಡು ಹಿಡಿದು ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮುಜೂರು ರಕ್ಷಿತಾರಣ್ಯದೊಳಗೆ ಹೋಗಿದ್ದ ಅರಣ್ಯ ಸಿಬ್ಬಂದಿ, ಮಾವುತರು, ವೈದ್ಯರು ಹಾಗೂ ಕಾವಾಡಿಗರ ತಂಡಕ್ಕೆ ಮಂಡೆಕರದಿಂದ ಸುಮಾರು 2 ಕಿ.ಮೀ. ದೂರದ ಮುಜೂರು ರಕ್ಷಿತಾರಣ್ಯದಲ್ಲಿ ಕಾಡಾನೆ ಗೋಚರಿಸಿದೆ. ಈ ವೇಳೆ ತಂಡದಲ್ಲಿದ್ದ ಶಾರ್ಪ್‌ಶೂಟರ್ ವೆಂಕಟೇಶ್‌ರವರು ಗನ್ ಮೂಲಕ ಆನೆಗೆ ಅರಿವಳಿಕೆ ಮದ್ದುಪ್ರಯೋಗಿಸುವಲ್ಲಿ ಯಶಸ್ವಿಯಾಗಿದ್ದರು. ಇವರಿಗೆ ಪಶುವೈದ್ಯರಾದ ಡಾ.ಮುಜೀಬ್, ಡಾ.ರಮೇಶ್, ಡಾ.ಯಶಸ್ವಿ, ಡಾ.ಮೇಘನಾರವರು ಸಹಕಾರ ನೀಡಿದ್ದರು. ಆನೆ ಪ್ರಜ್ಞೆ ತಪ್ಪುತ್ತಿದ್ದಂತೆ ಸಿಬ್ಬಂದಿಗಳು ಆನೆಯ ಕಾಲು, ಕೊರಳಿಗೆ ಹಗ್ಗ ಕಟ್ಟುವ ಪ್ರಕ್ರಿಯೆ ನಡೆಸಿದರು. ಈ ವೇಳೆ 4 ಸಾಕಾನೆಗಳನ್ನು ಆನೆ ಪ್ರಜ್ಞೆ ತಪ್ಪಿ ಬಿದ್ದ ಸ್ಥಳಕ್ಕೆ ತರಲಾಯಿತು. ಆದರೆ ಬಲಿಷ್ಠವಾಗಿದ್ದ ಕಾಡಾನೆಯ ಅರ್ಭಟಕ್ಕೆ ಸಾಕಾನೆಗಳು ಬೆದರಿದವು. ಇದರಿಂದ ಮಾವುತರೂ ಗಲಿಬಿಲಿಗೊಂಡಿದ್ದರು.
ಹೆಡೆಮುರಿ ಕಟ್ಟಿದ ಅಭಿಮನ್ಯು: ಕಾಡಾನೆಗೆ ಅರಿವಳಿಕೆ ಮದ್ದು ಪ್ರಯೋಗಿಸುವ ಸಂದರ್ಭದಲ್ಲಿ ಗಜಪಡೆಯ ನಾಯಕ ಅಭಿಮನ್ಯು ಮುಜೂರು ರಕ್ಷಿತಾರಣ್ಯದ ಇನ್ನೊಂದು ಬದಿಯಲ್ಲಿ ಕಾಡಾನೆಗಾಗಿ ಹುಡುಕಾಟದಲ್ಲಿ ತೊಡಗಿತ್ತು. ಮಂಡೆಕರ ಬಳಿ ಸಾಕಾನೆಗೆ ಅರಿವಳಿಕೆ ಮದ್ದು ಪ್ರಯೋಗಿಸಿ ಪ್ರಜ್ಞೆ ತಪ್ಪಿ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ತರಾತುರಿಯಲ್ಲಿ ಅಭಿಮನ್ಯುವನ್ನು ಲಾರಿಯಲ್ಲಿ ಕರೆತಂದು ಮಂಡೆಕರ ಸಮೀಪ ಇಳಿಸಿ ಆನೆಬಿದ್ದ ಸ್ಥಳಕ್ಕೆ ಸುಮಾರು 2 ಕಿ.ಮೀ.ದೂರಕ್ಕೆ ನಡೆಸಿಕೊಂಡು ಹೋಗಲಾಯಿತು. ಅಭಿಮನ್ಯು ಬರುತ್ತಿದ್ದಂತೆ ಉಳಿದ ಸಾಕಾನೆಗಳ ಧೈರ್ಯವೂ ಇಮ್ಮಡಿಗೊಂಡಿತು. ಮಾವುತರು, ಸಿಬ್ಬಂದಿಗಳೂ ನಿಟ್ಟುಸಿರು ಬಿಟ್ಟರು. ಬಳಿಕ ಕಾಡಾನೆಯನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡ ಅಭಿಮನ್ಯು ಕಾಡಾನೆಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಯಿತು. ಅಲ್ಲಿಂದ ನಾಯಕನ ಸ್ಥಾನವನ್ನೂ ಸರಿಯಾಗಿಯೇ ನಿಭಾಯಿಸಿದ ಅಭಿಮನ್ಯು ದಟ್ಟಾರಣ್ಯದಿಂದ ಹೊರಗೆ ತನಗಿಂತಲೂ ಬಲಿಷ್ಠವಾಗಿದ್ದ ಕಾಡಾನೆಯನ್ನು ಕರೆತಂದು ಲಾರಿಗೆ ತುಂಬಿಸಿ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಕೊಂಡೊಯ್ಯುವ ತನಕವೂ ಪ್ರಮುಖ ಪಾತ್ರವಹಿಸಿತು. ಅಭಿಮನ್ಯುವಿನ ಪರಾಕ್ರಮ ಕೊಂಡಾಡಿದ ಅಧಿಕಾರಿಗಳು, ಸಾರ್ವಜನಿಕರೂ ಮನದಲ್ಲಿಯೇ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.
ಕೂಂಬಿಂಗ್ ಸ್ಪೆಷಲಿಸ್ಟ್: ಅಭಿಮನ್ಯು ಕೂಂಬಿಂಗ್ ಸ್ಪೆಷಲಿಸ್ಟ್. ಸೌಮ್ಯ ಸ್ವಭಾವದ ಈತ ಪುಂಡಾನೆಗಳನ್ನು ಪಳಗಿಸುವುದರಲ್ಲಿ ನಿಪುಣ. ಈ ತನಕ ಸುಮಾರು 300 ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅನುಭವ ಹೊಂದಿದೆ. ಇದಲ್ಲದೆ 50ಕ್ಕೂ ಹೆಚ್ಚು ಹುಲಿ, ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲೂ ಅಭಿಮನ್ಯು ಎತ್ತಿದ ಕೈ. ಈತನನ್ನು 1970ರಲ್ಲಿ ಕೊಡಗಿನ ಹೆಬ್ಬಾಳ ಕಾಡಿನಿಂದ ಸೆರೆ ಹಿಡಿದು ತರಲಾಗಿತ್ತು. ಸುಮಾರು 5 ಸಾವಿರ ಕೆ.ಜಿ.ತೂಕ, 2.72 ಮೀಟರ್ ಎತ್ತರ ಹಾಗೂ 3.51 ಮೀಟರ್ ಉದ್ದದ ಗಾತ್ರ ಹೊಂದಿರುವ ಅಭಿಮನ್ಯುಗೆ ಈಗ 58 ವರ್ಷ ಆಗಿದೆ.
ಅಂಬಾರಿ ಹೊರುವ ಅಭಿಮನ್ಯು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸುಮಾರು 5.5 ಕಿ.ಮೀ.ತನಕ ಸಾಗಿ ಸೈ ಎನಿಸಿಕೊಂಡಿದ್ದಾನೆ. 2020ರಲ್ಲಿ ಕೋವಿಡ್ ಮಹಾಮಾರಿ ಕಾಡಿದ್ದರಿಂದ ಅರಮನೆ ಆವರಣದಲ್ಲಿ ಸರಳವಾಗಿ ದಸರಾ ಆಚರಿಸಲಾಗಿತ್ತು. ಈ ವೇಳೆ ಅಭಿಮನ್ಯುವಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಯಿತು. 2021ರಲ್ಲೂ ದಸರಾ ಮಹೋತ್ಸವ ಸರಳವಾಗಿ ನಡೆದಿದ್ದು ಈ ಬಾರಿಯೂ ಅಭಿಮನ್ಯು ಅಂಬಾರಿ ಹೊತ್ತು ಸಾಗಿದ್ದಾನೆ. 2022ರಲ್ಲಿ ಅದ್ದೂರಿಯಾಗಿ ನಡೆದ ದಸರಾ ಮಹೋತ್ಸವದ ಜಂಬೂ ಸವಾರಿ ವೇಳೆ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು 5.5 ಕಿ.ಮೀ.ಕ್ರಮಿಸಿ ಸೈ ಎನಿಸಿಕೊಂಡಿದ್ದಾನೆ. 2020ಕ್ಕೆ ಮೊದಲು ಅಭಿಮನ್ಯುವಿಗೆ ಜಂಬೂ ಸವಾರಿ ವೆಳೆ ಸಂಗೀತಗಾರರ ಸಂಗೀತ ಗಾಡಿ ಎಳೆಯುವ ಜವಾಬ್ದಾರಿ ಇತ್ತು. ಬೃಹತ್ ಗಾಡಿಯಲ್ಲಿ ಸಂಗೀತಗಾರರು ಆಸೀನರಾಗಿ ಸಂಗೀತದ ಸುಧೆ ಹರಿಸುತ್ತಿದ್ದರೆ ಅವರನ್ನು ಎಳೆದೊಯ್ಯುತ್ತ ಅಭಿಮನ್ಯು ಮುನ್ನಡೆಯುತ್ತಿತ್ತು. 2020ರಿಂದ ಗಜಪಡೆಯ ನೇತೃತ್ವ ವಹಿಸಿಕೊಂಡು ಅಂಬಾರಿ ಹೊತ್ತು ಸೈ ಎನಿಸಿಕೊಂಡಿದೆ. ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಶಕ್ತಿ ಸಾಮರ್ಥ್ಯದ ಜೊತೆಗೆ ತಾಳ್ಮೆಯೂ ಬೇಕಾಗುತ್ತದೆ. ಅದೆಲ್ಲವೂ ಅಭಿಮನ್ಯುವಿಗೆ ಇರುವುದರಿಂದ ಈತನ ಮೇಲೆ ಎಲ್ಲರಿಗೂ ಹೆಚ್ಚಿನ ಪ್ರೀತಿ ಇದೆ.
ರೆಂಜಿಲಾಡಿಯಲ್ಲೂ ಅಚ್ಚುಮೆಚ್ಚು: ರೆಂಜಿಲಾಡಿ ಗ್ರಾಮದ ಪೇರಡ್ಕ ಆನೆ ಶಿಬಿರದಲ್ಲಿ ಮೂರು ದಿನ ಇದ್ದ ಅಭಿಮನ್ಯು ಎಲ್ಲರ ಕೇಂದ್ರ ಬಿಂದು ಆಗಿತ್ತು. ಬಾಳೆ ಹಣ್ಣು ಸೇರಿದಂತೆ ಇತರೇ ಆಹಾರಗಳನ್ನು ಅಭಿಮನ್ಯುವಿಗೆಂದೇ ಕೆಲವರು ತಂದು ನೀಡುತ್ತಿದ್ದರು. ಒಟ್ಟಿನಲ್ಲಿ ದಸರೆಯಲ್ಲಿ ಅಂಬಾರಿ ಹೊರುವ ಅಭಿಮನ್ಯುವನ್ನು ನೋಡಿ ರೆಂಜಿಲಾಡಿಯ ಜನರು ಪುನೀತರಾದರು.
ಗಜಪಡೆಗೆ ನಾಯಕ
ಅಭಿಮನ್ಯು ಕಾಡಾನೆ ಹಿಡಿಯುವುದರಲ್ಲಿ ನಿಪುಣ. ಆತ ಅಲ್‌ರೌಂಡರ್ ಇದ್ದಂತೆ. ಈ ತನಕ 300ಕ್ಕೂ ಹೆಚ್ಚು ಕಾಡಾನೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹುಲಿ, ಚಿರತೆ ಹಿಡಿಯುವ ಕಾರ್ಯಾಚರಣೆಗೂ ಅಭಿಮನ್ಯುವನ್ನೇ ಬಳಸಲಾಗುತ್ತದೆ. ದಸರಾ ಮೆರವಣಿಗೆಯಲ್ಲಿ 16ಕ್ಕೂ ಹೆಚ್ಚು ಆನೆಗಳು ಭಾಗವಹಿಸುತ್ತವೆ. ಈ ಗಜಪಡೆಗೆ ಅಭಿಮನ್ಯುವೇ ನಾಯಕ.
ಚಿನ್ನಪ್ಪ, ಮಾವುತ