ಪಡುಮಲೆಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ, ಊರಿಗೆ ಊರೇ ಕೇಸರಿಮಯ
ಅಚ್ಚುಕಟ್ಟಾದ ವ್ಯವಸ್ಥೆ, ಪ್ರತಿದಿನ 4 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ

0

@ ಸಿಶೇ ಕಜೆಮಾರ್

ಹಲವು ವೈಶಿಷ್ಠತೆಗಳಿಂದ ಪ್ರಸಿದ್ಧಿ ಪಡೆದುಕೊಂಡಿರುವ ದೇವರ ಊರು ಎಂದೇ ಕರೆಸಿಕೊಂಡಿರುವ ಪಡುಮಲೆಯಲ್ಲಿ ಈಗ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ. ಪಡುಮಲೆ ಹೆಸರೇ ಹೇಳುವಂತೆ ಒಂದು ದೈವಿಕ ಶಕ್ತಿಯನ್ನು ಹೊಂದಿರುವ ಊರಾಗಿದೆ. ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳ ಒಂದು ಕಡೆಯಾದರೆ ಅಂಬರಗಾಮಿಯಾಗಿದ್ದ ಪೂಮಾಣಿ ಕಿನ್ನಿಮಾಣಿ ದೈವಗಳು ಭೂಸ್ಪರ್ಶ ಮಾಡಿ ಮೊದಲ ಆರಾಧನೆ ಪಡೆದ ಭೂಮಿಯಾಗಿದೆ. ಅದೇ ರೀತಿ ಶ್ರೀ ಮಹಾವಿಷ್ಣು ಕೂರ್ಮವತಾರ ಎತ್ತಿದ ಪುಣ್ಯ ಭೂಮಿಯಾಗಿದೆ. ಶಬರಿಮಲೆ, ತಿರುಮಲೆ ಹಾಗೇ ಪಡುಮಲೆ ತನ್ನ ದೈವಿಕ ಶಕ್ತಿಗಳಿಂದ ಹತ್ತೂರಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇಂತಹ ಪುಣ್ಯ ಭೂಮಿಯಲ್ಲಿ ಈಗ ಬ್ರಹ್ಮಕಲಶೋತ್ಸವ, ಜಾತ್ರಾ ಸಂಭ್ರಮ ನಡೆಯುತ್ತಿದೆ. ನೀವು ಪಡುಮಲೆಗೆ ಪುತ್ತೂರಿನಿಂದ ಸುಳ್ಯ ರಸ್ತೆಯಲ್ಲಿ ಸಾಗಿದರೆ ಕೌಡಿಚ್ಚಾರು ಎಂಬಲ್ಲಿ ಬಲಕ್ಕೆ ತಿರುಗಬೇಕಾಗುತ್ತದೆ. ಕೌಡಿಚ್ಚಾರ್‌ನಲ್ಲೇ ನಿಮ್ಮನ್ನು ಸ್ವಾಗತ ದ್ವಾರವೊಂದು ಸ್ವಾಗತಿಸುತ್ತದೆ. ಹಾಗೇ ಮುಂದೆ ಸಾಗಿದರೆ ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್, ಬ್ಯಾನರ್‌ಗಳನ್ನು ಕಾಣಬಹುದಾಗಿದೆ. ಇದು ಎಲ್ಲಿ ತನಕ ಇದೆ ಎಂದರೆ ನಾವು ಕೌಡಿಚ್ಚಾರ್‌ನಿಂದ ಹೊರಟು ಪಡುಮಲೆ ದೇವಸ್ಥಾನ ತಲುಪುವವರೇಗೂ ಕೇಸರಿ ಬಂಟಿಂಗ್, ಬ್ಯಾನರ್, ಕಟೌಟ್, ದ್ವಾರಗಳು ನಮ್ಮನ್ನು ಎದುರುಗೊಳ್ಳುತ್ತವೆ.

ಸುಮಾರು 9 ಕಿ.ಮೀ ಕೇಸರಿಮಯ
ಕೌಡಿಚ್ಚಾರ್‌ನಿಂದ ಪಡುಮಲೆ ದೇವಸ್ಥಾನಕ್ಕೆ ತಲುಪುವ ಸುಮಾರು 9 ಕಿ.ಮೀ ದೂರದವರೇಗೂ ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್ಸ್, ಬ್ಯಾನರ್, ದ್ವಾರ, ಪತಾಕೆಗಳನ್ನು ಕಾಣಬಹುದಾಗಿದೆ. ಅಲ್ಲಲ್ಲಿ ಬೃಹತ್ ಆಕಾರದ ಕಟೌಟ್‌ಗಳನ್ನು ಅಳವಡಿಸಲಾಗಿದೆ. ಐ ಲವ್ ಪಡುಮಲೆ ಎಂದು ಬರೆದಿರುವ ಬ್ಯಾನರ್‌ಗಳನ್ನು ಕೂಡ ಕಾಣಬಹುದಾಗಿದೆ. ದೇವಸ್ಥಾನಕ್ಕೆ ತಲುಪುವಾಗ ಬೃಹತ್ ಆಕಾರದ ದ್ವಾರಗಳು ಎದುರುಗೊಳ್ಳುತ್ತವೆ. ರಾತ್ರಿಯ ಸಮಯದಲ್ಲಿ ವರ್ಣಮಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು ಇಡೀ ಪ್ರದೇಶವೇ ಜಗಮಗಿಸುತ್ತದೆ. ಒಟ್ಟಿನಲ್ಲಿ ಇಡೀ ಊರಲ್ಲಿ ಸಂಭ್ರಮ ಮನೆಮಾಡಿದೆ.

11 ಎಕರೆ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ
ದೇವಸ್ಥಾನದ ಎದುರು ಭಾಗದಲ್ಲಿ ಸುಮಾರು 11 ಎಕರೆ ಜಾಗದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ತೆಂಗಿನ ತೋಟದ ಮಧ್ಯೆ ಅಚ್ಚುಕಟ್ಟಾಗಿ ವಾಹನ ಪಾರ್ಕಿಂಗ್‌ಗೆ ಜಾಗ ಮಾಡಿಕೊಡಲಾಗಿದೆ. ದೇವಸ್ಥಾನಕ್ಕೆ ಒಂದು ಕಡೆಯಿಂದ ಎಂಟ್ರಿಯಾದರೆ ಇನ್ನೊಂದು ಕಡೆಯಿಂದ ಹೊರ ಬರುವ ವ್ಯವಸ್ಥೆ ಮಾಡಿದ್ದು ದ್ವಿಚಕ್ರ ಹಾಗೂ ಕಾರು ಇತ್ಯಾದಿ ಘನ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಮಾರು 30 ಮಂದಿ ಸ್ವಯಂ ಸೇವಕರು 3 ಪಾಳಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಈಶ್ವರಮಂಗಲ ಹೊರಠಾಣಾ ಪೊಲೀಸ್ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದಾರೆ.

3 ಸಾವಿರ ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳಬೇಕಾದ ಸಭಾ, ಸಾಂಸ್ಕೃತಿಕ ಸಭಾಂಗಣ
ಬ್ರಹ್ಮಕಲಶೋತ್ಸವದ ಸಮಯದಲ್ಲಿ ನಡೆಯುವ ಧಾರ್ಮಿಕ, ಸಭಾ ಕಾರ್ಯಕ್ರಮ ಹಾಗೂ ಇತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಸಭಾಂಗಣವನ್ನು ನಿರ್ಮಿಸಲಾಗಿದೆ. ಸುಮಾರು 3 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ ಇದಾಗಿದ್ದು ಇದಕ್ಕೆ ಕೀರ್ತಿಶೇಷ ಎ.ರಾಧಾಕೃಷ್ಣ ರೈ ಪೇರಾಲು ಸಭಾಂಗಣ ಎಂದು ನಾಮಕರಣ ಮಾಡಲಾಗಿದೆ. ಬಹಳ ಅಚ್ಚುಕಟ್ಟಾದ ವೇದಿಕೆಯನ್ನು ನಿರ್ಮಿಸಲಾಗಿದ್ದು ವೇದಿಕೆಗೆ ರಮಾ ಟಿ. ಭಂಡಾರಿ, ಡಾ.ಕ್ಯಾ.ಕೆ.ಟಿ ಭಂಡಾರಿ ವೇದಿಕೆ ಎಂದು ಹೆಸರಿಡಲಾಗಿದೆ. ಸಭಾಂಗಣಕ್ಕೆ ಫ್ಯಾನ್, ನೀರು ಇತ್ಯಾದಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಅಚ್ಚುಕಟ್ಟಾದ ಊಟದ ವ್ಯವಸ್ಥೆ
ಬ್ರಹ್ಮಕಲಶೋತ್ಸವದಲ್ಲಿ ಮುಖ್ಯವಾಗಿ ಕಾಣುವುದೇ ಅಲ್ಲಿನ ಊಟದ ವ್ಯವಸ್ಥೆ. ಪಡುಮಲೆಯ ಬ್ರಹ್ಮಕಲಶೋತ್ಸವದಲ್ಲಿ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕುಳಿತುಕೊಂಡು ಹಾಗೂ ನಿಂತುಕೊಂಡು ಊಟ ಮಾಡುವ ವ್ಯವಸ್ಥೆ ಇದ್ದು ಸುಮಾರು 400 ಮಂದಿ ಏಕಕಾಲದಲ್ಲಿ ಕುಳಿತುಕೊಂಡು ಊಟ ಮಾಡಬಹುದಾಗಿದೆ. ಕುಳಿತುಕೊಂಡು ಊಟ ಮಾಡುವವರಿಗೆ ಬಾಳೆ ಎಲೆ ವ್ಯವಸ್ಥೆ ಮಾಡಲಾಗಿದೆ. ಶ್ರೀ ವಿಷ್ಣುಮೂರ್ತಿ ಅನ್ನಛತ್ರ ಹಾಗೂ ಶ್ರೀ ರಾಜರಾಜೇಶ್ವರಿ ಅನ್ನಛತ್ರ ಎಂಬ ಎರಡು ಅನ್ನಛತ್ರಗಳಿವೆ. ಅನ್ನಪೂರ್ಣ ಎಂಬ ಪಾಕಶಾಲೆ ಇದೆ. ಅನ್ನ ಪ್ರಸಾದದಲ್ಲಿ ಪ್ರತಿದಿನ ವಿಶೇಷ ಪಾಯಸದೊಂದಿಗೆ ಸಿಹಿ ತಿಂಡಿಯೂ ಇದೆ. ಸುಮಾರು 400 ಮಂದಿ ಕರಸೇವಕರು 3 ಪಾಳಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಹಾ ಉಪಹಾರದೊಂದಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದೆ. ಪ್ರತಿದಿನ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.

80 ಸಾವಿರ ಲೀ.ನೀರಿನ ಟ್ಯಾಂಕ್
ಯಾವ ಹೊತ್ತಿನಲ್ಲೂ ನೀರಿನ ತೊಂದರೆ ಬರದಂತೆ ವ್ಯವಸ್ಥೆ ಮಾಡಲಾಗಿದೆ. 50 ಸಾವಿರ ಮತ್ತು 30 ಸಾವಿರ ಲೀಟರ್‌ನ ಎರಡು ನೀರಿನ ಟ್ಯಾಂಕ್‌ಗಳನ್ನು ಇಡಲಾಗಿದ್ದು ಇದಕ್ಕೆ ನಿರಂತರವಾಗಿ ಬೋರ್‌ವೆಲ್‌ನಿಂದ ನೀರು ಬರುವಂತೆ ಮಾಡಲಾಗಿದೆ. ಟ್ಯಾಂಕ್‌ನಿಂದ ಎಲ್ಲಾ ಕಡೆಗಳಿಗೆ ಪೈಪು ಲೈನ್‌ನ ಮೂಲಕ ನೀರು ಹರಿದು ಹೋಗುವಂತೆ ವ್ಯವಸ್ಥೆಮಾಡಲಾಗಿದೆ. ಸುಮಾರು 15 ಕಡೆಗಳಲ್ಲಿ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಇಡಲಾಗಿದ್ದು ನೀರನ್ನು ಫಿಲ್ಟರ್ ಮಾಡಿಯೇ ಕುಡಿಯಲು ನೀಡಲಾಗುತ್ತಿದೆ. ದೇವಸ್ಥಾನಕ್ಕೆ ಎಂಟ್ರಿಯಾಗುತ್ತಿದ್ದಂತೆ ಪಾನಕದ ವ್ಯವಸ್ಥೆ ಇದೆ.

ಶುಚಿತ್ವಕ್ಕೆ ಹೆಚ್ಚಿನ ಮಹತ್ವ
ಬ್ರಹ್ಮಕಲಶೋತ್ಸವದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು ರಸ್ತೆ ಧೂಳುಮಯವಾಗುವುದನ್ನು ತಪ್ಪಿಸಲು ನೀರು ಹಾಕಲಾಗುತ್ತಿದೆ. ಕಸದ ಬುಟ್ಟಿಗಳನ್ನು ಇಡಲಾಗಿದ್ದು ಭಕ್ತರು ಕಸಕಡ್ಡಿಗಳನ್ನು ಹಾಕಲು ಇದನ್ನೇ ಬಳಸಿಕೊಳ್ಳಬೇಕು.

28 ಸಮಿತಿಗಳ ಜವಬ್ದಾರಿಯುತ ಕೆಲಸ
ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ 28 ಸಮಿತಿಗಳನ್ನು ರಚನೆ ಮಾಡಲಾಗಿದ್ದು ಇದರ ಸಂಚಾಲಕರಿಂದ ಹಿಡಿದು ಎಲ್ಲಾ ಸದಸ್ಯರುಗಳು ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ. ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕರಸೇವಕರು ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದಾರೆ. ಭದ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ. ವಿಶ್ರಾಂತಿ ಕೊಠಡಿಗಳು ಸೇರಿದಂತೆ ಅತಿಥಿಗಳಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳನ್ನು ಮಾಡಲಾಗಿದೆ. ಇದಲ್ಲದೆ ಈಶ್ವರಮಂಗಲ ಆರೋಗ್ಯ ಕೇಂದ್ರದ ವತಿಯಿಂದ ದೇವಾಲಯ ಬದಿಯಲ್ಲಿ ವೈದ್ಯಕೀಯ ಕೌಂಟರ್ ಇದ್ದು ಇಲ್ಲಿ ತುರ್ತು ಚಿಕಿತ್ಸೆ ಸೇರಿದಂತೆ ಬಿಪಿ ಪರೀಕ್ಷೆ ಕೂಡ ಮಾಡಲಾಗುತ್ತಿದೆ. ದೇವಾಲಯದ ಎದುರು ಬದಿಯಲ್ಲಿ ಸೇವಾ ಕೌಂಟರ್ ಇದ್ದು ಅಲ್ಲೇ ಪ್ರಸಾದದ ಕೌಂಟರ್ ಕೂಡ ಇದೆ. ಭಕ್ತಾದಿಗಳು ನಮಗೆ ಬೇಕಾದ ಸೇವೆಗಳನ್ನು ಇಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಪ್ರತಿದಿನದ ಅನ್ನದಾನ ಪ್ರಾಯೋಜಕತ್ವದ ವ್ಯವಸ್ಥೆಯೂ ಇದೆ.

ಒಟ್ಟಿನಲ್ಲಿ ಪಡುಮಲೆ ಬ್ರಹ್ಮಕಲಶೋತ್ಸವ ಊರಿಗೆ ಊರೇ ಸಂಭ್ರಮ ಪಡುವ ಜಾತ್ರೋತ್ಸವ ಆಗಿದೆ. ಬನ್ನಿ ನಾವು ಕೂಡ ಒಂದ್ದಲ ನೋಡಿಕೊಂಡು ಬರೋಣ. ಹಾಗೇ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಆಶೀರ್ವಾದ ಪಡೆದುಕೊಳ್ಳೋಣ…

LEAVE A REPLY

Please enter your comment!
Please enter your name here