ಕೊಡಿಪ್ಪಾಡಿ ವಲಯ ಕಾಂಗ್ರೆಸ್ ಸಭೆಯಲ್ಲಿ ಮುಖಂಡರ ಚಕಮಕಿ

0

ಹೇಮನಾಥ ಶೆಟ್ಟಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಂದ್ರಹಾಸ ಶೆಟ್ಟಿ

ಏಕವಚನದಲ್ಲಿ ನಿಂದಿಸಿಕೊಂಡ ಟಿಕೆಟ್ ಆಕಾಂಕ್ಷಿಗಳು

ಪುತ್ತೂರು: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕೊಡಿಪ್ಪಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಖಂಡರ ನಡುವೆ ಪರಸ್ಪರ ವಾಗ್ವಾದ ನಡೆದ ಘಟನೆ ನಡೆದಿದೆ.

ಶೆಟ್ಟಿಧ್ವಯರ ಚಕಮಕಿ : ಕಬಕ ಸಮೀಪದ ಕೊಡಿಪ್ಪಾಡಿಯ ಅರ್ಕದಲ್ಲಿ ಕೊಡಿಪ್ಪಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷದ ಕಾರ್ಯ ಚಟುವಟಿಕೆ, ಚುನಾವಣೆಗೆ ಸಿದ್ಧತೆ, ಸಂಘಟನೆ ಇತ್ಯಾದಿ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಕೆಲವು ಕಾರ್ಯಕರ್ತರು ‘ಕೊಡಿಪ್ಪಾಡಿಯಲ್ಲಿರುವ ಕಾಂಗ್ರೆಸ್ ಕಛೇರಿ ಕುಸಿದು ಬೀಳುವ ಹಂತದಲ್ಲಿದೆ, ಇದರ ದುರಸ್ತಿಗೆ ಡಾ.ರಾಜಾರಾಮರವರು ನಗದು ರೂಪದಲ್ಲಿ ನೆರವು ನೀಡಿದ್ದಾರೆ. ಹೇಮನಾಥ ಶೆಟ್ಟಿಯವರು ಸಾಮಾಗ್ರಿಗಳ ರೂಪದಲ್ಲಿ ನೆರವು ಮಾಡಿದ್ದಾರೆ. ಶಕುಂತಳಾ ಶೆಟ್ಟಿ ಅವರಿಂದ ನೆರವು ಬರಬೇಕಿದೆ’ ಎಂದು ಹೇಳಿದರು. ಈ ವಿಚಾರದ ಚರ್ಚೆ ಮುಕ್ತಾಯಗೊಂಡು ನಾಯಕರ ಭಾಷಣ ಆರಂಭಗೊಂಡಿತು.

ಈ ವೇಳೆ ಹೇಮನಾಥ ಶೆಟ್ಟಿಯವರು ಮಾತನಾಡುತ್ತಾ ಕೊರೋನಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಛೇರಿಯ ಕೆಲಸ ಕಾರ್ಯ ಬಾಕಿ ಆಗಿದೆ, ಇನ್ನು ಆದಷ್ಟು ಶೀಘ್ರದಲ್ಲಿ ಕೆಲಸ ಮಾಡೋಣ ಎಂದು ಹೇಳಿದರು. ಕಾಂಗ್ರೆಸ್ ಕಛೇರಿಗೆ ತನ್ನ ಕೊಡುಗೆಯನ್ನು ಉಲ್ಲೇಖಿಸುತ್ತಾ ಹೇಮನಾಥ ಶೆಟ್ಟಿಯವರು ಭಾಷಣ ಮುಂದುವರಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಚಂದ್ರಹಾಸ ಶೆಟ್ಟಿಯವರು ‘ಏತ್ ಒಯಿಪ್ಪುನು ಮಾರ್ರೆ.ನಿಕ್ಕೇ ಬಿಲ್ಡಿಂಗ್ ಕಟ್ಟಾದ್ ಕೊರೊಲಿ ಅತ’ ಎಂದು ಹೇಳಿದರು. ಈ ವೇಳೆ ಹೇಮನಾಥ ಶೆಟ್ಟಿ ಬೆಂಬಲಿಗರು ಚಂದ್ರಹಾಸ ಶೆಟ್ಟಿ ಮೇಲೆ ಮುಗಿ ಬಿದ್ದರು. ಪರಸ್ಪರ ಚಕಮಕಿ, ವಾಗ್ವಾದ ನಡೆದು ಹೊಯಿ ಕೈ ಹಂತಕ್ಕೆ ತಲುಪಿತು. ಡಾ.ರಾಜಾರಾಮ ಮುಂತಾದವರು ಸಮಾಧಾನಿಸಲು ಪ್ರಯತ್ನಿಸಿದರೂ ಕಾರ್ಯಕರ್ತರು ಸಮಾಧಾನಗೊಳ್ಳಲಿಲ್ಲ.

ಈ ನಡುವೆ ಹೇಮನಾಥ ಶೆಟ್ಟಿ ಮತ್ತು ಎನ್.ಚಂದ್ರಹಾಸ ಶೆಟ್ಟಿ ನಡುವೆ ಏಕವಚನದಲ್ಲಿ ಚಕಮಕಿ ನಡೆಯಿತು. ‘ಈ ಏರ್.ಈ ಏರ್.ಈ ಏರ್ಂದ್ ಎಂಕ್ಲಾ ಗೊತ್ತುಂಡು.’ ಎಂದು ಶೆಟ್ಟಿಧ್ವಯರು ಏರುಧ್ವನಿಯಲ್ಲಿ ಮಾತನಾಡಿಕೊಂಡರು. ಮತ್ತೆ ಕೆಲಹೊತ್ತು ಚಕಮಕಿ ಮುಂದುವರಿಯಿತು. ನಂತರ ಸಮಾಧಾನಗೊಂಡ ನಾಯಕರು ಮತ್ತು ಕಾರ್ಯಕರ್ತರು ಸಭೆಯ ಪ್ರಕ್ರಿಯೆ ನಡೆಸಿದರಾದರೂ ಅದು ಅಪೂರ್ಣಗೊಂಡಿತು. ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಹೇಮನಾಥ ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿ ಬೆಂಬಲಿಗರ ನಡುವಿನ ಮಾತಿನ ಸಮರದ ವೀಡಿಯೋ ತುಣುಕು ವಾಟ್ಸಪ್ ಮೂಲಕ ವ್ಯಾಪಕ ವೈರಲ್ ಆಗಿದೆ. ಈ ನಡುವೆ ಸ್ಥಳೀಯ ಚಾನೆಲ್ ಒಂದರಲ್ಲಿ ಈ ಕುರಿತು ಪ್ರಕಟವಾದ ವರದಿಯಲ್ಲಿ ’ಚಂದ್ರಹಾಸ ಶೆಟ್ಟಿಯವರ ಕಾಲರ್ ಹಿಡಿಯಲಾಗಿದೆ’ ಎಂದು ಉಲ್ಲೇಖಿಸಲಾಗಿದೆ. ಇದನ್ನು ಘಟನಾ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ನಿರಾಕರಿಸಿದ್ದಾರೆ. ಚಕಮಕಿ, ವಾಗ್ವಾದ ನಡೆದಿರುವುದು ನಿಜ, ಕಾಲರ್ ಹಿಡಿದಿರುವ ಘಟನೆ ನಡೆದಿಲ್ಲ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಭಾಗವಹಿಸಿದ್ದರು. ಹೇಮನಾಥ ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿ ನಡುವೆ ಚಕಮಕಿ ನಡೆಯುವ ಕೆಲವೇ ಹೊತ್ತಿನ ಮೊದಲು ಶಕುಂತಳಾ ಶೆಟ್ಟಿ ಅಲ್ಲಿಂದ ತೆರಳಿದ್ದರು. ಚಕಮಕಿ ನಡೆದ ಬಳಿಕ ಮಾತನಾಡಿದ ಸತೀಶ್ ಕುಮಾರ್ ಕೆಡೆಂಜಿ ಅವರು ಕೊಡಿಪ್ಪಾಡಿ ಕಾಂಗ್ರೆಸ್ ಕಛೇರಿ ನಿರ್ಮಾಣಕ್ಕೆ ತಾನು ಹತ್ತು ಸಾವಿರ ರೂ ನೀಡುವುದಾಗಿ ಘೋಷಿಸಿದರು ಎಂದು ತಿಳಿದು ಬಂದಿದೆ. ಚಕಮಕಿ ವೇಳೆ ಕಾರ್ಯಕರ್ತರು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ್ ಅವರು ವಿಡಿಯೋವನ್ನು ಯಾರಿಗೂ ಕಳುಹಿಸದಂತೆ ಮತ್ತು ಅದನ್ನು ಡಿಲಿಟ್ ಮಾಡುವಂತೆ ತಿಳಿಸಿದ್ದರಾದರೂ ಕಾರ್ಯಕರ್ತರು ವೈರಲ್ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here