ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ, ದೈವಗಳ ನೇಮೋತ್ಸವ ಸಂಪನ್ನ

0

ಪುತ್ತೂರು : ಆದಿ ಸುಬ್ರಹ್ಮಣ್ಯನಂತೆ ಹುತ್ತಕ್ಕೆ ಪೂಜೆ ಸಲ್ಲುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.23, ಫೆ.24ರಂದು ನಡೆಯಿತು

ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಕಾರ್ತಿಕ ತಂತ್ರಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಫೆ.22ರಂದು ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಫೆ.23ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ ನಡೆಯಿತು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ , ದೇವರ ಬಲಿ ಹೊರಟು ಉತ್ಸವ ವಸಂತ ಕಟ್ಟೆ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡಬ ನೃತ್ಯ ನಿನಾದ ತಂಡದಿಂದ ನೃತ್ಯ ವೈಭವ ನಡೆಯಿತು.

ಫೆ.24ರಂದು ಬೆಳಿಗ್ಗೆ ವ್ಯಾಘ್ರ ಚಾಮುಂಡಿಯ ನೇಮೋತ್ಸವ, ರುದ್ರ ಚಾಮುಂಡಿಯ ನೇಮೋತ್ಸವ ನಡೆದ ಬಳಿಕ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಪುರುಷೋತ್ತಮ ಭಟ್, ಅಧ್ಯಕ್ಷರಾದ ನವೀನ್ ಚಂದ್ರ ರೈ, ಮೊಕ್ತೇಸರರಾದ ಶ್ರೀನಿವಾಸ್ ಹೆಬ್ಬಾರ್, ಎನ್.ನಾರಾಯಣ ರೈ ಮೊದಲ್ಕಾಡಿ,ಚಂದ್ರ ಶೇಖರ್ ರೈ,ಮೋಹನದಾಸ್ ರೈ,ಡಾ.ಸುಚೇತಾ ಜೆ.ಶೆಟ್ಟಿ, ಕಿಶೋರ್ ಕುಮಾರ್, ಸತೀಶ್ ರೈ,ಪ್ರವಿಜಣ್ ಕುಮಾರ್, ಅರ್ಚಕ ಹರಿನಾರಾಯಣ ಮನೋಳಿತ್ತಾಯ ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

2024 ಫೆ.17 ರಿಂದ ಫೆ.24 ರವರೆಗೆ ಬ್ರಹ್ಮಕಲಶೋತ್ಸವ

ಕ್ಷೇತ್ರದ ವಿಶೇಷ ಸಾನಿಧ್ಯ ಶಕ್ತಿಯಿಂದ ನಿರಂತರವಾಗಿ ಬೆಳಗುತ್ತಿರುವ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗಾಗಲೇ ಭಕ್ತರ ಅನುಕೂಲಕ್ಕಾಗಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗಿದೆ. ಅತಿಥಿ ಗೃಹ, ದೇವಸ್ಥಾನದ ಸುತ್ತ ಇಂಟರ್ ಲಾಕ್ ಅಳವಡಿಕೆ, ಆವರಣ ನಿರ್ಮಾಣ, ಷಣ್ಮುಖ ಬೋಜನ ಪ್ರಸಾದ ಮಂಟಪ ನಿರ್ಮಾಣಗೊಂಡಿದೆ. ಕ್ಷೇತ್ರದಲ್ಲಿ 2024 ಫೆ.17 ರಿಂದ ಫೆ.24 ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳು ನಡೆಯಲಿದೆ.

LEAVE A REPLY

Please enter your comment!
Please enter your name here