ಪುತ್ತೂರು: ತುರ್ತು ಸಂದರ್ಭದಲ್ಲಿ ಪೊಲೀಸರು ಯಾವ ರೀತಿ ಸ್ಪಂಧಿಸುವ ಮತ್ತು ರಕ್ಷಣಾತ್ಮಕವಾಗಿ ಪ್ರತಿಕ್ರಿಯೆ ಎದುರಿಸುವ ಕುರಿತು ಪುತ್ತೂರು, ಕಡಬ, ಉಪ್ಪಿನಂಗಡಿ, ಸಂಪ್ಯ ಪೊಲೀಸರಿಂದ ದೊಂಬಿ ನಿಗ್ರಹ ಕವಾಯತು ತರಬೇತಿಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಸಲಾಯಿತು. ಬಳಿಕ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಅಣುಕು ಕಾರ್ಯಾಚರಣೆ ನಡೆಯಿತು.
ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಸ್ಪಂದಿಸಬೇಕು, ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾದಾಗ ಯಾವ ರೀತಿ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿ ಎದುರಿಸಬೇಕು ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು.
ಎಸ್ಪಿ ಡಾ. ಅಮ್ಟೆ ವಿಕ್ರಂ ಮತ್ತು ಡಿವೈಎಸ್ಪಿ ಡಾ. ವೀರಯ್ಯ ಹಿರೇಮಟ್ ಅವರ ನೇತೃತ್ವದಲ್ಲಿ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ಅವರು ತರಬೇತಿ ನೀಡಿದರು. ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್, ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಎಸ್ ರವಿ, ಪುತ್ತೂರು ನಗರ ಪೊಲೀಸ್ ಠಾನೆ ಎಸ್.ಐ ಶ್ರೀಕಾಂತ್ ರಾಥೋಡ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಬಸ್‌ನಿಲ್ದಾಣದ ಬಳಿ ಅಣಕು ಪ್ರದರ್ಶನ
ತರಬೇತಿಯ ಬಳಿಕ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ಅವರ ಕಮಾಂಡಿಂಗ್‌ನಲ್ಲಿ ಪೊಲೀಸರಿಂದ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಅಣಕು ಪ್ರದರ್ಶನ ನಡೆಯಿತು.