ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿ ಸಮಸ್ಯೆಯಾಗದಂತೆ ಕಾನೂನು ಸುವ್ಯವಸ್ಥೆಗೆ ಕ್ರಮ

0

ಎಸಿಯವರಿಗೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರ ಕೋರಿಕೆ

ಪುತ್ತೂರು: ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ನರಿಮೊಗರು ಇಲ್ಲಿನ ನಾಗನಕಟ್ಟೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಯವರು ಅನುಮತಿ ನೀಡಿದ್ದು ಸದ್ರಿ ದೇವಳಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಕಾನೂನು ಸುವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರನ್ನು ಕೋರಿದ್ದಾರೆ.

ದೇವಸ್ಥಾನದ ಸಮೀಪ ನಿರ್ಮಾಣ ಹಂತದಲ್ಲಿರುವ ನಾಗನಕಟ್ಟೆಯ ವಿಚಾರದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರುಣ್ ಕುಮಾರ್ ಪುತ್ತಿಲ ಅವರ ಗುಂಪಿನ ಮಧ್ಯೆ ಉಂಟಾಗಿರುವ ತಕರಾರಿನ ಬಗ್ಗೆ ನಿಯಮಾನುಸಾರ ಆದೇಶ ಹೊರಡಿಸಿ ವಿವಾದಕ್ಕೆ ತಾರ್ಕಿಕವಾದ ಅಂತ್ಯವನ್ನು ನೀಡುವ ಆದೇಶವನ್ನು ಹೊರಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯವರು ಕೋರಿದ್ದಾರೆ. ಸದ್ರಿ ನಾಗನಕಟ್ಟೆಯ ನಿರ್ಮಾಣದ ಕುರಿತು ದಾನಿಯವರಾದ ನಳಿನಿ ಲೋಕಪ್ಪ ಗೌಡ ಅವರು ಸಾರ್ವಜನಿಕರಿಂದ ಯಾವುದೇ ದೇಣಿಗೆ ಪಡೆಯದೇ ಇರುವ ಷರತ್ತುಗೊಳಪಡಿಸಿ ಅವರ ಸ್ವಂತ ಖರ್ಚಿನಲ್ಲಿ ದೇವಳದ ನೂತನ ನಾಗನಕಟ್ಟೆ ನಿರ್ಮಾಣ ಮಾಡಿ ಯಾವುದೇ ಫಲಾಪೇಕ್ಷೆ ಇಲ್ಲದೇ ದೇವಸ್ಥಾನಕ್ಕೆ ಒಪ್ಪಿಸುವ ಬಗ್ಗೆ ಜಿಲ್ಲಾಧಿಕಾರಿಯವರು ಅನುಮತಿ ನೀಡಿ ಆದೇಶಿಸಿರುತ್ತಾರೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದು ಜೀರ್ಣೋದ್ಧಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ದೇವಸ್ಥಾನದ ಜೀರ್ಣೋದ್ಧಾರ, ದೈನಂದಿನ ವ್ಯವಹಾರಗಳ ಬಗ್ಗೆ ಲೆಕ್ಕ ಕೊಡದೇ ಸರಕಾರದಿಂದ ಪದವಿಯಿಂದ ವಜಾಗೊಂಡಿದ್ದ ಅರುಣ್ ಕುಮಾರ್ ಪುತ್ತಿಲರವರು ಗುಂಪು ಸೇರಿಸಿಕೊಂಡು ದೇವಸ್ಥಾನದ ದೈನಂದಿನ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಆರಕ್ಷಕ ಠಾಣೆಯಲ್ಲಿ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿರುತ್ತವೆ ಎಂದು ದೇವಳದ ಅಧ್ಯಕ್ಷರು ದೂರು ಸಲ್ಲಿಸಿರುತ್ತಾರೆ. ಈಗಾಗಲೇ ಸಂಪ್ಯ ಪೊಲೀಸ್ ಠಾಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಜಯಂತ್ ನಡುಬೈಲು ಮತ್ತು ನಾರಾಯಣ ನಾಯ್ಕ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿ, ಸುಗಮ ರೀತಿಯಲ್ಲಿ ಶ್ರೀ ದೇವಳದ ಆಡಳಿತ ನಿರ್ವಹಣೆಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧೀಕ್ಷಕರು, ಮಂಗಳೂರುರವರಿಗೆ ಪತ್ರ ಬರೆಯಲಾಗಿರುತ್ತದೆ.

ಸದ್ರಿ ದೇವಸ್ಥಾನ ಪ್ರವರ್ಗ ‘ಬಿ’ಗೆ ಸೇರಿದ ಅಧಿಸೂಚಿತ ಸಂಸ್ಥೆಯಾಗಿರುತ್ತದೆ. ಈ ಕಛೇರಿಯಲ್ಲಿ ನಡೆಸಲಾದ ವಿಚಾರಣೆಯನ್ವಯ, ಪರಿವೀಕ್ಷಕರ ವರದಿಯನ್ವಯ ಪರಿಶೀಲಿಸಲಾದ ದಾಖಲೆಗಳಿಂದ, ಸದ್ರಿ ದೇವಳದ ಗೌರಿಶಂಕರ ಸಭಾಭವನ ನಿರ್ಮಾಣ ಮಾಡಲು ಮುಂಡೂರು ಗ್ರಾಮ ಪಂಚಾಯತದಿಂದ ಯಾವದೇ ಪರವಾನಿಗೆ ಪಡೆಯದೆ ನಿರ್ಮಿಸಿರುವುದು ವರದಿಯಲ್ಲಿ ಕಂಡುಬರುತ್ತದೆ. ಆರುಣ್ ಕುಮಾರ್ ಪುತ್ತಿಲ ಇವರ ಕುಮ್ಮಕ್ಕಿನಿಂದ ನಾರಾಯಣ ನಾಯ್ಕ ಇವರು ಸಭಾಭವನಕ್ಕೆ ಬೀಗ ಹಾಕಿರುವುದು, ವ್ಯವಸ್ಥಾಪನಾ ಸಮಿತಿಗೆ ಕಿರುಕುಳ ನೀಡುತ್ತಿರುವುದು ದೃಢಪಟ್ಟಿರುತ್ತದೆ.ಜಯಂತ ನಡುಬೈಲು ಇವರ ಅಧ್ಯಕ್ಷತೆಯಲ್ಲಿ ಸಭಾಭವನದ ಅಡಿಸ್ಥಳವನ್ನು ದೇವಸ್ಥಾನದ ಹೆಸರಿಗೆ ಪಡೆಯಬೇಕಾಗಿದ್ದು, ಈ ಕುರಿತು ಕ್ರಮವಹಿಸದೇ ಇರುವುದು ಕಂಡುಬರುತ್ತದೆ. ಪ್ರಸ್ತುತ ಶ್ರೀ ದೇವಳದ ಸಭಾಭವನದ ಕುರಿತು ನಡೆಯುತ್ತಿರುವ ವಾಗ್ವಾದಗಳಿಂದಾಗಿ ದೇವಳವು ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದ್ದು ತಿಂಗಳೊಂದರ ಸುಮಾರು 70 ಸಾವಿರದಿಂದ 80 ಸಾವಿರ ರೂ. ಸಭಾಭವನದ ಬಾಡಿಗೆಯಿಂದ ದೇವಳದ ಆದಾಯಕ್ಕೆ ಧಕ್ಕೆ ಉಂಟಾಗಿದೆ. ದೇವಸ್ಥಾನದ ಜೀರ್ಣೋದ್ಧಾರ, ದೈನಂದಿನ ವ್ಯವಹಾರಗಳ ಬಗ್ಗೆ ಲೆಕ್ಕ ಇಲಾಖೆಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದ ಅರುಣ್ ಕುಮಾರ್ ಪುತ್ತಿಲರವರು ಜಯಂತ ನಡುಬೈಲು, ನಾರಾಯಣ ನಾಯ್ಕ ಮತ್ತು ತನ್ನ ಹಿಂಬಾಲಕರನ್ನು ಸೇರಿಸಿಕೊಂಡು ದೇವಸ್ಥಾನದ ದೈನಂದಿನ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಆರಕ್ಷಕ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿರುತ್ತವೆ. ದೇವಳದ ನಾಗನಕಟ್ಟೆ ನಿರ್ಮಾಣದ ಕಾಮಗಾರಿಗೆ ಜಿಲ್ಲಾಧಿಕಾರಿಯವರಿಂದ ಅನುಮತಿ ನೀಡಲಾಗಿರುತ್ತದೆ.

2002ರಿಂದ ದೇವಳದಲ್ಲಿ ಲೆಕ್ಕ ಪರಿಶೋಧನೆ ನಡೆಸಿರುವುದು ಕಂಡುಬರುವುದಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯ ಹಂತದಲ್ಲಿ ಖಾಸಗಿ ಲೆಕ್ಕ ಪರಿಶೋಧಕರಿಂದ ಪರಿಶೀಲನೆ ನಡೆಸಲಾಗಿದ್ದರೂ ಸದ್ರಿ ವರದಿಯು ಅಧಿಕೃತವಾಗಿರುವುದಿಲ್ಲ. ಆದುದರಿಂದ ಸ್ಥಳೀಯ ಲೆಕ್ಕ ಪರಿಶೋಧಕ ವರ್ತುಲದ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ನಡೆಸಲು ತಿಳಿಸಲಾಗಿರುತ್ತದೆ.ಆಡಿಟ್ ವರದಿಯ ಆಧಾರದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬಹುದೆಂದು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿರುತ್ತದೆ. ದೇವಳಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಕಾನೂನು ಸುವ್ಯವಸ್ಥೆಗೆ ಕ್ರಮತೆಗೆದುಕೊಳ್ಳುವಂತೆ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಪತ್ರಮುಖೇನ ಕೋರಿಕೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here