ಎಸ್ಟಿ ಸಮುದಾಯ ಬಿಜೆಪಿ ಕಡೆಗಿದೆ ಎಂಬ ಸಂದೇಶದ ಸಮಾವೇಶ – ಎನ್.ಎಸ್ ಮಂಜುನಾಥ್
ಪುತ್ತೂರು: ಬಿಜೆಪಿಯಿಂದ ಚುನಾವಣೆ ಹಿತದೃಷ್ಟಿಯಿಂದ ಮಾರ್ಚ್ ತಿಂಗಳಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆ, ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮಾವೇಶ, ಪ್ರಗತಿ ರಥ ವಾಹನ, ಪ್ರಣಾಳಿಕೆಗೆ ಸಲಹೆ ಕಾರ್ಯಕ್ರಮಕ್ಕೆ ಸಂಬಂಧಿಸಿ ಮಾ.5ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ ನಾಯ್ಕ ಅವರು ಮಾತನಾಡಿ ಹಿಂದುತ್ವ, ರಾಷ್ಟ್ರೀಯ ವಿಚಾರಧಾರೆಯ ಅಡಿಯಲ್ಲಿ ಬಿಜೆಪಿ ಸರಕಾರ ಎಸ್.ಟಿ. ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದು, ಎಸ್.ಟಿ ಸಮುದಾಯವು ಬಿಜೆಪಿ ಕಡೆಗಿದೆ ಎಂಬ ಸಂದೇಶವನ್ನು ಸಮಾವೇಶ ನೀಡಲಿದೆ.
ಭಾರತದ ಅತ್ಯುನ್ನತ ರಾಷ್ಟ್ರಪತಿ ಸ್ಥಾನವನ್ನು ದ್ರೌಪದಿ ಮುರ್ಮುರವರಿಗೆ ನೀಡುವ ಮೂಲಕ ಮತ್ತು ಸುರಂಗ ಮೂಲಕ ಜಲಧಾರೆಯನ್ನು ಕಂಡುಕೊಂಡ ಬರಡು ನೆಲವನ್ನು ಹಸಿರಾಗಿಸಿದ ಅಮೈ ಮಹಾಲಿಂಗ ನಾಯ್ಕರಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಎಸ್.ಟಿ.ಸಮುದಾಯಕ್ಕೆ ಬಿಜೆಪಿ ಗೌರವ ನೀಡಿದೆ. ರಾಜ್ಯ ಸರಕಾರ ಎಸ್.ಟಿ. ಸಮುದಾಯದ ಮಿಸಲಾತಿಯನ್ನು ಶೆ. 3 ರಿಂದ 7ಕ್ಕೆ ಹೆಚ್ಚಿಸಿದ್ದು, ಎಸ್.ಟಿ. ಸಮುದಾಯದಲ್ಲಿರುವ ಬಿಪಿಎಲ್ ಕುಟುಂಬಸ್ಥರಿಗೆ 75 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಿರುವುದು, ಪರಿಶಿಷ್ಟ ಪಂಗಡದ ಸಚಿವಾಲಯ ಸ್ಥಾಪನೆ, ವಾಲ್ಮೀಕಿ ನಿಗಮ ಸ್ಥಾಪನೆ, ಮುಂತಾದ ಹಲವಾರು ಯೋಜನೆಯನ್ನು ಸರಕಾರ ನೀಡಿದೆ. ಈ ಕುರಿತು ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಬೃಹತ್ ಸಮಾವೇಶ ನಡೆಯಲಿದೆ.
ಸಮಾವೇಶವು ಬೆಳಿಗ್ಗೆ ಗಂಟೆ 10ಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್, ಎಸ್.ಅಂಗಾರ ಸಹಿತ ಹಲವಾರು ಮಂದಿ ರಾಜ್ಯದ ಪ್ರಮುಖರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಎನ್.ಎಸ್ ಮಂಜುನಾಥ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಎರ್ಮೆನಾಡು, ಹರೀಶ್ ಬಿಜತ್ರೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ಶಿವಪ್ಪ ನಾಯ್ಕ, ಕಾರ್ಯದರ್ಶಿಗಳಾದ ನಾರಾಯಣ ನಾಯ್ಕ ಚಾಕೋಟೆ, ಹರೀಶ್ ನಾಯ್ಕ್ ನೆಕ್ಕಿಲಾಡಿ, ನಗರ ಮಂಡಲದ ಅಧ್ಯಕ್ಷ ಅಶೋಕ್ ಕುಮಾರ್ ಬಲ್ನಾಡು ಉಪಸ್ಥಿತರಿದ್ದರು.